ಸಿನಿಮಾಗಳಲ್ಲಿ ಯಾರು ಯಾರಿಗೆ ಬೇಕಾದರೂ ಜೋಡಿಯಾಗಬಹುದು. ಅದರಲ್ಲಿ ತಪ್ಪೇನಿಲ್ಲ. ಆದರೆ.. ಸ್ಟಾರ್ ನಟರಾದವರು ಹೀರೋಯಿನ್ ಆಗುವವರನ್ನು ಆಯ್ಕೆ ಮಾಡುವಾಗ ಒಂದಿಷ್ಟು ಕೇರ್ ತೆಗೆದುಕೊಳ್ಳುತ್ತಾರೆ. ಏಕೆಂದರೆ.. ಅವರು ಸ್ಟಾರ್. ತೆಲುಗಿನಲ್ಲಿ ಬಾಲಕೃಷ್ಣ ಅಂತಹವರೆಲ್ಲ ಅದಕ್ಕೆ ಕೇರ್ ಕೂಡಾ ಮಾಡಲ್ಲ. ತಮ್ಮದೇ ಕಾಲದ ಕಮಲ್ ಹಾಸನ್ ಮಗಳು ಶೃತಿ ಹಾಸನ್ ಜೊತೆಯಲ್ಲೂ ಕೂಡಾ ರೊಮ್ಯಾನ್ಸ್ ಮಾಡ್ತಾರೆ. ಅದು ಕನ್ನಡದಲ್ಲೂ ಆಗಿದೆ.
ಈಗ ಉಪೇಂದ್ರ ನಟಿಸುತ್ತಿರುವ Next Level ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿರುವುದು ಆರಾಧನಾ ರಾಮ್. ಕಾಟೇರ ಆದ ಮೇಲೆ ಆರಾಧನಾ ನಟಿಸುತ್ತಿರುವ 2ನೇ ಸಿನಿಮಾ ಇದು. Next Level. ಬಹುತೇಕ ಚರ್ಚೆಯಾಗುತ್ತಿರುವುದು ಇಬ್ಬರ ನಡುವಿನ ಏಜ್ ಗ್ಯಾಪ್. ಆರಾಧನಾಗೆ ಈಗಿನ್ನೂ 22 ವರ್ಷ. ಉಪೇಂದ್ರಗೆ 56 ವರ್ಷ. ವಯಸ್ಸಿನ ಅಂತರ 34.
ʻʻಏಜ್ ಗ್ಯಾಪ್ ಅನ್ನೋದು ಪ್ರಾಬ್ಲಂ ಅಲ್ಲ. ನನಗೆ ಉಪೇಂದ್ರರ ಜೊತೆ ಜೋಡಿಯಾಗಿದ್ದೀನಿ ಎನ್ನುವುದೇ ಹೆಮ್ಮೆ. ಇನ್ನು ನನ್ನ ಪಾತ್ರ, ಉಪೇಂದ್ರರ ಈ ಹಿಂದಿನ ಯಾವ ಚಿತ್ರಗಳ ನಾಯಕಿಯೂ ಮಾಡದಂತಹ ಪಾತ್ರ. ನಾನಂತೂ ಉಪ್ಪಿ ಸರ್‌ಗೆ ದೊಡ್ಡ ಫ್ಯಾನ್ʼʼ ಎನ್ನುತ್ತಾರೆ ಆರಾಧನಾ.
ಆರಾಧನಾ ರಾಮ್ ಹುಟ್ಟಿದ್ದು 2002ರ ಫೆಬ್ರವರಿ 2ರಂದು. ಅವರು ಮೊದಲು ನಟಿಸಿದ್ದು ದರ್ಶನ್ ಜೊತೆ. ದರ್ಶನ್‌ಗೂ.. ಆರಾಧನಾಗೂ 24 ವರ್ಷ ವಯಸ್ಸಿನ ಗ್ಯಾಪ್ ಇತ್ತು. ಈಗ ಉಪೇಂದ್ರ ಜೊತೆ 34 ವರ್ಷ ಗ್ಯಾಪ್ ಇದೆ. ಉಪೇಂದ್ರ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ, ಶ್, ಓಂ.. ನಂತಹ ಸಿನಿಮಾ ಮಾಡುತ್ತಿದ್ದಾಗ ಆರಾಧನಾ ಅವರ ತಾಯಿ, ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಹೀರೋಯಿನ್ ಆಗಿದ್ದವರು. ಮಾಲಾಶ್ರೀ ಅವರಿಗೇ ಇನ್ನೂ ಮದುವೆ ಆಗಿರಲಿಲ್ಲ.
ಉಪೇಂದ್ರ A ಚಿತ್ರದ ಮೂಲಕ ಹೀರೋ ಆದಾಗಲೂ, ಉಪೇಂದ್ರ, ಪ್ರೀತ್ಸೆ ಮಾಡಿದಾಗಲೂ ಆರಾಧನಾ ಹುಟ್ಟಿರಲಿಲ್ಲ. ಆರಾಧನಾ ಹುಟ್ಟಿದ ವರ್ಷ ಹೆಚ್2ಓ, ನಾನು ನಾನೇ, ನಾಗರಹಾವು, ಸೂಪರ್ ಸ್ಟಾರ್.. ಮೊದಲಾದ ಸಿನಿಮ ಮಾಡಿದ್ದರು ಉಪ್ಪಿ. ಈಗ ತಾವು ಸ್ಟಾರ್ ಆದ ನಂತರ ಹುಟ್ಟಿದ ಹೆಣ್ಣು ಮಗುವಿನ ಜೊತೆ ಹೀರೋ ಆಗುತ್ತಿದ್ದಾರೆ.
