ನಟ ದರ್ಶನ್ ಅವರೀಗ ಏಕಾಂಗಿ. ಅವರ ಜೊತೆಯಲ್ಲೀಗ ಅಮ್ಮ ಇಲ್ಲ. ತಮ್ಮನೂ ಇಲ್ಲ. ಯಾವ ಗೆಳತಿಗಾಗಿ ಕೊಲೆ ಆರೋಪ ಹೊತ್ತಿದ್ದಾರೋ.. ಆ ಗೆಳತಿಯೂ ಈಗ ಜೈಲಿನಲ್ಲಿದ್ದಾರೆ. ಗೆಳೆಯರು ಹತ್ತಿರ ಬರುತ್ತಿಲ್ಲ. ಈ ಸಂದರ್ಭದಲ್ಲಿಯೇ.. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಸೋಮವಾರ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಭೇಟಿಯಾಗಿದ್ದಾರೆ.
ವಿಜಯಲಕ್ಷ್ಮಿ ಕೂಡಾ ಅನ್ನಪೂರ್ಣೆಶ್ವರಿ ಠಾಣೆಯಲ್ಲಿದ್ದಾಗ ಪತಿಯನ್ನು ಭೇಟಿ ಮಾಡಿರಲಿಲ್ಲ. ಮಗನನ್ನಂತೂ ಕಸ್ಟಡಿಯಲ್ಲಿದ್ದಷ್ಟೂ ದಿನ ದರ್ಶನ್ ನೋಡಿಯೇ ಇರಲಿಲ್ಲ. ಜೈಲು ಸೇರಿದ ಮೇಲೆ ಪುತ್ರ ವಿನೀಶ್ʻನನ್ನ್ ದರ್ಶನ್ ನೋಡುತ್ತಿರುವುದು ಇದೇ ಮೊದಲು.ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಂಧನ ಬಳಿಕ, 13 ದಿನ ಕಳೆದ ಮೇಲೆ ಮೊದಲ ಬಾರಿ ಮಗನನ್ನು ನೋಡಿದ ನಟ ದರ್ಶನ್ ಭಾವುಕರಾಗಿದ್ದು, ಜೈಲಲ್ಲೆ ಕಣ್ಣೀರು ಹಾಕಿದ್ದಾರೆ.
ಈ ವೇಳೆ ಕಣ್ಣೀರಿಟ್ಟ ದರ್ಶನ್ ಅವರಿಗೆ ಧೈರ್ಯ ಹೇಳಿರುವ ವಿಜಯಲಕ್ಷ್ಮಿ ಬಿಡುಗಡೆ ಮಾಡಿಸುವ ಭರವಸೆ ಕೊಟ್ಟಿದ್ದಾರೆ. ಕಾನೂನು ಪ್ರಕ್ರಿಯೆ ಕುರಿತೂ ಕೂಡಾ ವಿಜಯಲಕ್ಷ್ಮಿ, ದರ್ಶನ್ʻಗೆ ಮಾಹಿತಿ ನೀಡಿದ್ದು, ಜಾಮೀನು ಕೊಡಿಸಲು ನಡೆಸುತ್ತಿರುವ ಹೋರಾಟದ ಬಗ್ಗೆ ಹೇಳಿಕೊಂಡಿದ್ದಾರೆ. ಜೈಲಿನ ಎದುರು ಮಾಧ್ಯಮಗಳ ಕಣ್ಣು ತಪ್ಪಿಸಿ ಒಳಗೆ ಹೋದ ವಿಜಯಲಕ್ಷ್ಮಿ, ಮಾಧ್ಯಮಗಳಿಗೆ ಪ್ರತಿಕ್ರಿಯೆಯನ್ನು ಕೂಡಾ ನೀಡಿಲ್ಲ.
ದರ್ಶನ್ ಜೊತೆ ಇನ್ನೂ ನಾಲ್ವರು ಆರೋಪಿಗಳು ಒಂದೇ ಬ್ಯಾರಕ್ʻನಲ್ಲಿದ್ದಾರೆ. ಪರಪ್ಪನ ಅಗ್ರಹಾರದಲ್ಲಿಯೇ ಇರುವ ಉಳಿದ ನಾಲ್ವರನ್ನೂ ಕೂಡಾ ತಮ್ಮೊಂದಿಗೆ ಇರಲು ಅನುಕೂಲ ಮಾಡಿಕೊಡುವಂತೆ ದರ್ಶನ್ ಜೈಲು ಅಧಿಕಾರಿಗಳಿಗೆ ಕೇಳಿದ್ದಾರೆ. ದರ್ಶನ್ʻಗೆ ಯಾವುದೇ ರೀತಿಯಲ್ಲೂ ವಿಐಪಿ ಅಥವಾ ಸ್ಪೆಷಲ್ ಸೌಲಭ್ಯಗಳಿಲ್ಲ. ಊಟ, ತಿಂಡಿಯ ವಿಷಯದಲ್ಲಿಯೂ ಕೂಡಾ ಮೇಲಧಿಕಾರಿಗಳು ಕಟ್ಟುನಿಟ್ಟಾಗಿದ್ದಾರೆ. ದರ್ಶನ್ʻಗೆ ಕೊಡುವ ಪ್ರತಿ ಊಟ, ತಿಂಡಿಯನ್ನು ವಿಡಿಯೋ ರೆಕಾರ್ಡ್ ಮಾಡುತ್ತಿದ್ದಾರೆ. ಬ್ಯಾರಕ್ಕಿನ ಎದುರು ಸಿಸಿಟಿವಿ ಫಿಟ್ ಮಾಡಿದ್ದು, ಮೇಲಧಿಕಾರಿಗಳ ಮೊಬೈಲಿಗೆ ಡೈರೆಕ್ಟ್ ಲಿಂಕ್ ಆಗಿದೆ.
ವಿಜಯಲಕ್ಷ್ಮಿ ಅವರ ಮೇಲೆ ಹಲ್ಲೆ ಮಾಡಿದ ಕೇಸಿನಲ್ಲಿಯೇ ದರ್ಶನ್ ಮೊದಲ ಬಾರಿ ಜೈಲಿಗೆ ಹೋಗಿದ್ದರು. ಇದೀಗ 13 ವರ್ಷಗಳ ನಂತರ ಮತ್ತೊಮ್ಮೆ ಜೈಲು ಸೇರಿದ್ದಾರೆ. ಪತಿಯಿಂದ ಹಲ್ಲೆ ಆಗಿಲ್ಲ ಎಂದು ಕೋರ್ಟಿನ ಎದುರು ಹೇಳಿ ದರ್ಶನ್ ಅವರನ್ನು ಆರೋಪ ಮುಕ್ತರನ್ನಾಗಿ ಮಾಡಿದ್ದ ವಿಜಯಲಕ್ಷ್ಮಿ, ಈಗ ಪ್ರೇಯಸಿಗಾಗಿ ಕೊಲೆ ಆರೋಪ ಹೊತ್ತಿರುವ ಪ್ರಕರಣದಲ್ಲೂ ದರ್ಶನ್ʻಗೆ ಧೈರ್ಯ ತುಂಬುತ್ತಿದ್ದಾರೆ.



