ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಬೀಗ ಹಾಕಿ ಸ್ವಾಮೀಜಿಯನ್ನು ಹೊರಹಾಕಲಾಗಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿರುವ, ಪಂಚಮಸಾಲಿ ಗುರುಪೀಠದ ಹೆಡ್ ಆಫೀಸ್. ಆದರೆ ಅದೇ ಪೀಠಕ್ಕೆ ರಾತ್ರೋ ರಾತ್ರಿ ಬೀಗ ಬಿದ್ದಿದೆ. ಗುರು ಪೀಠದ ಸ್ವಾಮೀಜಿಗಳಾದ ಜಯಮೃತ್ಯುಂಜಯ ಶ್ರೀ ಮತ್ತು ಕಾಶಪ್ಪನವರ್ ಸಂಬಂಧ ಮೊದಲಿನಂತಿಲ್ಲ. ಹಳಸಿ ದುರ್ನಾತ ಬರುತ್ತಿದೆ. ಈ ಜಗಳದ ಫೈನಲ್ ಚಿತ್ರಣವೇ ಮಠಕ್ಕೆ ಬೀಗ ಬಿದ್ದು, ಸ್ವಾಮೀಜಿ ಅವರಿಗೆ ಗೇಟ್ ಪಾಸ್ ಕೊಡಲಾಗಿದೆ. ಇದಕ್ಕೆ ಸಿದ್ಧರಾಮಯ್ಯ ಅವರನ್ನು ಟೀಕೆ ಮಾಡಿದ್ದೇ ಕಾರಣ ಎನ್ನುತ್ತಿದ್ದಾರೆ ಜಯಮೃತ್ಯುಂಜಯ ಸ್ವಾಮೀಜಿ. ಕಣ್ಣೀರು ಹಾಕುತ್ತಿದ್ದಾರೆ.
ಪೀಠಕ್ಕೆ ಬೀಗ ಹಾಕಿದ ಸುದ್ದಿ ತಿಳಿದು ಮನಸ್ಸಿಗೆ ನೋವಾಗಿದೆ. ಹೀಗಾಗಿ, ಹುನಗುಂದದ ಬಸವ ಮಂಟಪಕ್ಕೆ ಬಂದೆ. ಮುಖಂಡರು ಹೇಗೆ ಹೇಳುತ್ತಾರೆ ಹಾಗೆ ಮುನ್ನಡೆಯುತ್ತೇನೆ. ಭಕ್ತರು ಪೀಠಕ್ಕೆ ಹೋಗಿ ಎಂದರೇ ಪೀಠಕ್ಕೆ ಹೋಗುತ್ತೇನೆ. ಇಲ್ಲದಿದ್ದರೇ ಭಕ್ತರ ಮನೆಯಲ್ಲಿರುತ್ತೇನೆ ಎಂದಿರುವ ಸ್ವಾಮೀಜಿ, ಸಿದ್ಧರಾಮಯ್ಯ ವಿರುದ್ಧದ ಹೇಳಿಕೆಯೇ ನನಗೆ ಮುಳುವಾಯಿತು ಎಂದಿದ್ದಾರೆ.
ಮೀಸಲಾತಿ ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಂದಿಸಿಲ್ಲ ಎಂಬ ಹೇಳಿಕೆ ಮುಳುವಾಯ್ತಾ ಎಂಬ ಪ್ರಶ್ನೆಗೆ ಹೌದು ಎಂದಿದ್ದಾರೆ. ಮುಖ್ಯಮಂತ್ರಿಗಳು ನನಗೆ ಆತ್ಮೀಯರು. ನಾನು ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬೊಮ್ಮಾಯಿ ಅವರ ಮನೆಯ ಎದುರು ಪ್ರತಿಭಟನೆ ಮಾಡಿದ್ದೆ. ಆದರೆ, ಸಿಎಂ ಸಿದ್ದರಾಮಯ್ಯ ಅವರು ಸ್ಪಂದಿಸಿಲ್ಲ ಅಂತಾ ಹೇಳಿದ್ದೆ, ಅದ್ರಲ್ಲಿ ತಪ್ಪೇನಿದೆ? ಸಿಎಂ ವಿರುದ್ಧ ಆ ಹೇಳಿಕೆಯೇ ನನಗೆ ಬಹುದೊಡ್ಡ ಮುಳುವಾಯಿತು. ಹೋರಾಟವೇ ನನಗೆ ಇಷ್ಟೆಲ್ಲ ಆಗಲು ಕಾರಣವಾಯ್ತು ಎಂದು ಟೀಕಿಸಿದ್ದಾರೆ.