ಅಂದಹಾಗೆ ಉಪೇಂದ್ರ ಆರಾಧನಾ ಅವರ ತಂದೆ ರಾಮು ಅವರ ನಿರ್ಮಾಣದ ಹಾಲಿವುಡ್ ಸಿನಿಮಾ ಮಾಡಿದಾಗಲೂ ಆರಾಧನಾ ಹುಟ್ಟಿರಲಿಲ್ಲ. ರಾಮು ಅವರ ನಿರ್ಮಾಣದ ಆಟೋ ಶಂಕರ್ ಸಿನಿಮಾ ಮಾಡಿದಾಗ ಆರಾಧನಾ ಇನ್ನೂ ಪುಟ್ಟ ಹುಡುಗಿ. ಬಹುಶಃ ಆರಾಧನಾ ಅವರ ನಾಮಕರಣಕ್ಕೆ ಅತಿಥಿಯಾಗಿ ಹೋಗಿದ್ದರೂ ಆಶ್ಚರ್ಯ ಇಲ್ಲ. ಈಗ ಅದೇ ಆರಾಧನಾ.. ಉಪೇಂದ್ರ ಜೊತೆ ನಾಯಕಿ.
ಇನ್ನು ನೆಕ್ಸ್ಟ್ ಲೆವೆಲ್ ಚಿತ್ರಕ್ಕೆ ಕನ್ನಡದಲ್ಲಿ ನಮ್ ಏರಿಯಾಲ್ ಒಂದಿನ, ತುಗ್ಲಕ್, ಹುಲಿರಾಯ ಹಾಗೂ ಶಾರ್ದೂಲ ಚಿತ್ರಗಳನ್ನು ನಿರ್ದೇಶಿಸಿರುವ ಅರವಿಂದ್ ಕೌಶಿಕ್ ನಿರ್ದೇಶಕ. ರೋಜ್, ಮಾಸ್ ಲೀಡರ್, ವಿಕ್ಟರಿ-2, ಖಾಕಿ, ಛೂ ಮಂತರ್ ಸಿನಿಮಾಗಳ ನಿರ್ಮಾಪಕ ತರುಣ್ ಶಿವಪ್ಪ, ಪ್ರೊಡ್ಯೂಸರ್. ಇದು ಪ್ಯಾನ್ ಇಂಡಿಯಾ ಸಿನಿಮಾ ಎನ್ನುವುದು ವಿಶೇಷ.
ಮೊದಲ ಚಿತ್ರಕ್ಕೂ, ಎರಡನೇ ಚಿತ್ರಕ್ಕೂ ತುಂಬಾ ಲೇಟ್ ಆಯ್ತಲ್ವಾ.. ಎಂದರೆ.. ಆರಾಧನಾ ಹೇಳೋದೇ ಬೇರೆ. ಸುಮಾರು ಆಫರ್ಸ್ ಬಂದವು. ಕಥೆ ಒಪ್ಪಿಗೆ ಆಗ್ತಿರಲಿಲ್ಲ. ಕಥೆ ಓಕೆ ಆದ್ರೆ.. ಪಾತ್ರ ಇಷ್ಟವಾಗ್ತಿರಲಿಲ್ಲ. ಎರಡೂ ಇಷ್ಟವಾದಾಗ ಟೀಂ ಸೆಟ್ ಆಗ್ತಿರಲಿಲ್ಲ. ಹೀಗಾಗಿ ಲೇಟ್ ಆಯ್ತು ಎನ್ನುತ್ತಾರೆ ಆರಾಧನಾ.
ನೆಕ್ಸ್ಟ್ ಲೆವೆಲ್ ಚಿತ್ರಕ್ಕೆ ಮಾಡರ್ನ್ ಹುಡುಗಿ ಬೇಕಂತೆ. ಕಾಟೇರದ ಪಾತ್ರಕ್ಕಿಂತ ಇದು ಡಿಫರೆಂಟ್. ಅಲ್ಲಿ ಗುಂಡು ಗುಂಡಾಗಿದ್ದ ಹಳ್ಳಿ ಹುಡುಗಿ. ಇಲ್ಲಿ ಸ್ಲಿಮ್ ಆಗಿರಬೇಕು. ಮಾಡರ್ನ್ ಆಗಿರಬೇಕು ಎನ್ನುವ ಆರಾಧನಾಗೆ ವಯಸ್ಸಿನ ಗ್ಯಾಪ್ ಕೂಡಾ ಗೊತ್ತಿದೆ. ಅಂದಹಾಗೆ ಆರಾಧನಾ ಮಾಡುತ್ತಿರುವುದು ಮುಖ್ಯಮಂತ್ರಿಯ ಮಗಳ ಪಾತ್ರವಂತೆ.
ಚಿತ್ರದುದ್ದಕ್ಕೂ ಉಪ್ಪಿಯ ಜೊತೆಯಲ್ಲೇ ಇರ್ತಾರಂತೆ ಆರಾಧನಾ. ಸಿನಿಮಾ ಚಿತ್ರೀಕರಣ ನವೆಂಬರಿನಲ್ಲಿ ಶುರುವಾಗಲಿದೆ. ಪ್ರೀ-ಪ್ರೊಡಕ್ಷನ್ ಕೆಲಸಗಳು ಆಗಲೇ ನಡೆಯುತ್ತಿವೆ. ಕಾಟೇರಕ್ಕೆ ಡಬ್ ಮಾಡೋಕೆ ಆಗಿರಲಿಲ್ಲ. ಈ ಚಿತ್ರದಲ್ಲಿ ಅದನ್ನು ಕೂಡಾ ಮಾಡುತ್ತೇನೆ ಅನ್ನೋ ಕಾನ್ಫಿಡೆನ್ಸ್ ಆರಾಧನಾ ಅವರದ್ದು.



