ಸರ್ಕಾರಿ ಕೆಲಸಗಳ ನೇಮಕಾತಿಗಾಗಿ ಅರ್ಜಿ ಕರೆಯಲಾಗುತ್ತದೆ. ಅರ್ಜಿ ಹಾಕಿದವರು ಪರೀಕ್ಷೆಯನ್ನು ಬರೆದು, ನಂತರ ಸಂದರ್ಶನವನ್ನೂ ಎದುರಿಸಬೇಕು. ಆದರೆ ಈ ಹಂತದಲ್ಲಿ ಕೆಲವು ಮಹತ್ವದ ಬದಲಾವಣೆ ಆಗಿದೆ. ಕರ್ನಾಟಕ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ತಿಳಿಯಲೇಬೇಕಾದ ಮಹತ್ವದ ಅದೇಶವೊಂದು ಇದೀಗ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾಗಿದೆ. ಅದರಲ್ಲೂ ಯಾವುದೇ ಪದವಿ ನಂತರ ಅರ್ಜಿ ಸಲ್ಲಿಸಬಹುದಾದ ಗ್ರೂಪ್ ಎ ಹಾಗೂ ಗ್ರೂಪ್ ಬಿ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿತ ಬಿಗ್ ಅಪ್‌ಡೇಟ್ ಇದಾಗಿದೆ.
ಎ ಮತ್ತು ಬಿ ಗ್ರೂಪ್ ಹುದ್ದೆ ನೇಮಕಾತಿ ಆಕಾಂಕ್ಷಿಗಳು :
ಈವರೆಗೆ ರಾಜ್ಯ ಸರ್ಕಾರದ ಗ್ರೂಪ್ ಎ ಹಾಗೂ ಗ್ರೂಪ್ ಬಿ ಹುದ್ದೆಗಳ ಪೈಕಿ, ಕೆಲವು ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಎರಡೂ ಇರುತ್ತಿತ್ತು. ಕೆಲವು ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮಾತ್ರ ಇರುತ್ತಿತ್ತು. ಅದರಲ್ಲೂ ಪ್ರಶ್ನೆಪತ್ರಿಕೆಗಳಲ್ಲಿ ಬಹು ಆಯ್ಕೆ ಉತ್ತರಗಳು ಸಹ ಇರುತ್ತಿದ್ದವು. ಆದರೆ ಈ ಎಲ್ಲ ಮಾದರಿ ಪರೀಕ್ಷೆಗಳಲ್ಲಿ ಈಗ ಮಹತ್ತರವಾದ ಬದಲಾವಣೆ ಆಗಿದೆ. ಹೊಸ ಪರೀಕ್ಷೆ ಮಾದರಿಯ ಆದೇಶಗಳು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾಗಿವೆ.
ಅವುಗಳ ಪ್ರಕಾರ..
ಸಂದರ್ಶನವಿಲ್ಲದ ಗ್ರೂಪ್-ಎ ಮತ್ತು ಗ್ರೂಪ್-ಬಿ ಹುದ್ದೆಗಳಿಗೆ
ಸ್ಪರ್ಧಾತ್ಮಕ ಪರೀಕ್ಷೆ ಇರುತ್ತದೆ. ತಲಾ 300 ಅಂಕಗಳ 2 ಲಿಖಿತ ಪ್ರಶ್ನೆ ಪತ್ರಿಕೆಗಳಿರುತ್ತವೆ. ವಸ್ತುನಿಷ್ಠ ಬಹು ಆಯ್ಕೆ ಸ್ವರೂಪದಲ್ಲಿ ಇರುವ ಪ್ರಶ್ನೆ ಪತ್ರಿಕೆಯಲ್ಲಿ ಋಣಾತ್ಮಕ ಅಂಕವೂ ಇರಲಿದೆ. ಅಂದ್ರೆ ತಪ್ಪು ಉತ್ತರ ಬರೆದರೆ, ಸರಿಯಾಗಿ ಬರೆದ ಉತ್ತರದ ಅಂಕ ಕಾಲು ಭಾಗದಷ್ಟು ಅಂಕ ನಷ್ಟವಾಗಲಿದೆ. ಪ್ರಶ್ನೆಗಳಿಗೆ ಹಂಚಿಕೆ ಮಾಡಲಾದ ಅಂಕಗಳಲ್ಲಿ ನಾಲ್ಕನೇ ಒಂದು ಭಾಗದಷ್ಟು (1/4) ಅಂಕಗಳನ್ನು ಪ್ರತಿಯೊಂದು ತಪ್ಪಾದ ಉತ್ತರಕ್ಕೆ ಕಡಿತಗೊಳಿಸಲಾಗುತ್ತದೆ.
ಅಂದರೆ ನೀವು 10 ಅಂಕದ ಪ್ರಶ್ನೆಗೆ ತಪ್ಪು ಉತ್ತರ ನೀಡಿದರೆ, ಆ 10ರಲ್ಲಿ ¼ ಭಾಗ ಎಂದರೆ ಎರಡೂವರೆ ಅಂಕ ಮೈನಸ್ ಆಗಲಿದೆ.
