ದೇಶದ ಬಹುತೇಕ ರಾಜ್ಯಗಳಲ್ಲಿ ಮುಸ್ಲಿಮರು ಬಿಜೆಪಿಗೆ ವೋಟ್ ಹಾಕುವುದಿಲ್ಲ ಎನ್ನುವುದು ಗುಟ್ಟೇನಲ್ಲ. ಮುಸ್ಲಿಮರೇ ಹೆಚ್ಚಿರುವ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದು ಅಸಾಧ್ಯ ಎಂದೇ ಹೇಳಬೇಕು. ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧ ಪ್ರಬಲ ಅಭ್ಯರ್ಥಿ ಇಲ್ಲದಿದ್ದರೆ, ಗೆಲ್ಲುವಂತಹ ಅಭ್ಯರ್ಥಿಯನ್ನು ಹುಡುಕುವ ಮುಸ್ಲಿಮರು, ಆ ಪಕ್ಷದ ಅಭ್ಯರ್ಥಿಗೇ ವೋಟ್ ಹಾಕ್ತಾರೆ. ದೇಶದೆಲ್ಲಡೆ ಮುಸ್ಲಿಮರ ಮೊದಲ ಆಯ್ಕೆ ಕಾಂಗ್ರೆಸ್ ಆದರೆ.. ಇನ್ನುಳಿದ ರಾಜ್ಯಗಳಲ್ಲಿ ಸಮಾಜವಾದಿ, ಎನ್‌ಸಿಪಿ, ತೃಣಮೂಲ ಕಾಂಗ್ರೆಸ್, ಡಿಎಂಕೆ, ಬಿಆರ್‌ಎಸ್, ವೈಎಸ್ಸಾರ್ ಕಾಂಗ್ರೆಸ್, ಸಿಪಿಎಂ, ಸಿಪಿಐ.. ಸೇರಿದಂತೆ ರಾಜ್ಯಕ್ಕೆ ತಕ್ಕಂತೆ, ಕ್ಷೇತ್ರಕ್ಕೆ ತಕ್ಕಂತೆ ಬದಲಾಗುತ್ತಲೇ ಹೋಗುತ್ತದೆ. ಇನ್ನು ಮಹಾರಾಷ್ಟ್ರದಲ್ಲಿಯೂ ಅಷ್ಟೇ, ವಿಶೇಷ ಅಂದ್ರೆ ಕಳೆದೊಂದೈದು ವರ್ಷಗಳಿಂದ ಬಿಜೆಪಿಗಿಂತಲೂ ಹೆಚ್ಚು ಮುಸ್ಲಿಂ ದ್ವೇಷಿಯಾಗಿದ್ದ ಶಿವಸೇನೆ (ಉದ್ಧವ್ ಠಾಕ್ರೆ ಬಣ) ಪಕ್ಷಕ್ಕೂ ಮುಸ್ಲಿಮರು ಒಲವು ತೋರಿಸುತ್ತಿದ್ದಾರೆ.
ಮಹಾರಾಷ್ಟ್ರದಲ್ಲೀಗ ಚುನಾವಣೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಫಲಿತಾಂಶವೂ ಹೊರಬೀಳಲಿದೆ. 23ನೇ ತಾರೀಕು ಫಲಿತಾಂಶ ನಿರ್ಧಾರವಾಗಲಿದೆ. ಈಗ ಪ್ರಚಾರ ನಡೆಸುತ್ತಿರುವ ಮಹಾ ಅಘಾಡಿ (ಕಾಂಗ್ರೆಸ್, ಎನ್‌ಸಿಪಿ (ಶರದ್ ಪವಾರ್ ಬಣ) ಹಾಗೂ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ) ನಾಯಕರಿಗೆ ಅಖಿಲ ಭಾರತ ಉಲಮಾ ಬೋರ್ಡ್ ಒಂದು ಮನವಿ ಪತ್ರ ಸಲ್ಲಿಸಿದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಎನ್‌ಸಿಪಿ, ಶಿವಸೇನಾ ಪಕ್ಷಗಳ ಮಹಾ ವಿಕಾಶ್ ಆಘಾಡಿ (ಎಂವಿಎ) ಸರ್ಕಾರಕ್ಕೆ ಬೆಂಬಲ ನೀಡುತ್ತೇವೆ. ಆದರೆ ನಮ್ಮ ಷರತ್ತುಗಳನ್ನು ಒಪ್ಪಿದರೆ ಮಾತ್ರ ಎಂದು ೧೭ ಬೇಡಿಕೆಗಳ ಪಟ್ಟಿ ಇರಿಸಿದೆ.
ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಎನ್‌ಸಿಪಿ ಮುಖ್ಯಸ್ತ ಶರದ್ ಪವಾರ್ ಮತ್ತು ಕಾಂಗ್ರೆಸ್ ಮುಖಂಡ ನಾನಾ ಪಟೋಲೆ ಅವರಿಗೆ ಉಲಮಾ ಬೋರ್ಡ್ ಪತ್ರ ಬರೆದು, ತನ್ನ ನೆರವನ್ನು ಘೋಷಿಸಿದೆಯಾದರೂ, ಅದು ಷರತ್ತುಬದ್ಧ ಬೆಂಬಲ ಎಂದು ಸ್ಪಷ್ಟಪಡಿಸಿದೆ. ಆರೆಸ್ಸೆಸ್ ನಿಷೇಧಿಸಬೇಕು, ವಕ್ಫ್ ಮಸೂದೆಯನ್ನು ವಿರೋಧಿಸಬೇಕು. ಮಹಾರಾಷ್ಟ್ರದ ಮುಸ್ಲಿಮರಿಗೆ ಮೀಸಲಾತಿ ನೀಡಬೇಕು. ಅತಿಕ್ರಮಗೊಂಡ ವಕ್ಫ್ ಆಸ್ತಿಗಳನ್ನು ಮರಳು ಕ್ರಮ ತೆಗೆದುಕೊಳ್ಳಬೇಕು ಎಂಬಿತ್ಯಾದಿ 17 ಬೇಡಿಕೆಗಳನ್ನು ಉಲೇಮಾ ಮಂಡಳಿ ಮುಂದಿಟ್ಟಿದೆ. ಆ 17 ಬೇಡಿಕೆಗಳೇನೆಂದರೆ..
- ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಬೇಕು. ಯಾವುದೇ ಕಾರಣಕ್ಕೂ ವಕ್ಫ್ ತಿದ್ದುಪಡಿಯಾಗಲು ಬಿಡಬಾರದು.
- ಮಹಾರಾಷ್ಟ್ರದಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮುಸ್ಲಿಮರಿಗೆ ಶೇ. 10 ಮೀಸಲಾತಿ ನೀಡಬೇಕು.
- ಮಹಾರಾಷ್ಟ್ರದ 48 ಜಿಲ್ಲೆಗಳಲ್ಲಿ ಅತಿಕ್ರಮಗೊಂಡಿರುವ ವಕ್ಫ್ ಆಸ್ತಿಗಳನ್ನು ಮರಳಿ ಕೊಡಿಸಬೇಕು. ವಕ್ಫ್ ಆಸ್ತಿಗಳನ್ನು ರಕ್ಷಿಸಬೇಕು. ಅದಕ್ಕಾಗಿ ಕಾನೂನು ತರಬೇಕು.
- ಮಹಾರಾಷ್ಟ್ರ ವಕ್ಫ್ ಬೋರ್ಡ್ಗೆ 1,000 ಕೋಟಿ ರೂ ಹಣ ಒದಗಿಸಬೇಕು.
- ಮಹಾರಾಷ್ಟ್ರ ರಾಜ್ಯದಲ್ಲಿ ಪೊಲೀಸ್ ನೇಮಕಾತಿಯಲ್ಲಿ ಮುಸ್ಲಿಮರಿಗೆ ವಿಶೇಷ ಆದ್ಯತೆ ಕೊಡಬೇಕು.
- ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನಿಷೇಧಿಸಬೇಕು. ಆರ್‌ಎಸ್‌ಎಸ್ ಸಂಘಟನೆಗೆ ರಾಜ್ಯದಲ್ಲಿ ಬೆಳೆಯಲು ಅವಕಾಶ ಕೊಡಬಾರದು.
- ಬಿಜೆಪಿ ನಾಯಕ ನಿತೇಶ್ ರಾಣೆ ಮತ್ತು ರಾಮಗಿರಿ ಮಹಾರಾಜ್ ಅವರನ್ನು ಕೂಡಲೇ ಬಂಧಿಸಬೇಕು.
- ಪ್ರಚೋದನಕಾರಿ ಹೇಳಿಕೆ ನೀಡಿ ಬಂಧಿತರಾಗಿರುವ ಮೌಲಾನ ಸಲ್ಮಾನ್ ಅಝೇರಿ ಅವರನ್ನು ಬಿಡುಗಡೆ ಮಾಡಬೇಕು.
