2024ರಲ್ಲಿ ಬಿಜೆಪಿ 400+ ಸೀಟು ಗೆಲ್ಲುವ ಉತ್ಸಹಾದಲ್ಲಿ ಮುನ್ನುಗ್ಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರಂತೂ ಪ್ರತಿ ವೇದಿಕೆಯಲ್ಲೂ 400+ ಸೀಟು ಗೆಲ್ಲುವ ಮಾತನಾಡುತ್ತಿದ್ಧಾರೆ. ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಒಕ್ಕೂಟ ಇಂಡಿಯಾದವರ ಪ್ರಕಾರ ಬಿಜೆಪಿ 200 ಸೀಟುಗಳನ್ನೂ ಗೆಲ್ಲುವುದಿಲ್ಲ. ಆದರೆ.. ದೇಶದಲ್ಲಿ ನಡೆದ ಹಲವು ಸಮೀಕ್ಷೆಗಳು ಎನ್ʻಡಿಎಗೆ ಸ್ಪಷ್ಟ ಬಹುಮತ ನೀಡಿವೆ. ಕೆಲವು ಸಮೀಕ್ಷೆಗಳು 400ರ ಹತ್ತಿರ ಸ್ಥಾನ ನೀಡಿದ್ದರೂ.. ಬಹುತೇಕ ಸಮೀಕ್ಷೆಗಳ ಪ್ರಕಾರ ಎನ್ʻಡಿಎ 350ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ. ಈ ನಡುವೆಯೇ ರಾಜಕೀಯ ವಿಶ್ಲೇಷಕ ಸುರ್ಜಿತ್ ಭಲ್ಲಾ, ಭವಿಷ್ಯ ನುಡಿದಿದ್ದಾರೆ.
ಪ್ರಶಾಂತ್ ಕಿಶೋರ್ ನಂತರ ಈ ರೀತಿಯ ಭವಿಷ್ಯ ಹೇಳಿದ ಮತ್ತೊಮ್ಮ ರಾಜಕೀಯ ವಿಶ್ಲೇಷಕ ಸುರ್ಜಿತ್ ಭಲ್ಲಾ. ಸುರ್ಜಿತ್ ಭಲ್ಲಾ ಪ್ರಕಾರ 2019ರ ಲೋಕಸಭಾ ಚುನಾವಣೆಯಲ್ಲಿ ಗಳಿಸಿದ ಸೀಟುಗಳಿಗಿಂತ ಹೆಚ್ಚು ಸೀಟುಗಳನ್ನು ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ. ಅಲ್ಲದೇ ಈ ಬಾರಿಯ ಚುನಾವಣೆಯಲ್ಲಿ 350 ಸೀಟುಗಳನ್ನು ಬಿಜೆಪಿ ತನ್ನ ಸ್ವಂತ ಬಲದಿಂದ ಗೆಲ್ಲಲಿದೆ.
ಹಾಗೆಯೇ ವಿರೋಧ ಪಕ್ಷ 44 ಸೀಟುಗಳನ್ನು ಗೆಲ್ಲಬಹುದು. ಅಥವಾ 2014ರ ಚುನಾವಣೆಯಲ್ಲಿ ಗಳಿಸಿದ್ದಕ್ಕಿಂತ 2 ರಷ್ಟು ಸ್ಥಾನ ಕಡಿಮೆ ಗಳಿಸಬಹುದು ಹೇಳಿರುವ ಸುರ್ಜಿತ್ ಭಲ್ಲಾ ವಿರೋಧ ಪಕ್ಷಗಳಲ್ಲಿ ನಾಯಕತ್ವದ ಸಮಸ್ಯೆ ಇದೆ. ಇದರ ಜೊತೆ 2ನೇಯದಾಗಿ ಆರ್ಥಿಕತೆಯೂ ಪ್ರಮುಖ ಪಾತ್ರವಹಿಸುತ್ತದೆ. ವಿರೋಧ ಪಕ್ಷವೂ ಮಾಸ್ ಲೀಡರ್ ಅನ್ನು ತನ್ನ ನಾಯಕನನ್ನಾಗಿ ಆಯ್ಕೆ ಮಾಡಿದರೆ ಅಥವಾ ಪ್ರಧಾನಿ ಮೋದಿಯ ಅರ್ಧದಷ್ಟಾದರೂ ಸವಾಲು ಒಡ್ಡುವ ನಾಯಕನ್ನು ಆಯ್ಕೆ ಮಾಡಿದರೆ ಆಗ ಪರಸ್ಪರ ಸ್ಪರ್ಧೆಯಾಗಬಹುದು ಎಂದು ವಿಶ್ಲೇಷಣೆ ಮಾಡಿದ್ದಾರೆ.
