ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಪದಗ್ರಹಣ ಮಾಡುವ ಸಂದರ್ಭದಲ್ಲೇ ಬಿಜೆಪಿಗೆ ಅದರಲ್ಲೂ ವಿಜಯೇಂದ್ರ ಅವರಿಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಮಾಜಿ ಸಚಿವರಾದ ವಿ.ಸೋಮಣ್ಣ, ಎಸ್.ಟಿ.ಸೋಮಶೇಖರ್, ಸಿ.ಟಿ.ರವಿ, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಲಿಂಬಾವಳಿ, ಅರವಿಂದ್ ಬೆಲ್ಲದ್ ಸೇರಿದಂತೆ ಹಲವು ನಾಯಕರು ಗೈರಾಗಿ ಶಾಕ್ ಕೊಟ್ಟಿದ್ದಾರೆ.
ಸಿಟಿ ರವಿ : ಬೇಸರವೂ ಇಲ್ಲ, ಸಂತೋಷವೂ ಇಲ್ಲ. ರಾಜ್ಯಾಧ್ಯಕ್ಷರ ಜೊತೆ ಇದ್ದೇನೆ ಎನ್ನುತ್ತಿರುವ ಸಿಟಿ ರವಿ, ಮಧ್ಯಪ್ರದೇಶ ಚುನಾವಣೆ ಪ್ರಚಾರದ ಕಾರಣ ನೀಡಿ ಪದಗ್ರಹಣದಿಂದ ದೂರ ಉಳಿದಿದ್ದಾರೆ ಮಾಜಿ ಶಾಸಕ ಸಿಟಿ ರವಿ.
ಎಸ್.ಟಿ.ಸೋಮಶೇಖರ್ : ಬೆಂಗಳೂರಿನಲ್ಲೇ ಇದ್ದರೂ, ಅಂತರ ಕಾಯ್ದುಕೊಂಡಿರುವ ಸೋಮಶೇಖರ್ ಕ್ಷೇತ್ರದಲ್ಲಿ ಪೊಲೀಸ್ ಸ್ಟೇಷನ್ ಉದ್ಗಾಟನೆಯಲ್ಲಿ ಬ್ಯುಸಿಯಾಗಿದ್ದರು. ಕೆಲವೇ ಕಿಲೋಮೀಟರುಗಳ ಅಂತರದಲ್ಲಿದ್ದ ಬಿಜೆಪಿ್ರಾಜ್ಯಾಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ಬರಲಿಲ್ಲ. ಗೃಹ ಸಚಿವ ಪರಮೇಶ್ವರ್ ಜೊತೆ ಇದ್ದ ಸೋಮಶೇಖರ್, ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿದ್ದಾರೆ.
ಬಸನಗೌಡ ಪಾಟೀಲ ಯತ್ನಾಳ್, ಸೋಮಣ್ಣ, ಬೆಲ್ಲದ್, ಲಿಂಬಾವಳಿ ಮೊದಲಾದವರು ಕಾರಣವನ್ನೂ ಹೇಳಿಲ್ಲ. ಹೊರಗೆ ಕಾಣಿಸಿಯೂ ಇಲ್ಲ. ಯತ್ನಾಳ್ ಅವರಂತೂ ಯಡಿಯೂರಪ್ಪ ಅಧಿಕಾರದಲ್ಲಿರುವಷ್ಟೂ ಕಾಲ ಕಾಡಿದ್ದರು. ಆದರೆ ಚುನಾವಣೆ ಪ್ರಚಾರದ ವೇಳೆ ಯಡಿಯೂರಪ್ಪ, ಯತ್ನಾಳ್ ಪರ ಪ್ರಚಾರ ಮಾಡಿದ್ದರು. ಇನ್ನು ಅರವಿಂದ ಬೆಲ್ಲದ್ ಮೌನಕ್ಕೆ ಶರಣಾಗಿದ್ದರೆ, ವಿ.ಸೋಮಣ್ಣ ಬಹುತೇಕ ಕಾಂಗ್ರೆಸ್ ಸೇರುವ ಸೂಚನೆಗಳಿವೆ.
