ಬಸನಗೌಡ ಪಾಟೀಲ ಯತ್ನಾಳ್. ಫೈರ್ ಬ್ರಾಂಡ್ ಎಂದೇ ಹೆಸರುವಾಸಿಯಾಗಿರುವ ಯತ್ನಾಳ್ ಅವರು ಅಗ್ನಿ ಪುರುಷ ಎಂದೇ ಕರೆಸಿಕೊಳ್ತಾರೆ. ಅವರ ವಿವಾದಿತ ಹೇಳಿಕೆಗಳು ಒಂದಲ್ಲ.. ಎರಡಲ್ಲ.. ಅವರು ಯಾರಿಗೂ ನಿಷ್ಟರಲ್ಲ, ಅವರದ್ದೊಂಥರಾ ಸ್ಟೈಲ್. ಯತ್ನಾಳ್ ನಡೆದದ್ದೇ ಹಾದಿ ಎನ್ನುವಂತಾಗಿ ಹೋಗಿದೆ. ಅವರು ತಮ್ಮ ಪಕ್ಷದವರನ್ನೂ ಬಿಡಲ್ಲ. ಬೇರೆಯವರನ್ನೂ ಬಿಡಲ್ಲ. ಇದೀಗ ಯತ್ನಾಳ್ ಅವರ ಒಂದು ಮಾತು, ಕಾಂಗ್ರೆಸ್ಸಿಗರನ್ನು ಸಂಕಷ್ಟಕ್ಕೆ ದೂಡಿದೆ. ಅದು ಸಂಕಷ್ಟವೋ.. ಪ್ರಬಲ ಅಸ್ತ್ರವೋ.. ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಕೆಲವರು ಸಿಎಂ ಆಗಲು ಸಾವಿರ ಕೋಟಿ ಹಣ ಇಟ್ಟುಕೊಂಡು ಕಾಯುತ್ತಿದ್ದಾರೆ ಎಂದು ಶಾಸಕ ಯತ್ನಾಳ್ ಬಾಂಬ್ ಸಿಡಿಸಿದ್ದರು. ಸದ್ಯ ವಿಚಾರವಾಗಿ ತನಿಖೆಗೆ ಆಗ್ರಹಿಸಿ ಯತ್ನಾಳ್ ವಿರುದ್ಧ ಕಾಂಗ್ರೆಸ್ ನಾಯಕರು ದೂರು ಕೊಟ್ಟಿದ್ದಾರೆ. ವಿ.ಎಸ್.ಉಗ್ರಪ್ಪ ನೇತೃತ್ವದಲ್ಲಿ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿದೆ. ವಿಶೇಷ ಎಂದರೆ ಇದೇ ಯತ್ನಾಳ್ ಅವರ ಮಾತುಗಳು ಕಾಂಗ್ರೆಸ್ಸಿಗರ ಬತ್ತಳಿಕೆಯ ಪ್ರಬಲ ಅಸ್ತ್ರಗಳಾಗಿದ್ದವು.
