ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತದೆ. ಹೆಚ್ಚು ಸ್ಥಾನ ಗೆದ್ದರೆ ಯಾವುದೇ ಅಡೆತಡೆ ಇಲ್ಲದೆ ಐದು ವರ್ಷ ಸಿಎಂ ಆಗ್ತಾರೆ.
ಈ ಮಾತು ಹೇಳಿದ್ದು ಯತೀಂದ್ರ. ಸಿಎಂ ಸಿದ್ದರಾಮಯ್ಯ ಅವರ ಪುತ್ರ. ತಂದೆ ಸಿದ್ದರಾಮಯ್ಯ ಅವರಿಗಾಗಿ ವರುಣಾ ಕ್ಷೇತ್ರವನ್ನು ಬಿಟ್ಟು ಕೊಟ್ಟಿರುವ ಮಾಜಿ ಶಾಸಕ. ತಂದೆಯನ್ನು ಗೆಲ್ಲಿಸಲು ಹಗಲು ರಾತ್ರಿ ಶ್ರಮವಹಿಸಿ ಗೆಲ್ಲಿಸಿಕೊಂಡು ಬಂದ ತಂದೆಗೆ ತಕ್ಕ ಮಗ.
ಹೇಳಿದ ಸ್ಥಳ ಹೊಳೆನರಸೀಪುರ. ಹಾಸನ ಜಿಲ್ಲೆ. ಹೊಳೆನರಸೀಪುರದ ಪವರ್ ಏನು ಅನ್ನೋದು ಎಲ್ಲರಿಗೂ ಗೊತ್ತು. ಹಾಗಾಗಿ ಹೇಳಿಕೆ ಕೇವಲ ಸ್ವಪಕ್ಷದವರಿಗಷ್ಟೇ ಅಲ್ಲ, ವಿಪಕ್ಷದವರಿಗೂ ಶಾಕ್ ಕೊಟ್ಟಿದೆ.
ಗ್ಯಾರೆಂಟಿ ಯೋಜನೆಗೆ ವರ್ಷಕ್ಕೆ 56 ಸಾವಿರ ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಈ ಹಿಂದೆ ಸಾಮಾಜಿಕ ಕಾರ್ಯಕ್ರಮಕ್ಕಾಗಿ ರಾಜ್ಯದಲ್ಲಿ ಯಾವ ಸರ್ಕಾರವೂ ಇಷ್ಟು ಹಣ ಖರ್ಚು ಮಾಡಿಲ್ಲ. ಹೀಗಾಗಿ ಜನರ ಬೆಂಬಲ ಬೇಕು. ಹೆಚ್ಚು ಸ್ಥಾನ ಗೆದ್ದರೆ ನಮಗೆ ಬಲ ಬರುತ್ತದೆ. ಇದನ್ನು ಲೋಕಸಭಾ ಚುನಾವಣೆಯಲ್ಲಿ ತೋರಿಸಬೇಕು. ಹೆಚ್ಚು ಸ್ಥಾನ ಗೆದ್ದರೆ ಸಿದ್ದರಾಮಯ್ಯನವರ ಬಲ ಹೆಚ್ಚಲಿದ್ದು ಮುಂದಿನ ಐದು ವರ್ಷ ಗ್ಯಾರಂಟಿ ಯೋಜನೆ ಮುಂದುವರಿಸುತ್ತಾರೆ. ಹಾಗಾಗಿ ನಿಮ್ಮ ಬಂಬಲ ಆಶೀರ್ವಾದ ಅವರ ಮೇಲೆ ಇರಲಿ ಎಂದು ಹೇಳಿಕೆ ನೀಡಿದ್ದಾರೆ ಯತೀಂದ್ರ. ಸಹಜವಾಗಿಯೇ ಯತೀಂದ್ರ ಅವರ ಹೇಳಿಕೆ ಸಂಚಲನ ಮೂಡಿಸಿದೆ. ಇದರಿಂದ ಸ್ಪಷ್ಟವಾಗಿರುವುದು ಎರಡು ಅಂಶಗಳು.
ಕಾಂಗ್ರೆಸ್ ರಾಜ್ಯದಲ್ಲಿ ಹೆಚ್ಚು ಸೀಟು ಗೆದ್ದರೆ ಲಾಭ ಪಡೆಯುವುದು ಸಿದ್ದರಾಮಯ್ಯ. ಸಿಎಂ ಆಗಿ ಮುಂದುವರೆಯುತ್ತಾರೆ ಅನ್ನೋದು. ಜೊತೆಗೆ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆಯಾಗಿತ್ತು ಅನ್ನೋ ವಿಷಯ. ಇದು ಹಳೆಯ ಸುದ್ದಿಯೇನೂ ಅಲ್ಲ. ಆದರೆ ಈಗ ಇನ್ನೊಂದಿಷ್ಟು ಅಧಿಕೃತ ಸ್ವರೂಪ ಪಡೆದುಕೊಂಡಿದೆ. ಇದಕ್ಕೆ ಖುದ್ದು ಡಿಕೆ ಶಿವಕುಮಾರ್ ಸೇರಿದಂತೆ ಹಲವರು ರಿಯಾಕ್ಷನ್ ಕೊಟ್ಟಿದ್ಧಾರೆ.
