ಬೆಂಗಳೂರಿನಲ್ಲಿ ಮತ್ತೊಬ್ಬ ಬಿಲ್ಡರ್ (builder) ಮನೆ ಮೇಲೆ ಐಟಿ ರೇಡ್ (IT Raid) ಆಗಿದೆ. ಈತ ಕೂಡಾ ಕಾಂಟ್ರಾಕ್ಟರ್. ಮೊದಲು ದಾಳಿಯಾಗಿದ್ದು ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ (ex-corpoarator) ಪತಿ, ಕಾಂಟ್ರಾಕ್ಟರ್ ಅಂಬಿಕಾಪತಿ ನಿವಾಸದಲ್ಲಿ. ಅಲ್ಲಿ 42 ಕೋಟಿ ಹಾರ್ಡ್ ಕ್ಯಾಷ್, ಚಿನ್ನ, ಆಭರಣ, ಎರಡು ಸೂಟ್ ಕೇಸ್ ಸಿಕ್ಕಿದ್ದವು. ಇದೀಗ ಮತ್ತೊಬ್ಬ ಬಿಲ್ಡರ್ ಸಂತೋಷ್ ಮೇಲೆ ರೇಡ್ ಆಗಿದೆ. ರಾಜಾಜಿನಗರದ ಕೇತಮಾರನಹಳ್ಳಿಯ ಬಿಲ್ಡರ್ ಸಂತೋಷ್ ಮನೆಯಲ್ಲೂ 40 ಕೋಟಿ ನಗದು ಸಿಕ್ಕಿದೆ. ಇದೆಲ್ಲ ನಡೆಯುತ್ತಿರುವುದ ರಾಜಕೀಯ ಲಾಭಕ್ಕಾಗಿ ಎನ್ನುತ್ತಿರುವ ಕಾಂಗ್ರೆಸ್, ಕಾಂಟ್ರಾಕ್ಟರ್ ಮನೆಯಲ್ಲಿ ಅಷ್ಟೊಂದು ದುಡ್ಡು ಸಿಕ್ಕಿದ್ದು ಹೇಗೆ ಅನ್ನೋದಕ್ಕೆ ಉತ್ತರ ಕೊಡ್ತಿಲ್ಲ. ಅಂದಹಾಗೆ ಕಳೆದ 10 ದಿನಗಳಲ್ಲಿ ಕರ್ನಾಟಕದಲ್ಲಿ ನಡೆದ ಏರಡು ಐಟಿ ದಾಳಿಗಳಲ್ಲಿ ಸಿಕ್ಕಿದ್ದೇ 90 ಕೋಟಿಗೂ ಹೆಚ್ಚು ನಗದು. ಇದು ಅತಿ ದೊಡ್ಡ ಐಟಿ ದಾಳಿ ಎನ್ನಲಾಗುತ್ತಿದೆ.
ಇದೇ ವೇಳೆ ಕುಮಾರಸ್ವಾಮಿ (HD Kumaraswamy) ಇದು ಐದು ರಾಜ್ಯಗಳ ಎಲೆಕ್ಷನ್ನಿಗೆ ನಡೆಯುತ್ತಿರುವ ಫಂಡಿಂಗ್ ದುಡ್ಡು ಎಂದು ಆರೋಪಿಸಿದ್ದರು. ಕನಕ ಮಹಾಲಕ್ಷ್ಮಿಯೇ ಹೇಳಬೇಕು ಎಂದಿದ್ದರು. ಇದಕ್ಕೆ ಡಿಕೆ ಶಿವಕುಮಾರ್ (DK Shivakumar) ಉತ್ತರ ನೀಡಿ ಕುಮಾರಸ್ವಾಮಿ ಅವರೇನು ಐಟಿ ಅಧಿಕಾರಿಯೇ.. ಇಡಿ ಅಧಿಕಾರಿಯೋ.. ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರ ಕೊಟ್ಟಿರುವ ಕುಮಾರಸ್ವಾಮಿ ನಾನು ಐಟಿ ಪ್ರತಿನಿಧಿಯೂ ಅಲ್ಲ, ಈಡಿ ಉದ್ಯೋಗಿಯೂ ಅಲ್ಲ. ಒಬ್ಬ ಹುಲು ಮಾನವನಷ್ಟೇ.. ಕೆಲವರ ಭ್ರಮೆಗಳಿಗೆ ನಾನೇನು ಮಾಡಲಿ ಎಂದಿದ್ದಾರೆ.
