ನಿಮ್ಮ ಪ್ರೇಮ, ಕಾಮದ ಸಮಸ್ಯೆಗೆ ನಮ್ಮಲ್ಲಿದೆ ಪರಿಹಾರ. ನೀವು ಪ್ರೀತಿಸಿದವರನ್ನು ವಶೀಕರಣ ಮಾಡಿಕೊಳ್ಳಬೇಕೇ.. ನೀವು ಹೇಳಿದ ಮಾತನ್ನು ಕೇಳುವಂತೆ ಮಾಡಿಕೊಳ್ಳಬೇಕೇ.. ಕಷ್ಟಗಳಿಗೆ ಪರಿಹಾರ, ಪ್ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ.. ಎಂದೆಲ್ಲ ಜಾಹೀರಾತುಗಳನ್ನು ನೋಡಿರುತ್ತೀರಿ. ಇಲ್ಲಿ ಆಗಿರುವುದು ಅಂಥದ್ದೇ ಘಟನೆ. ತಾನು ಪ್ರೀತಿಸುತ್ತಿರುವ ಹುಡುಗ ತನ್ನನ್ನು ಪ್ರೀತಿ ಮಾಡ್ತಿಲ್ಲ ಎಂದು ಬೇಸತ್ತ ಯುವತಿಯೊಬ್ಬಳು, ಇಂಥದ್ದೇ ಜಾಹೀರಾತು ನೋಡಿ ಮೋಸ ಹೋಗಿದ್ದಾರೆ. ಕಳೆದುಕೊಂಡಿರೋದು ಲಕ್ಷ ಲಕ್ಷ. ಅಂದಹಾಗೆ ಮೋಸ ಹೋಗಿರುವ ಯುವತಿ ವಿದ್ಯಾವಂತೆ. ಮೋಸ ಮಾಡಿದವನು ಹೆಬ್ಬೆಟ್ ಅಲ್ಲದಿದ್ದರೂ, ಡಿಗ್ರಿಯನ್ನೆಲ್ಲ ಓದಿದವನಲ್ಲ. ಮೋಸ ಹೇಗಾಯ್ತು ಎಂದರೆ..
ಒಂದು ಜಾಹೀರಾತು ನೋಡಿದ ಯುವತಿಯೊಬ್ಬಳು ಜಾಹೀರಾತಿನಲ್ಲಿ ನೀಡಿದ್ದ 9741336337 ಸಂಖ್ಯೆಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿ ತನ್ನನ್ನು ತಾನು ಚಂದ್ರಶೇಖರ್ ಸುಗತ್ ಗುರೂಜಿ ಎಂದು ಪರಿಚಯಿಸಿಕೊಂಡಿದ್ದಾನೆ. ಯುವತಿಯ ಸಮಸ್ಯೆ ಕೇಳಿಸಿಕೊಳ್ಳುತ್ತಾನೆ. ಪ್ರೀತಿಸಿದ ಹುಡುಗನ ಬಗ್ಗೆ ವಿವರವಾಗಿ ಪ್ರಶ್ನಿಸಿದ್ದಾನೆ.
