ವಯಸ್ಸು 41 ಆಗಿದೆ. ಮದುವೆಯಾಗಿಲ್ಲ (Marriage) . ಹುಡುಗಿ (Groom) ಸಿಗುತ್ತಿಲ್ಲ. ವಯಸ್ಸು ಅದಾಗಲೇ ಮೀರಿ ಹೋಗಿದೆ. ಅಂತಹಾ ವೇಳೆಯಲ್ಲೊಬ್ಬಳು ಹುಡುಗಿ ಸಿಗ್ತಾಳೆ. ನೋಡುವುದಕ್ಕೆ ಸುಂದರಿ. ಆಕೆಯೂ ಓಕೆ ಅಂತಾಳೆ. 41ರ ಯುವಕನಿಗೆ ಸ್ವರ್ಗಕ್ಕೆ ಮೂರೇ ಗೇಣು. ತನಗೂ ಇಂತಹ ಸುಂದರಿ ಸಿಕ್ಕಳಲ್ಲಾ.. ಎಂದುಕೊಂಡು ಮಾತನಾಡುವುದಕ್ಕೆ ಶುರು ಮಾಡ್ತಾನೆ. ಸತ್ಯ ಗೊತ್ತಾಗುವ ಹೊತ್ತಿಗೆ.. 1.1 ಕೋಟಿ ದಂಡ ಕಟ್ಟಿರ್ತಾನೆ. ಇದು ಬೆಂಗಳೂರಲ್ಲೇ ನಡೆದ ವಂಚನೆ ಕಥೆ.
ಕಥೆ ಶುರುವಾಗಿದ್ದು ಹೀಗೆ : ಯುನೈಟೆಡ್ ಕಿಂಗ್ಡಂನಲ್ಲಿ (United Kingdom) ಕೆಲಸ ಮಾಡುತ್ತಿದ್ದ ಬೆಂಗಳೂರಿನ ಕೆ.ಆರ್. ಪುರಂ (KR Puram) ನಿವಾಸಿ 41 ವರ್ಷದ ವ್ಯಕ್ತಿ ತರಬೇತಿ ಉದ್ದೇಶಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಇವರು ಮದುವೆಯಾಗಲು ಬಯಸಿ ಮ್ಯಾಟ್ರಿಮೋನಿಯಲ್ ವೆಬ್ಸೈಟ್ನಲ್ಲಿ (Matrimonial website) ನೋಂದಾಯಿಸಿಕೊಂಡಿದ್ದರು. ಇದನ್ನು ನೋಡಿದ ನಕಲಿ ಪ್ರೊಫೈಲ್ ಹೊಂದಿರುವ ಮಹಿಳೆಯೊಬ್ಬರು ವೆಬ್ಸೈಟ್ನಲ್ಲಿ ಆತನೊಂದಿಗೆ ಸ್ನೇಹ ಬೆಳೆಸಿದರು. ಕ್ರಮೇಣ ಮೆಸೇಜ್, ವಾಟ್ಸಪ್, ವಿಡಿಯೋ ಕಾಲ್ ಆಗಿ ಪರಿಚಯ ಪ್ರೇಮಕ್ಕೆ ತಿರುಗಿತು. ಮಹಿಳೆ ಆತನನ್ನು ಮದುವೆಯಾಗಲು ಆಸಕ್ತಿ ತೋರಿಸಿದರು. ತಂದೆ ಸತ್ತಿದ್ದಾರೆ ಹಾಗೂ ತನ್ನ ತಾಯಿಯೊಂದಿಗೆ ವಾಸಿಸುತ್ತಿರುವುದಾಗಿ ಹೇಳಿಕೊಂಡಳು. 41ರ ಈ ಯುವಕ ಖುಷಿಯಾದ. ಅದಾದ ಮೇಲೆ ಜುಲೈ 2ನೇ ತಾರೀಕು ಕರೆ ಮಾಡಿ ತನ್ನ ತಾಯಿಯ ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ಉಲ್ಲೇಖಿಸಿ ಆತನಿಂದ 1,500 ರೂ. ಹಣ ಪಡೆದುಕೊಂಡಿದ್ದಾಳೆ. ನಂತರ, ಜುಲೈ 4 ರಂದು ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಆಕೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದಂತೆ ಬಟ್ಟೆ ತೆಗೆದು ಆತನಿಗೆ ತಿಳಿಯದಂತೆ ಕಾಲ್ ರೆಕಾರ್ಡ್ ಮಾಡಿದ್ದಾಳೆ. ನಂತರ ಅವಳು ವಿಡಿಯೋ ಕ್ಲಿಪ್ ಅನ್ನು ಅವನಿಗೆ ಕಳುಹಿಸಿದ್ದು, ಅದನ್ನು ಅವನ ಹೆತ್ತವರೊಂದಿಗೆ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ. ಇದಕ್ಕೆ ಬೆದರಿದ ಆತ, ಮಹಿಳೆ ನೀಡಿದ ಎರಡು ಬ್ಯಾಂಕ್ ಖಾತೆಗಳು ಮತ್ತು ನಾಲ್ಕು ಮೊಬೈಲ್ ಸಂಖ್ಯೆಗಳಿಗೆ 1,14,00,000 ರೂ. ಹಣ ಹಾಕಿದ್ದಾರೆ.
ಅದಾದ ಮೇಲೆ ದುಡ್ಡು ಕಳೆದುಕೊಂಡ ವ್ಯಕ್ತಿ ಪೊಲೀಸರಿಗೆ ದೂರು ಕೊಟ್ಟಿದ್ದು ಆಕೆಯ ಖಾತೆಗೆ ಹಣ ಪಾವತಿಸಲು ಆರಂಭಿಸಿದ ನಂತರವೇ ಆಕೆಯ ನಿಜವಾದ ಹೆಸರು ತಿಳಿಯಿತು ಎಂದೂ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ, ಹೆಚ್ಚಿನ ಹಣಕ್ಕಾಗಿ ಆಕೆ ಬ್ಲ್ಯಾಕ್ಮೇಲ್ ಮಾಡುವುದನ್ನು ಮುಂದುವರಿಸಿದ್ದರಿಂದ ಆತ ಪೊಲೀಸ್ ದೂರು ದಾಖಲಿಸಿದ್ದಾನೆ ಎಂದು ವರದಿಯಾಗಿದೆ.
ಆರೋಪಿಯ ಬಗ್ಗೆ ಇನ್ನೂ ಏನೂ ಪತ್ತೆಯಾಗಿಲ್ಲವಾದರೂ, ಆಕೆಯ ಅಕೌಂಟಿನಲ್ಲಿದ್ದ 84 ಲಕ್ಷ ಹಣವನ್ನ ಸೀಜ್ ಮಾಡಿದ್ದಾರೆ ಪೊಲೀಸರು. 30 ಲಕ್ಷ ಖರ್ಚು ಮಾಡಿದ್ದಾಳೆ. ಈ ಕಥೆಯಲ್ಲಿ ಮೋಸ ಮಾಡಿದವರು ಮೋಸ ಮಾಡೋಕೆ ಬಳಸಿದ್ದು ಹೊಸ ಮಾದರಿಯೇನಲ್ಲ. ಬೆತ್ತಲೆ ವಿಡಿಯೋ ತೋರಿಸಿಯೇ ಬಲೆಗೆ ಬೀಳಿಸಿಕೊಳ್ಳುವ ಸ್ಟೈಲ್ ಕೂಡಾ ಹೊಸದಲ್ಲ. ದುಡ್ಡು ಕಳೆದುಕೊಂಡಾತ ಟೆಕ್ಕಿ. ಅವಿದ್ಯಾವಂತನೇನಲ್ಲ. ಆದರೆ.. ಎಲ್ಲ ಗೊತ್ತಿದ್ದೂ ಪದೇ ಪದೇ ಮೋಸ ಹೋಗುತ್ತಾರಲ್ಲ.. ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರೂ ಇದ್ದೇ ಇರುತ್ತಾರೆ ಎನ್ನುವುದು ಇದಕ್ಕೇನೇ..



