ಕನ್ನಡದಲ್ಲಿ ಹಲವಾರು ನಟರು ಸಾಮಾಜಿಕ ಸೇವೆ ಮಾಡುತ್ತಲೇ ಬಂದಿದ್ದಾರೆ. ಡಾ.ರಾಜ್ ಕುಟುಂಬ ಸದಸ್ಯರು ಶಕ್ತಿಧಾಮ (ShakthiDahama), ರಾಜ್ ಅಕಾಡೆಮಿ (Raj Academy) , ಸರ್ಕಾರಿ ಶಾಲೆಗಳ ದತ್ತು ಸ್ವೀಕಾರದಂತಹ ಇನ್ನೂ ಅನೇಕ ಸೇವಾ ಕಾರ್ಯ ಮಾಡುತ್ತಿದ್ದಾರೆ. (Shiva Rajkumar) ಶಿವರಾಜ್ ಕುಮಾರ್-ಗೀತಾ ಶಕ್ತಿಧಾಮದ ಉಸ್ತುವಾರಿ ಹಾಗೂ ಶಾಲೆಗಳ ಅಭಿವೃದ್ಧಿ ವಹಿಸಿಕೊಂಡಿದ್ದರೆ, (Yuva Rajkumar) ಯುವ ರಾಜ್ ಕುಮಾರ್, ರಾಜ್ ಅಕಾಡೆಮಿ ನೋಡಿಕೊಳ್ಳುತ್ತಿದ್ದಾರೆ. ಪ್ರತಿ ವರ್ಷ ನೂರಾರು ಐಎಎಸ್/ಕೆಎಎಸ್ (IAS-KAS) ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಹಾಯ ಮಾಡುತ್ತಿದ್ದಾರೆ. ಯಶ್, ಯಶೋಮಾರ್ಗದ (Yash, Yashomarga) ಮೂಲಕ ವಿಶೇಷವಾಗಿ ಕೆರೆ, ನೀರಿನ ಜಾಗೃತಿ ಕೆಲಸ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ (Kichcha Sudeep) ಅವರ ಟ್ರಸ್ಟ್ ಬಡವರಿಗೆ, ಅಶಕ್ತರಿಗೆ, ಉನ್ನತ ಶಿಕ್ಷಣದ ಕನಸು ಕಾಣುತ್ತಿರುವವರಿಗೆ ನೆರವು ನೀಡುವ ಕೆಲಸದಲ್ಲಿ ನಿರತವಾಗಿದೆ. ಇದೀಗ ರಿಷಬ್ ಶೆಟ್ಟಿ (Rishab Shetty) (Pragathi Shetty)ಕೂಡಾ ಸೇವೆಗೆ ಅಧಿಕೃತವಾಗಿ ದುಮುಕಿದ್ದಾರೆ.
ರಿಷಬ್ ಶೆಟ್ಟಿ ಫೌಂಡೇಷನ್ (Rishab Shetty Foundation). ರಿಷಬ್ ಶೆಟ್ಟಿಯವರ ಪತ್ನಿ ನಡೆಸುವ ಸಾಮಾಜಿಕ ಸೇವಾ ಸಂಸ್ಥೆ. ಈ ಸಂಸ್ಥೆಯನ್ನ ರಿಷಬ್ ಹುಟ್ಟುಹಬ್ಬದ ದಿನವೇ ಆರಂಭ ಮಾಡಿದ್ದಾರೆ ಪತ್ನಿ ಪ್ರಗತಿ ಶೆಟ್ಟಿ. ಪತಿಯ ಹುಟ್ಟುಹಬ್ಬದ ದಿನವೇ ಪ್ರಗತಿ ಶೆಟ್ಟಿ ರಿಷಬ್ ಶೆಟ್ಟಿ ಫೌಂಡೇಶನ್ ಅನೌನ್ಸ್ ಮಾಡಿದ್ದಾರೆ. ಜೊತೆಗೆ ರಿಷಬ್ ಶೆಟ್ಟಿ ಫೌಂಡೇಶನ್ ಲೋಗೋ ಕೂಡ ಪ್ರಗತಿ ಶೆಟ್ಟಿ ಲಾಂಚ್ ಮಾಡಿದ್ದಾರೆ. ಈ ಫೌಂಡೇಶನ್ ನಿಂದ ಶಿಕ್ಷಣಕ್ಕೆ ಒತ್ತು ಕೊಡಲಾಗುತ್ತೆ.
