ಬಿಜೆಪಿಗೂ.. ಬಿಜೆಪಿಯ ಎದುರಾಳಿ ಕಾಂಗ್ರೆಸ್ ಪಕ್ಷಕ್ಕೂ ಇರುವ ವ್ಯತ್ಯಾಸಗಳಲ್ಲಿ ಇದೂ ಒಂದು. ಬಿಜೆಪಿ, ಕಾಂಗ್ರೆಸ್ ಪಕ್ಷದ ಹಾಗಲ್ಲ. ಅಗಾಗ ರಿಸ್ಕ್ ತೆಗೆದುಕೊಳ್ಳುತ್ತದೆ. ಈಗ ಅಂಥದ್ದೇ ಮತ್ತೊಂದು ಹೆಜ್ಜೆ ಇಟ್ಟಿರುವ ಬಿಜೆಪಿಗೆ ಇನ್ನು ಮುಂದೆ 45ರ ಹರೆಯದ ನಿತಿನ್ ನಬೀನ್ ಅವರು ಅಧ್ಯಕ್ಷ. ಅದು ಸರಳವಾದ ಹುದ್ದೆಯಲ್ಲ. ವಾಜಪೇಯಿ, ಅಡ್ವಾ̧ಣಿ ಮುರಳಿ ಮನೋಹರ್ ಜೋಷಿಯವರಂತಹ ದಿಗ್ಗಜರು ಇದ್ದ ಹುದ್ದೆ. ನಿತಿನ್ ಗಡ್ಕರಿ, ವೆಂಕಯ್ಯ ನಾಯ್ಡು, ರಾಜನಾಥ್ ಸಿಂಗ್, ಅಮಿತ್ ಶಾ, ಜೆಪಿ ನಡ್ಡಾರಂತಹವರು ಅಲಂಕರಿಸಿದ್ದ ಹುದ್ದೆ. ಆ ಹುದ್ದೆಗೆ ಈಗ ಆಯ್ಕೆಯಾಗಿರುವುದು ನಿತಿನ್ ನಬೀನ್. ಅದು ವಿಜಯೇಂದ್ರ ಅವರಿಗೆ ಶುಭ ಸುದ್ದಿಯಾ..? ಏಕೆಂದರೆ ವಿಜಯೇಂದ್ರ ಅವರಿಗೆ ವಯಸ್ಸು 49.
ನಿತಿನ್‌ಗೆ ಇದು ಏಕಾಏಕಿ ಒಲಿದು ಬಂದ ಅದೃಷ್ಟವಲ್ಲ. ನಿತಿನ್‌ರ ರಾಜಕೀಯ ಪ್ರಯಾಣ ಶುರುವಾಗಿದ್ದು 20 ವರ್ಷಗಳ ಹಿಂದೆ. ವಿದ್ಯಾರ್ಥಿಯಾಗಿದ್ದಾಗ ಎಬಿವಿಪಿ ಮೂಲಕ ಬಿಜೆಪಿ ಸಂಪರ್ಕಕ್ಕೆ ಬಂದ ನಿತಿನ್, 2000ದ ನಂತರ ಪಕ್ಷದ ಕೆಲಸಗಳಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡರು. ಅದರ ಪರಿಣಾಮವಾಗಿ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿದರು. ನಿತಿನ್‌ರ ತಂದೆ ಕಾಯಸ್ಥ ಸಮುದಾಯಕ್ಕೆ ಸೇರಿದವರು. ಹೆಸರು ದಿ. ನಬಿನ್ ಕಿಶೋರ್ ಸಿನ್ಹಾ. ರಾಜಕಾರಣ, ರಾಜಕೀಯ ಹೊಸದೇನಲ್ಲ.
ನಿತಿನ್ ಅವರಿಗೆ 26ರ ವಯಸ್ಸಿನಲ್ಲೇ ಅಸೆಂಬ್ಲಿಗೆ ಸ್ಪರ್ಧಿಸುವ ಅವಕಾಶ ಸಿಕ್ಕಿತು. ತಮ್ಮ ತಂದೆಯವರ ಸ್ಥಾನವಾದ ಪಟನಾದ ಬಂಕಿಪುರದಿಂದ ಮೊದಲ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ ನಿತಿನ್, ಬಳಿಕ ಅದೇ ಕ್ಷೇತ್ರದಿಂದ 5 ಬಾರಿ (ಸತತ 4 ಸಲ) ಶಾಸಕರಾಗಿದ್ದರು. ನಂತರ ಲೋಕೋಪಯೋಗಿ ಸಚಿವರೂ ಆಗಿದ್ದರು. ಸೋತಿಲ್ಲ.
