ಚಂದ್ರಯಾನ 3. ಕಟ್ಟಕಡೆಯ ಹಂತದಲ್ಲಿದೆ. ಈ ಚಂದ್ರಯಾನದ ಮೆಷಿನರಿಗಳು ವರ್ಕ್ ಆಗುವುದು ಸೂರ್ಯನ ಬೆಳಕಿದ್ದಾಗ. ಸೂರ್ಯಾಸ್ತದ ನಂತರ ಪ್ರಗ್ಯಾನ್ ಮತ್ತು ರೋವರ್ ಎರಡೂ ಕೆಲಸ ನಿಲ್ಲಿಸಿಬಿಡ್ತವೆ. ಅಂದರೆ ಈ ಲೆಕ್ಕದ ಪ್ರಕಾರ ನಮಗಿರುವುದು ಒಂದು ದಿನ ಮಾತ್ರ. ಆದರೆ ಭೂಮಿಗೆ ಒಂದು ದಿನ ಎಂದರೆ ಚಂದ್ರನಿಗೆ 14 ದಿನ. 14 ದಿನಗಳ ಕಾಲ ಈ ಪ್ರಗ್ಯಾನ್ ಮತ್ತು ರೋವರ್ ನೌಕೆಗಳು ಮಾಡುವ ಕೆಲಸ, ಕಳಿಸುವ ಫೋಟೋ, ಫೀಡ್ ಬ್ಯಾಕ್.. ಎಲ್ಲವೂ ಇಡೀ ಜಗತ್ತಿಗೆ ಮುಖ್ಯ. 3.84 ಲಕ್ಷ ಕಿಲೋಮೀಟರು ಹೋಗಿರುವ ಚಂದ್ರಯಾನ 3, ಕೆಲಸ ಮಾಡುವುದು 14 ದಿನಗಳು ಮಾತ್ರ. 615 ಕೋಟಿ ರೂ.ಗಳಲ್ಲಿ ಬಾಲಿವುಡ್ ಸ್ಟಾರ್ ನಟನೊಬ್ಬನ ಚಿತ್ರ ಮಾಡ್ತಾರಂತೆ. ಅಂಥಾದ್ದರಲ್ಲಿ ಇಡೀ ಜಗತ್ತೇ ತಿರುಗಿ ನೋಡುವಂಥಹ ಚಂದ್ರಯಾನ 3 ಸಕ್ಸಸ್ ಗೊಳಿಸಿದ್ದಾರೆ ನಮ್ಮ ಇಸ್ರೋ ವಿಜ್ಞಾನಿಗಳು.
ವಿಕ್ರಂ ಲ್ಯಾಂಡರ್ ನೌಕೆ, ಪ್ರಗ್ಯಾನ್ ಮತ್ತು ರೋವರ್ ಇಟ್ಟುಕೊಂಡು ಹಂತ ಹಂತವಾಗಿ ಚಂದ್ರನ ಮೇಲ್ಮೆ ಮುಟ್ಟುತ್ತಿದೆ. 5 ಗಂಟೆ 20 ನಿಮಿಷಿದಿಂದ ಸ್ಟಾರ್ಟ್. 41 ದಿನದ ಇಸ್ರೋ ವಿಜ್ಞಾನಿಗಳ ತಪಸ್ಸಿಗೆ ಫಲ ಸಿಗುವುದು ಆಗಲೇ.
ಇಳಿಕೆಯೇ ಸವಾಲು :
ಚಂದ್ರನಿಂದ 30 ಕಿ.ಮೀ. ಎತ್ತರದಲ್ಲಿ ಹಾರುತ್ತಿದ್ದಾಗ ವಿಕ್ರಂ ಲ್ಯಾಂಡರ್ ಅಡ್ಡಲಾಗಿ ಇರುತ್ತದೆ . ಆದರೆ, ಕೆಳಕ್ಕಿಳಿಯುವಾಗ ಲ್ಯಾಂಡರ್ ನೇರಗೊಳ್ಳಬೇಕು. ಇದು ಅತ್ಯಂತ ಕ್ಲಿಷ್ಟವಾದ ಪ್ರಕ್ರಿಯೆ. ಲ್ಯಾಂಡರ್ನ 4 ಎಂಜಿನ್ ಬಳಸಿ ವೇಗ ತಗ್ಗಿಸಿ, ಇತರೆ 8 ಎಂಜಿನ್ ಬಳಸಿ ದಿಕ್ಕು ಬದಲಿಸಬೇಕು. ಎಂಜಿನ್, ಇಂಧನ ಬಳಕೆ, ದೂರ ಲೆಕ್ಕಾಚಾರ, ಎಲ್ಲ ಉಪಕರಣಗಳ ಸುಸ್ಥಿತಿ ಪಕ್ಕಾ ಆಗಿರಬೇಕು. 2 ರೀತಿಯ ಬ್ರೇಕಿಂಗ್, ಲ್ಯಾಂಡಿಂಗ್ ಸ್ಥಳ ಪರಿಶೀಲನೆ ಬಳಿಕ ಅಂತಿಮವಾಗಿ ನೆಲಕ್ಕಿಳಿಯಬೇಕು. ಯಾವುದೇ ಹಂತದಲ್ಲಿ ತುಸು ವ್ಯತ್ಯಾಸ ಉಂಟಾದರೂ ಲ್ಯಾಂಡಿಂಗ್ ಪ್ರಕ್ರಿಯೆ ಕೈಕೊಟ್ಟು, ಇಡೀ ಯೋಜನೆಯೇ ಫೇಲ್ ಆಗುವ ಸಾಧ್ಯತೆ ಹೆಚ್ಚು. ಹಾಗಾಗಿಯೇ ಈ ಪ್ರಕ್ರಿಯೆಯನ್ನು ಇಸ್ರೋ ‘ಆತಂಕದ 20 ನಿಮಿಷ’ ಎಂದು ಬಣ್ಣಿಸಿರುವುದು. ಇದನ್ನ ಸಾಫ್ಟ್ ಲ್ಯಾಂಡಿಂಗ್ ಅಂತ ಕರೀತಾರೆ. ಈ ಸಾಫ್ಟ್ ಲ್ಯಾಂಡಿಂಗ್ ಟೆಕ್ನಾಲಜಿ ಬಳಸತ್ತಿರುವ 