ರಿಷಬ್ ಶೆಟ್ಟಿ ಯಾರಿಗೂ ಹೇಳಿಕೊಳ್ಳದೇ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡುತ್ತಾ ಬಂದಿದ್ದಾರೆ. ಶಾಲೆಗಳಿಗೆ ಶಿಕ್ಷಕರನ್ನ ಕೊಟ್ಟಿದ್ದಾರೆ. ಶಿಕ್ಷಣ ವಂಚಿತ ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದಾರೆ. ಈಗ ಅದಕ್ಕೆ ಒಂದು ವೇದಿಕೆ ಮಾಡಿ, ಹೊರ ರೂಪದಲ್ಲಿ ರಿಷಬ್ ಶೆಟ್ಟಿ ಫೌಂಡೇಶನ್ ಕೆಲಸ ಮಾಡುತ್ತೆ ಎಂದಿದ್ದಾರೆ ರಿಷಬ್ ಶೆಟ್ಟಿಯ ಗೆಳೆಯರೂ ಆಗಿರುವ ನಟ ಪ್ರಮೋದ್ ಶೆಟ್ಟಿ.
ಈ ಹಿಂದೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಸಿನಿಮಾ ಸಕ್ಸಸ್ ಆದಾದ ಕೆಲವು ಶಾಲೆಗಳಿಗೆ ರಿಷಬ್ ಶೆಟ್ಟಿ ನೆರವು ನೀಡಿದ್ದರು. ಗೆಳೆಯರ ಮೂಲಕವೂ ಕೆಲವು ಸರ್ಕಾರಿ ಶಾಲೆಗಳಿಗೆ ಚೈತನ್ಯ ತುಂಬಿದ್ದರು. ಅಭಿಮಾನಿಗಳ ಜೊತೆ ವೇದಿಕೆಯಲ್ಲಿ ಸಂಭ್ರಮದಿಂದಲೇ ಮಾತನಾಡಿದ ರಿಷಬ್ ಶೆಟ್ಟಿ ನಾನು ಜನರಿಗೆ ಸಿಗಬೇಕು ಅನ್ನೋ ಆಸೆ ನನ್ನ ಹೆಂಡತಿಯದ್ದು. ಅಭಿಮಾನಿಗಳ ಜೊತೆ ಬೆರೆಯೋಕೆ ಉಗ್ರ ಹೋರಾಟ ಮಾಡಿದವರು ಪ್ರಮೋದ್ ಶೆಟ್ಟಿ ಎಂದರು. ಅಷ್ಟೇ ಅಲ್ಲ, ಎಲ್ಲ ನಾಯಕರ ಅಭಿಮಾನಿಗಳೂ ಇಲ್ಲಿದ್ದೀರ. ಅವರೆಲ್ಲರಿಗೆ ನನ್ನ ಧನ್ಯವಾದ ಎಂದರು.
ಸಿನಿಮಾ ಮಾಡಿದಾಗಿನಿಂದಲೂ ರಿಷಬ್ ಶೆಟ್ಟಿಯವರು ಶಿಕ್ಷಣ ಕ್ಷೇತ್ರದಲ್ಲಿ ಕೈಲಾದ ಸೇವೆ ಮಾಡುತ್ತಲೇ ಇದ್ದಾರೆ. ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಆದರೆ ಅದ್ಯಾವುದೂ ಒಂದು ವ್ಯವಸ್ಥಿತ ರೀತಿಯಲ್ಲಿ ಇರಲಿಲ್ಲ. ಈ ಬಗ್ಗೆ ನಾನು ರಿಷಬ್ ಬಹಳ ದಿನಗಳಿಂದ ಯೋಚಿಸಿ ರಿಷಬ್ ಶೆಟ್ಟಿ ಫೌಂಡೇಶನ್ ಮಾಡಿದ್ದೇವೆ, ಇದಕ್ಕಿಂತಲೂ ಒಳ್ಳೆಯ ಉಡುಗೊರೆಯನ್ನು ರಿಷಬ್ಗೆ ಕೊಡಲಾರೆ ಎನಿಸಿತು ಹಾಗಾಗಿ ಇದನ್ನು ಮಾಡಿದ್ದೇವೆ. ಮತ್ತು ಇದನ್ನು ಲಾಂಚ್ ಮಾಡಲು ಇದಕ್ಕಿಂತಲೂ ಒಳ್ಳೆಯ ದಿನವೂ ಸಿಗಲಾರದು. ನಮ್ಮ ಶಕ್ತಿ ಇದ್ದಷ್ಟು, ದೇವರು ಕೊಟ್ಟಷ್ಟು, ಸಮಾಜಕ್ಕೆ ವಿಶೇಷವಾಗಿ ಶಿಕ್ಷಣ ಕ್ಷೇತ್ರಕ್ಕೆ ನಮ್ಮ ಕೊಡುಗೆ ನೀಡುವ ಉದ್ದೇಶ ಹೊಂದಿದ್ದೇವೆ ಎಂದಿದ್ದಾರೆ ಪ್ರಗತಿ ಶೆಟ್ಟಿ.
