ಅಜನೀಶ್ ಲೋಕನಾಥ್. ಭದ್ರಾವತಿಯ ಹುಡುಗ. ವಯಸ್ಸಿನ್ನೂ 37 ವರ್ಷ. ʻಶಿಶಿರʼ ಚಿತ್ರದ ಮೂಲಕ ಬೆಳಕಿಗೆ ಬಂದ ಪ್ರತಿಭೆ. ಗಮನ ಸೆಳೆದಿದ್ದು ʻಉಳಿದವರು ಕಂಡಂತೆʼ ಚಿತ್ರದಿಂದ. ರಂಗಿತರಂ, ಇಷ್ಟಕಾಮ್ಯ, ಕಿರಿಕ್ ಪಾರ್ಟಿ, ಶ್ರೀಕಂಠ, ಬೆಲ್ ಬಾಟಂ, ದಿಯಾ, ಅವನೇ ಶ್ರೀಮನ್ನಾರಾಯಣ, ವಿಕ್ರಾಂತ್ ರೋಣ, ಗುರು ಶಿಷ್ಯರು, ಯುವ, ಯುಐ, ಕಾಂತಾರ, ಈಗ ಡೆವಿಲ್.. ಹೀಗೆ ದೊಡ್ಡ ದೊಡ್ಡ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ತೆಲುಗು, ತಮಿಳಿನಲ್ಲೂ ಕೂಡಾ ದೊಡ್ಡ ದೊಡ್ಡ ಸ್ಟಾರ್ ಸಿನಿಮಾಗಳಿಗೆ ಸಂಗೀತ ನೀಡಿ ಗೆದ್ದಿದ್ದಾರೆ. ಇಂತಹ ಅಜನೀಶ್ ಲೋಕನಾಥ್ ಮೇಲೆ ಹಿಟ್ ಹಾಡುಗಳಷ್ಟೇ.. ಮ್ಯೂಸಿಕ್ ಕದ್ದ ಆರೋಪ ಕೇಳಿ ಬರುತ್ತಲೇ ಇದೆ. ಈಗ ಡೆವಿಲ್ ಚಿತ್ರಕ್ಕೂ ಮ್ಯೂಸಿಕ್ ಕದ್ದ ಆರೋಪ ಕೇಳಿ ಬಂದಿದೆ.
ಡೆವಿಲ್ ಚಿತ್ರದ ʻಅಲೋಹೋಮರ..ʼ ಹಾಡು ಇತ್ತೀಚೆಗೆ ರಿಲೀಸ್ ಆಗಿತ್ತು. ಇದು ತಮ್ಮ ಟ್ಯೂನ್ ಎಂದು ಹೇಳಿಕೊಂಡಿದ್ದಾರೆ ಸಂಗೀತ ನಿರ್ದೇಶಕ ತನ್ಮಯ್ ಗುರುರಾಜ್. ಸಂಗೀತ ನಿರ್ದೇಶಕ ತನ್ಮಯ್ ಗುರುರಾಜ್ ಮಿಸ್ಸಿಂಗ್ ಎಂಬ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದರು. ಆ ಚಿತ್ರದಲ್ಲಿ ಬರುವ ‘ರತತ್ತತ್ತ ಥಾ’ ಟ್ಯೂನ್ ರೀತಿಯಲ್ಲೇ ಇದೆ ಎನ್ನುವುದು ತನ್ಮಯ್ ಆರೋಪ. ಹಾಗಂತ ಅಜನೀಶ್ ತಮ್ಮ ಮ್ಯೂಸಿಕ್ ಕದ್ದಿದ್ದಾರೆ ಎಂದು ಅಪ್ಪಿತಪ್ಪಿಯೂ ತನ್ಮಯ್ ಹೇಳುತ್ತಿಲ್ಲ. ʻʻ‘ಸಂಗೀತ ಕ್ಷೇತ್ರ ಎಂಬುದು ಕ್ರಿಯಾತ್ಮಕ ಕ್ಷೇತ್ರ. ಇಲ್ಲಿ ಒಬ್ಬರಿಗೆ ಬಂದಿರುವ ಐಡಿಯಾ, ಆಲೋಚನೆ ಇನ್ನೊಬ್ಬರಿಗೂ ಬಂದಿರಬಹುದು. ಮುಂದೊಂದು ದಿನ ಕನ್ನಡದ ಕೇಳುಗ ಹೆಮ್ಮೆ ಪಡುವಂಥಾ ಸಂಗೀತ ನೀಡುವುದೇ ನನ್ನ ಗುರಿʼʼ ಎಂದು ಹೇಳಿಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಜನೀಶ್ ಲೋಕನಾಥ್ ಜೊತೆಗಾರ ಅಂಜು ಸಿ ಆರ್ ʻಅಲೋಹೋಮರ ಟ್ಯೂನ್ 2 ವರ್ಷದ ಹಿಂದೆಯೇ ರೆಡಿಯಾಗಿತ್ತು. ಅದನ್ನು ಡೆವಿಲ್ ಚಿತ್ರಕ್ಕೆ ಬಳಸಿಕೊಂಡಿದ್ದೇವೆ, ಅಷ್ಟೇ. ತನ್ಮಯ್ ಅವರ ಹೆಸರು ಮತ್ತು ಟ್ಯೂನ್ʻನ್ನು ಇದೇ ಮೊದಲ ಬಾರಿಗೆ ಕೇಳುತ್ತಿದ್ದೇನೆ. ಅನವಶ್ಯಕವಾಗಿ ಅಜನೀಶ್ ಹೆಸರು ಎಳೆದು ತಂದಿದ್ದು ತಪ್ಪುʼʼ ಎಂದಿದ್ದಾರೆ. ಅಜನೀಶ್ ಮೇಲೆ ಸಂಗೀತ ಚೋರಿ, ಕೃತಿ ಚೌರ್ಯ ಅಥವಾ ಅನುಮತಿ ಇಲ್ಲದೆ ಟ್ಯೂಬ್ ಬಳಸಿಕೊಂಡರು ಎಂಬ ಆರೋಪಗಳು ಹೊಸದೇನಲ್ಲ.
ಅಜನೀಶ್ ವಿರುದ್ಧ ಕೃತಿ ಚೌರ್ಯ ಆರೋಪ 01 :
ಕಿರಿಕ್ ಪಾರ್ಟಿ ಚಿತ್ರಕ್ಕೆ ಸಂಗೀತ ನೀಡಿದ್ದಾಗ.. ʻಶಾಂತಿ ಕ್ರಾಂತಿʼಯ ಮ್ಯೂಸಿಕ್ ಒಂದನ್ನು ಬಳಸಿಕೊಂಡ ಆರೋಪ ಎದುರಾಗಿತ್ತು. ʻ.. ಹೇ.. ಹೂ.. ಆರ್ ಯೂ.. ʼ ಹಾಡಿನಲ್ಲಿ ಮಧ್ಯರಾತ್ರಿಲಿ.. ಹೈವೇ ರಸ್ತೇಲಿ.. ಹಾಡಿನ ಟ್ರ್ಯಾಕ್ ಬಳಸಿದ್ದರು.
ಆನಂತರ ಅದು ಕೋರ್ಟ್ ಮೆಟ್ಟಿಲೇರಿ.. ಕೊನೆಗೆ ʻಲಹರಿʼ ಕಂಪೆನಿಗೆ ದಂಡ ನೀಡಿದ್ದರು.
ಅಜನೀಶ್ ವಿರುದ್ಧ ಕೃತಿ ಚೌರ್ಯ ಆರೋಪ 02 :
ಕಾಂತಾರ ಚಿತ್ರದ ವರಾಹರೂಪಂ.. ಹಾಡಿನ ಟ್ಯೂನ್ʻನ್ನು ಕಾಪಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂತು. ʻತೆಕ್ಕುಡಂ ಬ್ರಿಡ್ಜ್ʼ ಕೋರ್ಟ್ ಮೆಟ್ಟಿಲೇರಿತ್ತು. ಅವರ ʻನವರಸಂʼ ಆಲ್ಬಂನಲ್ಲಿದ್ ಹಾಡನ್ನು ಯಥಾವತ್ ಬಳಸಿಕೊಂಡಿದ್ದ ಆರೋಪ ಇತ್ತು. ಆ ವಿವಾದವನ್ನೂ ಕೋರ್ಟಿನ ಹೊರಗೆ ಬಗೆಹರಿಸಿಕೊಳ್ಳಲಾಗಿತ್ತು.
ಅಜನೀಶ್ ಅವರ ಸಂಗೀತ ನಿರ್ದೇಶನದಲ್ಲಿ ಕೇಳಿ ಬಂದ ಅಧಿಕೃತ ಕೃತಿ ಚೌರ್ಯ ಆರೋಪಗಳಿವು. ಅಧಿಕೃತವಲ್ಲದೆ, ಅನಧಿಕೃತವಾಗಿ ಹೇಳಿಕೊಳ್ಳುವ ಇನ್ನೂ ಹಲವು ಆರೋಪಗಳಿವೆ.