4ನೇ ದೇಶ ಭಾರತ. ಭಾರತವು ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡ ನಾಲ್ಕನೇ ದೇಶವಾಗಲಿದೆ. ಯುಎಸ್, ಚೀನಾ ಮತ್ತು ಸೋವಿಯತ್ ಒಕ್ಕೂಟ ಮಾತ್ರ ಈ ಸಾಧನೆ ಮಾಡಿದೆ. ಆದರೆ ಈ ಟೆಕ್ನಾಲಜಿಯನ್ನ ಯಾವ ದೇಶವೂ ಭಾರತಕ್ಕೆ ಕೊಟ್ಟಿಲ್ಲ. ಇದು ಭಾರತೀಯರೇ ಅಭಿವೃದ್ಧಿ ಪಡಿಸಿಕೊಂಡಿರುವ ಟೆಕ್ನಾಲಜಿ.
ಹೀಗೆ ಇಳಿಸುತ್ತಿರುವಾಗ, ಚಂದ್ರನ ಮೇಲ್ಮೈ ಕೇವಲ 150 ಮೀಟರ್ ಅಂತರದಲ್ಲಿರುವಾಗ ಕೂಡಾ ಇಸ್ರೋಗೆ ಚಂದ್ರನ ಮೇಲ್ಮೈಗೆ ಇಳಿಸಲು ಸಾಧ್ಯವೇ.. ಇದು ಸೂಕ್ತ ಸಮಯವೇ ಎಂದು ನಿರ್ಧಾರ ಮಾಡಬಹುದು. ಅದಕ್ಕೂ ಮೊದಲು 800 ಮೀಟರ್ ಅಂತರದಲ್ಲಿ.. ಅದಾದ ಮೇಲೆ 250 ಮೀಟರ್ ಅಂತರದಲ್ಲಿಯೂ ಇಂತಹ ಪರೀಕ್ಷೆಗಳಾಗುತ್ತವೆ. ಕಡೆಯದಾಗಿ 150 ಮೀಟರ್ ಅಂತರದವರೆಗೂ ಹೋಗಿ, ಅದು ಕಳಿಸುವ ಫೋಟೋ ಅಧ್ಯಯನ ಮಾಡಿದ ನಂತರವೇ ಇಸ್ರೋ ವಿಜ್ಞಾನಿಗಳು ಕಟ್ಟಕಡೆಯ ಲ್ಯಾಂಡಿಂಗ್ ಸಿಗ್ನಲ್ ಕೊಡುತ್ತಾರೆ. ಅಕಸ್ಮಾತ್ ಅದು ಸಾಧ್ಯವಾಗದೇ ಇದ್ದರೆ, ಅನಿರೀಕ್ಷಿತ ಕಾರಣದಿಂದ ಬುಧವಾರ ಸಂಜೆ ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆ ನಡೆಸಲು ಸಾಧ್ಯವಾಗದಿದ್ದರೆ, ಆ.27ರ ಭಾನುವಾರದಂದು ಮರು ಯತ್ನ ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ.
ಕೋಟ್ಯಂತರ ಭಾರತೀಯ ಹಾರೈಕೆಗಳೊಂದಿಗೆ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯಲಿ ಎಂದು ಪ್ರಾರ್ಥಿಸಿ ವಿವಿಧ ದೇಗುಲಗಳಲ್ಲಿ ಮಂಗಳವಾರ ವಿಶೇಷ ಪೂಜೆ, ಹೋಮ-ಹವನ ನಡೆದಿವೆ. 15ನೇ ಬ್ರಿಕ್ಸ್ ಶೃಂಗಕ್ಕಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್ನ ಐತಿಹಾಸಿಕ ಕ್ಷಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಲಿದ್ದಾರೆ.
ಎಲ್ಲವೂ ಅಂದುಕೊಂಡಂತೆಯೇ ನಡೆದರೆ, ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ವಿಶ್ವದ ಮೊದಲ ದೇಶ ಎಂಬ ದಾಖಲೆಗೆ ಭಾರತ ಪಾತ್ರವಾಗಲಿದೆ. ಜತೆಗೆ ಚಂದ್ರನ ಮೇಲೆ ಯಶಸ್ವಿಯಾಗಿ ನೌಕೆ ಇಳಿಸಿ ಅಧ್ಯಯನ ಕೈಗೊಂಡ ವಿಶ್ವದ 4ನೇ ರಾಷ್ಟ್ರ ಎಂಬ ಹೊಸ ಇತಿಹಾಸವನ್ನು ಭಾರತ ಹಾಗೂ ಇಸ್ರೋ ಬರೆಯಲಿವೆ.



