ರಾಜ್ಯದಲ್ಲಿ ಅನ್ನಭಾಗ್ಯ (AnnaBhagya) ಗೃಹಲಕ್ಷ್ಮಿ(Gruhalakshmi), ಗೃಹಜ್ಯೋತಿ (Gruhajyothi), ನಿರುದ್ಯೋಗ ಭತ್ಯೆ.. ಹೀಗೆ ಎಲ್ಲ ಯೋಜನೆಗಳಿಗೂ ರೇಷನ್ ಕಾರ್ಡ್ ಅನಿವಾರ್ಯವಾಗಿದ್ದು, ರೇಷನ್ ಕಾರ್ಡುಗಳಿಗೆ ಬೇಡಿಕೆಯೂ ಹೆಚ್ಚಿದೆ. ಒಂದೆಡೆ ರೇಷನ್ ಕಾರ್ಡ್ ಬೇಡಿಕೆ, ಇನ್ನೊಂದೆಡೆ ಅನ್ನಭಾಗ್ಯದ ಹಣ ವಿತರಣೆ.. ಈ ಎಲ್ಲದಕ್ಕೂ ಸಚಿವ ಕೆ.ಹೆಚ್.ಮುನಿಯಪ್ಪ (KH Muniyappa) ಉತ್ತರ ಕೊಟ್ಟಿದ್ದಾರೆ.
ರಾಜ್ಯದಲ್ಲಿ ಇರುವ 1.28 ಕೋಟಿ ಬಿಪಿಎಲ್ ಕಾರ್ಡ್ಗಳ (BPL Card) ಪೈಕಿ ಅಂದಾಜು 8 ಲಕ್ಷ ಕಾರ್ಡ್ದಾರರು ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಪಡೆಯುತ್ತಿಲ್ಲ. ಹಲವು ಬಿಪಿಎಲ್ ಕಾರ್ಡ್ದಾರರು (BPL Card) ಹಲವು ತಿಂಗಳಿಂದ ಪಡಿತರ ಅಕ್ಕಿಯನ್ನೇ ಪಡೆದಿಲ್ಲ. ಅವರು ಕೇವಲ ಆಯುಷ್ಮಾನ್ ಭಾರತ್ (Ayushman Bharath) ಆರೋಗ್ಯ ಸೇವೆ ಮತ್ತಿತರ ಸರ್ಕಾರಿ ಸೌಲಭ್ಯಗಳಿಗೆ ಸೀಮಿತವಾಗಿ ಬಿಪಿಎಲ್ ಕಾರ್ಡ್ (BPL Card) ಬಳಸುತ್ತಾರೆ. ಅಂತಹವರಿಗೆ ರಾಜ್ಯ ಸರ್ಕಾರ ಇನ್ನು ಮುಂದೆ ಅಕ್ಕಿಯನ್ನು ಕೊಡುವುದಿಲ್ಲ. ಈಗಾಗಲೇ ಕಳೆದ ಮೂರು ತಿಂಗಳಿಂದ ಪಡಿತರ ಅಕ್ಕಿ ಪಡೆಯದ ಬಿಪಿಎಲ್ ಕಾರ್ಡ್ದಾರರಿಗೆ ಹೆಚ್ಚುವರಿ 5 ಕೆ.ಜಿ. ಅಕ್ಕಿಗೆ ನೀಡುವ ನಗದು ವರ್ಗಾವಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂದಿದ್ದಾರೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ.
ವಿವಿಧ ಕಾರಣಗಳಿಗೆ ಹಲವರು ಅಕ್ಕಿ ಪಡೆಯುತ್ತಿಲ್ಲ. ಅಕ್ಕಿ ಪಡೆದರೂ ಬೇರೆಯವರಿಗೆ ನೀಡುವುದು, ಕಾಳ ಸಂತೆಯಲ್ಲಿ ಮಾರುವುದು ಮಾಡುತ್ತಾರೆ. ಇಂತಹ ದುರ್ಬಳಕೆ ತಡೆಯಲು ಅಗತ್ಯವಿರುವವರಿಗೆ ಮಾತ್ರ ಅಕ್ಕಿ ಪೂರೈಸಲು ಮನೆ-ಮನೆ ಸಮೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಎಷ್ಟು ಮಂದಿ ಬಿಪಿಎಲ್ (BPL Card) ಕಾರ್ಡ್ದಾರರು ಅಕ್ಕಿ ಪಡೆಯಲು, ಎಷ್ಟುಮಂದಿ ಕೇವಲ ವೈದ್ಯಕೀಯ ಸೌಲಭ್ಯ ಪಡೆಯಲು ಬಳಸುತ್ತಿದ್ದಾರೆ ಎಂದು ಪರಿಶೀಲಿಸಿ ಆಂಧ್ರದ ಮಾದರಿಯಲ್ಲಿ ಪ್ರತ್ಯೇಕ ಕಾರ್ಡ್ ತರುವ ಬಗ್ಗೆಯೂ ಚಿಂತನೆ ನಡೆದಿದ್ದು, ಈ ಬಗ್ಗೆಯೂ ನಮ್ಮ ಇಲಾಖೆ ಗಮನಕ್ಕೆ ಬಂದಿದೆ. ಅಕ್ಕಿ ಅಗತ್ಯವಿಲ್ಲದವರಿಗೆ ಪ್ರತ್ಯೇಕ ಬಿಪಿಎಲ್ ಕಾರ್ಡ್ ನೀಡಿದರೆ ಅದು ವೈದ್ಯಕೀಯ ಉದ್ದೇಶಕ್ಕೆ ಸೀಮಿತವಾಗಲಿದೆ. ವೈದ್ಯಕೀಯ ಉದ್ದೇಶಕ್ಕೆ ಸೀಮಿತವಾಗಿ ಬಳಸಬಹುದಾದ ಬಿಪಿಎಲ್ ಪಡಿತರ ಚೀಟಿಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ ಮುನಿಯಪ್ಪ.
