ಬಿಜೆಪಿ ವಿರುದ್ಧದ 40% ಲಂಚ ಆರೋಪಕ್ಕೆ ಸಾಕ್ಷ್ಯಾಧಾರಗಳಿಲ್ಲ: ಲೋಕಾಯುಕ್ತ ರಿಪೋರ್ಟ್‌ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿದ್ದ 40% ಲಂಚದ ಆರೋಪ ಪ್ರಕರಣದಲ್ಲಿ ಯಾವುದೇ ಸಾಕ್ಷಿ ಆಧಾರ ಲಭ್ಯವಾಗಿಲ್ಲ ಎಂದು ಲೋಕಾಯುಕ್ತ ಪೊಲೀಸರು ಷರಾ ಬರೆದಿದ್ದಾರೆ. ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರಾಗಿದ್ದ ಅಂಬಿಕಾಪತಿ ಅವರು ಸರ್ಕಾರದ ವಿರುದ್ಧ 40% ಲಂಚದ ಆರೋಪ ಮಾಡಿದ್ದರು. ಯಾವುದೇ ಕಾಮಗಾರಿ ಗುತ್ತಿಗೆಗೆ ಸರ್ಕಾರದವರು 40% ಲಂಚ ಕೇಳುತ್ತಾರೆ ಎಂದು ದೂರಿದ್ದರು. ಖಾಸಗಿ ಟಿವಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಇಂತಹ ಆರೋಪ ಮಾಡಿದ್ದರು. ಆರೋಪ ಮಾಡಿದ್ದ ಅಂಬಿಕಾಪತಿ ಈಗ ಜೀವಂತವಾಗಿಲ್ಲ. ಅಷ್ಟೇ ಅಲ್ಲ, ಈ ಬಗ್ಗೆ ಲೋಕಾಯುಕ್ತ ಪೊಲೀಸರು ವರದಿಯನ್ನೂ ನೀಡಿದ್ದಾರೆ.
ಲೋಕಾಯುಕ್ತ ಪೊಲೀಸರ ವರದಿಯಲ್ಲಿ ಅಂಬಿಕಾಪತಿ ಅವರ ಆರೋಪಕ್ಕೆ ಸಂಬಂಧಪಟ್ಟಂತೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಷರಾ ಬರೆಯಲಾಗಿದೆ. ಅಷ್ಟೇ ಅಲ್ಲ, ಜುಲೈ 24ರಂದೇ ಈ ಕುರಿತು ವರದಿ ನೀಡಲಾಗಿದ್ದು, ವರದಿಯ ಮಾಹಿತಿ ಈಗ ಬಹಿರಂಗವಾಗುತ್ತಿದೆ.
40% ಆರೋಪಕ್ಕೆ ಸಾಕ್ಷಿ ಕೊಡಿ ಎಂದು ಬಿಜೆಪಿ ನಾಯಕರು ಕೇಳುತ್ತಿದ್ದರು. ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿಯವರು ಮೊದಲು ಆರೋಪ ಮಾಡಿದ್ದರು. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಷ್ಟೇ ಅಲ್ಲ, 2022 ಹಾಗೂ ಅದರ ಹಿಂದಿನ 5 ವರ್ಷಗಳ ಅವಧಿಯಲ್ಲಿ ಅಂಬಿಕಾಪತಿ ಅವರಿಗೆ ಯಾವುದೇ ಕಾಂಟ್ರಾಕ್ಟ್ ಸಿಕ್ಕಿರಲಿಲ್ಲ. ಗುತ್ತಿಗೆಯನ್ನೇ ಪಡೆಯದೆ ಲಂಚದ ಆರೋಪ ಮಾಡಿದ್ದ ಅಂಬಿಕಾಪತಿ, ಲೋಕಾಯುಕ್ತ ಪೊಲೀಸರಿಗೆ ಯಾವ ಸಾಕ್ಷಿಯನ್ನೂ ಕೊಟ್ಟಿಲ್ಲ. ಅಲ್ಲದೆ ತನಿಖೆ ನಡೆಯುತ್ತಿರುವಾಗಲೇ ಮೃತಪಟ್ಟಿದ್ದಾರೆ. ಅಲ್ಲದೆ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿದ್ದ 40% ಆರೋಪಕ್ಕೆ ಸುದ್ದಿಗೋಷ್ಠಿ ಮಾಡುತ್ತಿದ್ದ ಕೆಂಪಣ್ಣನವರೂ ಮೃತಪಟ್ಟಿದ್ದಾರೆ.
