ನನಗೂ ಫ್ರೀ, ನಿಮಗೂ ಫ್ರೀ, ಮಹಾದೇವಪ್ಪನಿಗೂ ಫ್ರೀ.. ಕಾಕಾ ಪಾಟೀಲ್ಗೂ ಫ್ರೀ.. ಎಂದು ಬಡಾಯಿ ಕೊಚ್ಚಿಕೊಂಡು ‘ಗ್ಯಾರಂಟಿ ಕಾರ್ಡ್’ ಹಂಚಿದ್ದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಈಗ ಗ್ಯಾರಂಟಿ ಯೋಜನೆಗೆಳಿಗೆ ಕತ್ತರಿ ಹಾಕಲು ಮುಂದಾಗಿದೆ. ರಾಜ್ಯದ ಜನರಿಗೆ ಸುಳ್ಳು ಆಶ್ವಾಸನೆಗಳನ್ನು ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ ಎಂಬ ಮಾತಿನಂತೆ ಈಗ ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆಗಳಲ್ಲಿ ಪರಿಷ್ಕರಣೆಗೆ ಮುಂದಾಗಿದೆ. ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರ ಹೆಣಗಾಡುತ್ತಿದ್ದು, ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಸಚಿವರುಗಳೇ ತಿರುಗಿಬಿದ್ದಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಬಳಿ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಮಾಡಲು ದೂರು ನೀಡಿರುವುದು, ” “ಬುರುಡೆ ಸಿದ್ದ”ರಾಮಯ್ಯ ಸರ್ಕಾರದ ಬಂಡವಾಳ ಬಯಲು ಮಾಡಿದೆ.. ಇದು ಬಿಜೆಪಿ ಹಾಗೂ ಜೆಡಿಎಸ್ʻನವರು ಮಾಡುತ್ತಿರುವ ಟೀಕೆ.
ವಿಶೇಷ ಅಂದ್ರೆ ಈ ಮಾತು ಬರೋದಕ್ಕೆ ಕಾರಣವಾಗಿದ್ದು ಸ್ವತಃ ರಾಜ್ಯ ಸಚಿವರ ಮಾತುಗಳು. ಕೆ.ಎಚ್.ಮುನಿಯಪ್ಪ, ಪರಮೇಶ್ವರ್, ಎಂಬಿ ಪಾಟೀಲ್, ಸತೀಶ್ ಜಾರಕಿಹೊಳಿ ಅವರಂತಹ ನಾಯಕರೇ ಗ್ಯಾರಂಟಿ ಯೋಜನೆ ಪರಿಷ್ಕರಣೆಯ ಮಾತನಾಡುತ್ತಿದ್ಧಾರೆ.
ಸಿಎಂ ಸಿದ್ದರಾಮಯ್ಯ, ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಡಿಕೆ ಶಿವಕುಮಾರ್.. ಮೊದಲಾದವರು ಗ್ಯಾರಂಟಿ ಯೋಜನೆಗಳಿಗೆ ಬ್ರೇಕ್ ಇಲ್ಲ ಎನ್ನುತ್ತಿದ್ದಾರಾದರೂ.. ಅವರ ಮಾತಿನಲ್ಲಿ ಅವರಿಗೇ ವಿಶ್ವಾಸ ಇಲ್ಲ.
ಆದರೆ.. ಕಾಂಗ್ರೆಸ್ʻನಲ್ಲಿಯೇ ಗ್ಯಾರಂಟಿ ಯೋಜನೆ ಪರಿಷ್ಕರಣೆಗೆ ಒತ್ತಡ ಹೆಚ್ಚುತ್ತಿವೆ. ಪ್ರತೀ ಕ್ಯಾಬಿನೆಟ್ ಸಭೆಯಲ್ಲಿ, ಶಾಸಕರ ಜೊತೆಗಿನ ಸಭೆಗಳಲ್ಲಿ ಗ್ಯಾರಂಟಿ ಯೋಜನೆಗಳಿಂದಾಗಿ ನನ್ನ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ರಸ್ತೆ, ಸ್ಕೂಲು, ಆಸ್ಪತ್ರೆ, ವಿದ್ಯುತ್ ಕಂಬಗಳಂತಹ ಕೆಲಸಗಳಿಗೂ ದುಡ್ಡಿಲ್ಲ ಅಂದ್ರೆ ಹೇಗೆ ಅನ್ನೋದು ಶಾಸಕರ ಆಕ್ರೋಶ.