ಸಂದರ್ಶನ ಇರುವ ಗ್ರೂಪ್ ಎ ಹುದ್ದೆಗಳಿಗೆ
ಸ್ಪರ್ಧಾತ್ಮಕ ಪರೀಕ್ಷೆ ಇರುತ್ತದೆ. ತಲಾ 300 ಅಂಕಗಳ 2 ಲಿಖಿತ ಪ್ರಶ್ನೆ ಪತ್ರಿಕೆಗಳಿರುತ್ತವೆ. ಆದರೆ ಬಹು ಆಯ್ಕೆ ಪ್ರಶ್ನೆಗಳು ಇರುವುದಿಲ್ಲ. ವಿವರಣಾತ್ಮಕ ಸ್ವರೂಪದ ಉತ್ತರ ಬರೆಯಬೇಕು.
ಗ್ರೂಪ್-ಎ ಮತ್ತು ಗ್ರೂಪ್-ಬಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ 2 ಪತ್ರಿಕೆಗಳಿಗೆ ಸಂಬಂಧಿಸಿದಂತೆ ಪಠ್ಯಕ್ರಮವು ಈ ಕೆಳಕಂಡಂತೆ ಇರಲಿದೆ.
ಪತ್ರಿಕೆ-I ಸಾಮಾನ್ಯ ಪತ್ರಿಕೆ:
ಪ್ರಚಲಿತ ವಿದ್ಯಮಾನಗಳು, ಸಾಮಾನ್ಯ ವಿಜ್ಞಾನ, ಕರ್ನಾಟಕ ಇತಿಹಾಸ ಮತ್ತು ಭೂಗೋಳಶಾಸ್ತ್ರ, ಭಾರತದ ಇತಿಹಾಸ ಮತ್ತು ಭೂಗೋಳಶಾಸ್ತ್ರ, ಸಮಾಜ ವಿಜ್ಞಾನ, ಸಾಮಾನ್ಯ ಬೌದ್ಧಿಕ ಸಾಮರ್ಥ್ಯ, ಭಾರತದ ಸಂವಿಧಾನ, ಸಾರ್ವಜನಿಕ ಆಡಳಿತ ಮತ್ತು ಗ್ರಾಮೀಣಾಭಿವೃದ್ಧಿ, ವಿಜ್ಞಾನ ಮತ್ತು ತಂತ್ರಜ್ಞಾನ, ಭಾರತದ ಅರ್ಥವ್ಯವಸ್ಥೆ, ಅಂತರಾಷ್ಟ್ರೀಯ ಸಂಬಂಧಗಳು, ಪರಿಸರ ವಿಜ್ಞಾನ, ತಾರ್ಕಿಕ ಆಲೋಚನೆ, ದೈನಂದಿನ ಗ್ರಹಿಕೆಯ ವಿಷಯಗಳನ್ನು ಮತ್ತು ನಿಗದಿಪಡಿಸಲಾದ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವ ವ್ಯಕ್ತಿಯಿಂದ ನಿರೀಕ್ಷಿಸಬಹುದಾದ ಪ್ರಾಯೋಗಿಕ ಜ್ಞಾನವನ್ನು ಒಳಗೊಂಡಿರತಕ್ಕದ್ದು.
ಪತ್ರಿಕೆ-II. ನಿರ್ದಿಷ್ಟ ಪತ್ರಿಕೆ :
ಈ ಪತ್ರಿಕೆಯ ಪಠ್ಯಕ್ರಮವನ್ನು ಆಯ್ಕೆ ಪ್ರಾಧಿಕಾರವೇ ನಿರ್ಧರಿಸಲಿದೆ. ಯಾವ ಹುದ್ದೆಗೆ ಆಯ್ಕೆ ಮಾಡಲಾಗುತ್ತಿದೆಯೋ ಆ ಹುದ್ದೆಯ ಸ್ವರೂಪವನ್ನ ದೃಷ್ಟಿಯಲ್ಲಿ ಇಟ್ಟುಕೊಂಡು ಮತ್ತು ಸಂಬಂಧ ಪಟ್ಟ ಕ್ಷೇತ್ರ, ಇಲಾಖೆ ಅಥವಾ ನೇಮಕಾತಿ ಪ್ರಾಧಿಕಾರದೊಂದಿಗೆ ಸಮಾಲೋಚಿಸಿ ನಿರ್ಧರಿಸಲಿದೆ.
ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021 ಇದನ್ನು ಮತ್ತಷ್ಟು ತಿದ್ದುಪಡಿ ಮಾಡುವುದಕ್ಕೆ ದಿನಾಂಕ: 20.09.2022 ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಇದೀಗ ಅಂತಿಮ ಅಧಿಸೂಚನೆ ಹೊರಬಿದ್ದಿದೆ.



