ನಿಮ್ಮ ಮನೆಯಲ್ಲಿ ಎಷ್ಟು ಟಾಯ್ಲೆಟ್ ಇದೆ.. ಒಂದಾ.. ಎರಡಾ.. ಮೂರಾ.. ನಾಲ್ಕಾ.. ಲೆಕ್ಕ ಕೊಡಿ. ಒಂದೊಂದು ಟಾಯ್ಲೆಟ್ಟಿಗೆ ತಿಂಗಳಿಗೆ 25 ರೂ. ಟ್ಯಾಕ್ಸ್ ಕಟ್ಟಿ. ಇಂತಾದ್ದೊಂದು ಶೌಚಾಲಯ ತೆರಿಗೆ ಜಾರಿಗೆ ಬಂದರೆ ಹೇಗಿರುತ್ತೆ.. ವಿಚಿತ್ರ ಎಂದರೆ ಇಂತಾದ್ದೊಂದು ಟ್ಯಾಕ್ಸ್ ಜಾರಿ ಮಾಡಿರುವ ಖ್ಯಾತಿ ಹಿಮಾಚಲ ಪ್ರದೇಶ ಸರ್ಕಾರಕ್ಕೆ ಸಂದಿದೆ. ಜಾರಿಗೆ ತಂದು ಆಮೇಲೆ ಕಾಮಿಡಿ ಪೀಸ್ ಆಗಿ, ಟೀಕೆಗೆ ಗುರಿಯಾಗಿ ವಾಪಸ್ ಕೂಡಾ ತೆಗೆದುಕೊಂಡಿದೆ.
‘ರಾಜ್ಯದಲ್ಲಿನ ಪ್ರತಿ ಮನೆ ಅಂಗಡಿ/ಕಂಪನಿಗಳು ಪ್ರತಿ ಟಾಯ್ಲೆಟ್ ಸೀಟ್‌ಗೆ 25 ರು. ಮಾಸಿಕ ಶುಲ್ಕ ಕಟ್ಟಬೇಕು. ಹೆಚ್ಚು ಟಾಯ್ಲೆಟ್ ಸೀಟ್ ಇದ್ದರೆ ಪ್ರತಿ ಸೀಟ್‌ಗೆ 25 ರು.ನಂತೆ ಎಲ್ಲ ಸೀಟ್ ಗೂ ಪ್ರತ್ಯೇಕ ಶುಲ್ಕ ತೆರಬೇಕು’ ಎಂದು ಇತ್ತೀಚೆಗೆ ಹಿಮಾಚಲ ಪ್ರದೇಶ ಸರ್ಕಾರ ಆದೇಶ ಹೊರಡಿಸಿತ್ತು.
ಅಂದಹಾಗೆ ಹಿಮಾಚಲ ಪ್ರದೇಶದಲ್ಲಿ ನೀರು ಹಾಗೂ ಒಳಚರಂಡಿ ವ್ಯವಸ್ಥೆಗೆ ಶುಲ್ಕ ಇರಲಿಲ್ಲ. ಆದರೆ ಕಾಂಗ್ರೆಸ್ ನ ಸುಖವಿಂದರ್ ಸಿಂಗ್ ಸುಖು ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿ, ಅಕ್ಟೋಬರ್‌ನಿಂದ ಮಾಸಿಕ “ನೀರು ಹಾಗೂ ಒಳಚರಂಡಿ ಶುಲ್ಕ ವಿಧಿಸಲು ತೀರ್ಮಾನಿಸಿ ಹಾಗೂ ಸೆ.21ರಂದು ಅಧಿಸೂಚನೆ ಹೊರಡಿಸಿತ್ತು. ‘ಸರ್ಕಾರದಿಂದ ನೀರು ಸಂಪರ್ಕ ಹಾಗೂ ಒಳಚರಂಡಿ ಸಂಪರ್ಕ ಪಡೆದಿದ್ದರೆ ಮಾಸಿಕ ನೀರಿನ ಶುಲ್ಕದ ಶೇ.30ರಷ್ಟು ಒಳಚರಂಡಿ ಶುಲ್ಕ ತೆರಬೇಕು ಎಂದು ಸೂಚಿಸಿತ್ತು. ಆದರೆ ಖಾಸಗಿ ನೀರಿನ ವ್ಯವಸ್ಥೆ ಮಾಡಿಕೊಂಡಿರುವವರು, ಕೇವಲ ಒಳಚರಂಡಿ (ಸ್ಯಾನಿಟರಿ ಪೈಪ್ ಲೈನ್) ಸಂಪರ್ಕ ಮಾತ್ರ ಬೇಕು ಎಂದಿದ್ದರೆ ಪ್ರತಿ ಟಾಯ್ಲೆಟ್ ಸೀಟ್‌ಗೆ 25 ರು. ಶುಲ್ಕ ಕಟ್ಟಬೇಕು’ ಎಂದು ಅಧಿಸೂಚನೆಯಲ್ಲಿ ಹೇಳಿತ್ತು.