ಜೊತೆಗೆ ಇತ್ತೀಚೆಗೆ ಬಂದ ಲೋಕಸಭೆ ರಿಸಲ್ಟ್ ನೋಡಿ.. ನಮಗೆ ಕನಿಷ್ಠ 14-15 ಕ್ಷೇತ್ರ ಬರಬೇಕಿತ್ತು. ಗ್ಯಾರಂಟಿ ಕೊಟ್ಟರೂ.. ನಮಗೆ ಸಿಕ್ಕಿದ್ದು ಕೇವಲ 9 ಕ್ಷೇತ್ರ. ಶ್ರೀಮಂತರೂ ಸೇರಿದಂತೆ ಎಲ್ಲರಿಗೂ ಗ್ಯಾರಂಟಿ ಸಿಗುತ್ತಿವೆ. ಗ್ಯಾರಂಟಿ ಪಡೆದವರೇ ನಮಗೆ ವೋಟು ಹಾಕಲ್ಲ. ಲೇವಡಿ ಮಾಡ್ತಾರೆ ಅನ್ನೋದು ಶಾಸಕರ ಕಂಪ್ಲೇಂಟು. ಹೀಗಾಗಿ.. ಒಟ್ಟು 5 ಯೋಜನೆಗಳಲ್ಲಿ ಎರಡು ಯೋಜನೆಗಳಿಗೆ ಕತ್ತರಿ ಆಡಿಸುವ ಬಗ್ಗೆ ಚಿಂತನೆ ನಡೆದಿದೆ.
ಗೃಹ ಜ್ಯೋತಿ : ಪ್ರತೀ ಮನೆಗೆ 200 ಯುನಿಟ್ʻವರೆಗೆ ವಿದ್ಯುತ್ ಉಚಿತ ಎನ್ನುವ ಯೋಜನೆಗೆ ಕತ್ತರಿ ಆಡಿಸುವುದಕ್ಕೆ ಸಾಧ್ಯವಿಲ್ಲ ಎನ್ನುತ್ತಿದೆ ಸರ್ಕಾರ. ಆದರೆ.. 200 ಯುನಿಟ್ʻವರೆಗಿನ ಮಿತಿ 100 ಯುನಿಟ್ʻಗೆ ಇಳಿದರೂ ಆಶ್ಚರ್ಯ ಇಲ್ಲ. ಆದರೆ.. ಅದು ಬೀರುವ ಪರಿಣಾಮ ದೊಡ್ಡದಾಗಿರುವ ಕಾರಣ, ಸರ್ಕಾರಕ್ಕೆ ಧೈರ್ಯ ಸಾಲುತ್ತಿಲ್ಲ.
ಶಕ್ತಿ ಯೋಜನೆ : ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪ್ರಯಾಣವನ್ನು ರದ್ದು ಮಾಡುವ ಬಗ್ಗೆ ಹೆಚ್ಚಿನ ಯೋಚನೆ ಇದ್ದಂತಿಲ್ಲ. ಏಕೆಂದರೆ.. ರಾಜ್ಯ ಸರ್ಕಾರ ನಿರೀಕ್ಷಿಸಿದ್ದಕ್ಕಿಂತ ದೊಡ್ಡ ಪ್ರಮಾಣದಲ್ಲೇನೂ ಹೊರೆ ಬೀಳುತ್ತಿಲ್ಲ. ಇದನ್ನು ನಿಭಾಯಿಸಬಹುದು ಎಂಬ ವಿಶ್ವಾಸ ಎಲ್ಲರಲ್ಲೂ ಇದೆ.
ಯುವ ನಿಧಿ : ನಿರುದ್ಯೋಗಿ ಯುವಕರಿಗೆ ಮಾಸಿಕ ಹಣ ನೀಡುವ ಯೋಜನೆಯಲ್ಲಿ ಮೊದಲೇ ಕತ್ತರಿ ಬಿದ್ದಿದೆ. ಈ ಯೋಜನೆಯ ಖರ್ಚು ವೆಚ್ಚ ಸರ್ಕಾರದ ಒಟ್ಟಾರೆ ಬಜೆಟ್ಟಿಗೆ ಹೋಲಿಸಿದರೆ ಜುಜುಬಿ ಅಮೌಂಟ್. ಹೀಗಾಗಿ ಇದಕ್ಕೂ ಕೈ ಹಾಕುತ್ತಿಲ್ಲ.
