ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ʻಕೃಷ್ಣಂ ಪ್ರಣಯ ಸಖಿಯಲ್ಲಿ ಶ್ರೀಕೃಷ್ಣಂ ಜಗತ್ ಕಾರಣಂ.. ಜಗದೇಕ ಜಗನ್ಮೋಹನಂʼ ಎಂಬ ಗೀತೆ ಬಂದಿದೆ. ಲವ್ ಸ್ಟೋರಿಯಲ್ಲೊಂದು ಭಕ್ತಿಗೀತೆಯಾ ಎಂಬ ಪ್ರಶ್ನೆ ಮೂಡಬಹುದು. ಆದರೆ.. ಲವ್ ಸ್ಟೋರಿ ಸಿನಿಮಾಗಳಲ್ಲಿ ಅತ್ತ ಪ್ರೇಮಗೀತೆಯೂ ಆಗಿ.. ಇತ್ತ ಭಕ್ತಿಗೀತೆಯೂ ಆಗಿರುವ ಹಲವು ಉದಾಹರಣೆಗಳಿವೆ.
ಈಗ ಕೃಷ್ಣಂ ಪ್ರಣಯ ಸಖಿ ಚಿತ್ರದಲ್ಲಿ ಅಂತದ್ದೇ ಒಂದು ಪ್ರಯೋಗ ಇದೆ.
ಶ್ರೀ ಕೃಷ್ಣಂ ಜಗತ್ ಕಾರಣಂ
ಜಗದೇಕ ಜಗನ್ಮೋಹನಂ
ಶ್ರೀ ಕೃಷ್ಣಂ ಜಗತ್ ಪಾಲಕಂ
ಜಯಜಯಹೆ ಜಗನ್ನಾಯಕಂ
ಜಗತ್ ಪಾದುಕಂ ಜಗದ್ ರಕ್ಷಕಂ
ಜಗದ್ ವಂದಿತಂ ಜಗದ್ ಚಾಲಕಂ
ಗೋವಿಂದ ಗೋಪಾಲ ಮಥುರಾಪುರೀ ಬಾಲ
ಆನಂದ ಲೋಲಾ ಕೃಷ್ಣಾ ….
ಇದು ಕೃಷ್ಣಂ ಪ್ರಣಯಂ ಸಖಿ ಚಿತ್ರದ ಹೊಸ ಹಾಡು. 6ನೇ ಹಾಡು. ಈ ಹಿಂದೆ ಮೈ ಮ್ಯಾರೇಜ್ ಈಸ್ ಫಿಕ್ಸಡ್, ಚಿನ್ನಮ್ಮ ಚಿನ್ನಮ್ಮ, ದ್ವಾಪರ ದಾಟಲು, ಹೇ ಗಗನ, ನಿನ್ನ ಹೆಗಲು ಎಂಬ ಹಾಡುಗಳನ್ನು ಬಿಡುಗಡೆ ಮಾಡಲಾಗಿತ್ತು. ಈ ಎಲ್ಲಾ ಹಾಡುಗಳು ಹಿಟ್ ಮೇಲೆ ಹಿಟ್ ಆಗಿದ್ದವು. ಈಗ ಭಕ್ತಿಗೀತೆ.
ಇಂತಹ ಪ್ರಯೋಗ ಇದೇ ಮೊದಲಲ್ಲ.
ಕನ್ನಡದ ಸೂಪರ್ ಮೆಲೋಡಿ ಹಾಡಾದ ʻನಿನ್ನ ಸವಿನೆನಪೇ ಮನದಲ್ಲಿ ಆರಾಧನೆ.. ಪ್ರೀತಿಯ ಸವಿಮಾತೇ ಉಪಾಸನೆ ʼ ಗೀತೆ ಪ್ರೇಮಗೀತೆಯಾದರೂ.. ಅಂತ್ಯದಲ್ಲಿ ಭಕ್ತಿಗೀತೆಯಾಗಿ ಬದಲಾಗುತ್ತೆ.
ಡಾ.ರಾಜ್ ಅವರ ಹಾಲು ಜೇನು ಚಿತ್ರದಲ್ಲಿ ಬರುವ ʻಪೋಗದಿರೆಲೋ ರಂಗ.. ಬಾಗಿಲಿನಿಂದಾಚೆ.. ಹಾಡಿನಲ್ಲಿ ನಾಯಕಿ, ನಾಯಕನನ್ನು ಛೇಡಿಸುತ್ತಲೇ ಇರುತ್ತಾಳೆ. ಸಾಹಿತ್ಯವೆಲ್ಲ ದಾಸರ ಪದಗಳಂತಿದ್ದು, ಏಕಕಾಲಕ್ಕೆ ಭಕ್ತಿಗೀತೆಯೂ, ಪ್ರೇಮಗೀತೆಯೂ ಆಗುತ್ತದೆ.
