ನಿಮಗೆ ಕ್ಯಾನ್ಸರ್ ಇದೆ.. ನೀವು ಫೈನಲ್ ಸ್ಟೇಜಿನಲ್ಲಿದ್ದೀರಿ. ಹೆಚ್ಚೆಂದರೆ.. ಇನ್ನೊಂದೆರಡು ತಿಂಗಳೋ.. ವರ್ಷವೋ.. ಬದುಕಬಹುದು. ಕೊನೆಯ ದಿನಗಳನ್ನು ಸುಖವಾಗಿ ಸಂತೋಷದಿಂದ ಕಳೆದುಬಿಡಿ.. ಇಂತಹ ಡೈಲಾಗ್`ನ್ನು ಸಿನಿಮಾಗಳಲ್ಲಿ ಕೇಳೋದಿಕ್ಕೆ ಚೆಂದ. ರಿಯಲ್ ಜೀವನದಲ್ಲಿ ಅಲ್ಲ. ಅಂಥಾದ್ದೊಂದು ಪರಿಸ್ಥಿತಿ ಕನ್ನಡದ ನಟಿಗೆ ಎದುರಾಗಿದೆ.
ಯಾರಾದರೂ ವ್ಯಕ್ತಿಗೆ ನಿನಗೆ ಕ್ಯಾನ್ಸರ್ ಎಂದರೆ ಎಂತಹವರೂ ತಳಮಳಿಸಿ ಹೋಗ್ತಾರೆ. ಕ್ಯಾನ್ಸರ್ ಎಂದರೆ ರೋಗವಷ್ಟೇ ಅಲ್ಲ, ಸಾವಿನ ಹೆಬ್ಬಾಗಿಲು. ಹೀಗಿರುವಾಗ ಕನ್ನಡದ (Actress) ನಟಿಯೊಬ್ಬರಿಗೆ ಕ್ಯಾನ್ಸರ್ (Cancer)ಇದೆ ಎಂದು ಸುಳ್ಳು ಹೇಳಿದ ಲ್ಯಾಬ್, ನೀವು ಕ್ಯಾನ್ಸರ್ ಫೈನಲ್ ಸ್ಟೇಜ್`ನಲ್ಲಿದ್ದೀರ ಎಂದು ಹೇಳಿತ್ತು. ಸೆಕೆಂಡ್ ಒಪೀನಿಯನ್ ಪಡೆಯೋಣ ಎಂದುಕೊಂಡು ಬೇರೆ ಬೇರೆ ಸೆಂಟರುಗಳಿಗೆ ಹೋಗಿ ಪರೀಕ್ಷೆ ಮಾಡಿಸಿದಾಗ ಸತ್ಯ ಗೊತ್ತಾಗಿದೆ. ಕ್ಯಾನ್ಸರ್ ಇಲ್ಲ ಎಂಬ ಸತ್ಯ. ಇದನ್ನು ನ್ಯಾಯಾಲಯದ ಮೆಟ್ಟಿಲಿಗೆ ತೆಗೆದುಕೊಂಡು ಹೋದ ನಟಿ, 1.5 ಲಕ್ಷ ಪರಿಹಾರವನ್ನೂ ಪಡೆದಿದ್ದಾರೆ.
ನಟಿಯ ಹೆಸರು ಸೀಕ್ರೆಟ್. ಹೆಸರು ಬಹಿರಂಗ ಪಡಿಸಲು ಆಕೆ ಒಪ್ಪುತ್ತಿಲ್ಲ. ಆದರೆ ನ್ಯಾಯಾಲಯದ ಆದೇಶವಾಗಿದೆ. 2022ರಲ್ಲಿ ಈ ನಟಿ ಬಸವೇಶ್ವರ ನಗರದ ಡಯಾಗ್ನಸ್ಟಿಕ್ ಸೆಂಟರ್`ಗೆ ಪರೀಕ್ಷೆ ಮಾಡಿಸಲು ಹೋದರು. ಅಲ್ಲಿದ್ದ ಡಾಕ್ಟರ್ ರಾಜ್`ಕಮಲ್ ಎಂಬುವವರು Fibrosarcoma Uterus with abdominal metastasis, Liver Metastasis and Grade 1 Splenomegaly ಎನ್ನುವ ಕಾಯಿಲೆಯಿಂದ ಬಳಲುತ್ತಿದ್ದೀರಿ ಎಂದು ಹೇಳಿದ್ದರಂತೆ. ಅದನ್ನು ಕೇಳಿ ನಟಿಗೆ ಶಾಕ್ ಆಗಿತ್ತು. ತಂದೆ ತಾಯಿಗೆ ಹೇಳಿದರೆ ಶಾಕ್ ಆಗುತ್ತಾರೆ ಎಂಬ ಕಾರಣಕ್ಕೆ, ಆತಂಕವನ್ನು ತಮ್ಮೊಳಗೇ ಇಟ್ಟುಕೊಂಡು ಇನ್ನೆರಡು ಲ್ಯಾಬ್`ಗಳಲ್ಲಿ ಪರೀಕ್ಷೆ ಮಾಡಿಸಿದ್ದಾರೆ. ಆಗ ಅವರಿಗೆ ಆರೋಗ್ಯವಾಗಿದ್ದಾರೆ ಎಂದು ವರದಿ ಬಂದಿದೆ.
ಮೊದಲ ಹೆಚ್ಚುವರಿ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗಕ್ಕೆ ಅರ್ಜಿ ಸಲ್ಲಿಸಿದ ನಟಿ ಆ ನಂತರ ಐಕಾನ್ ಡಯಾಗ್ನಸ್ಟಿಕ್ ಸೆಂಟರ್ (Icon Diagnostic center) ವಿರುದ್ಧ ದೂರು ದಾಖಲಿಸಿದ್ದರು. ಈಗ ಗ್ರಾಹಕರ ವೇದಿಕೆಯು ಡಯೋಗ್ನಾಸ್ಟಿಕ್ ಸೆಂಟರ್ಗೆ ಪರಿಹಾರ ನೀಡುವಂತೆ ಹೇಳಿದೆ. 35 ವರ್ಷದ ಈ ನಟಿ ವಿಜಯನಗರದಲ್ಲಿ ನೆಲೆಸಿದ್ದಾರೆ. ತಮ್ಮ ಹೆಸರು ಹೇಳೋಕೆ ಇಷ್ಟಪಟ್ಟಿಲ್ಲ. ಇತ್ತೀಚೆಗೆ ಕೆಲವು ಲ್ಯಾಬ್`ಗಳು ಈ ರೀತಿ ಹೆದರಿಕೆ ಹುಟ್ಟಿಸುತ್ತಿವೆ. ಅವರಿಗೆ ಇದು ಎಚ್ಚರಿಕೆಯಾಗಲಿ ಅಷ್ಟೆ ಎಂದಿದ್ದಾರೆ ನಟಿ.



