ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಗಿಸಿರುವ ಪೊಲೀಸರು ಪ್ರಾಥಮಿಕ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಚಾರ್ಜ್ ಶೀಟ್ ಸಲ್ಲಿಕೆಯಾದ ನಂತರ ಜಾಮೀನು ಅರ್ಜಿ ಹಾಕಬಹುದು ಎಂದುಕೊಂಡಿದ್ದವರಿಗೆ ಅದು ಇನ್ನೂ ಸಾಧ್ಯವಿಲ್ಲ ಎಂಬ ಅಂಶ ಗಾಬರಿ ಹುಟ್ಟಿಸುತ್ತಿರುವುದು ನಿಜ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜಾಮೀನು ಪಡೆಯುವುದಕ್ಕೆ ಹಲವು ಅಡ್ಡಿಗಳಿವೆ. ಈಗಾಗಲೇ ದರ್ಶನ್ ಅವರ ಆಪ್ತ ಗೆಳತಿ ಪವಿತ್ರಾ ಗೌಡ ಅವರದ್ದೂ ಸೇರಿದಂತೆ ಹಲವರು ಜಾಮೀನು ಅರ್ಜಿ ಹಾಕಿದ್ದರಾದರೂ, ಎಲ್ಲರ ಜಾಮೀನು ಅರ್ಜಿಗಳೂ ರಿಜೆಕ್ಟ್ ಆಗಿವೆ. ಇಷ್ಟಕ್ಕೂ ದರ್ಶನ್ ಅವರಿಗೆ ಜಾಮೀನು ಪಡೆಯುವುದಕ್ಕೆ ಅಡ್ಡಿಯಾಗಿರುವ ಅಂಶಗಳೇನು..?
ದರ್ಶನ್ ಜಾಮೀನಿಗೆ ಮೊದಲ ಸಮಸ್ಯೆಯೇ ಚಾರ್ಜ್ ಶೀಟ್ :
ಈಗ ಸಲ್ಲಿಕೆಯಾಗಿವುದು ಕಂಪ್ಲೀಟ್ ಚಾರ್ಜ್ ಶೀಟ್ ಅಲ್ಲ. ಪ್ರಾಥಮಿಕ ಆರೋಪ ಪಟ್ಟಿ ಮಾತ್ರ. ಇನ್ನೂ ಕೆಲವು ಮಾಹಿತಿಗಳು, ವರದಿಗಳು ಬರುವುದು ಬಾಕಿ ಇದ್ದು, ತನಿಖೆ ನಡೆಯುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಪೊಲೀಸರು. ಈ ನಡುವೆಯೇ ದರ್ಶನ್ ಅವರ ಪರವಾಗಿ ಜಾಮೀನು ಅರ್ಜಿ ಸಲ್ಲಿಸಲು ವಿಜಯಲಕ್ಷ್ಮಿ ದರ್ಶನ್ ಸಿದ್ಧತೆ ನಡೆಸಿದ್ದಾರೆ. ಹೈಕೋರ್ಟಿನ ಮೊರೆ ಹೋಗಲಿದ್ದಾರೆ. ಅಂದಹಾಗೆ ದರ್ಶನ್ ಜೈಲು ಸೇರಿ ೩ ತಿಂಗಳು ಕಂಪ್ಲೀಟ್ ಆಗಿದೆ. ೯೦ ದಿನಗಳ ಒಳಗಾಗಿ ಚಾರ್ಜ್ ಶೀಟ್ ಸಲ್ಲಿಸಬೇಕು. ಪ್ರಾಥಮಿಕ ಚಾರ್ಜ್ ಶೀಟ್ ಸಲ್ಲಿಸಿ ಆಗಿದೆ. ಚಾರ್ಜ್ ಶೀಟ್ ಸಲ್ಲಿಕೆ ಆದ ಮೇಲೆ ಜಾಮೀನು ಅರ್ಜಿ ಸಲ್ಲಿಸಬಹುದು. ಸಂಚು ಮಾಡಿ ಕೊಲೆ ಮಾಡಿದ ಪ್ರಕರಣ ಆಗಿರೋದ್ರಿಂದ ಚಾರ್ಜ್ ಶೀಟ್ ಸಲ್ಲಿಕೆ ಆಗುವವರೆಗೂ ಜಾಮೀನು ಸಲ್ಲಿಸುವುದಕ್ಕೆ ಅಥವಾ ನೀಡುವುದಕ್ಕೆ ಅವಕಾಶ ಇರುವುದಿಲ್ಲ.