ಯಾವಾಗ ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದರೋ, ಬಿಜೆಪಿ ನಾಯಕರೆಲ್ಲ ಪ್ರಶ್ನೆ ಮಾಡಿದರೋ.. ಹಿಮಾಚಲ ಪ್ರದೇಶ ಸರ್ಕಾರ ಎಚ್ಚೆತ್ತುಕೊಂಡಿತು. ಆದೇಶವನ್ನು ವಾಪಸ್ ಪಡೆಯಿತು. ಹಿಮಾಚಲ ಜಲಶಕ್ತಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಓಂಕಾರಚಂದ್ ಶರ್ಮಾ, ‘ಅಧಿಸೂಚನೆ ಹೊರಡಿಸಿದ ಬಳಿಕ ಡಿಸಿಎಂ ಹತ್ತಿರ ಕಡತ ತೆಗೆದುಕೊಂಡು ಹೋಗಿದ್ದೆವು. ಆದರೆ ಪ್ರತಿ ಟಾಯ್ಲೆಟ್ ಸೀಟ್‌ಗೆ ಶುಲ್ಕ ಹೇರಿದ್ದು ಸರಿ ಅಲ್ಲ ಎಂದರು. ಹೀಗಾಗಿ ಅಧಿಸೂಚನೆ ರದ್ದು ಮಾಡಿ ಟಾಯ್ಲೆಟ್ ಸೀಟು ಶುಲ್ಕ ರದ್ದು ಮಾಡಿದ್ದೇವೆ’ ಎಂದಿದ್ದಾರೆ. ಮುಖ್ಯಮಂತ್ರಿ ಸುಖ ಕೂಡ ಬಿಜೆಪಿ ಆರೋಪ ನಿರಾಕರಿಸಿ, ‘ರಾಜ್ಯದಲ್ಲಿ ಟಾಯ್ಲೆಟ್ ಶುಲ್ಕ ಇಲ್ಲ. 100 ರು. ನೀರು ಶುಲ್ಕ ಮಾತ್ರ ಪಡೆಯುತ್ತೇವೆ. ಅದೂ ಕಡ್ಡಾಯವಲ್ಲ. ಐಚ್ಛಿಕ’ ಎಂದಿದ್ದಾರೆ.
ಪ್ರಸ್ತುತ ಹಿಮಾಚಲ ಪ್ರದೇಶದಲ್ಲಿ ಗ್ಯಾರಂಟಿ ಜಾರಿಗಳಿಂದಾಗಿ ಸರ್ಕಾರದ ಆರ್ಥಿಕ ಸ್ಥಿತಿ ಅಧೋಗತಿಯಲ್ಲಿದೆ. ದಿವಾಳಿಯ ಅಂಚಿನಲ್ಲಿದೆ. ಹಿಮಾಚಲ ಪ್ರದೇಶ ರಾಜ್ಯದ ಸಾಲ ಈಗಾಗಲೇ 76,651 ಕೋಟಿ ರೂ.ಗೆ ಏರಿಕೆ ಕಂಡಿದ್ದು, ಸಾಲದ ಮೊತ್ತ ಇನ್ನಷ್ಟು ಏರಿಕೆಯಾಗುವ ಭೀತಿ ಇದೆ. ಹೀಗಾಗಿ, ಆರ್ಥಿಕತೆಯನ್ನು ಸರಿದಾರಿಗೆ ತರಲು ಚಿಂತನೆ ನಡೆಸಿರುವ ಸರ್ಕಾರ, ಹೊಸ ರೀತಿಯ ತೆರಿಗೆ ಪದ್ದತಿ ಹೇರಲು ಮುಂದಾಗಿದೆ. ಈ ವೇಳೆ ಟಾಯ್ಲೆಟ್‌ಗಳು ಸರ್ಕಾರದ ಕಣ್ಣಿಗೆ ಬಿದ್ದಿವೆ, ಅಷ್ಟೇ.
ಈ ಹಿಂದೆ ಹಿಮಾಚಲ ಪ್ರದೇಶ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇದ್ದ ವೇಳೆ ಜನರಿಗೆ ಉಚಿತವಾಗಿ ನೀರು ಸರಬರಾಜು ಮಾಡಲಾಗುತ್ತಿತ್ತು. ಇದೀಗ ಸುಖು ಸಾರಥ್ಯದ ಕಾಂಗ್ರೆಸ್ ಸರ್ಕಾರ ನೀರಿನ ಬಿಲ್ ಜೊತೆಯಲ್ಲೇ ಪ್ರತಿ ಸಂಪರ್ಕಕ್ಕೆ 100 ರೂ. ಹೆಚ್ಚುವರಿ ಶುಲ್ಕವನ್ನು ಪ್ರತಿ ತಿಂಗಳೂ ವಿಧಿಸಲಿದ್ದು, ಅಕ್ಟೋಬರ್ ತಿಂಗಳಿನಿಂದಲೇ ಜಾರಿಗೆ ಬರಲಿದೆ.



