ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತೊಮ್ಮೆ ಭರ್ಜರಿ ಗೆಲುವು ಸಾಧಿಸಿ, ಹ್ಯಾಟ್ರಿಕ್ ಬಾರಿಸಲಿದೆ. ನೆಹರು ಅವರ ನಂತರ ಸತತವಾಗಿ ಮೂರು ಚುನಾವಣೆ ಗೆದ್ದ ಸಾಧನೆ ಮಾಡಲಿದ್ಧಾರೆ ಮೋದಿ. ಎನ್ʻಡಿಎಗೆ ಕನಿಷ್ಠ ಎಂದರೂ 330 ಸ್ಥಾನ ಬರಲಿವೆ. ಗರಿಷ್ಠ 400+ ಆದರೂ ಆಶ್ಚರ್ಯ ಬೇಡ. ಇಂಥಾದ್ದೊಂದು ಸಮೀಕ್ಷೆ ದೇಶದ ಎಲ್ಲ ಮೀಡಿಯಾ ಚಾನೆಲ್ಲುಗಳಲ್ಲಿ ಪ್ರಸಾರವಾಗುತ್ತಿದೆ. ಆದರೆ.. ಇದೆಲ್ಲ ಮೋದಿ ಮೀಡಿಯಾ ಪೋಲ್. ನಾವು ಹಾಗೂ ನಮ್ಮ ಇಂಡಿಯಾ ಒಕ್ಕೂಟ 295 ಸ್ಥಾನ ಗೆಲ್ಲಲಿದೆ ಎನ್ನುತ್ತಿದ್ಧಾರೆ ಕಾಂಗ್ರೆಸ್ ಲೀಡರ್ಸ್.
ಇದು ಎಕ್ಸಿಟ್ ಪೋಲ್ ಅಲ್ಲ. ಮೋದಿ ಮಾಧ್ಯಮ ಪೋಲ್. ಪ್ರಧಾನಿ ನರೇಂದ್ರ ಮೋದಿ ಅವರ ‘ಫ್ಯಾಂಟಸಿ ಪೋಲ್’ ಎಂದು ಲೇವಡಿ ಮಾಡಿದ್ದಾರೆ ಕಾಂಗ್ರೆಸ್ಸಿನ ಹಿರಿಯ ನಾಯಕ ರಾಹುಲ್ ಗಾಂಧಿ. ಕಳೆದ ವರ್ಷವಷ್ಟೇ ಹತ್ಯೆಯಾದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಹಾಡೊಂದನ್ನು ಉಲ್ಲೇಖಿಸಿ 543 ಲೋಕಸಭಾ ಸ್ಥಾನಗಳ ಪೈಕಿ, ವಿರೋಧ ಪಕ್ಷಗಳ ಮೈತ್ರಿಕೂಟವು 295 ಸೀಟುಗಳನ್ನು ಗೆಲ್ಲಲಿದೆ ಎಂದು ಪ್ರತಿಪಾದಿಸಿದ್ದಾರೆ.
“ನೀವು ಸಿಧು ಮೂಸೆವಾಲಾ ಅವರ 295 ಹಾಡನ್ನು ಕೇಳಿದ್ದೀರಾ? 295 ಸೀಟು” ಎಂದು ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ. ಟೆಲಿವಿಷನ್ ವಾಹಿನಿಗಳ ಮತಗಟ್ಟೆ ಸಮೀಕ್ಷೆ ವಿರುದ್ಧ ಹರಿಹಾಯ್ದಿರುವ ರಾಹುಲ್ ಗಾಂಧಿ, “ಇದು ಚುನಾವಣೋತ್ತರ ಸಮೀಕ್ಷೆ ಅಲ್ಲ. ಇದು ಮೋದಿ ಮಾಧ್ಯಮ ಸಮೀಕ್ಷೆ. ಇದು ಅವರ ಭ್ರಮೆಯ ಸಮೀಕ್ಷೆ” ಎಂದು ಹೇಳಿದ್ದಾರೆ.
ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಕಾಂಗ್ರೆಸ್ ಪರವಾದ ಸಮೀಕ್ಷೆ ನೀಡಿದ್ದವರೂ ಕೂಡಾ, ಎನ್ʻಡಿಎಗೆ ಬಹುಮತ ನೀಡಿದ್ದಾರಲ್ಲ ಎಂಬ ಪ್ರಶ್ನೆಗೆ ಡಿಕೆ ಶಿವಕುಮಾರ್ ಕೊಡುವ ಉತ್ತರ ಬೇರೆ. ಕರ್ನಾಟಕದಲ್ಲಿಯೂ ಅಷ್ಟೆ, ಯಾವ ಸಮೀಕ್ಷೆಗಳೂ ಕಾಂಗ್ರೆಸ್ಸಿಗೆ 136 ಸ್ಥಾನದ ನಿಖರ ಭವಿಷ್ಯ ಹೇಳಿರಲಿಲ್ಲ. ಅಷ್ಟೇ ಅಲ್ಲ, ಕೆಲವು ಸಮೀಕ್ಷೆಗಳು ಕಾಂಗ್ರೆಸ್ ಸೋಲಲಿದೆ ಎಂದು ಕೂಡಾ ಹೇಳಿದ್ದವು. ನಾವು ಸಮೀಕ್ಷೆಗಳನ್ನೆಲ್ಲ ನಂಬುವುದಿಲ್ಲ ಎನ್ನುತ್ತಾರೆ.
ಕಾಂಗ್ರೆಸ್ಸಿಗೆ ಮಿನಿಮಮ್ ಅಂದ್ರೂ ಕರ್ನಾಟಕದಲ್ಲಿ 14+ ಸ್ಥಾನ ಗೆಲ್ಲಬೇಕು. ಕೆಲವು ಸಮೀಕ್ಷೆಗಳಲ್ಲಿ ಮೂರು..ನಾಲ್ಕು ಸ್ಥಾನ ಗೆಲ್ಲುತ್ತೇವೆ ಎನ್ನುತ್ತಿದ್ಧಾರೆ. ಇದನ್ನಂತೂ ನಂಬೋಕೆ ಸಾಧ್ಯವೇ ಇಲ್ಲ ಎನ್ನುವುದು ಕಾರ್ಯಾಧ್ಯಕ್ಷರೂ ಆಗಿರುವ ಎಂಬಿ ಪಾಟೀಲ್ ಮಾತು.
ರಾಹುಲ್‌ಗೂ ಮೊದಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇದೇ ಸಂಖ್ಯೆ ಹೇಳಿದ್ದರು. 7ನೇ ಹಾಗೂ ಅಂತಿಮ ಹಂತದ ಮತದಾನದ ದಿನ ಇಂಡಿಯಾ ಒಕ್ಕೂಟ ನಾಯಕರು ದೆಹಲಿಯಲ್ಲಿ ಸಭೆ ಸೇರಿದ್ದರು. ಈ ವೇಳೆ ಲೋಕಸಭಾ ಚುನಾವಣೆ, ಫಲಿತಾಂಶಗಳ ಕುರಿತು ಚರ್ಚಿಸಿದ್ದರು. ಸಭೆ ಬಳಿಕ ಮತಾನಾಡಿದ ಮಲ್ಲಿಕಾರ್ಜುನ ಖರ್ಗೆ, ಇಂಡಿಯಾ ಒಕ್ಕೂಟ 295 ಸ್ಥಾನ ಗೆಲ್ಲಲಿದೆ ಎಂದಿದ್ದರು.
ಮತದಾನೋತ್ತರ ಸಮೀಕ್ಷೆಗಳಲ್ಲಿ ಪರಿಣತರಾಗಿರುವ ಟುಡೇಸ್ ಚಾಣಕ್ಯ ಮತ್ತು ಆಕ್ಸಿಸ್ ಮೈ ಇಂಡಿಯಾ ಸಂಸ್ಥೆಗಳಂತೂ ಎನ್‌ಡಿಎಗೆ 400 ಸೀಟುಗಳನ್ನು ನೀಡುವ ಮೂಲಕ, ಬಿಜೆಪಿಯ ‘ಚಾರ್ ಸೋ ಪಾರ್’ ಘೋಷಣೆ ನಿಜವಾಗಲಿದೆ ಎಂದು ಹೇಳಿವೆ.