ಬಿಜೆಪಿಯಲ್ಲಿ ಸಾವಿರಾರು ಕೋಟಿ ಖರ್ಚು ಮಾಡಿ ಸಿಎಂ ಪಟ್ಟ ಪಡೆಯಲಾಗಿದೆ. ಸಾವಿರಾರು ಕೋಟಿ ಖರ್ಚು ಮಾಡಿ ಬಿಜೆಪಿ ಸರ್ಕಾರ ಬಂದಿದೆ. ಯಡಿಯೂರಪ್ಪನವರು ಹಲವರಿಂದ ಕೋಟಿ ಕೋಟಿ ಪಡೆದು ಸರ್ಕಾರ ಮಾಡಿದ್ದಾರೆ. ದುಡ್ಡು ಕೊಟ್ಟವರಿಗೆ ಟಿಕೆಟ್ ಕೊಡುವ ಸಂಪ್ರದಾಯ ಬಿಜೆಪಿಯಲ್ಲಿದೆ.. ಎಂದೆಲ್ಲ ಆರೋಪ ಮಾಡಿದ್ದವರು. ವಿಶೇಷ ಅಂದರೆ ಯತ್ನಾಳ್ ಅವರ ಈ ಎಲ್ಲ ಆರೋಪಗಳು ನಾಯಕರಿಗೆ ಉಗುಳಲೂ ಆಗದ, ನುಂಗಲೂ ಆಗದ ಬಿಸಿ ಬಿಸಿ ಕಹಿ ತುಪ್ಪವಾಗಿದ್ದರೆ, ಕಾಂಗ್ರೆಸ್ಸಿಗರಿಗೆ ಲಡ್ಡು ಬಂದು ಬಾಯಿಗೆ ಬಿದ್ದಂತಾಗಿಗತ್ತು. ಏಕೆಂದರೆ ನಿಮ್ಮ ಪಕ್ಷದ ನಾಯಕರೇ ಹೀಗೆ ಹೇಳಿದ್ದಾರೆ ಕಣ್ರೀ, ಉತ್ತರ ಕೊಡ್ರಿ ಎಂದಾಗ ತಡಬಡಾಯಿಸುತ್ತಿದ್ದವರು ಬಿಜೆಪಿ ನಾಯಕರು.
ಏಕೆಂದರೆ ಬಸನಗೌಡ ಪಾಟೀಲ ಯತ್ನಾಳ್, ನಿನ್ನೆ ಮೊನ್ನೆ ಬಂದ ನಾಯಕರಲ್ಲ. ವಯಸ್ಸು 60 ವರ್ಷ. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೇಂದ್ರದಲ್ಲಿ ಸಚಿವರಾಗಿದ್ದವರು. ಬಿಜೆಪಿಯಷ್ಟೇ ಅಲ್ಲ, ಜನತಾದಳದಲ್ಲೂ ಅಡ್ಡಾಡಿ ಬಂದಿದ್ದಾರೆ. 1994ರಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದವರು. ಅಂದ್ರೆ ಶಾಸಕ, ಸಂಸದರಾಗಿಯೇ ರಾಜಕೀಯದಲ್ಲಿ 30 ವರ್ಷ ಕಳೆದಿದ್ದಾರೆ. ಆದರೆ ಬಾಯಿ ಬಿಟ್ಟರೆ ಮಾತ್ರ ಬೆಂಕಿ.
ಇಂತಹ ಯತ್ನಾಳ್ ಅವರ ಮಾತು ಈಗ ಕಾಂಗ್ರೆಸ್ಸಿಗರಿಗೂ ಶಾಕ್ ಕೊಟ್ಟಿದೆ. ಯತ್ನಾಳ್ ಹೇಳಿದ್ರಲ್ಲ, ಉತ್ತರ ಕೊಡಿ ಎನ್ನುತ್ತಿದ್ದ ಕಾಂಗ್ರೆಸ್ಸಿಗರೇ ಈಗ ಯತ್ನಾಳ್ ವಿರುದ್ಧ ದೂರು ಕೊಡೋ ಹಾಗೆ ಮಾಡಿದೆ.
ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಠಾಣೆಗೆ ದೂರು ಕೊಟ್ಟಿದ್ದೇವೆ. ಹಿಂಬಾಗಿಲಿನಿಂದ ಅಧಿಕಾರ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ಈ ಹೇಳಿಕೆ ಕೊಟ್ಟಿರುವವರ ವಿರುದ್ಧ ಕೇಸ್ ದಾಖಲಿಸಬೇಕು. ಅವರನ್ನ ಕರೆದು ವಿಚಾರಣೆ ನಡೆಸಬೇಕು ಎಂದು ಹೇಳಿದ್ದಾರೆ ದೂರು ಕೊಟ್ಟಿರುವ ವಿಎಸ್ ಉಗ್ರಪ್ಪ.