ಯತ್ನಾಳ್, ಅರವಿಂದ ಲಿಂಬಾವಳಿ ಮೊದಲಾದವರು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿದ್ದರು. ವಿಜಯೇಂದ್ರ ಅಧ್ಯಕ್ಷರಾಗಿರುವುದರಿಂದ ಯತ್ನಾಳ್ ಅವರಿಗೆ ವಿದಾನಸಭೆ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಅರ್ಥಾತ್ ವಿರೋಧ ಪಕ್ಷದ ನಾಯಕ ಸ್ಥಾನ ಸಿಗುವ ಸಾಧ್ಯತೆಗಳು ಬಹುತೇಕ ಇಲ್ಲ ಅಥವಾ ಇಲ್ಲ. ಒಂದೇ ಸಮುದಾಯಕ್ಕೆ ಎರಡು ಪ್ರಮುಖ ಹುದ್ದೆಗಳನ್ನು ಕೊಡುವ ತಪ್ಪನ್ನು ಯಾವ ಪಕ್ಷವೂ ಮಾಡುವುದಿಲ್ಲ.
ಇನ್ನು ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಬೆಂಬಲಿಗರು, ಪಕ್ಷದ ನಿಷ್ಠಾವಂತರು ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ನಿಕಟಪೂರ್ವ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡ, ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಬಿ.ಶ್ರೀರಾಮುಲು ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.
ಈ ಮಧ್ಯೆ ‘ದೈನಿಕ್ ಜಾಗರಣ್’ ಹಿಂದಿ ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಕರ್ನಾಟಕ ಬಿಜೆಪಿ ಅಧ್ಯಕ್ಷರನ್ನಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ನೇಮಕದ ಹಿಂದೆ ಯಾವ ಸಂದೇಶ ಅಡಗಿದೆ ಎಂಬ ಪ್ರಶ್ನೆಗೆ ಉತ್ತರ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ವಿಜಯೇಂದ್ರ ಅವರು ತಮ್ಮ ಸಾಮರ್ಥ್ಯದ ಮೂಲಕ ಈ ನಾಯಕತ್ವವನ್ನು ಗಳಿಸಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಪಕ್ಷ ಸಂಘಟನೆಗೆ ಸಾಕಷ್ಟು ಸಮಯವನ್ನು ಮೀಸಲಿಟ್ಟಿದ್ದಲ್ಲದೆ, ಅವರ ಕಾರ್ಯನಿರ್ವಹಣೆಯಿಂದ ಬಿಜೆಪಿಗೆ ಲಾಭವಾಗಿದೆ. ಯುವ ನಾಯಕರಾಗಿರುವ ವಿಜಯೇಂದ್ರ ಅವರ ನೇಮಕವು ಬಿಜೆಪಿಯು ಶ್ರಮಶೀಲ ಯುವಶಕ್ತಿಯನ್ನು ಗೌರವಿಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸುತ್ತದೆ ಎಂದು ತಿಳಿಸಿದ್ದಾರೆ. ನಾವು ಯಾವಾಗಲೂ ಧನಾತ್ಮಕ ಬದಲಾವಣೆ ಮತ್ತು ಸುಧಾರಣೆಯನ್ನು ಪ್ರತಿಪಾದಿಸಿದ್ದೇವೆ. ಈ ನೇಮಕಾತಿಯು ಸಕಾರಾತ್ಮಕ ಬೆಳವಣಿಗೆಗಳನ್ನು ಉತ್ತೇಜಿಸುವ ನಮ್ಮ ಬದ್ಧತೆಯನ್ನು ಸೂಚಿಸುತ್ತದೆ ಮತ್ತು ನೀವು ಪಕ್ಷದ ಕರ್ನಾಟಕ ಘಟಕದಲ್ಲಿ ಗಮನಾರ್ಹ ಬದಲಾವಣೆಗಳನ್ನು ನಿರೀಕ್ಷಿಸಬಹುದು ಎಂದೂ ನಡ್ಡಾ ಹೇಳಿದ್ದಾರೆ.



