ಅಬ್ ಕೀ ಬಾರ್ 400 ಪಾರ್ ಎಂಬ ಘೋಷಣೆ ಮಾಡಿರುವ ನರೇಂದ್ರ ಮೋದಿ ಆ ಗುರಿಯನ್ನು ಮುಟ್ಟಬೇಕು ಎಂದರೆ.. ದಕ್ಷಿಣ ಭಾರತದಲ್ಲೂ ಗೆಲ್ಲಬೇಕು. ಕಳೆದ ಬಾರಿ 300+ ಸ್ಥಾನ ಗೆದ್ದರೂ.. ಅಲ್ಲಿ ದಕ್ಷಿಣ ಭಾರತದ 5 ರಾಜ್ಯಗಳ ಕೊಡುಗೆ ಒಟ್ಟಾರೆ 30ರ ಗಡಿ ದಾಟಿರಲಿಲ್ಲ. ಆದರೆ.. ಈ ಬಾರಿ ಹಾಗಾಗುವುದಿಲ್ಲ. ಇಂತಾದ್ದೊಂದು ವಿಶ್ವಾಸ ವ್ಯಕ್ತಪಡಿಸಿರುವುದು ಸ್ವತಃ ನರೇಂದ್ರ ಮೋದಿ.
ಟೈಮ್ಸ್ ಆಫ್ ಇಂಡಿಯಾಕ್ಕೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀಡಿರುವ ವಿಶೇಷ ಸಂದರ್ಶನದಲ್ಲಿ ಮೋದಿ ಈ ಬಾರಿ ದಕ್ಷಿಣ ಭಾರತದಲ್ಲಿ ಜನರು ಉತ್ತಮ ಆಡಳಿತದ ದೃಷ್ಟಿಯಿಂದ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಈ ಬಾರಿ ಸ್ಥಾನ ಹಾಗೂ ಮತ ಗಳಿಕೆ ಎರಡರಲ್ಲೂ ಗಣನೀಯ ಹೆಚ್ಚಳ ಕಾಣಲಿದೆ. ಈ ಮೂಲಕ ಅಚ್ಚರಿಯ ಸಾಧನೆ ಮಾಡಲಿದೆ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ 28ಕ್ಕೆ 28 : ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಳೆದ ವರ್ಷ ತೀವ್ರ ಹೀನಾಯ ಸಾಧನೆ ಮಾಡಿದ್ದರೂ.. (224ರಲ್ಲಿ ಕೇವಲ 66) ಲೋಕಸಭಾ ಚುನಾವಣೆಯಲ್ಲಿ ಮತದಾರ ಬೇರೆಯದೇ ಸಂದೇಶ ನೀಡಲಿದ್ಧಾನೆ ಎನ್ನುವ ವಿಶ್ವಾಸ ಮೋದಿಯವರದ್ದು. ಕರ್ನಾಟಕದ ಜನತೆ ಬಿಜೆಪಿ ಜೊತೆ ವಿಶೇಷ ಸಂಬಂಧ ಹೊಂದಿದ್ದಾರೆ. ಪಕ್ಷದ ಕಾರ್ಯಕ್ರಮಗಳು ಜನರ ಮೆಚ್ಚುಗೆ ಪಡೆದಿವೆ. ಅಲ್ಲದೆ, ಜೆಡಿಎಸ್ ಬೆಂಬಲ ಕೂಡ ಸಿಕ್ಕಿದೆ. ಹೀಗಾಗಿ ಈ ಬಾರಿ ಕರ್ನಾಟಕದಲ್ಲಿ ಎಲ್ಲ 28 ಸೀಟುಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಮೋದಿ.
