ಸುಂದರವಾಗಿರುವ ಹುಡುಗಿಯ ಆಸೆಗೆ ಬಿದ್ದು ಲಕ್ಷವೇನು.. ಕೋಟಿಯನ್ನೇ ಕಳೆದುಕೊಂಡವರಿಗೆ ಲೆಕ್ಕ ಇಲ್ಲ. ಆಸೆ ಪಡುವುದಕ್ಕೆ ವಯಸ್ಸು ಮುಖ್ಯವಲ್ಲ. ಇಲ್ಲೊಬ್ಬ ಅರ್ಚಕರು, ತಮ್ಮ 60ನೇ ವಯಸ್ಸಿನಲ್ಲಿ 20ರ ಹುಡುಗಿಯ ಮೋಹಕ್ಕೆ ಬಿದ್ದು ಲಕ್ಷ ಲಕ್ಷ ಕಳೆದುಕೊಂಡಿದ್ದಾರೆ.
ಅರ್ಚಕ ವಿಜಯ್ ಕುಮಾರ್ ಮಂಡ್ಯದ ಪಾಂಡವಪುರ ತಾಲೂಕಿನ ಪಟ್ಟ ಸೋಮನಹಳ್ಳಿಯ ನಿವಾಸಿ. ಅರ್ಚಕ ವೃತ್ತಿಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದ ವಿಜಯಕುಮಾರ್ 60ನೇ ಹರೆಯದಲ್ಲಿ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ನ ಗೀಳಿಗೆ ಬಿದ್ದಿದ್ದರು. ಮೊಬೈಲ್ನಲ್ಲಿ ಬ್ಯುಸಿಯಾಗಿರ್ತಾ ಇದ್ರು. ಹಾಗೆ ಬ್ಯುಸಿ ಇದ್ದಾಗಲೇ.. ವಿಜಯ್ಕುಮಾರ್ ಅವರಿಗೆ ಫೇಸ್ಬುಕ್ನಲ್ಲಿ ಸಿರಿ ಶ್ರೇಷಾ ಅನ್ನೋ ಖಾತೆಯಿಂದ ರಿಕ್ವೆಸ್ಟ್ ಬಂತು. ಡಿಪಿ ತೆಗೆದು ನೋಡಿದಾಗ.. ಚೆಂದದ ಯುವತಿಯ ಫೋಟೋ ಇತ್ತು.
ಹುಡುಗಿಯಂತೂ ಚೆನ್ನಾಗಿಯೇ ಇದ್ದಾಳಲ್ಲ ಅಂತ ವಿಜಯಕುಮಾರ್ ರಿಕ್ವೆಸ್ಟ್ ಓಕೆ ಮಾಡಿ ಫ್ರೆಂಡ್ ಮಾಡ್ಕೊಂಡರು. ಅಲ್ಲಿಂದ ಮುಂದೆ ಸಿರಿ ಶ್ರೇಷಾ ಮತ್ತು ವಿಜಯಕುಮಾರ ಮಧ್ಯೆ ಚಾಟಿಂಗ್ ಶುರುವಾಯ್ತು.
ಅತ್ತ ಸಿರಿ ಶ್ರೇಷಾ ಅಕೌಂಟ್ನಿಂದ ಚಾಟ್ ಮಾಡ್ತಿದ್ದವರು ಅರ್ಚಕನ ಜೊತೆ ಎಲ್ಲವನ್ನು ಶೇರ್ ಮಾಡ್ಕೊಳೋದಕ್ಕೆ ಶುರು ಮಾಡಿದರು. ದಿನ ಕಳೆದಂತೆ ಇಬ್ಬರ ಮಧ್ಯೆ ಆತ್ಮೀಯತೆ ಬೆಳೆಯಿತು. ಚೆಲುವೆ ಸಿರಿ ಮಾತಾಡ್ತಾ ಇದ್ದಾಗ.. ಅರ್ಚಕ ವಿಜಯ ಕುಮಾರ್ ಆಕೆಯ ಕಷ್ಟ ನಷ್ಟಗಳನ್ನೆಲ್ಲ ಕೇಳೋದಕ್ಕೆ ಶುರು ಮಾಡಿದ್ದಾರೆ. ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ರು ಹಾಲು ಅನ್ನ ಅನ್ನೋವಂತೆ ಚಾಟಿಂಗ್ ಮಾಡ್ತಿದ್ದ ಯುವತಿಗೂ ಅದೇ ಬೇಕಾಗಿತ್ತು. ಒಳ್ಳೆ ಬಕ್ರಾನೇ ಸಿಕ್ಕ ಅಂತ ಅಂದ್ಕೊಂಡ್ಲೋ ಏನೋ..
ತಾನೊಬ್ಬಳು ಅನಾಥೆ.. ತನಗೆ ಸಹಾಯ ಮಾಡಿ ಪ್ಲೀಸ್ ಎಂದು ಅಲವತ್ತುಕೊಂಡಿದ್ದಾಳೆ. 60ರ ವಯಸ್ಸಿನ ಅಜ್ಜನ ಹೃದಯ ಕರಗಿದೆ. ಕಣ್ಣೀರು ಹರಿದಿದೆ. ಆಕೆ ಕಷ್ಟಕ್ಕೆ ಸ್ಪಂದಿಸಬೇಕು ಅಂತ ಅರ್ಚಕ ವಿಜಯಕುಮಾರ ಸಿರಿ ಶ್ರೇಷಾ ಅಕೌಂಟ್ನಿಂದ ಚಾಟ್ ಮಾಡ್ತಿದ್ದ ಹುಡುಗಿಗೆ ಹಣ ಹಾಕೋದಕ್ಕೆ ಶುರು ಮಾಡಿದ್ದಾರೆ. 100,200 ಅಂತ ಅವಳ ಅಕೌಂಟ್ಗೆ ದುಡ್ಡು ಹಾಕುತ್ತಲೇ ಇದ್ದ ವಿಜಯ್ಕುಮಾರ್ ಕೊನೆಗೆ ಕಳೆದುಕೊಂಡಿದ್ದು ಲಕ್ಷ ಲಕ್ಷ.