ಪರಮೇಶ್ವರ್ : “ಸಿಎಂ ಯಾರಾಗಬೇಕು, ಯಾವಾಗ ಸಿಎಂ ಬದಲಾಯಿಸಬೇಕು ಎಂಬುದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ. ಲೋಕಸಭಾ ಚುನಾವಣಾ ಸಮಿತಿಯಲ್ಲಿ ಕೇವಲ ಸಿದ್ದರಾಮಯ್ಯನವರೊಬ್ಬರೇ ಇಲ್ಲ. ಅಲ್ಲಿ, ಕೆಪಿಸಿಸಿ ಅಧ್ಯಕ್ಷರು, ನಾನು ಸೇರಿ ಅನೇಕರು ಇದ್ದೇವೆ. ಹಾಗಾಗಿ, ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಬರೋದು, ಕಡಿಮೆ ಸ್ಥಾನ ಬರೋದು ಕೇವಲ ಒಬ್ಬ ವ್ಯಕ್ತಿಗೆ ಸೇರಿದ್ದಾಗಿರುವುದಿಲ್ಲ. ನಾವು 28ಕ್ಕೆ 28 ಸ್ಥಾನಗಳನ್ನು ಗೆಲ್ಲಬೇಕು ಎಂದು ಪ್ರಯತ್ನ ಮಾಡುತ್ತಿರುತ್ತೇವೆ.
ಡಿಕೆ ಶಿವಕುಮಾರ್ : ಯತೀಂದ್ರ ಹೇಳಿದ್ದರಲ್ಲಿ ತಪ್ಪೇನೂ ಇಲ್ಲ. ಅವರೊಬ್ಬ ಸೂಕ್ಷ್ಮವಾಗಿ ಬೆಳೆಯುತ್ತಿರುವ ನಾಯಕ. ನಾನು ನನ್ನ ಕ್ಷೇತ್ರಕ್ಕೆ ಹೋಗಿದ್ದಾಗ ನನಗೆ ಬೆಂಬಲ ಕೊಡಿ ಎಂದು ಕೇಳಿದ್ದೆ. ಆದರೆ, ಅದನ್ನೇ ಜನ ತಪ್ಪಾಗಿ ಅರ್ಥೈಸಿಕೊಂಡು ಏನೇನೋ ಟ್ವಿಸ್ಟ್ ಗಳನ್ನು ನೀಡುತ್ತಿದ್ದಾರೆ. ಯತೀಂದ್ರ ಅವರೂ ಹಾಗೆಯೇ. ಜನರ ಮನಸ್ಸಲ್ಲಿದ್ದುದನೇ ಹೇಳಿದ್ದಾರೆ.
ಇದಿಷ್ಟು ಆದ ಮೇಲೆ ಈ ಹೇಳಿಕೆ ದೇವೇಗೌಡರಿಗೇಕೆ ಟೆನ್ಷನ್ ಅನ್ನೋದನ್ನ ನೋಡೋದಾದ್ರೆ ಕೆಲವು ವಿಷಯಗಳು ಸ್ಪಷ್ಟವಾಗುತ್ತವೆ. ಹಾಸನದಲ್ಲಿ ದೇವೇಗೌಡರು ಸೋತಿದ್ದು ಅಪರೂಪ. ದೇವೇಗೌಡರ ನಂತರ ಮೊಮ್ಮಗ ಪ್ರಜ್ವಲ್ ರೇವಣ್ಣ ಕೂಡಾ ಗೆದ್ದಿದ್ಧಾಗಿದೆ. ಆದರೆ ಈ ಬಾರಿಯ ಸ್ವರೂಪ ಬದಲಾಗಿದೆ. ಜೆಡಿಎಸ್ ಈಗ ಮೊದಲಿನಷ್ಟು ಪ್ರಾಬಲ್ಯ ಹೊಂದಿಲ್ಲ. ಹೆಚ್.ಡಿ.ರೇವಣ್ಣನವರ ಹಿಡಿತವೂ ಹಂತ ಹಂತವಾಗಿ ಕಡಿಮೆಯಾಗುತ್ತಿದೆ. ಈ ಸಮಯದಲ್ಲೇ ಭರ್ಜರಿಯಾಗಿ ಗೆದ್ದು ಬಿಡೋಣ ಅನ್ನೋದು ಸಿದ್ದರಾಮಯ್ಯ ಪ್ಲಾನ್. ಏಕೆಂದರೆ ಸಿದ್ದರಾಮಯ್ಯ ಮತ್ತು ದೇವೇಗೌಡರ ನಡುವಿನ ಸಮರ ಇಂದು ನಿನ್ನೆಯದ್ದಲ್ಲ. ಆದರೆ ಇದುವರೆಗೆ ನೇರಾನೇರ ಕದನದಲ್ಲಿ ಸೋಲಿಸೋಕೆ ಸಾಧ್ಯವಾಗಿಲ್ಲ. ಕಳೆದ ಬಾರಿ ಸೋತರೂ, ಆಮೇಲೆ ಸ್ವತಃ ಕಾಂಗ್ರೆಸ್ ಮುತುವರ್ಜಿ ವಹಿಸಿ ದೇವೇಗೌಡರನ್ನು ರಾಜ್ಯಸಭೆಗೆ ಕಳಿಸುವ ಅನಿವಾರ್ಯತೆಗೆ ಸಿಲುಕಿತ್ತು. ಈ ಬಾರಿ ಚಾನ್ಸ್ ಬಿಡೋದು ಬೇಡ ಎಂಬ ತೀರ್ಮಾನ ಮಾಡಿದಂತಿದೆ ಸಿದ್ದರಾಮಯ್ಯ.



