ಹಾವಿನ ದ್ವೇಷ 12 ವರುಷ ಅನ್ನೋದು ಗಾದೆಯೇ ಹೊರತು, ವಿಜ್ಞಾನ ಅಲ್ಲ. ವಿಜ್ಞಾನಿಗಳ ಪ್ರಕಾರ ಹಾವಿಗೆ ನೆನಪಿನ ಶಕ್ತಿಯೇ ಇರಲ್ಲ. ಕಿವಿಯೂ ಕೇಳಲ್ಲ. ಹೀಗಿರುವಾಗ ದ್ವೇಷದ ಕಥೆ, ಸೇಡು ಸಾಧಿಸುವ ಕಥೆಯೇ ಸುಳ್ಳು. ಆದರೆ.. ಅದಕ್ಕೆ ವ್ಯತಿರಿಕ್ತವಾಗಿ ಆಗಾಗ್ಗೆ ಇಂತಹ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಈ ಘಟನೆ ನಡೆದಿರೋದು ಉತ್ತರ ಪ್ರದೇಶದಲ್ಲಿ. ಒಬ್ಬಳೇ ವಿದ್ಯಾರ್ಥಿನಿಗೆ ಒಂದೇ ಹಾವು, 40 ದಿನಗಳ ಅಂತರದಲ್ಲಿ 10 ಸಾರಿ ಕಚ್ಚಿತ್ತು. ಈಗ ಹಾವನ್ನು ಸೆರೆ ಹಿಡಿಯಲಾಗಿದೆ.
ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಭೈಷಪ್ಪರ್ ಗ್ರಾಮದ ರಿಯಾ ಮೌರ್ಯ ಎಂಬ ಹುಡುಗಿಯೇ ಸ್ನೇಕ್ ಗರ್ಲ್. ಈಕೆಗಿನ್ನೂ 15 ವರ್ಷ. 15 ವರ್ಷದ ರಿಯಾ ಮೌರ್ಯ ಅವಳನ್ನು ಒಂದು ಹಾವು ಬೆನ್ನು ಹತ್ತಿತ್ತು. 9ನೇ ತರಗತಿ ಓದುತ್ತಿದ್ದ ರಿಯಾಗೆ ಜುಲೈ 22 ರಂದು ಮೊದಲ ಬಾರಿ ಹಾವು ಕಚ್ಚಿತ್ತು. ಭತ್ತದ ಗದ್ದೆಗೆ ನಾಟಿ ಮಾಡೋಕೆ ಹೋಗಿದಾಗ ರಿಯಾ ಮೌರ್ಯಗೆ ಹಾವು ಕಚ್ಚಿತ್ತು. ತಕ್ಷಣ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿ ಮನೆಗೆ ಕರೆತರಲಾಗಿತ್ತು. ಆದ್ರೆ ಹಾವು ಮಾತ್ರ ರಿಯಾ ಮೌರ್ಯ ನೆಮ್ಮದಿ ಕೊಡೋಕೆ ಸಿದ್ಧ ಇರಲಿಲ್ಲ.
ಅದಾದ ನಂತರ ಆಗಸ್ಟ್ 13 ಮತ್ತು ಆಗಸ್ಟ್ 27 ರಿಂದ 30ರವರೆಗೆ ನಾಲ್ಕು ಬಾರಿ ಹಾವು ಕಚ್ಚಿತ್ತು. ಸೆಪ್ಟೆಂಬರ್ 3 ರಂದು ರಿಯಾಗೆ ಹಾವು ಕಚ್ಚಿತ್ತು. ಸ್ನಾನ ಮಾಡುವಾಗ ಇಲ್ಲವೇ ಮನೆ ಕೆಲಸ ಮಾಡುತ್ತಿದ್ದಾ ಎಲ್ಲಿಂದಲೋ ಬರುತ್ತಿದ್ದ ಹಾವು, ರಿಯಾ ದೇಹಕ್ಕೆ ವಿಷದ ಹಲ್ಲು ನಾಟಿರುತ್ತಿತ್ತು. ಇಡೀ ಕುಟುಂಬ ಹಾವಿನ ಕಾಟಕ್ಕೆ ಭಯಗೊಂಡಿತ್ತು. ರಿಯಾ ಮೌರ್ಯ ತಂದೆ ರಾಜೇಂದ್ರ ಮೌರ್ಯ ಒಂದ್ಕಡೆ ಮಗಳಿಗೆ ವೈದ್ಯರಿಂದ ಚಿಕಿತ್ಸೆ ಕೊಡ್ತಿದ್ದರೆ ಇನ್ನೊಂದು ಕಡೆ ಭೂತೋಚ್ಚಾಟನೆಗೂ ಮುಂದಾಗಿದ್ರು. ಜೊತೆಗೆ ಮನೆಯನ್ನೂ ಚೇಂಜ್ ಮಾಡಿದ್ರು.
ಹಾಗೆ ಚೇಂಜ್ ಮಾಡಿದ್ದ ವೇಳೆ ಮನೆಯಲ್ಲಿ ಹಾವಿನ ಪೊರೆ ಕಾಣಿಸಿದೆ. ಮಗಳಿಗಾಗಿ ಮನೆಯ ಗೋಡೆಯನ್ನೇ ಕೆಡವುದಕ್ಕೆ ಮುಂದಾಗಿದ್ದ ಅಪ್ಪ, ಉರಗ ತಜ್ಞರನ್ನು ಕರೆಸಿದ್ದಾರೆ. ಅವರು ಗೋಡೆಯನ್ನು ಕೆಡವಿ ಹಾವನ್ನು ಹಿಡಿದಿದ್ದಾರೆ. ಕೊನೆಗೆ ರಿಯಾ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನೂ ಇದೆ ಅನುಮಾನ..!
ರಿಯಾಗೆ ಕಚ್ಚುತ್ತಿದ್ದ ಹಾವು ಇದೇ ಎಂದು ಕುಟುಂಬಸ್ಥರು ಹೇಳಿದ್ದಾರೆ. ಆದ್ರೆ ಸ್ಥಳೀಯರ ಪ್ರಕಾರ ಎರಡು ಹಾವಿದ್ದು, ಒಂದನ್ನು ಮಾತ್ರ ಹಿಡಿಯಲಾಗಿದೆ. ಇನ್ನೊಂದು ತಪ್ಪಿಸಿಕೊಂಡಿದೆಯಂತೆ. ಆಸ್ಪತ್ರೆಯಿಂದ ರಿಯಾ ಮನೆಗೆ ವಾಪಸ್ ಬರ್ತಿದ್ದಂತೆ ಹಾವು ಸೇಡು ತೀರಿಸಿಕೊಳ್ಳುವಂತೆ ಆಕೆಗೆ ಕಚ್ಚುತ್ತಿತ್ತು ಎಂದು ಕುಟುಂಬಸ್ಥರು ಹೇಳಿದ್ದಾರೆ. ರಿಯಾ ಕಾಲು ಸುತ್ತಿಕೊಂಡು ಕಚ್ಚುತ್ತಿತ್ತಂತೆ. ಕಚ್ಚಿದ ಹಾವು ಕಪ್ಪು ನಾಗರ ಎನ್ನಲಾಗ್ತಿದೆ. ಈಗ ಸಿಕ್ಕಿರೋದು ಗೋಧಿ ಬಣ್ಣದ ನಾಗರಹಾವು ಎನ್ನುವುದು ಸ್ಥಳೀಯರ ವಾದ.