ಇನ್ನು ಬಭ್ರುವಾಹನ ಚಿತ್ರದ ʻಆರಾಧಿಸುವೆ ಮದನಾರಿ.. ಹಾಡಂತೂ ಕೇಳುವುದೇ ಬೇಡ. ಅದು ಭಕ್ತಿಗೀತೆಯೋ.. ಪ್ರಣಯಗೀತೆಯೋ.. ಎಂದು ಗೊಂದಲವಾಗುವಷ್ಟು ರಸಿಕತೆಯಿರುವ ಹಾಡು.
ವಿಷ್ಣುವರ್ಧನ್ ಅವರ ಮಲಯ ಮಾರುತ ಚಿತ್ರದಲ್ಲಿ ಬರುವ ಅಧರಂ.. ಮಧುರಂ ಹಾಡು, ಶ್ರೀನಾಥ್, ಸರಿತಾ, ಗೀತಾ ನಟಿಸಿರುವ ಎರಡು ರೇಖೆಗಳು ಚಿತ್ರದಲ್ಲಿ ಬರುವ ʻನೀಲ ಮೇಘ ಶ್ಯಾಮ..ʼ ಇಂತಹ ಹಲವು ಗೀತೆಗಳನ್ನು ಹೆಸರಿಸಬಹುದು.
ಈಗ ಕೃಷ್ಣಂ ಪ್ರಣಯ ಸಖಿ ಸಿನಿಮಾದ ʻಶ್ರೀ ಕೃಷ್ಣಂ ಜಗತ್ ಕಾರಣಂ..ʼ ಹಾಡಿಗೆ ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ರಕ್ಷಿತಾ ಸುರೇಶ್ ಈ ಹಾಡಿಗೆ ಧ್ವನಿಯಾಗಿದ್ದಾರೆ. ಎಂದಿನಂತೆ ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತವಿದೆ. ಶರಣ್ ರಾವ್ ಅವರ ಕೀ ಮತ್ತು ರಿದಮ್ ಇದೆ. ಐಶ್ವರ್ಯಾ ರಂಗರಾಜನ್, ಪೃಥ್ವಿ ಭಟ್, ಸಾಕ್ಷಿ ಕಲ್ಲೂರ್,ಸುರಭಿ ಭಾರದ್ವಾಜ್ ಈ ಹಾಡಿಗೆ ಸಹಗಾಯಕಿ ಗಾಯಕರಾಗಿದ್ದಾರೆ
ಹೇಳಿ ಕೇಳಿ ಇದು ರೊಮ್ಯಾಂಟಿಕ್ ಲವ್ ಸ್ಟೋರಿ ಹಾಗೂ ಕಾಮಿಡಿ ಸಿನಿಮಾ. ಇದು ಭಕ್ತಿಗೀತೆಯಾ.. ಅಥವಾ.. ಪ್ರೇಮಗೀತೆಯಾ ಎಂಬ ಅನುಮಾನವೂ ಕಾಡುತ್ತದೆ. ಈ ಹಿಂದೆಯೂ ಕೂಡಾ ಕನ್ನಡದಲ್ಲಿ ಭಕ್ತಿಗೀತೆ ಹಾಗೂ ಪ್ರೇಮಗೀತೆ ಎರಡೂ ಆಗಿದ್ದ ಚಿತ್ರಗೀತೆಗಳು ಬಂದಿದ್ದವು. ಇದು ಕೂಡಾ ಆ ಸಾಲಿಗೆ ಸೇರುತ್ತದೆಯಾ..?
ನಿರ್ದೇಶಕ ಶ್ರೀನಿವಾಸ ರಾಜು ಇದೇ ಮೊದಲ ಬಾರಿಗೆ ಎಂಬಂತೆ ಲವ್ ಸ್ಟೋರಿ ಮಾಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಕೃಷ್ಣನಾಗಿದ್ದಾರೆ. ಇನ್ನು ರುಕ್ಮಿಣಿ, ರಾಧೆ, ಸತ್ಯಭಾಮೆ, ಜಾಂಬವತಿ.. ಇತ್ಯಾದಿ ಎಲ್ಲ ಯಾರು ಎಂಬ ಪ್ರಶ್ನೆಯೂ ಇದೆ. ಎಂಟು ನಟಿಯರು ಇರುವುದು ಮತ್ತೊಂದು ಹೈಲೈಟ್ ಆಗಿದೆ. ಗಣೇಶ್, ಮಾಳವಿಕಾ ನಾಯರ್, ಶರಣ್ಯಾ ಶೆಟ್ಟಿ, ಶಶಿಕುಮಾರ್, ರಂಗಾಯಣ ರಘು ಹೀಗೆ.. ದೊಡ್ಡ ತಾರಾಗಣೇ ಇದೆ. ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣದ ಚಿತ್ರವಿದು.



