ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ಗೆ ಸರ್ಕಾರ ರಚನೆಯಾದ ಕೆಲವೇ ತಿಂಗಳಲ್ಲಿ ಅದೇ ಗುತ್ತಿಗೆದಾರರಿಂದ ಸವಾಲು ಎದುರಾಗಿದೆ. ಗುತ್ತಿಗೆದಾರರು (Contractors) ಬಾಕಿ ಬಿಲ್ ಪಾವತಿಗಾಗಿ ಯಡಿಯೂರಪ್ಪ(BS Yeddyurappa) , ಆರ್.ಅಶೋಕ್, (R Ashok) ಬಸವರಾಜ ಬೊಮ್ಮಾಯಿ (Basavaraja bommai) , ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರೂ ಸೇರಿದಂತೆ ಹಲವರನ್ನು ಭೇಟಿ ಮಾಡಿದ್ದಾರೆ. ರಾಜ್ಯಪಾಲರಿಗೂ (Governor) ದೂರು ಕೊಟ್ಟಿದ್ದಾರೆ. ಬಾಕಿ ಬಿಲ್ ಬಿಡುಗಡೆ ಮನವಿಯ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಿದ್ದಾರೆ.
ಬಿಜೆಪಿ ಸರ್ಕಾರವನ್ನು ಕಟ್ಟಕಡೆಯ ಕ್ಷಣದವರೆಗೂ ಬಾಯಿ ಕಟ್ಟಿಹಾಕಿದ್ದು ಕೆಂಪಣ್ಣ ಮಾಡಿದ್ದ ಆರೋಪ. ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರೂ ಆಗಿದ್ದ ಕೆಂಪಣ್ಣ(Kempanna), ಬಿಜೆಪಿಯ ಪ್ರತಿಯೊಬ್ಬ ಸಚಿವರೂ ಸೇರಿದಂತೆ ಎಲ್ಲರೂ ಕಾಮಗಾರಿಗಳಿಗೆ 40% ಕಮಿಷನ್ ಬೇಡಿಕೆ ಇಡುತ್ತಿದ್ದಾರೆ. 40% ಕಮಿಷನ್ ಕೊಟ್ಟು ಕೆಲಸ ಮಾಡುವುದಾದರೂ ಹೇಗೆ ಎಂದು ಬಹಿರಂಗವಾಗಿ ಆರೋಪ ಮಾಡಿದ್ದರು. ಅಷ್ಟೇ ಅಲ್ಲ ಪ್ರಧಾನಿ ನರೇಂದ್ರ ಮೋದಿಯವರಿಗೂ ಎರಡೆರಡು ಬಾರಿ ಪತ್ರ ಬರೆದಿದ್ದರು(Kempanna). ಆಗ ಸಚಿವರಾಗಿದ್ದ ಮುನಿರತ್ನ ಕೆಂಪಣ್ಣ (Kempanna) ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ, ಅರೆಸ್ಟ್ ಮಾಡಿಸಿದ್ದರು. ಕೊನೆಗೆ ತಡೆಯಾಜ್ಞೆ ತಂದು ಬಚಾವಾಗಿದ್ದ ಕೆಂಪಣ್ಣ (Kempanna) ಅವರಿಗೆ ಸಾಕ್ಷಿ ಕೊಡಿ ಎಂದು ಕೇಳುತ್ತಲೇ ಇದೆ ಸರ್ಕಾರ. ಕೆಂಪಣ್ಣ(Kempanna) ಸಾಕ್ಷ್ಯಗಳನ್ನೇನೂ ಕೊಟ್ಟಿಲ್ಲ. ಆರೋಪಗಳೆಲ್ಲ ಹೇಳಿಕೆಯ ಮಟ್ಟಕ್ಕೇ ನಿಂತವು.
ಆದರೆ ಅದೇ ಗುತ್ತಿಗೆದಾರರು ಈಗ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ತಿರುಗಿಬಿದ್ದಿದ್ದಾರೆ. ಈ ವಿಷಯದಲ್ಲಿ ಮೌನವೇಕೆ ಕೆಂಪಣ್ಣ.. ಎಲ್ಲಿ ಹೋದರು ಕೆಂಪಣ್ಣ.. ಎಂದೆಲ್ಲ ಬಿಜೆಪಿ ನಾಯಕರು ಟೀಕೆ ಮಾಡುತ್ತಿದ್ದಾರೆ. ಡಿಕೆ ಶಿವಕುಮಾರ್ (DK Shivakumar) ಕಮಿಷನ್ ಕೇಳುತ್ತಿದ್ದಾರೆ. ಇಲ್ಲ ಎಂದರೆ ಅಜ್ಜಯ್ಯನವರ ಮೇಲೆ ಆಣೆ ಮಾಡಲಿ ಎಂದು ಬಿಬಿಎಂಪಿ ಗುತ್ತಿಗೆದಾರರು (BBMP Contractors) ಸವಾಲು ಹಾಕುತ್ತಿದ್ದಾರೆ. ಈ ಮಧ್ಯೆ ಬಿಬಿಎಂಪಿ ಎಂಜಿನಿಯರ್`ಗಳು ಶೇ.7ರಷ್ಟು ಕಮಿಷನ್ ಕೊಡುವಂತೆ ಶಾಂಘ್ರಿಲಾ ಹೋಟೆಲ್ (Shangrila hotel) ಸಭೆಯಲ್ಲಿ ನಿರ್ಧರಿಸಿದ್ದಾರೆ ಎಂದು ಕೆಂಪಣ್ಣ ಆರೋಪಿಸಿದ್ದಾರೆ. ಈಗಾಗಲೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿ ಎಂದು ಕೆಂಪಣ್ಣ (Kempanna) ಆರೋಪ ಮಾಡಿದ್ದಾರೆ. ಆದರೆ, ಇದನ್ನು ನಾನು ಕೇಳಿದ್ದೇನಷ್ಟೆ ಎಂದಿದ್ದಾರೆ. ಆದರೆ ಡಿಕೆ ಶಿವಕುಮಾರ್ ಮೇಲಿನ ಭ್ರಷ್ಟಾಚಾರದ ಆರೋಪ ಸುಳ್ಳು ಎನ್ನುವುದು ಇನ್ನೊಂದು ಬಣದ ಗುತ್ತಿಗೆದಾರರ ಮಾತು.