ಶೇ. 40% ಕಮೀಷನ್ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದವರು ಇವರಲ್ಲವೇ? ಆದರೆ, ಇವರ ಪರ್ಸಂಟೇಜ್ ಬಗ್ಗೆಯೇ ಹೇಳಿದರೆ ಕೋಪ ಬರುತ್ತದೆ. ಗುತ್ತಿಗೆದಾರನ ಮನೆಯಲ್ಲಿ ಸಿಕ್ಕಿದ ಆ ಕಪ್ಪು ಹಣ ಯಾರದ್ದು? ಆ ಗುತ್ತಿಗೆದಾರ ಯಾರ ಪರಮಾಪ್ತ ಎನ್ನುವುದು ಜಗಜ್ಜಾಹೀರು. ಹೀಗಿದ್ದ ಮೇಲೆ ಸತ್ಯ ಮುಚ್ಚಿಟ್ಟರೆ ಶಿವ ಮೆಚ್ಟುತ್ತಾನೆಯೇ? ಮಾತೆತ್ತಿದರೆ ತನಿಖೆ, ಆಯೋಗ ಎಂದು ಜಪಿಸುವ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಈಗ ಗುತ್ತಿಗೆದಾರರ ಮನೆಗಳಲ್ಲಿ ಕಂತೆಕಂತೆಯಾಗಿ ಸಿಕ್ಕಿಬಿದ್ದಿರುವ ಕನಕ ಮಹಾಲಕ್ಷ್ಮೀ ಬಗ್ಗೆ ಸತ್ಯ ಹೇಳಬೇಕಲ್ಲವೇ? ಎಷ್ಟೇ ಆಗಲಿ, ಒಬ್ಬರು ಸಿದ್ದಪುರುಷರು! ಇನ್ನೊಬ್ಬರು ಸತ್ಯಪುರುಷರು!! ಸತ್ಯಕ್ಕೆ ಸಮಾಧಿ ಕಟ್ಟುವ ಬದಲು ತನಿಖೆ ಮಾಡಿಸಲಿ. ಅದು ಯಾವ ತನಿಖೆ ಎಂದು ಅವರೇ ಬಾಯಿ ಬಿಟ್ಟು ಹೇಳಲಿ ಎಂದು ಪೋಸ್ಟ್ ಮಾಡಿಕೊಂಡಿದ್ದಾರೆ. ಆ ಮೂಲಕ ಕುಮಾರಸ್ವಾಮಿ ಮತ್ತೊಮ್ಮೆ ಕನಕ ಮಹಾಲಕ್ಷ್ಮಿ ಪದ ಬಳಸಿದ್ದಾರೆ.
“ಕುಮಾರಸ್ವಾಮಿ ಅವರು ಆದಾಯ ತೆರಿಗೆ ಇಲಾಖೆಯ ಪ್ರತಿನಿಧಿಯೇನೂ ಅಲ್ಲ” ಎಂದಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಹತಾಶೆಯ ಹಳಹಳಿಕೆಯಷ್ಟೇ. ಗುತ್ತಿಗೆದಾರನ ಮನೆಯಲ್ಲಿ ಸಿಕ್ಕಿದ ಇಡುಗಂಟು ಡಿಕೆಶಿ ಅವರದ್ದು ಎಂದು ನಾನು ಹೇಳಿದ್ದೇನೆಯೇ? ನಗದು ಅಭಿವೃದ್ಧಿ ಇಲಾಖೆ ಎಂದರೆ ಅವರದ್ದೇನಾ? ಅವರು ತಿಹಾರ್ ಜೈಲಿನ ವಿಷಯವನ್ನೂ ಪ್ರಸ್ತಾಪ ಮಾಡಿದ್ದಾರೆ, ಸರಿ. ಆದರೆ, ತಿಹಾರಿಗೆ ಹೋಗುವ ಭಯ ಅಥವಾ ಗ್ಯಾರಂಟಿ ಸ್ವತಃ ಅವರಿಗೇ ಇದೆ ಎನ್ನುವುದು ನನ್ನ ಸ್ಪಷ್ಟ ಅನುಮಾನ. ಇಲ್ಲದಿದ್ದರೆ ಅವರು ಇಷ್ಟು ತೀವ್ರವಾಗಿ ನನ್ನ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡುವ ಅಗತ್ಯವಿರಲಿಲ್ಲ ಎನ್ನುವುದು ಕುಮಾರಸ್ವಾಮಿ ಮಾತು.