ಇಷ್ಟಕ್ಕೂ ಯತ್ನಾಳ್ ಹೇಳಿರೋದು ಇಷ್ಟೇ. ʻʻ ಮಹಾನ್’ ನಾಯಕರೊಬ್ಬರು ರಾಜ್ಯದ ಮುಖ್ಯಮಂತ್ರಿಯಾಗಲು ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ. ಮಹಾನ್ ನಾಯಕ ಯಾರು ಎಂಬುದು ನಿಮಗೆ ಗೊತ್ತಿದೆ. ನಾನು ಅವರ ಹೆಸರನ್ನು ಬಹಿರಂಗಪಡಿಸುವುದಿಲ್ಲ. ಈ ಹಿಂದೆ ಅವರ ಮನೆಯಲ್ಲಿ ಕರೆನ್ಸಿ ನೋಟು ಎಣಿಸುವ ಯಂತ್ರ ಪತ್ತೆಯಾಗಿತ್ತು. ಅವರು ಡಿಸೆಂಬರ್‌ನಲ್ಲಿ ರಾಜ್ಯ ರಾಜಕೀಯದಲ್ಲಿ ದೊಡ್ಡ ಕ್ರಾಂತಿಯಾಗಲಿದೆʼʼ ಎಂದಿದ್ದರು. ಇದೇ ವೇಳೆ ಬಿಜೆಪಿಯವರು ಸಿದ್ದರಾಮಯ್ಯ ಸರ್ಕಾರವನ್ನು ಉರುಳಿಸುವ ಕೆಲಸ ಮಾಡುವುದಿಲ್ಲ ಎಂದೂ ಹೇಳಿದ್ದರು.
ಇದು ಯಾರ ವಿರುದ್ಧ ಎನ್ನುವುದು ಅರ್ಥವಾಗದೆ ಕಾಂಗ್ರೆಸ್ಸಿಗರು ತಲೆ ಕೆಡಿಸಿಕೊಳ್ತಿದ್ದಾರೆ. ಏಕೆಂದರೆ ಸದ್ಯಕ್ಕೆ ರಾಜ್ಯ ರಾಜಕೀಯದಲ್ಲಿ ಮಹಾನ್ ನಾಯಕ ಎಂದು ಹೇಳುವುದು ಯಾರಿಗೆ ಎನ್ನುವುದು ಯತ್ನಾಳ್ ಜೊತೆಯಲ್ಲಿರುವ ಬೆಳಗಾವಿ ಸಾಹುಕಾರರಿಗೆ ಗೊತ್ತಿದೆ. ಮಹಾನ್ ನಾಯಕ ಎಂದು ಹೇಳಿದವರೇ ಅವರು.
ಕೆಲವು ಕಾಂಗ್ರೆಸ್ ನಾಯಕರು ಇದು ತಮ್ಮ ಪಕ್ಷದ ಒಬ್ಬ ದೊಡ್ಡ ಲೀಡರ್ ಬಗ್ಗೆ ಹೇಳಿರೋ ಮಾತು ಎನ್ನುತ್ತಿದ್ದರೆ, ಇನ್ನೂ ಕೆಲವರು ಇಲ್ಲ.. ಇಲ್ಲ. ಇದು ಬಿಜೆಪಿಯಲ್ಲಿ ನಡೆಯುತ್ತಿರುವ ಸಿದ್ದರಾಮಯ್ಯ ಸರ್ಕಾರವನ್ನು ಪತನಗೊಳಿಸುವ ಸಂಚಿನ ವಿವರ ಎನ್ನುತ್ತಿದ್ದಾರೆ.
ಡಿಕೆ ಶಿವಕುಮಾರ್ ಅವರು ಇದಕ್ಕೆ ಉತ್ತರ ಕೊಟ್ಟಿದ್ದು, ಎಲ್ಲ 136 ಶಾಸಕರೂ ಒಗ್ಗಟ್ಟಾಗಿದ್ದೇವೆ. ಸರ್ಕಾರ ಯಾವುದೇ ಕಾರಣಕ್ಕೂ ಪತನವಾಗೋದಿಲ್ಲ ಎಂದಿದ್ದಾರೆ.