ಲೋಕಸಭೆಯಲ್ಲೂ ವಿಧಾನಸಭೆಯಂತೆ ಕಡಿಮೆ ಸೀಟು ಸಿಗಲಿವೆ ಎಂಬ ಮಾತುಗಳಿಗೆ ಈ ರೀತಿ ಮಾತುಗಳನ್ನು ಆಡುವವರ ಸಂಖ್ಯೆ ಕಡಿಮೆಯಾಗುತ್ತದೆಯೇ ಹೊರತು ಬಿಜೆಪಿ ಸೀಟುಗಳಲ್ಲ ಎಂದು ಉತ್ತರಿಸಿದ್ದಾರೆ. ಇಲ್ಲಿನ ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವ ಕಾದಾಟದಲ್ಲಿಕಳೆದುಹೋಗಿದ್ದಾರೆ. ಜನರಿಗೆ ನೀಡಿದ ಗ್ಯಾರಂಟಿಗಳನ್ನು ಅರ್ಧಂಬರ್ಧ ಪೂರೈಸುವ ಮೂಲಕ ಜನರನ್ನು ವಂಚಿಸಿದ್ದಾರೆ. ಅದರಿಂದಾಗಿಯೇ ಈ ಬಾರಿ ಕಾಂಗ್ರೆಸ್‌ಗೆ ಜನರು ಮತ ಹಾಕುವುದಿಲ್ಲ ಎನ್ನುವುದು ಮೋದಿಯ ಕಾನ್ಫಿಡೆನ್ಸ್ʻಗೆ ಕಾರಣ.
ಇದೇ ವೇಳೆ ಸಂವಿಧಾನ ಬದಲಿಸುತ್ತೇವೆ ಎಂಬ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಆರೋಪಗಳಿಗೆ ಉತ್ತರ ಕೊಟ್ಟಿರುವ ಮೋದಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರು ಈಗ ಬಂದರೂ ಅವರಿಂದ ಸಂವಿಧಾನ ಬದಲಿಸಲು ಸಾಧ್ಯವಿಲ್ಲಎಂದು ಈಗಾಗಲೇ ನಾನು ಹೇಳಿದ್ದೇನೆ. ಇಂಥ ಆರೋಪ ಮಾಡುವ ಮುನ್ನ ಪ್ರತಿಪಕ್ಷಗಳು ನನ್ನ ಕೆಲಸದ ಟ್ರ್ಯಾಕ್ ರೆಕಾರ್ಡ್‌ಅನ್ನು ಮೊದಲು ವಿಶ್ಲೇಷಿಸಲಿ ಎಂದು ಸವಾಲು ಹಾಕಿದ್ಧಾರೆ.
ಇನ್ನು ಕರ್ನಾಟಕ ಅಷ್ಟೇ ಅಲ್ಲ, ತಮಿಳುನಾಡು, ತೆಲಂಗಾಣ ಹಾಗೂ ಕೇರಳದಲಿ ಬಿಜೆಪಿ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಲಿದೆ. ವೋಟ್ ಶೇರ್ ಹೆಚ್ಚಲಿದೆ ಹಾಗೂ ಸೀಟುಗಳೂ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಾರಿ ದಕ್ಷಿಣ ಭಾರತವನ್ನು ಗಮ್ಯವಾಗಿಟ್ಟುಕೊಂಡಿದ್ದ ಮೋದಿ, ತಮಿಳುನಾಡಿಗೆ ಅತೀ ಹೆಚ್ಚು ಬಾರಿ.. ಅಂದ್ರೆ.. ಸರಿಸುಮಾರು 20 ಬಾರಿ ಭೇಟಿ ನೀಡಿ ಪ್ರಚಾರ ಮಾಡಿದ್ದಾರೆ. ಅಣ್ಣಾಮಲೈ ಪಾದಯಾತ್ರೆಯೂ ದೊಡ್ಡ ಮಟ್ಟದ ಕೊಡುಗೆ ನೀಡುತ್ತಿದೆ. ವಿಶ್ಲೇಷಕರ ಪ್ರಕಾರ ಶೇ.2-3ರ ಆಸುಪಾಸು ಇದ್ದ ವೋಟ್ ಶೇರ್ ಈ ಬಾರಿ ಎರಡಂಕಿ ದಾಟಬಹುದು. ಅಣ್ಣಾಮಲೈ ಪ್ರಕಾರ ಶೇ.20ನ್ನೂ ದಾಟಬಹುದು. ಹಾಗೇನಾದರೂ ಆದರೆ.. ಬಿಜೆಪಿ ಏಳೆಂಟು ಸ್ಥಾನಗಳು ಸಿಗಬಹುದು. ಬೇಸ್ ಇಲ್ಲದ ರಾಜ್ಯದಲ್ಲಿ ಅದು ದೊಡ್ಡ ಸಾಧನೆಯೇ ಹೌದು.