“ಡೋಂಟ್ ವರಿ, ಮದುವೆ ಆಗುತ್ತೆ, ಆದರೆ ವಿಶೇಷ ಪೂಜೆ, ವಶೀಕರಣ ಮಾಡಬೇಕು. ಇದಕ್ಕೆ ಖರ್ಚಾಗುತ್ತದೆʼʼ ಎಂದು ನಂಬಿಕೆ ಹುಟ್ಟಿಸಿದ್ದಾನೆ. ಸಮಸ್ಯೆಗೆ ಶಾಶ್ವತ ಪರಿಹಾರ ಕೊಡುತ್ತೇನೆ ಎಂಬ ಭರವಸೆ ಮೂಡಿಸಿದ್ದಾನೆ. ವಶೀಕರಣ ಪೂಜೆ, ವಿಶೇಷ ಹೋಮ, ಶಕ್ತಿವಂತ ಮಂತ್ರಜಪ ಎಂದು ಹೇಳುತ್ತಾ ಸ್ಟೇಜ್ ಬೈ ಸ್ಟೇಜ್ ದುಡ್ಡು ಕಿತ್ತುಕೊಂಡಿದ್ದಾನೆ. ನಂಬಿದರೆ ನಂಬಿ, ಆ ರೀತಿ ಈ ಹುಡುಗಿ ಕಳೆದುಕೊಂಡ ಹಣ 2 ಲಕ್ಷದ 5 ಸಾವಿರ ರೂ. ಅಷ್ಟು ಕೊಟ್ಟ ಮೇಲೆ ಮತ್ತೆ ಯಾವಾಗ ಅದೇ ಸ್ವಾಮೀಜಿ ಮತ್ತೆ 4 ಲಕ್ಷ ದುಡ್ಡು ಕೇಳಿದನೋ.. ಆಗ ಡೌಟ್ ಬಂದಿದೆ ಅವಳಿಗೆ. ಸಮಸ್ಯೆಗೆ ಯಾವುದೇ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಯುವತಿ ತಾನು ಕೊಟ್ಟ ಹಣವನ್ನು ವಾಪಸ್ ಕೇಳಿದ್ದಾಳೆ. ಈ ವೇಳೆ ಆರೋಪಿ “ಹಣ ವಾಪಸ್ ಕೊಡೋದಿಲ್ಲ, ಏನು ಮಾಡ್ತಿಯೋ ಮಾಡಿಕೋ” ಎಂದು ಧಮ್ಕಿ ಹಾಕಿದ್ದಾನೆ.
ಬೆಂಗಳೂರು ನಗರದ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆನ್‌ಲೈನ್ ವಂಚನೆ, ನಂಬಿಕೆ ದ್ರೋಹ ಮತ್ತು ಬೆದರಿಕೆ ಆರೋಪಗಳಡಿ ತನಿಖೆ ಆರಂಭಿಸಿದ್ದಾರೆ. ಫೋನ್ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳು ಹಾಗೂ ಸೋಷಿಯಲ್ ಮೀಡಿಯಾ ಖಾತೆಗಳ ಮಾಹಿತಿ ಆಧರಿಸಿ ಆರೋಪಿಗಳ ಜಾಲವನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ.
ಪೊಲೀಸರ ವಾರ್ನಿಂಗ್ : ಇದು ಹೊಸದೇನಲ್ಲ. ಇಂತಹ ಪ್ರಕರಣಗಳು ಆಗಾಗ್ಗೆ ಬೆಳಕಿಗೆ ಬರುತ್ತಲೇ ಇರುತ್ತವೆ. ಹೀಗಾಗಿಯೇ ಈ ಬಾರಿಯೂ ಪೊಲೀಸರು ಸೋಷಿಯಲ್ ಮೀಡಿಯಾದಲ್ಲಿ ಬರುವ ವಶೀಕರಣ, ಪೂಜೆ, ಮಂತ್ರ, ತಂತ್ರಗಳ ಜಾಹೀರಾತುಗಳನ್ನು ನಂಬಬೇಡಿ. ಸಮಸ್ಯೆಗೆ ಪರಿಹಾರ ಬೇಕಿದ್ದರೆ ಕಾನೂನುಬದ್ಧ ಮಾರ್ಗ ಅನುಸರಿಸಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ವಾಸ್ತವ ಏನು ಗೊತ್ತೇ..?
ಇಂತಹ ವಶೀಕರಣದ ಮ್ಯಾಜಿಕ್‌ಗಳು ಸಿನಿಮಾ, ಸೀರಿಯಲ್ಲುಗಳಲ್ಲಿ ನಡೆಯುತ್ತವೆಯೇ ಹೊರತು, ವಾಸ್ತವ ಜಗತ್ತಿನಲ್ಲಿ ಅಸಾಧ್ಯ. ವಿಚಿತ್ರ ಎಂದರೆ ವಂಚನೆ ಹೋಗಿರುವ ಯುವತಿ, ವಿದ್ಯಾವಂತೆ. ಡಬಲ್ ಡಿಗ್ರಿ ಪದವೀಧರೆ. ವಂಚಕ ಅವಿದ್ಯಾವಂತನಲ್ಲದಿದ್ದರೂ, ತುಂಬಾ ಏನೂ ಓದಿಲ್ಲ. ಆತನಿಗೆ ಓದಲು ಬರೆಯಲು ಮಾತ್ರ ಬರುತ್ತದೆ.