ಗೃಹ ಲಕ್ಷ್ಮಿ : ರಾಜ್ಯ ಸರ್ಕಾರದ ಕಣ್ಣಿರುವುದು ಈ ಸ್ಕೀಮಿನ ಮೇಲೆಯೇ. ಪ್ರತೀ ಮನೆಯ ಒಬ್ಬ ಮಹಿಳೆಗೆ ಮಾಸಿಕ 2 ಸಾವಿರ ರೂ. ನೀಡುವ ಸ್ಕೀಂ, ಬೊಕ್ಕಸವನ್ನು ಲೂಟಿ ಹೊಡೆಯುತ್ತಿದೆ. ವರ್ಷಕ್ಕೆ 36 ಸಾವಿರ ಕೋಟಿ ಅಂದಾಜು ವೆಚ್ಚ. ಒಟ್ಟಾರೆ ಬಜೆಟ್ಟಿನ ಶೇ.10-15ರಷ್ಟು ಹಣ. ಬಿಪಿಎಲ್/ಎಪಿಎಲ್ ಕಾರ್ಡ್ ಎಂಬ ನಿರ್ಬಂಧ ಇದ್ದರೂ.. ಮೊದಲಿಗೆ ಬಿಪಿಎಲ್/ಎಪಿಎಲ್ ಕಾರ್ಡುಗಳೇ ಬೋಗಸ್ ಎನ್ನುವುದು ಸರ್ಕಾರಕ್ಕೆ ಗೊತ್ತಿಲ್ಲದ ವಿಷಯವೇನಲ್ಲ.
ಹೀಗಾಗಿ.. ಗೃಹ ಲಕ್ಷ್ಮಿ ಹಣಕ್ಕೆ ಕತ್ತರಿ ಹಾಕಿ, ಹೊಸ ನಿಯಮ ರೂಪಿಸುವ ಯೋಜನೆ ಸರ್ಕಾರದ್ದು. ಕನಿಷ್ಠ ಎಂದರೂ.. ಈಗ ಇರುವ 36 ಸಾವಿರ ಕೋಟಿ ಅನುದಾನವನ್ನು 10ರಿಂದ 15 ಸಾವಿರ ಕೋಟಿ ಆಸುಪಾಸಿಗೆ ತರುವ ಯೋಚನೆ ಇದೆ.
ಅನ್ನಭಾಗ್ಯ : ಗೃಹ ಲಕ್ಷ್ಮಿ ಬಿಟ್ಟರೆ ರಾಜ್ಯ ಸರ್ಕಾರಕ್ಕೆ ಅತಿ ದೊಡ್ಡ ಹೊರೆ ಎನಿಸುತ್ತಿರುವುದು ಅನ್ನಭಾಗ್ಯ. ಕೇಂದ್ರ ಸರ್ಕಾರದ ಅಕ್ಕಿ ಇರುವ ಕಾರಣ ಇದರ ಬಿಸಿ ತಟ್ಟಿಲ್ಲ. ಜೊತೆಗೆ ಹಣ ಹಾಕುತ್ತಿರುವುದರಿಂದ ಹಾಗೂ ಆರಂಭದ ತಿಂಗಳಷ್ಟೇ ಹಣ ಹಾಕಿದ್ದರಿಂದ ದೊಡ್ಡ ಹೊಡೆತವೇನೂ ಬಿದ್ದಿಲ್ಲ. ಆದರೆ.. ಈಗ ಕೇಂದ್ರ ಸರ್ಕಾರ ಅಕ್ಕಿ ಕೊಡುವುದಕ್ಕೆ ಸಿದ್ಧ ಎಂದು ಹೇಳಿದೆ. ಹಾಗಾದರೆ.. ರಾಜ್ಯ ಸರ್ಕಾರಕ್ಕೆ ದೊಡ್ಡ ಹೊರೆ ಬೀಳಲಿದೆ. ಹೀಗಾಗಿ.. ಅಲ್ಲಿಯೂ ಕೂಡಾ ಹೊಸ ರೂಲ್ಸ್ ಅಳವಡಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ.



