ಹೊಂಬಾಳೆ ಪ್ರೊಡಕ್ಷನ್ಸಿನವರು ನರಸಿಂಹ ಅವತಾರದ ಕಥೆ ಹೇಳೋಕೆ ಬಂದಿದ್ದಾರೆ. ನರಸಿಂಹ ಯಾರಾಗ್ತಾರೆ..? ಯಾರು ಭಕ್ತ ಪ್ರಹ್ಲಾದ..? ಯಾರು ಹಿರಣ್ಯಕಶಿಪು..ಎಂಬ ಕುತೂಹಲ ಸಹಜವಾಗಿಯೇ ಮೂಡಿದೆ. ಏಕೆಂದರೆ ಭಕ್ತ ಪ್ರಹ್ಲಾದ ಡಾ.ರಾಜ್ ಅಭಿನಯದ ಕ್ಲಾಸಿಕ್ ಸಿನಿಮಾ. ಹಿರಣ್ಯಕಶಿಪು ಎಂದರೆ ಕನ್ನಡಿಗರ ಕಣ್ಣ ಮುಂದೆ ಬರೋದು ಡಾ.ರಾಜ್ ಕುಮಾರ್. ಭಕ್ತ ಪ್ರಹ್ಲಾದ ಎಂದರೆ ಪುನೀತ್ ರಾಜ್ ಕುಮಾರ್ ಬರುತ್ತಾರೆ. ಭಕ್ತ ಪ್ರಹ್ಲಾದ ಚಿತ್ರದಲ್ಲಿ ಮಾ.ಪುನೀತ್ ಹೀರೋ ಆದರೆ, ಡಾ.ರಾಜ್ ಕುಮಾರ್ ವಿಲನ್. ವಿಜಯ್ ನಿರ್ದೇಶನದ ಸಿನಿಮಾ ಕನ್ನಡದ ಕ್ಲಾಸಿಕ್ ಚಿತ್ರಗಳಲ್ಲೊಂದು.
ಡಾ.ರಾಜ್ (ಹಿರಣ್ಯ ಕಶಿಪು), ಸರಿತಾ (ಕಯಾದು), ಮಾ.ಲೋಹಿತ್ (ಪ್ರಹ್ಲಾದ), ಅನಂತನಾಗ್ (ನಾರದ), ತೂಗುದೀಪ ಶ್ರೀನಿವಾಸ್ (ಹಿರಣ್ಯಾಕ್ಷ), ಅಂಬಿಕಾ (ನರ್ತಕಿ), ಗಂಗಾಧರ್ (ದೇವೇಂದ್ರ), ಶ್ರೀನಿವಾಸ ಮೂರ್ತಿ (ಮಹಾವಿಷ್ಣು ಮತ್ತು ನರಸಿಂ) ಮೊದಲಾದವರು ನಟಿಸಿದ್ದ ಚಿತ್ರಕ್ಕೆ ಟಿಜಿ ಲಿಂಗಪ್ಪ ಸಂಗೀತ ನೀಡಿದ್ದರು.
ಈಗ ಹೊಂಬಾಳೆಯವರು ನರಸಿಂಹ ಸಿನಿಮಾ ಘೋಷಿಸಿದ್ದಾರೆ. ʻಮಹಾವತಾರ್ ನರಸಿಂಹʼ ಅನ್ನೋದು ಚಿತ್ರದ ಟೈಟಲ್. ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಆದರೆ ಹೀರೋ ಯಾರು, ಡೈರೆಕ್ಟರ್ ಯಾರು ಅನ್ನೋದು ಸಸ್ಪೆನ್ಸ್. ಅದನ್ನು ಹೊಂಬಾಳೆಯವರು ಹೇಳಿಲ್ಲ. ಪೋಸ್ಟರ್ ನೋಡಿದವರು ಹೀರೋ ಕನ್ನಡದವರಂತೂ ಅಲ್ಲ ಎನ್ನುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ, ಇದು ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡದ ನಟ ಅಥವಾ ನಿರ್ದೇಶಕರಾಗಿದ್ದರೆ ಕನ್ನಡದ ಹೆಸರು ಎಲ್ಲ ಭಾಷೆಗಳ ಲಿಸ್ಟಿನಲ್ಲಿ ಮೊದಲು ಇರುತ್ತಿತ್ತು. ಹಾಗಾಗಿಲ್ಲ ಎಂದರೆ ಬೇರೆ ಭಾಷೆಯವರೇ ಇರಬೇಕು ಎಂದು ಊಹೆ ಮಾಡುತ್ತಿದ್ದಾರೆ. ಆದರೆ ಇದು ಆನಿಮೇಷನ್ ಸಿನಿಮಾ ಎಂಬುದು ನೆನಪಿರಲಿ.