2023ರಲ್ಲಿ ನಡೆದ ಛತ್ತೀಸ್‌ಗಢ ವಿಧಾನಸಭೆ ಚುನಾವಣೆ ವೇಳೆ ನಿತಿನ್‌ರನ್ನು ಪಕ್ಷದ ಸಹ-ಉಸ್ತುವಾರಿಯಾಗಿ ನೇಮಿಸಲಾಗಿತ್ತು. ಅಲ್ಲಿ ಕಾಂಗ್ರೆಸ್ ವಿರುದ್ಧ ಪಕ್ಷ ಭರ್ಜರಿ ಜಯ ಗಳಿಸಲು ಸಹಕಾರಿಯಾಗಿದ್ದ ಇವರು, ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಯ ಅಧಿಕಾರ ಮುಂದುವರೆಯುವಲ್ಲಿ ಸಹಕಾರಿಯಾದರು. ನಿತಿನ್ ನಬೀನ್ ಅವರ ಬಗ್ಗೆ ಆರ್ ಎಸ್ ಎಸ್ ಹಾಗೂ ಮೋದಿ ಇಬ್ಬರೂ ಆಸಕ್ತಿ ತೋರಿಸಿರುವುದು ವಿಶೇಷ. ಮುಂದಿನ ಜನರೇಷನ್ ನಾಯಕತ್ವಕ್ಕೆ ಬಿಜೆಪಿ ಸಜ್ಜಾಗುತ್ತಿದೆ.
ಇದು ಹೇಗೆ ವಿಜಯೇಂದ್ರ ಅವರಿಗೆ ಗುಡ್ ನ್ಯೂಸ್ ಎಂದರೆ.. ವಿಜಯೇಂದ್ರ ಅವರನ್ನು ವಿರೋಧಿಸುತ್ತಿರುವ ಬಹುತೇಕ ನಾಯಕರ ಪಾಲಿನ ಮೊದಲ ಆರೋಪ ವಿಜಯೇಂದ್ರಗಿನ್ನೂ ವಯಸ್ಸು ಚಿಕ್ಕದು. ಮೊದಲ ಬಾರಿ ಶಾಸಕರಾಗಿದ್ದಾರೆ ಎನ್ನುವುದು. ಇನ್ನು ತಂದೆಯ ಹೆಸರಿನ ಪ್ರಭಾವದಲ್ಲಷ್ಟೇ ವಿಜಯೇಂದ್ರ ಅವರಿಗೆ ಅಧಿಕಾರ ನೀಡಲಾಗಿದೆ ಎಂಬ ಆರೋಪಗಳಿವೆ. ಈಗ ವಿಜಯೇಂದ್ರ ಅವರಿಗಿಂತ ಚಿಕ್ಕವರಾದ ನಿತಿನ್ ಅವರನ್ನೇ ರಾಷ್ಟ್ರೀಯ ಅಧ್ಯಕ್ಷ ಎಂದು ಒಪ್ಪಿಕೊಂಡಾಗ ಸಮಸ್ಯೆ ಬರುವುದಿಲ್ಲ. ಆರೋಪ ಡೌನ್ ಆಗುತ್ತದೆ. ಇನ್ನು ನಿತಿನ್ ಅವರ ತಂದೆಯೂ ಬಿಜೆಪಿಯಲ್ಲಿದ್ದವರೇ.
ಅಷ್ಟೇ ಅಲ್ಲ, ಈಗಾಗಲೇ ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣಗಳಲ್ಲಿ ಕಿರಿಯ ವಯಸ್ಸಿನ ನಾಯಕರಿಗೆ ಅಧಿಕಾರ ಕೊಟ್ಟಿರುವ ಬಿಜೆಪಿ, ಹೊಸ ಜನರೇಷನ್ ರಾಜಕೀಯಕ್ಕೆ ರೆಡಿ ಆಗುತ್ತಿದೆ. ಹಳಬರನ್ನು ಮಾರ್ಗದರ್ಶಕರಾಗಿ ಇರಿ ಎಂದು ಹೇಳಲಾಗುತ್ತಿದೆ. ಹಾಗೆಂದು ಸಂಪೂರ್ಣ ಕಡೆಗಣಿಸುತ್ತಲೂ ಇಲ್ಲ. ಹೆಚ್ಚು ಪ್ರಭಾವ ಇರುವವರನ್ನು ಗೌರವದಿಂದ ನಡೆಸಿಕೊಳ್ಳಲಾಗುತ್ತಿದೆ. ರಾಜಕೀಯದಲ್ಲಿ 40+ ಆರಂಭ. 50+ ಅವಕಾಶಗಳು ಸಿಕ್ಕು, 60+ ಇದ್ದಾಗ ಅಧಿಕಾರ ಸಿಕ್ಕಬಹುದು. ಅದನ್ನು ನಿತಿನ್, ವಿಜಯೇಂದ್ರ ಇಬ್ಬರೂ ಬ್ರೇಕ್ ಮಾಡಿದ್ದಾರೆ. ಹಾಗಾದರೆ ವಿಜಯೇಂದ್ರ ಅವರಿಗೆ ನಿರಾಳತೆ ಸಿಗಬಹುದೇ.. ಈ ಪ್ರಶ್ನೆಗೆ ಈಗಲೇ ಉತ್ತರ ಕೊಡೋಕೆ ಆಗಲ್ಲ.



