ಇತ್ತೀಚೆಗಷ್ಟೇ ಮೈಸೂರಿನ ಮಹೇಶ್ ನಾಯ್ಕ್ (Mahesh Naik) ಎಂಬ ಯುವಕ ಡಾಕ್ಟರ್, ಎಂಜಿನಿಯರ್ ಎಂದು ಹೇಳಿಕೊಂಡು 12 ಜನರನ್ನು ಮದುವೆಯಾಗಿದ್ದ ಸ್ಟೋರಿ ಓದಿದ್ದೀರಿ. ಆತ ಓದಿದ್ದು 5ನೇ ಕ್ಲಾಸ್. (Marriage Cheeting) ಆದರೆ ಮೋಸ ಹೋಗಿ ತಾಳಿ ಕಟ್ಟಿಸಿಕೊಂಡಿದ್ದವರೆಲ್ಲ ಡಬ್ಬಲ್ ಡಿಗ್ರಿ ಪಡೆದವರೇ. ಉದ್ಯೋಗದಲ್ಲಿದ್ದವರೇ. ಆದರೆ ಅದು ಹುಡುಗನ ಕಥೆ. ಇದು ಹುಡುಗಿಯ ಕಥೆ. ಈಕೆಯ ಹೆಸರು (Rasheeda) ರಶೀದಾ. 4 ರಾಜ್ಯಗಳಲ್ಲಿ 8 ಮದುವೆಯಾಗಿ ಅಷ್ಟೂ ಜನರಿಗೆ ಯಾಮಾರಿಸಿದ್ದಾಳೆ.
ತಮಿಳುನಾಡಿನ ಸೇಲಂ ಜಿಲ್ಲೆಯ ತಾರಮಂಗಲಂನಲ್ಲಿ ಫೈನಾನ್ಸ್ ಬಿಸಿನೆಸ್ (Finance) ಮಾಡುತ್ತಿದ್ದ ಮೂರ್ತಿ ಎಂಬ ವ್ಯಕ್ತಿಗೆ ರಶೀದಾ (Rasheeda) ಎಂಬ ಯುವತಿಯ ಪರಿಚಯವಾಯ್ತು.
ಇನ್ಸ್ಟಾಗ್ರಾಮ್ ಪರಿಚಯ, ನಿರಂತರ ಚಾಟ್ ಆಗಿ ಬದಲಾಯ್ತು. ದಿನನಿತ್ಯದ ಚಾಟ್ ಲವ್ವಾಯ್ತು. ಆ ಲವ್ ರಿಲೇಷನ್`ಶಿಪ್ಪಿಗೆ ತಿರುಗಿತು. ಕೊನೆಗೆ ಮಾರ್ಚ್ 30 ರಂದು ಮೂರ್ತಿ ಮತ್ತು ರಶೀದಾ ಮದುವೆ ಕೂಡಾ ಆಗಿಬಿಟ್ಟರು. ಪ್ರೀತಿಗೆ ಧರ್ಮದ ಗಡಿ ಇರಲಿಲ್ಲ.
ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ಕಲಹ ಉಂಟಾಗಿತ್ತು. ದಿನ ಕಳೆದಂತೆ ಜಗಳಗಳು ಕೂಡ ಹೆಚ್ಚಾಗಿದ್ದವು. ಜುಲೈ 4ರಂದು ರಶೀದಾ ಮನೆಯಲ್ಲಿದ್ದ 1.5 ಲಕ್ಷ ರೂಪಾಯಿ ಹಣ ಹಾಗೂ 5 ತೊಲೆ ಚಿನ್ನಾಭರಣ ತೆಗೆದುಕೊಂಡು ಓಡಿ ಹೋಗಿದ್ದಳು. ಈ ವಿಷಯ ಗೊತ್ತಾದ ತಕ್ಷಣ ಮೂರ್ತಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪೊಲೀಸರು ತನಿಖೆಗಿಳಿದಾಗ ಗೊತ್ತಾದ ಅಂಶವೆಂದರೆ ಈ ರಶೀದಾಗೆ ಮದುವೆಯಾಗುವುದೇ ಉದ್ಯೋಗ ಎನ್ನುವುದು.
