ಬಿಜೆಪಿ ನಾಯಕ ಬಿ.ಎಲ್.ಸಂತೋಷ್ (BL Santhosh) ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಆದರೆ ಅದು ಕಾಮಿಡಿಯೋ.. ಸೀರಿಯಸ್ಸೋ.. ಅರ್ಥವಾಗುತ್ತಿಲ್ಲ. ಏಕೆಂದರೆ ಬಿ.ಎಲ್.ಸಂತೋಷ್ (BL Santhosh) ನೇತೃತ್ವದಲ್ಲಿ ನಡೆದ ಬಿಜೆಪಿ ಹೈವೋಲ್ಟೇಜ್ ಮೀಟಿಂಗಿಗೆ ಬಿಜೆಪಿಯ ಹಾಲಿ ಶಾಸಕರೇ ಕೆಲವರು ಬರಲಿಲ್ಲ. ಎಸ್.ಟಿ.ಸೋಮಶೇಖರ್ (ST Somashekhar) ಬಹಿರಂಗವಾಗಿ ಸಿದ್ದರಾಮಯ್ಯ (CM siddaramaiah) ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಪ್ರಚಾರ ಮಾಡುತ್ತಾ, ಸ್ಥಳೀಯ ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರುತ್ತಿದ್ದರೆ, ರೇಣುಕಾಚಾರ್ಯ (Renukacharya) ತಮಗೆ ನೋಟಿಸ್ ಕೊಟ್ಟಿದ್ದಕ್ಕೆ ಬರೋದಿಲ್ಲ. ಉತ್ತರಾನೂ ಕೊಡಲ್ಲ. ಮೊದಲು ನೋಟಿಸ್ ವಾಪಸ್ ತಗೊಳ್ಳಿ ಎನ್ನುತ್ತಿದ್ದಾರೆ. ಅತ್ತ ಬಿಜೆಪಿ ರಾಜ್ಯಾಧ್ಯಕ್ಷರು ಪಕ್ಷಕ್ಕೆ ವಿರುದ್ಧವಾಗಿ ಮಾತನಾಡಿದ ಎಲ್ಲರಿಗೂ ನೋಟಿಸ್ ಕೊಟ್ಟಿದ್ದೇವೆ ಅಂತಾರೆ. ಆದರೆ ಕೊಟ್ಟಿಲ್ಲ. ಒಟ್ಟಿನಲ್ಲಿ ಬಿಜೆಪಿಯೊಳಗೆ ಏಕಾಂಗಿಯಾಗಿ ಒಗ್ಗಟ್ಟು ಪ್ರದರ್ಶನ ಮಾಡುತ್ತಿದ್ದಾರೆ. ಏಕಾಂಗಿಯಾಗಿಯೇ ತಾವೆಷ್ಟು ಪ್ರಬಲ ಬಲಿಷ್ಠ ನಾಯಕ ಎಂದು ಸಾಬೀತು ಮಾಡುತ್ತಿದ್ದಾರೆ. ಈ ಮಧ್ಯೆಯೇ ಬಿಜೆಪಿ ರಾಜ್ಯ ಘಟಕದ ವಕ್ತಾರರಾದ ಎಂ.ಜಿ. ಮಹೇಶ್ ಹೇಳಿರುವ ಮಾತು ಸಂಚಲನ ಮೂಡಿಸಿದೆ.
ಮಹೇಶ್ ಅವರ ಪ್ರಕಾರ ಕಾಂಗ್ರೆಸ್ಸಿನ 40-45 ಶಾಸಕರು ಬಿಜೆಪಿಗೆ ಬರುವುದಕ್ಕೆ ತುದಿಗಾಲ ಮೇಲೆ ನಿಂತಿದ್ದಾರಂತೆ. ಕಾಂಗ್ರೆಸ್ಸಿಗರ ತಂತ್ರಗಾರಿಕೆ ವಿಫಲವಾಗುವುದಂತೆ. ಬಿಜೆಪಿಗೆ ಬರಲು ಸಿದ್ಧರಾಗಿರುವ ಕಾಂಗ್ರೆಸ್ಸಿಗರು ಬಿ.ಎಲ್.ಸಂತೋಷ್ ಅವರ ಜೊತೆ ಸಂಪರ್ಕದಲ್ಲಿದ್ದಾಂತೆ. ಹಾಗಂತ ಸಂತೋಷ್ ಅವರೇ ಹೇಳಿದ್ದಾರಂತೆ. ಎಂದಿನಂತೆ ಬಿ.ಎಲ್. ಸಂತೋಷ್ ಮಾಧ್ಯಮಗಳ ಎದುರು ಮಾತನಾಡಿಲ್ಲ. ಇದು ನಿಜವೋ.. ಸುಳ್ಳೋ ಎಂಬುದನ್ನೂ ಹೇಳಿಲ್ಲ.
ರಾಜ್ಯಾಧ್ಯಕ್ಷ ಮತ್ತು ಪ್ರತಿಪಕ್ಷ ನಾಯಕನ ಆಯ್ಕೆ ಆಗಬೇಕಾದಾಗ ಆಗುತ್ತೆ. ತಡವಾಗಿದ್ದರೂ ಆಗುತ್ತೆ. ಎಲ್ಲರೂ ಈಗ ನಾಯಕರೇ ಎಂದು ಸಮಾಧಾನ ಮಾಡಿದ್ದಾರೆ. ಅಲ್ಲದೆ ಕಾಂಗ್ರೆಸ್ಸಿಂದ ಬಂದವರನ್ನು ಬಾಂಬೆ ಬಾಯ್ಸ್ ಎನ್ನಬೇಡಿ ಎಂದು ಪಕ್ಷದವರಿಗೆ ತಾಕೀತು ಮಾಡಿದ್ದಾರೆ. ಆದರೆ ಈ ಸಭೆಗೆ ವಿ.ಸೋಮಣ್ಣ, ಎಸ್.ಟಿ.ಸೋಮಶೇಖರ್, ಶಂಕರ ಪಾಟೀಲ ಮುನೇನಕೊಪ್ಪ, ಶಿವರಾಮ್ ಹೆಬ್ಬಾರ್ ಹಾಗೂ ರೇಣುಕಾಚಾರ್ಯ ಹೋಗಿಲ್ಲ. ಈ ಪ್ರಮುಖ ನಾಯಕರಿಲ್ಲದೆಯೇ ಬಿಜೆಪಿ ಹೈವೋಲ್ಟೇಜ್ ಸಭೆಯಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಲಾಗಿದೆ.