ತನಿಖೆ ದಿಕ್ಕು ತಪ್ಪಿಸುವ ಪ್ರಯತ್ನ :
ಜಾಮೀನಿಗೆ ಅರ್ಜಿ ಹಾಕಿದರೂ ಸಿಗುವುದು ಕಷ್ಟ. ಏಕೆಂದರೆ ತನಿಖೆ ಇನ್ನೂ ಮುಗಿದಿಲ್ಲ. ತನಿಖೆಯನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಅವರ ಕೆಲವು ಹಿಂಬಾಲಕರು ಮಾಡಿದ್ದಾರೆ. ಒಬ್ಬ ಸಾಕ್ಷಿಗೆ ಬೆದರಿಕೆ ಹಾಕಿದ್ದಾರೆ. ಅದು ಎನ್‌ಸಿಆರ್ ಕೂಡಾ ಆಗಿದೆ. ಆ ಎನ್‌ಸಿಆರ್ ಆಧಾರವನ್ನೇ ವಕೀಲರು ಕೋರ್ಟಿಗೆ ಹೇಳಬಹುದು.
ನಟ ಚಿಕ್ಕಣ್ಣ ಕೂಡಾ ಸಮಸ್ಯೆ :
ಹೌದು, ಪ್ರಕರಣದಲ್ಲಿ ನಟ ಚಿಕ್ಕಣ್ಣ ಒಬ್ಬ ಸಾಕ್ಷಿದಾರ. ಆದರೆ, ಸೆಕ್ಷನ್ ೧೬೪ ಹೇಳಿಕೆ ನೀಡಿರುವ ಚಿಕ್ಕಣ್ಣ, ಜೈಲಿಗೆ ಹೋಗಿ ದರ್ಶನ್ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ಅದಾದ ಮೇಲೆ ತಮಗೆ ಆ ರೀತಿ ಮಾಡಬಾರದು ಎಂಬ ವಿಷಯ ಗೊತ್ತಿರಲಿಲ್ಲ ಎಂದು ಹೇಳಿದ್ದರಾದರೂ, ಅದೂ ಕೂಡಾ ಜಾಮೀನು ನೀಡುವುದಕ್ಕೆ ತೊಡಕಾಗಬಹುದು.
ದರ್ಶನ್ ಅಭಿಮಾನಿಗಳ ಹುಚ್ಚಾಟವೇ ಸಮಸ್ಯೆ :
ಯಾವುದು ನಟ ದರ್ಶನ್ ಅವರ ಶಕ್ತಿಯೋ, ಅದೇ ಅವರಿಗೆ ಈ ಪ್ರಕರಣದಲ್ಲಿ ಅತಿ ದೊಡ್ಡ ಹಿನ್ನಡೆಯಾಗಬಹುದು. ದರ್ಶನ್ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಮಾಡುತ್ತಿರುವ ಅವಾಂತರಗಳು ದರ್ಶನ್ ಅವರ ಜಾಮೀನಿಗೆ ಅಡ್ಡಿಯಾಗುವ ಎಲ್ಲ ಸಾಧ್ಯತೆಗಳೂ ಇವೆ. ಏಕೆಂದರೆ, ದರ್ಶನ್ ಅವರು ಈ ಕೊಲೆ ಮಾಡಿಸಿದ್ದು ಅಭಿಮಾನಿಗಳಿಂದಲೇ. ಅದೇ ಆರೋಪದಲ್ಲಿ ಜೈಲು ಸೇರಿರುವ ದರ್ಶನ್ ಅವರಿಗೆ ಜಾಮೀನು ನೀಡಿದರೆ, ತನಿಖೆಯ ಹಾದಿ ತಪ್ಪಿಸಬಹುದು ಎಂದು ಪೊಲೀಸರು ವಾದ ಮಂಡಿಸಬಹುದು.