ಇತ್ತೀಚೆಗೆ ಜನರು ಬುದ್ಧಿವಂತರಾಗಿದ್ದು, ವೋಟು ಹಾಕುವ ವೇಳೆ ತಮ್ಮ ಜೀವನದಲ್ಲಿ ಎಷ್ಟು ಸುಧಾರಣೆಯಾಗಿದೆ ಎಂಬುದರ ಆಧಾರದ ಮೇಲೆ ಭಾರತದ ಜನ ಮತ ಚಲಾಯಿಸುತ್ತಾರೆ. ಜಾತಿ ಲಿಂಗ ನೋಡಿ ಜನ ಮತ ಚಲಾಯಿಸುವುದಿಲ್ಲ ಎಂದಿರುವ ಸುರ್ಜಿತ್ ಭಲ್ಲಾ.. ಈ ಕಾರಣದಿಂದಾಗಿಯೇ ಬಿಜೆಪಿ ಹಾಗೂ ಮಿತ್ರಪಕ್ಷಗಳ ಒಕ್ಕೂಟ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಹೇಳಿದ್ದಾರೆ.
ಬಡವರು ಯಾವಾಗಲೂ ನಮ್ಮೊಂದಿಗಿರುತ್ತಾರೆ. ಶ್ರೀಮಂತರು ಯಾವಾಗಲೂ ನಮ್ಮೊಂದಿಗೆ ಇರುತ್ತಾರೆ. ಇದು ಬಡವರು ಯಾರು ಎಂಬುದನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದಿರುವ ಸುರ್ಜಿತ್ ಪ್ರತಿ ಚುನಾವಣೆಯಲ್ಲೂ ಒಂದು ವಿಚಾರದ ಅಲೆ ಇರುತ್ತದೆ. ಈ ಚುನಾವಣೆಯೂ ಒಂದು ಅಲೆಯಾಗಿರಬಹುದು, ಅಥವಾ ಆಗದೇ ಇರಬಹುದು.. ಆದರೆ.. ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಏರುವುದು ನಿಶ್ಚಿತ ಎಂದು ಅಭಿಪ್ರಾಯ ಪಟ್ಟಿದ್ದಾರೆ ಸುರ್ಜಿತ್.
ಇದೇ ಮಾತನ್ನು ದೇಶದ ಪ್ರಮುಖ ಚುನಾವಣಾ ಮಾಸ್ಟರ್ ಎಂದೇ ಪರಿಗಣಿತರಾಗಿರುವ ಪ್ರಶಾಂತ್ ಕಿಶೋರ್ ಕೂಡಾ ಹೇಳಿದ್ದರು. ಮೋದಿಯವರೇನೂ ಗೆಲ್ಲಲು ಅಸಾಧ್ಯವಾದ ನಾಯಕ ಅಲ್ಲ. ಆದರೆ.. ಗೆಲ್ಲುವುದಕ್ಕೆ ನಿರಂತರ ಪರಿಶ್ರಮ ಅಗತ್ಯ. ಅದು ಎದುರಾಳಿಗಳಲ್ಲಿ ಇಲ್ಲ. ಅಲ್ಲದೆ ಅವರ ಒಕ್ಕೂಟದಲ್ಲಿ ಹೊಂದಾಣಿಕೆಯೂ ಇಲ್ಲ ಎನ್ನುವುದು ಪ್ರಶಾಂತ್ ಕಿಶೋರ್ ವಾದ.