ಇನ್ನು ಹೊಸದಾಗಿ ಬಿಪಿಎಲ್ ಕಾರ್ಡ್ (BPL Card) ಪಡೆಯಲು 3 ಲಕ್ಷ ಮಂದಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇವು ಹಲವು ವರ್ಷಗಳಿಂದ ವಿಲೇವಾರಿಗೆ ಬಾಕಿಯಿವೆ. ಸದ್ಯದಲ್ಲೇ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ಕಾರ್ಡ್ ನೀಡಲಾಗುವುದು. ಬಳಿಕ ಅವರಿಗೆ 10 ಕೆ.ಜಿ. ಅಕ್ಕಿ ಅಥವಾ 5 ಕೆ.ಜಿ. ಅಕ್ಕಿ, 5 ಕೆ.ಜಿ. ಅಕ್ಕಿಯ ನಗದು ಪಾವತಿಸಲಾಗುವುದು ಎಂದಿದ್ದಾರೆ ಮುನಿಯಪ್ಪ.
ಇನ್ನು 53,547 ಕಾರ್ಡ್ಗಳಲ್ಲಿ ಕುಟುಂಬದ ಮುಖ್ಯಸ್ಥರ ಮಾಹಿತಿ ಇಲ್ಲ. 4,845 ಕಾರ್ಡ್ಗಳಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಕುಟುಂಬದ ಮುಖ್ಯಸ್ಥರ ಹೆಸರಿದೆ. 54,349 ಮಂದಿ ಆಧಾರ್ ಲಿಂಕ್ ಮಾಡಿಲ್ಲ. ಮಾಚ್ರ್, ಏಪ್ರಿಲ್, ಮೇ ತಿಂಗಳಲ್ಲಿ 5.32 ಲಕ್ಷ ಮಂದಿ ಪಡಿತರ ಅಕ್ಕಿ ಪಡೆದಿಲ್ಲ. 3ಕ್ಕಿಂತ ಕಡಿಮೆ ಸದಸ್ಯರ 3.40 ಲಕ್ಷ ಅಂತ್ಯೋದಯ ಕಾರ್ಡ್ಗಳು, ಜತೆಗೆ ಬ್ಯಾಂಕ್ ಖಾತೆ ಇಲ್ಲದಿರುವುದು, ಖಾತೆ ನಿಷ್ಕಿ್ರಯ, ತಪ್ಪಾಗಿ ಆಧಾರ್ ಸಂಖ್ಯೆ ನೀಡಿರುವುದು, ರೇಷನ್ ಕಾರ್ಡ್ಗೆ ಆಧಾರ್ ಜೋಡಣೆ ಆಗದಿರುವುದು, ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್ಐಸಿ) ದತ್ತಾಂಶ ಇಲ್ಲದಿರುವುದು ಸೇರಿ ವಿವಿಧ ತಾಂತ್ರಿಕ ಕಾರಣಗಳಿಂದ 21.69 ಲಕ್ಷ ಬಿಪಿಎಲ್ ಕಾರ್ಡ್ಗಳು ಅನ್ನಭಾಗ್ಯದ ಹಣ ಸೌಲಭ್ಯದಿಂದ ದೂರವುಳಿದಿವೆ. ಒಟ್ಟಾರೆ 30.90 ಲಕ್ಷ ಕಾರ್ಡ್ದಾರರಿಗೆ ನಗದು ಸಿಗದಂತಾಗಿದೆ. ಆದರೆ, ಆಧಾರ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಸಮಸ್ಯೆ ಪರಿಹರಿಸಿದರೆ ಆಗಸ್ಟ್ ತಿಂಗಳಲ್ಲಿ ಅಕ್ಕಿ ಬದಲು ಪ್ರತಿ ಫಲಾನುಭವಿಗೆ 170 ರು.ನಂತೆ 5 ಕೆ.ಜಿ. ಅಕ್ಕಿಯ ಹಣ ಖಾತೆಗಳಿಗೆ ಪಾವತಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಾರೆ ಇದುವರೆಗೆ 30.90 ಲಕ್ಷ ಕಾರ್ಡುದಾರರಿಗೆ ಹಣ ಸಂದಾಯವಾಗಿಲ್ಲ.



