ಭೀಮನ ಅಮಾವಾಸ್ಯೆಯಂದು (Bheemana Amavasye) ಗಂಡನ ಪಾದಪೂಜೆ ಮಾಡಿ, ಆಯುಷ್ಯಭಾಗ್ಯದ ಪ್ರಾರ್ಥನೆ ಮಾಡ್ತಾರೆ. ಮಾಂಗಲ್ಯ ಗಟ್ಟಿಯಾಗಿರಲಿ ಎಂದು ಪ್ರಾರ್ಥಿಸುವುದಷ್ಟೇ ಅಲ್ಲ, ತನ್ನ ಗಂಡನೂ (Bheema) ಭೀಮನಂತೆ ಶಕ್ತಿವಂತನಾಗಲಿ, ಹೆಂಡತಿಯನ್ನು ಪ್ರೀತಿಸುವಂತಹವನಾಗಲಿ ಎಂದು ಪೂಜೆ ಮಾಡ್ತಾರೆ. ಆದರೆ ಇಲ್ಲೊಬ್ಬ ಮಹಿಳೆ, ಬೀಮನ ಅಮಾವಾಸ್ಯೆ ದಿನವೇ, ಗಂಡನನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ, ದೇವಸ್ಥಾನದ ಆವರಣದಲ್ಲೇ ಕೊಲೆ ಮಾಡಿಸಿದ ಆರೋಪ ಎದುರಿಸುತ್ತಿದ್ದಾಳೆ. ಘಟನೆ ನಡೆದಿರುವುದು ಬೆಳಗಾವಿಯಲ್ಲಿ.
ಭೀಮನ ಅಮಾವಾಸ್ಯೆ ಹಿನ್ನೆಲೆ ವಡೇರಟ್ಟಿಗ್ರಾಮದ ಬನಸಿದ್ದೇಶ್ವರ ದೇವಸ್ಥಾನಕ್ಕೆ ಶಂಕರ ಸಿದ್ದಪ್ಪ (Shankara jagamatti) ಜಗಮುತ್ತಿ (25) ಪತ್ನಿ ಸಿದ್ದವ್ವ ಅಲಿಯಾಸ್ ಪ್ರಿಯಾಂಕಾ ಜಗಮುತ್ತಿ (21) (Priyanka) ಜೊತೆ ಬಂದಿದ್ದ. ಹೊಸ ಮದುವೆ ಗಂಡು ಹೆಣ್ಣು. ಮಾರ್ಚ್ ತಿಂಗಳಲ್ಲಷ್ಟೇ ಮದುವೆಯಾಗಿತ್ತು. ಮೈಗೆ ಹಚ್ಚಿದ್ದ ಅರಿಷಿಣ, ಕೈಗೆ ಹಾಕಿದ್ದ ಮೆಹಂದಿ ಅಳಿಸಿ ಹೋಗಿತ್ತೋ ಇಲ್ಲವೋ.. ಕೊಲೆಯಾಗಿ ಹೋಗಿದ್ಧಾನೆ. . ದೇವರ ದರ್ಶನ ಪಡೆದ ಬಳಿಕ ವಾಪಸ್ ಬರುತ್ತಿದ್ದ ವೇಳೆ ದೇವಸ್ಥಾನ ಆವರಣದಲ್ಲೇ ಆರೋಪಿ ಶ್ರೀಧರ ತಳವಾರ ಲಾಂಕ್ನಿಂದ ಕೊಚ್ಚಿ ಕೊಲೆ ಮಾಡಿ ಓಡಿಹೋಗಿದ್ದಾನೆ. ಪೊಲೀಸರು ಆರೋಪಿ ಶ್ರೀಧರನನ್ನಷ್ಟೇ ಅಲ್ಲ, ಪತ್ನಿ ಸಿದ್ದವ್ವ ಅಲಿಯಾಸ್ ಪ್ರಿಯಾಂಕರನ್ನೂ ಅರೆಸ್ಟ್ ಮಾಡಿದ್ದಾರೆ.