ಇದೊಂದು 3ಡಿ ಸಿನಿಮಾ ಆಗಿರಲಿದ್ದು, ಆನಿಮೇಷನ್ ಮೂಲಕ ನಿರ್ಮಾಣವಾಗುವ ಚಿತ್ರವಾಗಿರಲಿದೆ. ಭಾರತದ ಜನಪ್ರಿಯ ಅನಿಮೇಷನ್ ಸಿನಿಮಾ ಸ್ಟುಡಿಯೋ ಕ್ಲೀಮ್ ನಿರ್ಮಾಣಕ್ಕೆ ಕೈಜೋಡಿಸಿದೆ. ಕ್ಲೀಮ್ನ ಅಶ್ವಿನ್ ಕುಮಾರ್ ಅವರು ಈ ಸಿನಿಮಾದ ನಿರ್ದೇಶನ ಮಾಡಲಿದ್ದಾರೆ. ಭಾರಿ ಗಾತ್ರದ ನರಸಿಂಹ ಹಾಗೂ ನರಸಿಂಹನ ಎದುರು ನಿಂತಿರುವ ಹಿರಣ್ಯಕಶಿಪುವಿನ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಜೊತೆಗೆ ಸಣ್ಣ ಟೀಸರ್ ಅನ್ನೂ ಬಿಡುಗಡೆ ಮಾಡಲಾಗಿದೆ. ಸಿನಿಮಾಕ್ಕೆ ಸ್ಯಾಮ್ ಸಿಎಸ್ ಮತ್ತು ಶ್ಲೋಕ ಅರುಗಳು ಸಂಗೀತ ನೀಡುತ್ತಿದ್ದಾರೆ. 1983ರಲ್ಲಿ ಬಂದಿದ್ದ ಭಕ್ತ ಪ್ರಹ್ಲಾದ ಚಿತ್ರದಲ್ಲಿ 9 ಹಾಡುಗಳಿದ್ದವು. ಎಲ್ಲ ಹಾಡುಗಳು ಅವತ್ತಿಗೂ ಹಿಟ್, ಇವತ್ತಿಗೂ ಹಿಟ್. ಆ ಹಾಡುಗಳನ್ನು ಮೀರಿಸುವಂತಹ ಸಂಗೀತ ನೀಡಬೇಕಾದ್ದು ಸಿಎಸ್ ಮತ್ತು ಶ್ಲೋಕ ಅವರ ಜವಾಬ್ದಾರಿ.
ಸಿನಿಮಾದಲ್ಲಿ ಹಿರಣ್ಯಕಶಪು ಹಾಗೂ ನರಸಿಂಹನ ಕತೆಯನ್ನು ಅದ್ಧೂರಿಯಾಗಿ, ರೋಚಕವಾಗಿ ತೆರೆಯ ಮೇಲೆ ತರಲಾಗುತ್ತಿದೆ.
ಆಗಿನ ಕಾಲಕ್ಕೆ ಅದ್ಭುತವಾಗಿ ತೆರೆ ಮೇಲೆ ತಂದಿದ್ದ ಚಿತ್ರವನ್ನು ಹೊಸ ತಂತ್ರಜ್ಞಾನ, ಗ್ರಾಫಿಕ್ಸ್, ಆನಿಮೇಷನ್ನುಗಳಲ್ಲಿ ಇನ್ನಷ್ಟು ಅದ್ಭುತವಾಗಿ ಮೂಡಿಸಬಹುದು. ಆದರೆ ಕಥೆಗೆ ನಿಷ್ಟರಾಗಿರಬೇಕಷ್ಟೆ.
ಪುರಾಣದ ಪ್ರಕಾರ ಜಯ-ವಿಜಯ ಎಂಬ ವೈಕುಂಠದ ದ್ವಾರಪಾಲಕರು ಭೃಗು ಮಹರ್ಷಿಯ ಶಾಪಕ್ಕೆ ಒಳಗಾಗಿ ಭೂಮಿಯಲ್ಲಿ ಜನ್ಮ ಎತ್ತುತ್ತಾರೆ. ವಿಷ್ಣುವಿನ ಬಳಿಗೆ ಬೇಗ ಹೋಗುವ ಹಂಬಲದಿಂದ ವಿಷ್ಣುವಿನ ಶತ್ರುಗಳಾಗಿ ಹುಟ್ಟುತ್ತಾರೆ. ಹಿರಣ್ಯಾಕ್ಷ-ಹಿರಣ್ಯಕಶಿಪು, ರಾವಣ-ಕುಂಭಕರ್ಣ ಮತ್ತು ಶಿಶುಪಾಲ-ಕಂಸರಾಗಿ ಹುಟ್ಟುತ್ತಾರೆ. ಆ ಮೂರು ಜನ್ಮಗಳ ಮೊದಲ ಅಧ್ಯಾಯವೇ ಈಗ ಹೊಂಬಾಳೆಯವರು ಮಾಡುತ್ತಿರುವ ಕಥೆ. ಡಾ.ರಾಜ್, ಪುನೀತ್ ನಟಿಸಿದ್ದ ಭಕ್ತ ಪ್ರಹ್ಲಾದದ ಕಥೆ.