ಪರಪ್ಪನ ಅಗ್ರಹಾರ ಜೈಲಿನ ದರ್ಬಾರ್ ಕೂಡಾ ಜಾಮೀನು ಪಡೆಯುವುದಕ್ಕೆ ಅಡ್ಡಿ : ದರ್ಶನ್, ಪ್ರಭಾವಿ ವ್ಯಕ್ತಿ ಆಗಿದ್ದು, ಜೈಲಿನಲ್ಲಿದ್ದಾಗಲೂ ಪ್ರಭಾವವನ್ನು ಬಳಸಿರುವುದಕ್ಕೆ ಸಾಕ್ಷ್ಯ ಸಿಕ್ಕರುವ ಕಾರಣ ದರ್ಶನ್ಗೆ ಜಾಮೀನು ಸಿಗುವುದು ಸುಲಭವಾಗಿರಲ್ಲ. ಜೈಲಿನಲ್ಲಿ ಇದ್ದಾಗಲೇ ಈ ಮಟ್ಟದ ಪ್ರಭಾವ ಹೊಂದಿರುವ ದರ್ಶನ್ ಅವರಿಗೆ ಜಾಮೀನು ಕೊಟ್ಟರೆ, ಅವರ ಹೊರಗಡೆ ಹೋಗಿ ಸಾಕ್ಷಿಗಳನ್ನೆಲ್ಲ ತಮ್ಮ ಪ್ರಭಾವ ಬೀರಿ ತಿದ್ದಬಹುದು ಎಂಬ ಆರೋಪಕ್ಕೆ ನ್ಯಾಯಾಲಯ ಮನ್ನಣೆ ನೀಡಿದರೆ, ದರ್ಶನ್ ಅವರಿಗೆ ಜಾಮೀನು ಸಿಗುವುದು ಕಷ್ಟ ಕಷ್ಟ.
ಈ ನಡುವೆ ದರ್ಶನ್ ಜೈಲಿನಲ್ಲಿ ವ್ಯಾಯಾಮ ಶುರು ಮಾಡಿದ್ದಾರಂತೆ. ವಿಟಮಿನ್ ಮಾತ್ರೆ ತೆಗೆದುಕೊಳ್ಳುತ್ತಿದ್ದಾರಂತೆ. ಶಕ್ತಿಗಾಗಿ ಒಣಹಣ್ಣುಗಳ ಸೇವನೆ ಮಾಡುತ್ತಿದ್ದಾರಂತೆ. ಇದೆಲ್ಲವೂ ಡೆವಿಲ್ ಸಿನಿಮಾಗಾಗಿ. ಜೈಲಿನಿಂದ ಹೊರಬಂದ ಕೂಡಲೇ ಶೂಟಿಂಗ್ ಶುರು ಮಾಡುವುದಕ್ಕೆ ಸಿದ್ಧತೆ ನಡೆಯುತ್ತಿದ್ದು, ಅದಕ್ಕಾಗಿ ದರ್ಶನ್ ತಯಾರಿ ಮಾಡಿಕೊಳ್ತಿದ್ದಾರಂತೆ. ಇಷ್ಟೆಲ್ಲ ಆಗಿ ಜಾಮೀನು ಅರ್ಜಿ ಸಲ್ಲಿಸಿದರೂ ಸಹ ಜಾಮೀನು ಸಿಗುವುದು ಬಹಳ ಕಷ್ಟ. ಏಕೆಂದರೆ ಆರೋಪ ಪಟ್ಟಿಯನ್ನು ಆರೋಪಿ ಪರ ವಕೀಲರಿಗೆ ನೀಡಿ, ಅದಾದ ಒಂದು ವಾರದ ಬಳಿಕ ವಿಚಾರಣೆಗಳು ಆರಂಭವಾಗುವ ಸಾಧ್ಯತೆ ಹೆಚ್ಚು.