ಶ್ರೀಧರ ಮತ್ತು ಸಿದ್ದವ್ವರದ್ದು ಸ್ಕೂಲ್ ಲವ್ ಸ್ಟೋರಿ. 6ನೇ ಕ್ಲಾಸಿನಿಂದಲೇ ಲವ್ ಮಾಡ್ತಾ ಇದ್ದರಂತೆ. ಆದರೆ, ಶಂಕರ ಜಗಮುತ್ತಿ ಹಾಗೂ ಸಿದ್ದವ್ವ ಕುಟುಂಬದ ಹಿರಿಯರು ಸೇರಿಕೊಂಡು ಮಾತುಕತೆ ನಡೆಸಿ ಶಂಕರನೊಂದಿಗೆ 2023 ಮಾಚ್ರ್ 19 ರಂದು ವಿವಾಹ ಜರುಗಿತ್ತು. ಆದರೂ ಸಿದ್ದವ್ವ ಪ್ರಿಯಕರನೊಂದಿಗೆ ಕದ್ದುಮುಚ್ಚಿ ಮಾತುಕತೆ ನಡೆಸುತ್ತಿದ್ದಳು. ಕೊಲೆ ನಡೆದ ದೇವಸ್ಥಾನದಲ್ಲೇ ಶಂಕರ ಪೂಜಾರಿಯಾಗಿದ್ದ. ಹೆಂಡತಿಯ ಹುಟ್ಟುಹಬ್ಬ ಮತ್ತು ಭೀಮನ ಅಮಾವಾಸ್ಯೆ ಕಾರಣ ದೇವಸ್ಥಾನಕ್ಕೆ ಹೋಗಿ ಬರೋಣ ಎಂದು ಪತ್ನಿ ಸಿದ್ಧವ್ವಗೆ ಹೇಳಿದ್ದ. ಆದರೆ ಸಿದ್ದವ್ವ ತಾನು ತಯಾರಾಗುವ ಮೊದಲೇ ದೇವಸ್ಥಾನಕ್ಕೆ ಬರುವ ವಿಷಯವನ್ನು ಪ್ರಿಯಕರ ಶ್ರೀಧರ ತಳವಾರನಿಗೆ ಮಾಹಿತಿ ನೀಡಿದ್ದಳು. ಅಲ್ಲದೇ ಹತ್ಯೆ ಬಗ್ಗೆಯೂ ಪ್ಲ್ಯಾನ್ ಮಾಡಿಕೊಂಡಿದ್ದರು. ಏನೂ ಗೊತ್ತಿಲ್ಲದಂತೆ ಪತಿ ಶಂಕರನೊಂದಿಗೆ ದೇವಸ್ಥಾನಕ್ಕೆ ಬಂದು ಜೊತೆಯಾಗಿ ದೇವರ ದರ್ಶವನ್ನೂ ಪಡೆದುಕೊಂಡಿದ್ದಾರೆ. ಬಳಿಕ ಸಿದ್ದವ್ವ ಪತಿಗೆ ದ್ವಿಚಕ್ರ ವಾಹನ ತರುವಂತೆ ತಿಳಿಸಿ ವೇಗವಾಗಿ ನಡೆದುಕೊಂಡು ದೇವಸ್ಥಾನದಿಂದ ದೂರ ಬಂದು ನಿಂತಿದ್ದಾಳೆ. ಅಷ್ಟರಲ್ಲಿ ಹತ್ಯೆ ಮಾಡಲು ಬಂದಿದ್ದ ಶ್ರೀಧರ ತಳವಾರ, ದೇವಸ್ಥಾನದ ಬಳಿ ಹೋಗಿ ಲಾಂಗ್ನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಬಳಿಕ ಆರೋಪಿ ಸಿದ್ದವ್ವ ಮೋಸಳೆ ಕಣ್ಣೀರು ಸುರಿಸುತ್ತಾ, ಕೂಗಾಟ, ಚೀರಾಟ ನಡೆಸಿದ್ದಾಳೆ.
ಆದರೆ ಕಥೆ ಕಟ್ಟುವಾಗ ಎಡವಟ್ಟಾಗಿದೆ. ಗಂಡ ಬೈಕ್ ನಿಲ್ಲಿಸಿದ್ದ ಜಾಗಕ್ಕೂ, ಕೊಲೆಯಾದ ಸ್ಥಳಕ್ಕೂ ಹಾಗೂ ಸಿದ್ದವ್ವ ನಿಂತಿದ್ದ ಜಾಗಕ್ಕೂ ದೂರವೇ ಇದೆ. ಹೀಗಿರುವಾಗ ಗಂಡ ಬೈಕ್ ತರಲಿ ಎಂದುಕೊಂಡು ಅಷ್ಟು ದೂರ ನಡೆದುಕೊಂಡು ಹೋಗಿದ್ದೇಕೆ ಎಂದು ಪೊಲೀಸರು ಪ್ರಶ್ನೆ ಮಾಡಿದ್ದಾರೆ. ಇಡೀ ಕಥೆ ಹೊರಗೆ ಬಂದಿದೆ. ಇಬ್ಬರನ್ನೂ ಅರೆಸ್ಟ್ ಮಾಡಿರುವ ಪೊಲೀಸರು, ಆರೋಪಿಗಳನ್ನು ಜೈಲಿಗೆ ಕಳಿಸಿದ್ದಾರೆ.



