ದೊಡ್ಡಪ್ಪನ ಮಗಳನ್ನೇ ಪ್ರೀತಿಸಿದ್ದ ಯುವಕ ಶಶಾಂಕ್ ಕೊನೆಗೂ ಮೃತಪಟ್ಟಿದ್ಧಾನೆ. ಮಗಳನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಸ್ವತಃ ದೊಡ್ಡಪ್ಪನ ಕುಟುಂಬಸ್ಥರು ಯುವಕನನ್ನು ಕಿಡ್ನಾಪ್ ಮಾಡಿ ಬೆಂಕಿ ಹಚ್ಚಿದ್ದರು. ಬೆಂಕಿ ಹಚ್ಚಿದ ಬೆನ್ನಲ್ಲೇ ಶೇ.80 ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಯವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ 19 ವರ್ಷದ ಯುವಕ ಶಶಾಂಕ್ ಸಾವನ್ನಪ್ಪಿದ್ದಾನೆ.
ಎಸಿಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಶಶಾಂಕ್, ಚಾಮರಾಜನಗರ ಜಿಲ್ಲೆ ಹರದನಹಳ್ಳಿ ನಿವಾಸಿ ಮನು (ಮಹೇಶ್) ಅವರ ಪುತ್ರಿ ಲಹರಿಯನ್ನು ಪ್ರೀತಿಸುತ್ತಿದ್ದ. ಇವರಿಬ್ಬರ ಪ್ರೀತಿಗೆ ಯುವತಿಯ ಪೋಷಕರ ವಿರೋಧವಿತ್ತು. ಈ ವಿಚಾರವಾಗಿ ಶಶಾಂಕ್ಗೆ ಮನು ಹಲವಾರು ಬಾರಿ ಬುದ್ಧಿ ಮಾತು ಕೂಡ ಹೇಳಿದ್ದರು. ಮನೆಗೇ ಬಂದು ಮನಬಂದಂತೆ ಹೊಡೆದಿದ್ದರು. ಆದರೂ ಶಶಾಂಕ್ ಲಹರಿ ಜೊತೆಗಿನ ಪ್ರೀತಿಯನ್ನು ಬಿಟ್ಟಿರಲಿಲ್ಲ ಎಂಬ ಆಕ್ರೋಶಕ್ಕೆ ಕಿಡ್ನಾಪ್ ಮಾಡಿ ಬೆಂಕಿ ಹಚ್ಚಿದ್ದರು.
ಜುಲೈ 3ರಂದು ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದ ಲಹರಿಯನ್ನು ತನ್ನ ಮನೆಗೆ ಶಶಾಂಕ್ ಕರೆದೊಯ್ದಿದ್ದ. ಈ ವಿಷಯ ತಿಳಿದು ಆಕ್ರೋಶಗೊಂಡ ಮನು, ಮನೆಗೇ ನುಗ್ಗಿ ಶಶಾಂಕ್ ಮೇಲೆ ಹಲ್ಲೆ ನಡೆಸಿ, ಪುತ್ರಿಯನ್ನು ಕರೆದೊಯ್ದಿದ್ದರು. ಜುಲೈ 15ರಂದು ಬೆಳಗ್ಗೆ 8 ಗಂಟೆಗೆ ಆರ್.ಆರ್.ಮೆಡಿಕಲ್ ಕಾಲೇಜು ಬಳಿ ಇನೋವಾ ಕಾರಿನಲ್ಲಿ ಕಿಡ್ನಾಪ್ ಮಾಡಿದ್ದರು. ಕಾರಿನಲ್ಲಿದ್ದ ಇನ್ನು 6 ಮಂದಿ ಆತನ ಕಣ್ಣಿಗೆ ಬಟ್ಟೆಕಟ್ಟಿ, ಬಾಯಿಗೆ ಬಟ್ಟೆತುರುಕಿ, ಬಲವಂತವಾಗಿ ಕಣಿಮಿಣಿಕೆ ಟೋಲ್ ಬಳಿಯಿರುವ ಖಾಲಿ ಜಾಗಕ್ಕೆ ಕರೆದೊಯ್ದು ಬೆಂಕಿ ಹಚ್ಚಿದ್ದರು. ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ, ಆತನನ್ನು ಅಲ್ಲಿಯೇ ಬಿಟ್ಟು ಕಾರಿನಲ್ಲಿ ಪರಾರಿಯಾದರು. ಹೇಗಾದರೂ ಮಾಡಿ ಬದುಕಲೇಬೇಕು ಎಂದು ನಿರ್ಧರಿಸಿದ ಶಶಾಂಕ್ ಅಲ್ಲಿಯೇ ನೆಲದ ಮೇಲೆ ಹೊರಳಾಡಿ, ಬೆಂಕಿ ಆರಿಸಿಕೊಂಡು ನೋವಿನಲ್ಲಿಯೇ ತನ್ನ ಸಂಬಂಧಿ ಹೀರಾ ಎಂಬುವರಿಗೆ ವಿಷಯ ತಿಳಿಸಿದ್ದ. ತಕ್ಷಣ ಸ್ಥಳಕ್ಕೆ ಬಂದ ಹೀರಾ ಮತ್ತು ಶಶಾಂಕನ ಕುಟುಂಬ ಸದಸ್ಯರು ಆ್ಯಂಬುಲೆನ್ಸ್ನಲ್ಲಿ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದ್ದರು. ಶಶಾಂಕ್ ಅವರ ದೇಹದ ಶೇ.80ರಷ್ಟು ಭಾಗ ಸುಟ್ಟು ಹೋಗಿದ್ದರಿಂದ ಶಶಾಂಕ್ ಮೃತಪಟ್ಟಿದ್ದಾನೆ.