ಒಬ್ಬೊಬ್ಬರು ಒಂದೊಂದು ಕ್ಷೇತ್ರಕ್ಕೆ ನೆರವು ನೀಡುತ್ತಾ ಹೋಗಬೇಕು. ಅವರು ಇನ್ನೊಬ್ಬರ ನೆರವಿಗೆ ಸ್ಫೂರ್ತಿಯಾಗಬೇಕು. ಒಟ್ಟಿನಲ್ಲಿ ನೆರವು, ಸಹಾಯ ನಿರಂತರವಾಗಿ ನಡೆಯುತ್ತಲೇ ಇರಬೇಕು. ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಹೊಸ ಕನಸು ಹೊತ್ತು ನಡೆದಿದ್ದಾರೆ. ಜೊತೆಗೆ ಗೆಳೆಯರಿದ್ದಾರೆ.
ರಿಷಬ್ ಆತ್ಮೀಯ ಗೆಳೆಯ ಪ್ರಮೋದ್ ಶೆಟ್ಟಿ ಹಾಗೂ ಇನ್ನಿತರರು ಕಾರ್ಯಕ್ರಮ ಆಯೋಜನೆಯ ಮುಂದಾಳತ್ವ ವಹಿಸಿ ಅಭಿಮಾನಿಗಳಿಗೆ ಸಮಸ್ಯೆ ಆಗದಂತೆ ವ್ಯವಸ್ಥೆಗಳನ್ನು ಮಾಡಿದ್ದರು, ವೇದಿಕೆ ನಿರ್ಮಿಸಿದ್ದರು. ಜೊತೆಗೆ ದೂರ ದೂರಗಳಿಂದ ಬರುವ ರಿಷಬ್ರ ಅಭಿಮಾನಿಗಳಿಗೆ ಊಟದ ವ್ಯವಸ್ಥೆಯನ್ನು ಸಹ ಮಾಡಿಸಿದ್ದರು.
ಅಭಿಮಾನಗಳಿಗಾಗಿ ಪುಲಾವ್, ಮೊಸರು ಬಜ್ಜಿ, ಮೊಸರನ್ನ, ಉಪ್ಪಿನ ಕಾಯಿ, ಅನ್ನ, ರಸಂ, ಮದ್ದೂರು ವಡೆ, ಬರ್ಫಿ, ಹಪ್ಪಳಗಳನ್ನು ಮಾಡಿಸಲಾಗಿತ್ತು. ಸುಮಾರು ಎಂಟು ಸಾವಿರ ಜನಕ್ಕೆ ಊಟದ ತಯಾರಿಯನ್ನು ಮಾಡಿಸಲಾಗಿತ್ತು. ರಿಷಬ್ರ ಹುಟ್ಟುಹಬ್ಬಕ್ಕೆ ಬರುವವರು ಹಸಿದುಕೊಂಡು ಹೋಗಬಾರದೆಂಬ ಉದ್ದೇಶದಿಂದ ಊಟದ ವ್ಯವಸ್ಥೆಯನ್ನು ಮಾಡಿಸಿದ್ದಾಗಿ ರಿಷಬ್ ಆಪ್ತರ ತಂಡ ಹೇಳಿತ್ತು. ರಿಷಬ್ರ ಪಕ್ಕದ ಊರಾದ ಉಪ್ಪಿನ ಕುದುರುವಿನ ಅಡುಗೆ ಕಾಂಟ್ರ್ಯಾಕ್ಟರ್ ಗೋಪಾಲ್ ಮೆಲಾಡಿ ಅವರನ್ನು ಕರೆಯಿಸಿ ಅಡುಗೆ ಮಾಡುವ ಜವಾಬ್ದಾರಿಯನ್ನು ವಹಿಸಲಾಗಿತ್ತು.