ಪೀಠಕ್ಕೆ ಬೀಗ ಹಾಕಿರುವ ಬಗ್ಗೆ ಮಾತನಾಡಿರುವ ವಿಜಯಾನಂದ ಕಾಶಪ್ಪನವರ್ ನಾನು ಪೀಠದ ಟ್ರಸ್ಟ್ ಅದ್ಯಕ್ಷನಾಗಿದ್ದೇನೆ. ನನ್ನ ಟ್ರಸ್ಟ್ ಕಾಪಾಡಿಕೊಳ್ಳುವುದು ನನ್ನ ಕರ್ತವ್ಯ. ಸ್ವಾಮೀಜಿಗಳು ಅದನ್ನು ಟೂರಿಂಗ್ ಟಾಕೀಸ್ ತರಹ ಮಾಡಿದ್ದಾರೆ. ಪೀಠದಲ್ಲಿ ಅವರು ಇರುವುದು ಕಡಿಮೆ. ಹೀಗಾಗಿ ಅದು ಅನೈತಿಕ ಚಟುವಟಿಕೆಗಳ ತಾಣವಾಗುತ್ತಿತ್ತು. ರಾತ್ರಿ ಕುಡುಕರ ಹಾವಳಿ ಹೆಚ್ಚಾಗಿತ್ತು. ಹೀಗಾಗಿ ಬೀಗ ಹಾಕಿಸಿದ್ದೇನೆ ಎಂದಿದ್ದಾರೆ.
ಒಟ್ಟಿನಲ್ಲಿ, ಸಮಾಜಕ್ಕೆ ‘2ಎ’ ಮೀಸಲಾತಿ ಕೊಡಿಸುತ್ತೇನೆ ಎಂದು ಶ್ರೀಗಳು ಹೋರಾಟ ನಡೆಸುತ್ತಿದ್ದರೆ, ಇತ್ತ ಪೀಠಕ್ಕೆ ಕಾಶಪ್ಪನವರ್ ಬೀಗ ಹಾಕಿಸಿದ್ದಾರೆ. ವಿಜಯನಂದ್ ಕಾಶಪ್ಪನವರ ಅವರ ಕಡೆಯುವರು ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ. ಪೀಠದ ಮುಂದೆ ಪೊಲೀಸರಿದ್ದಾರೆ.
ಇತ್ತ ಹಾಕಿದ್ದ ಬೀಗ ಒಡೆದರು ಎಂಬ ಆರೋಪದ ಮೇಲೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರ ಐವರು ಭಕ್ತರ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ. ಅದಾದ ಮೇಲೆ ಮತ್ತೊಮ್ಮೆ ವಿಜಯಾನಂದ ಕಾಶಪ್ಪನವರ್ ಬಣದವರು ಮತ್ತೆ ಮಠಕ್ಕೆ ಬೀಗ ಹಾಕಿದ್ದಾರೆ.
ವಾಸ್ತವ ಪರಿಸ್ಥಿತಿ ಏನು..?
ಪಂಚಮಸಾಲಿಗಳಿಗೆ 2ಎ ಮೀಸಲಾತಿ ಕೊಡಿಸಬೇಕು ಎಂಬ ಹೆಸರಿನಲ್ಲಿ ನಡೆದ ಹೋರಾಟ ಇದು. ಆದರೆ.. ಒಂದು ಜಾತಿಯ ಒಂದು ಒಳಪಂಗಡಕ್ಕೆ ಪ್ರತ್ಯೇಕ ಮೀಸಲಾತಿ ಕೊಡುವುದು ಅಸಾಧ್ಯ. ಸಂವಿಧಾನದ ಪ್ರಕಾರ ಅದಕ್ಕೆ ಮಾನ್ಯತೆ ಸಿಗುವುದು ಅಸಾಧ್ಯ. ಇದು ಹೋರಾಟದ ನೇತೃತ್ವ ವಹಿಸಿದ್ದವರಿಗೆ ಗೊತ್ತಿಲ್ಲದ ವಿಚಾರ ಏನಲ್ಲ. ಆದರೆ.. ಕೇವಲ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ನಾಯಕರಾದ ವಿಜಯಾನಂದ ಕಾಶಪ್ಪನವರ್, ವಿನಯ್ ಕುಲಕರ್ಣಿ ಕೈಜೋಡಿಸಿದರು. ಜಯಮೃತ್ಯುಂಜಯ ಸ್ವಾಮೀಜಿ ಅಕ್ಷರಶಃ ಹರಕೆಯ ಕುರಿಯಾದರು. ಈಗ ಈ ಹೋರಾಟಕ್ಕೆ ಬಿಜೆಪಿ ಬೆಂಬಲ ಘೋಷಣೆ ಮಾಡಿದೆ. ಬಿಜೆಪಿಯವರೂ ಕೂಡಾ ಈಗ ರಾಜಕೀಯ ಲಾಭವನ್ನಷ್ಟೇ ನೋಡುತ್ತಿದ್ದಾರೆ. ಸಮುದಾಯ ವೀಕ್ ಆಗುತ್ತಿದೆ.