ಈಕೆ ನಿತ್ಯ ವಧು. ಯಾವಾಗಲೂ ಹುಡುಗನನ್ನು ಹುಡುಕುವುದೇ ಈಕೆಯ ಉದ್ಯೋಗ. ರಶೀದಾ ಅನೇಕ ಯುವಕರೊಂದಿಗೆ ಇನ್ಸ್ಟಾಗ್ರಾಮ್ನಲ್ಲಿ ಚಾಟ್ ಮಾಡಿದ್ದಾಳೆ. ಶ್ರೀಮಂತ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ರಿಕ್ವೆಸ್ಟ್ ಕಳಿಸುತ್ತಿದ್ದ ಆಕೆ ಆ ಬಳಿಕ ಅವರೊಂದಿಗೆ ಚಾಟ್ ಮಾಡುತ್ತಿದ್ದರು. ಬಳಿಕ ಮದುವೆ ಪ್ರಸ್ತಾಪವಿಡುತ್ತಿದ್ದಳು. ಸಾಮಾನ್ಯವಾಗಿ ಅಫೇರ್, ರೊಮ್ಯಾನ್ಸ್ ಎಂದರೆ ಏನೋ ಇರಬೇಕು ಎಂದು ಸಂಶಯ ಪಡುವವರೂ ಇದ್ದಾರೆ. ಆದರೆ ಮದುವೆ ಎಂದಾಗ.. ಹುಡುಗಿ ನೋಡುವುದಕ್ಕೆ ಚೆಂದವೂ ಇದ್ದಾಗ.. ಯಾಮಾರಿಬಿಡುತ್ತಾರೆ. ಹೀಗಾಗಿಯೇ ಮದುವೆಗೆ ಎಸ್ ಎನ್ನುತ್ತಿದ್ದರು. ಆದರೆ.. ಆನಂತರ ಕೆಲವೇ ದಿನಗಳಲ್ಲಿ ದುಡ್ಡು, ಒಡವೆ ಮಾಯವಾಗುತ್ತಿತ್ತು. ಹುಡುಗಿಯೂ ಮಾಯ. ಇದು ರಶೀದಾಳ ನಿರಂತರ ಚಟುವಟಿಕೆ.
ಪೊಲೀಸರಿಗೆ ಗೊತ್ತಾಗಿದ್ದೇನೆಂದರೆ ರಶೀದಾ ಈಗಾಗಲೇ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಕೇರಳದಲ್ಲಿ 8 ಮದುವೆಯಾಗಿ ಎಂಟೂ ಜನರಿಗೆ ಯಾಮಾರಿಸಿದ್ದಾಳೆ ಎನ್ನುವುದು. ಇದು ಇದುವರೆಗೆ ಗೊತ್ತಾಗಿರುವ ವಿಷಯ ಅಷ್ಟೆ.
ಪೊಲೀಸರು, ಸೈಬರ್ ತಜ್ಞರು ಹಾಗೂ ಸೋಶಿಯಲ್ ಮೀಡಿಯಾ ತಜ್ಞರು ಸಾಕಷ್ಟು ಬಾರಿ ಈ ಎಚ್ಚರಿಕೆಯನ್ನು ನೀಡಿಯೇ ಇರುತ್ತಾರೆ. ಆನ್ನೈಲ್ನಲ್ಲಿ ಪರಿಚಿತವಾದ ವ್ಯಕ್ತಿಗಳೊಂದಿಗೆ ಡೇಟಿಂಗ್ ಮಾಡುವುದು ಒಳ್ಳೆಯದಲ್ಲ ಎನ್ನುವ ಸಲಹೆಗಳನ್ನು ನೀಡುತ್ತಲೇ ಇರುತ್ತಾರೆ. ಆದರೆ, ಇಂಥ ಪ್ರಕರಣಳು ಆಗೋದು ನಿಲ್ಲೋದೇ ಇಲ್ಲ. ಆನ್ಲೈನ್ನಲ್ಲಿ ಪರಿಚಯವಾದ ಹುಡುಗಿ ಅಥವಾ ಹುಡುಗನೊಂದಿಗೆ ಡೇಟಿಂಗ್ ನಡೆಸಿ ಕೊನೆಗೆ ಮೋಸಹೋಗುವ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಇಂತಹ ಸುದ್ದಿಗಳು ಬಂದಾಗ ನಾವು ಹುಷಾರಾಗಿರಬೇಕು ಎಂದುಕೊಳ್ತಾರೆ. ಆದರೆ.. ಮೋಸದ ಬಲೆಗೆ ಮತ್ತೆ ಮತ್ತೆ ಬೀಳ್ತಾರೆ.