ಯುವತಿ ಯಾವಾಗೆಲ್ಲಾ ಹಣ ಕೇಳಿದ್ರೂ.. ವಿಜಯಕುಮಾರ ಪೋನ್ಪೇ, ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ. ಹೀಗೆ ಅರ್ಚಕನಿಂದ ಫೇಸ್ಬುಕ್ ಸುಂದರಿ ಒಂದಲ್ಲ ಎರಡಲ್ಲ ಬರೋಬ್ಬರಿ ಒಂದು ಲಕ್ಷ ಹಣ ಹಾಕಿಸಿಕೊಂಡಿದ್ದಾಳಂತೆ. ಆದ್ರೆ ಯಾವಾಗ ಅರ್ಚಕ ವಿಜಯಕುಮಾರ್ ಫೇಸ್ಬುಕ್ ಸುಂದರಿಯನ್ನ ಮೀಟ್ ಮಾಡ್ಬೇಕು ಅಂತ ಹೇಳಿದ್ನೋ ಆಗ್ಲೇ ನೋಡಿ ಅಸಲಿ ಮ್ಯಾಟರ್ ಬಯಲಾಗಿದೆ.
ಮೊದ ಮೊದಲು ಅವಾಯ್ಡ್ ಮಾಡ್ತಿದ್ದ ಸಿರಿ ಆಮೇಲೆ ಮೆಸೇಜುಗಳಿಗೆ ರಿಪ್ಲೈ ಮಾಡೋದನ್ನೂ ಬಿಟ್ಟಿದ್ದಾಳೆ. ನಂಗೆ ಮೋಸವಾಗಿದೆ ಅನ್ನೋದು ಆಗ ವಿಜಯ್ ಕುಮಾರ್ ಅವರಿಗೆ ಅರಿವಾಗಿದೆ. ಪೊಲೀಸ್ ಸ್ಟೇಷನ್ನಿಗೆ ಬಂದು ದೂರು ಕೊಟ್ಟಿದ್ದಾರೆ.
ವಿಷಯ ಏನಪ್ಪಾಂದ್ರೆ.. ವಿಜಯ್ ಕುಮಾರ್ ಅವರಿಗೆ ಮೆಸೇಜ್ ಮಾಡಿದ್ದು ಫೇಕ್ ಅಕೌಂಟಿನಲ್ಲಂತೆ. ಪೊಲೀಸರು ಸರ್ಚ್ ಮಾಡಿದಾಗ.. ನಕಲಿ ಖಾತೆಯಿಂದ ಯಾರೋ ಅಜ್ಜನಿಗೆ ಸರಿಯಾಗಿಯೇ ಯಾಮಾರಿಸಿದ್ದಾರೆ. ಸದ್ಯ ಈ ಬಗ್ಗೆ ಮಂಡ್ಯ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸ್ತಿದ್ದಾರೆ.ಯಾವುದಕ್ಕೂ ಆನ್ಲೈನ್ನಲ್ಲಿ ಫ್ರೆಂಡ್ಶಿಪ್, ರಿಲೇಷನ್ಶಿಪ್ ಬೆಳೆಸುವ ಮುನ್ನ ಹುಷಾರಾಗಿರಿ. ಆನ್ಲೈನ್ನಲ್ಲಿ ಯಾವುದಾದರೂ ಸುಂದರಿ ನಿಮಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ತನ್ನ ಗೋಳನ್ನು ಹೇಳಿಕೊಂಡು ಗೋಳೋ ಅಂತ ಅಳ್ತಿದ್ದಾಳಾ.? ಪ್ಲೀಸ್ ಸಹಾಯ ಮಾಡಿ ಅಂತಿದ್ದಾಳಾ, ದುಡಕಬೇಡಿ, ಅದು ಫೇಕ್ ಅಕೌಂಟ್ ಆಗಿರಬಹುದು. ನಿಮ್ಮಿಂದ ವಸೂಲಿ ಕಾರ್ಯಕ್ರಮ ಅವಳು ಇಟ್ಟುಕೊಂಡಿರಬಹುದು ಅಥವಾ ಆ ಕಡೆಯಿಂದ ಬರ್ತಿರೋ ಮೆಸೇಜ್ಗಳು ಹುಡುಯಗಿಯದೇ ಅಲ್ಲದಿರಬಹುದು.
ಅಂದಹಾಗೆ ಈ ವಿಷಯಕ್ಕೆ ವಿಜಯ್ ಕುಮಾರ್ ಬೇಜಾರು ಮಾಡಿಕೊಳ್ಳೋ ಅಗತ್ಯವೇನೂ ಇಲ್ಲ. ದೊಡ್ಡ ದೊಡ್ಡ ಪೊಲೀಸ್ ಆಫೀಸರುಗಳೇ ಯಾಮಾರಿದ್ದಾರಂತೆ. ಆಸೆ.. ಎಲ್ಲ ಮಾಡಿಸುತ್ತೆ.