- 2012ರಿಂದ 2024ರವರೆಗೆ ಗಲಭೆ ಪ್ರಕರಣಗಳಲ್ಲಿ ಬಂಧಿತರಾಗಿರುವ ಅಮಾಯಕ ಮುಸ್ಲಿಮರನ್ನು ಬಿಡುಗಡೆ ಮಾಡಬೇಕು.
- ಮಹಾರಾಷ್ಟ್ರ ಮಸೀದಿಗಳ ಇಮಾಮರು ಮತ್ತು ಮೌಲಾನಗಳಿಗೆ ಮಾಸಿಕ 15,000 ರೂ ಸಂಭಾವನೆ ನೀಡಬೇಕು.
- ಅಧಿಕಾರಕ್ಕೆ ಬಂದ ಬಳಿಕ ಅಖಿಲ ಭಾರತ ಉಲಮಾ ಮಂಡಳಿಯ ಮುಫ್ತಿ ಮೌಲಾನ, ಅಲೀಮ್ ಹಫೀಜ್ ಮಸೀದಿಯ ಇಮಾಮರನ್ನು ಸರ್ಕಾರದ ಸಮಿತಿಯಲ್ಲಿ ಸೇರಿಸಿಕೊಳ್ಳಬೇಕು.
- ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮ್ ಸಮುದಾಯದ 50 ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು.
- ಮಹಾರಾಷ್ಟ್ರ ರಾಜ್ಯ ವಕ್ಫ್ ಬೋರ್ಡ್ನಲ್ಲಿ 500 ಉದ್ಯೋಗಿಗಳ ನೇಮಕಾತಿ ಆಗಬೇಕು.
- ಪ್ರವಾದಿ ಮೊಹಮ್ಮದ್ ಅವರನ್ನು ಅವಹೇಳನ ಮಾಡುವ ಜನರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು.
- ಮಹಾರಾಷ್ಟ್ರದ 48 ಜಿಲ್ಲೆಗಳಲ್ಲಿ ಎಂವಿಎ ಪರವಾಗಿ ಪ್ರಚಾರ ಮಾಡಲು ಉಲಮಾ ಮಂಡಳಿಗೆ ಅಗತ್ಯವಾಗಿರುವ ಸಾಮಗ್ರಿಗಳನ್ನು ಒದಗಿಸಬೇಕು.
ಈ 17 ಬೇಡಿಕೆಗಳನ್ನು ಮುಂದಿಟ್ಟಿರುವ ಉಲೇಮಾ, ಇವುಗಳನ್ನು ಮಾಡುತ್ತೇವೆ ಎಂದು ಭರವಸೆ ಕೊಟ್ಟರಷ್ಟೇ ನಮ್ಮ ಬೆಂಬಲ ನಿಮಗೆ ಎಂದು ಹೇಳಿದೆ. ಮಹಾರಾಷ್ಟ್ರದಲ್ಲಿ ಮುಸ್ಲಿಮ್ ಜನಸಂಖ್ಯೆ 1.3 ಕೋಟಿಯಷ್ಟಿದೆ. ಒಟ್ಟು ಮತದಾರರಲ್ಲಿ ಅಂದರೆ 11.24 ಕೋಟಿ ಜನಸಂಖ್ಯೆಯಲ್ಲಿ ಮುಸ್ಲಿಮರ ಪ್ರಮಾಣ ಶೇ. 11.56ರಷ್ಟಿದೆ. ಕುತೂಹಲ ಎಂದರೆ ಅಲ್ಲಿನ 288 ವಿಧಾನಸಭಾ ಕ್ಷೇತ್ರಗಳ ಪೈಕಿ 38ರಲ್ಲಿ ಮುಸ್ಲಿಮ್ ಮತದಾರರ ಸಂಖ್ಯೆ ಶೇ. 20ರಷ್ಟಿದೆ. 9 ಕ್ಷೇತ್ರದಲ್ಲಿ ಇವರ ಬಾಹುಳ್ಯ ಶೇ. 40ಕ್ಕಿಂತಲೂ ಹೆಚ್ಚಿದೆ. ಮುಂಬೈನ 10 ಕ್ಷೇತ್ರಗಳಲ್ಲಿ ಶೇ. 25ಕ್ಕೂ ಹೆಚ್ಚು ಮುಸ್ಲಿಮರಿದ್ದಾರೆ. ಅಂದರೆ ಮಹಾರಾಷ್ಟ್ರದ ಒಟ್ಟಾರೆ ೨೮೮ರಲ್ಲಿ ೫೫+ ಕ್ಷೇತ್ರಗಳಲ್ಲಿ ಮುಸ್ಲಿಂ ಮತದಾರರೇ ನಿರ್ಣಾಯಕರು.