ಈ ನಡುವೆ ಡಿಕೆ ಶಿವಕುಮಾರ್ (DK Shivakumar) ಬೆಂಬಲಕ್ಕೆ ನಿಂತಿರುವವರಲ್ಲಿ ಪ್ರಮುಖರು ಪ್ರಿಯಾಂಕ್ ಖರ್ಗೆ(Priyank Kharge). ಡಿಕೆ ಅಥವಾ ಪ್ರಿಯಾಂಕ್ ಖರ್ಗೆ ಹೇಳುತ್ತಿರುವ ಮಾತಿನಲ್ಲಿ ತಪ್ಪಿಲ್ಲದೇ ಏನಿಲ್ಲ. ಪ್ರಿಯಾಂಕ್ ಅವರ ಪ್ರಕಾರ ಚಿಂಚೋಳಿಯಲ್ಲಿ ಒಂದೇ ಕಾಮಗಾರಿಗೆ 20ಕ್ಕಿಂತ ಹೆಚ್ಚು ಬಾರಿ ಬಿಲ್ ಸಲ್ಲಿಸಿದ್ದಾರಂತೆ. ಹಲವು ಕಡೆ ಕಾಮಗಾರಿ ಬಿಲ್ಲುಗಳಿವೆ. ಕೆಲಸಗಳೇ ಆಗಿಲ್ಲ. ಕೆಲಸವನ್ನೇ ಮಾಡದವರಿಗೆ, ಸುಳ್ಳು ಸುಳ್ಳು ಬಿಲ್ ಕೊಟ್ಟಿರುವವರಿಗೆ ಬಿಲ್ ಪಾವತಿ ಮಾಡುವುದು ಹೇಗೆ ಅನ್ನೋದು ಪ್ರಿಯಾಂಕ್ ಖರ್ಗೆ ಪ್ರಶ್ನೆ.
ಏಕೆಂದರೆ ಬಿಲ್ ಪಾವತಿ ವಿಳಂಬವಾಗಿರುವುದು ಈಗಿನದ್ದಲ್ಲ. ಕಳೆದ 28 ತಿಂಗಳಿಂದ ಪಾವತಿಯಾಗದೇ ಇರುವ ಬಿಲ್ಲುಗಳದ್ದು.
ಈ ಮಧ್ಯೆ ಗುತ್ತಿಗೆದಾರರ ಬಾಕಿ ಹಣ ಬಿಡುಗಡೆ ಮಾಡದೇ ಇರುವುದು ಹಾಗೂ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಅದನ್ನೇ ಪ್ರಮುಖ ದಾಳವನ್ನಾಗಿಸಿಕೊಂಡಿರುವ ವಿಚಾರ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿಯೂ ಚರ್ಚೆಯಾಗಿದೆ. ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ಕೂಡಲೇ ಹಣ ಬಿಡುಗಡೆ ಮಾಡಬೇಕು. ಬಿಜೆಪಿ ನಾಯಕರು ಈ ವಿಚಾರವನ್ನೇ ದೊಡ್ಡದು ಮಾಡುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಕೆಲವು ಸಚಿವರು ಸಂಪುಟ ಸಭೆಯಲ್ಲಿ ಸಲಹೆ ನೀಡಿದ್ದಾರೆ. ಆದರೆ, ತಕ್ಷಣ ಮಧ್ಯ ಪ್ರವೇಶ ಮಾಡಿದ ಡಿಕೆ ಶಿವಕುಮಾರ್, ಅನೇಕ ಕಡೆ ಕಾಮಗಾರಿಗಳೇ ಅಗಿಲ್ಲ. ಇಂಥ ಪರಿಸ್ಥಿತಿಯಲ್ಲಿ ಬಾಕಿ ಹಣ ಬಿಡುಗಡೆ ಮಾಡುವುದು ಹೇಗೆ? ಕಾಮಗಾರಿ ಆಗಿರುವ ಬಗ್ಗೆ ಸಮಿತಿ ರಚನೆ ಮಾಡಲಾಗಿದೆ. ಆ ಸಮಿತಿ ವರದಿ ಸಲ್ಲಿಸಿದ ನಂತರ ಬಾಕಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.



