ಟುವ್ವಿ ಟುವ್ವಿ ಎಂದು ಎಂಜಿ ರೋಡಿನಲ್ಲಿ ಹಾಡಿ ಕುಣಿಯುತ್ತಾ ʻಆನಂದ್ʼ ಆಗಿ ಎಂಟ್ರಿ ಕೊಟ್ಟಿ ಶಿವರಾಜ್ ಕುಮಾರ್, ಆಗ ಸ್ಟೂಡೆಂಟ್ ಆಗಿದ್ದರು. ಅದಾದ ಮೇಲೆ ಹಲವು ಚಿತ್ರಗಳಲ್ಲಿ ಸ್ಟೂಡೆಂಟ್ ಆಗಿದ್ದಾರೆ. ರಥಸಪ್ತಮಿ, ಮಿಡಿದ ಶೃತಿ, ಅದೇ ರಾಗ ಅದೇ ಹಾಡು, ಆಸೆಗೊಬ್ಬ ಮೀಸೆಗೊಬ್ಬ, ಯುವರಾಜ, ಓಂ (ಆರಂಭದಲ್ಲಿ), ಶಿವಸೈನ್ಯ.. ಹೀಗೆ ಹಲವು ಚಿತ್ರಗಳಲ್ಲಿ ಸ್ಟೂಡೆಂಟ್ ಆಗಿದ್ದಾರೆ.
ಆನಂದ್. ಶಿವರಾಜ್ ಕುಮಾರ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಸಿನಿಮಾ. ಇದೀಗ ಮತ್ತೊಮ್ಮೆ ಶಿವಣ್ಣ ಆನಂದ್ ಆಗಿದ್ದಾರೆ. ಆದರೆ ಟೀಚರ್ ಆಗಿದ್ದಾರೆ. ಶಿವಣ್ಣ ಅಭಿನಯದ ಹೊಸ ಚಿತ್ರದ ಹೆಸರು ʻಎ ಫಾರ್ ಆನಂದ್ʼ. ಈ ಹಿಂದೆ ಶಿವರಾಜ್ ಕುಮಾರ್ ಅವರ ‘ಘೋಸ್ಟ್’ ನಿರ್ದೇಶನ ಮಾಡಿದ್ದ ಶ್ರೀನಿ, ಈ ಬಾರಿ ಬೇರೆಯದೇ ರೀತಿಯ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರಕ್ಕೆ ಗೀತಾ ಪಿಕ್ಚರ್ಸ್‌ನವರದ್ದೇ ನಿರ್ಮಾಣ ಎನ್ನುವುದು ವಿಶೇಷ. ವೇದ ಮತ್ತು ಭೈರತಿ ರಣಗಲ್ ನಂತರ ಇದು ಅವರದ್ದೇ ನಿರ್ಮಾಣದ ೩ನೇ ಸಿನಿಮಾ.
ಶಿವಣ್ಣ ಮೊದಲ ಚಿತ್ರ ಆನಂದ್ʻನಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದರು. ಈ ಆನಂದ್ ಚಿತ್ರದಲ್ಲಿ ಶಿಕ್ಷಕ. ಈ ಹಿಂದೆ ಸುಂದರಕಾಂಡ, ದ್ರೋಣ, ಆರ್ಯನ್ (ಕ್ರೀಡಾ ಕೋಚ್) ಚಿತ್ರಗಳನ್ನು ಬಿಟ್ಟರೆ ಶಿಕ್ಷಕನ ಪಾತ್ರ ಮಾಡಿಲ್ಲ. ಈಗ ಮತ್ತೊಮ್ಮೆ ಶಿಕ್ಷಕನ ಪಾತ್ರ ಮಾಡುತ್ತಿದ್ದಾರೆ ಶಿವಣ್ಣ. ಅಂದಹಾಗೆ ಈ ಹಿಂದೆ ಟೀಚರ್ ಆಗಿದ್ದಾಗ ದ್ರೋಣ ಹೊರತುಪಡಿಸಿದರೆ, ಉಳಿದೆಲ್ಲ ಚಿತ್ರಗಳಲ್ಲಿಯೂ ಚೆಂದದ ಲವ್ ಸ್ಟೋರಿ ಇತ್ತು. ಆದರೆ ಬೇಸರದ ಸಂಗತಿ ಎಂದರೆ, ಶಿಕ್ಷಕರಾಗಿ ನಟಿಸಿದ್ದ ಯಾವ ಚಿತ್ರಗಳೂ ಹಿಟ್ ಆಗಿಲ್ಲ. ಇನ್ನೊಂದು ವಿಚಿತ್ರ ನೋಡಿ, ಸ್ಟೂಡೆಂಟ್ ಆಗಿ ನಟಿಸಿದ್ದ ಎಲ್ಲ ಚಿತ್ರಗಳೂ ಸೂಪರ್ ಹಿಟ್. ಮೇಷ್ಟ್ರಾಗಿ ನಟಿಸಿದ್ದ ಚಿತ್ರಗಳೆಲ್ಲ ಫ್ಲಾಪ್. ಆದರೆ, ಕಥೆಯನ್ನು ನಂಬಿರೋ ಶಿವಣ್ಣ, ಎ ಫಾರ್ ಆನಂದ್ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಭೈರತಿ ರಣಗಲ್ ರಿಲೀಸ್ ಜೊತೆ ಜೊತೆಯಲ್ಲೇ ಹೊಸ ಸಿನಿಮಾ ಘೋಷಣೆ ಮಾಡಲಾಗಿದೆ. ಈ ಚಿತ್ರಕ್ಕೆ ನಿರ್ದೇಶಕ ಶ್ರೀನಿ ಅವರದ್ದೇ ಕಥೆ ಇದ್ದು, ವಿಎಂ ಪ್ರಸನ್ನ ಸಂಭಾಷಣೆ ಇರಲಿದೆ. ಮಹೇನ್ ಸಿಂಹ ಕ್ಯಾಮೆರಾ, ದೀಪು ಎಸ್ ಕುಮಾರ್ ಸಂಕಲನದ ಹೊಣೆ ಹೊತ್ತಿದ್ದಾರೆ. ಶ್ರೀನಿಗೆ ಇದ ಶಿವಣ್ಣ ಜೊತೆ ಎರಡನೇ ಸಿನಿಮಾ. ಘೋಸ್ಟ್ 2 ಮಾಡುತ್ತಾರೆಂಬ ಘೋಷಣೆಯ ನಡುವೆಯೇ ಹೊಸ ಕಥೆ ಹೇಳೋಕೆ ಬರುತ್ತಿದ್ದಾರೆ ಶ್ರೀನಿ-ಶಿವಣ್ಣ ಜೋಡಿ. ಇನ್ನೊಂದು ವಿಶೇಷ ಎಂದರೆ, ಈ ಚಿತ್ರದಲ್ಲಿ ಶಿವಣ್ಣ ಹೀರೋ ಆಗಿದ್ದರೂ, ಇದು ಮಕ್ಕಳ ಸಿನಿಮಾ. ಹೀಗಾಗಿಯೇ ಮಕ್ಕಳ ದಿನಾಚರಣೆಯಂದೇ ಈ ಸಿನಿಮಾ ಘೋಷಣೆ ಮಾಡಲಾಗಿದೆ.