ಅಂಬಿಕಾಪತಿ ಅವರು ಬಿಬಿಎಂಪಿಯವರು ಮೈದಾನ ಕಾಮಗಾರಿಯೊಂದರಲ್ಲಿ 5 ಕೋಟಿ ಕಮಿಷನ್ ನೀಡಿದ್ದೇನೆ ಎಮದು ಆರೋಪಿಸಿದ್ದರು. ಆದರೆ ಆರೋಪಕ್ಕೆ ಸಂಬಂಧಪಟ್ಟಂತೆ ಯಾವುದೇ ಸಾಕ್ಷಿಗಳೂ ಸಿಕ್ಕಿಲ್ಲ ಎಂದು ಲೋಕಾಯುಕ್ತ ಪೊಲೀಸರು ಜುಲೈ ತಿಂಗಳಲ್ಲಿಯೇ ವರದಿ ಸಲ್ಲಿಸಿದ್ದಾರೆ.
40% ಲಂಚದ ಆರೋಪ ಯಾವ ಹಂತಕ್ಕೆ ಹೋಗಿತ್ತು ಎಂದರೆ ಇದೇ ಆರೋಪದ ಆಧಾರದ ಮೇಲೆ ಪೇಸಿಎಂ ಎಂಬ ಕ್ಯಾಂಪೇನ್ ಶುರು ಮಾಡಲಾಗಿತ್ತು. ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಕಳಂಕ ಮೆತ್ತಿಕೊಂಡಿತ್ತು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮತ್ತು ಉಪಾಧ್ಯಕ್ಷರಾಗಿದ್ದ ಅಂಬಿಕಾಪತಿಯವರೇ ಆರೋಪ ಮಾಡಿದ್ದ ಕಾರಣ ಘಟನೆಯ ತೀವ್ರತೆ ಹೆಚ್ಚಿತ್ತು. ಅದಕ್ಕೆ ತಕ್ಕಂತೆ ಈ ಆರೋಪ ಮಾಡುತ್ತಿರುವಾಗಲೇ ಗುತ್ತಿಗೆದಾರರಾಗಿದ್ದ ಸಂತೋಷ್ ಎಂಬ ಗುತ್ತಿಗೆದಾರ ಎಂಬ ಈಶ್ವರಪ್ಪನವರ ಹೆಸರು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇನ್ನೂ ಕೆಲ ಗುತ್ತಿಗೆದಾರರು ಆತ್ಮಹತ್ಯೆ ಯತ್ನ ಮಾಡಿದ್ದರು. ಹೀಗಾಗಿ ಇಡೀ ಪ್ರಕರಣದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಪರಮಭ್ರಷ್ಟ ಎಂಬ ಹಣೆಪಟ್ಟಿ ಹೊತ್ತಿಕೊಂಡಿತ್ತು. ಕೊನೆಗೆ 2023ರಲ್ಲಿ ನಡೆದ ಚುನಾವಣೆಯಲ್ಲಿ ಅತ್ಯಂತ ಹೀನಾಯವಾಗಿ ಸೋತಿತ್ತು. ಈಗ ಅಂಬಿಕಾಪತಿ ಅವರು ಆರೋಪಿಸಿದ್ದ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕಿದೆ. ಆದರೆ, ಈ ರೀತಿಯ 40% ಆರೋಪದ ಇನ್ನೂ ಕೆಲವು ಪ್ರಕರಣಗಳು ತನಿಖೆಯ ವಿವಿಧ ಹಂತದಲ್ಲಿವೆ.



