ಮತ್ತೊಂದು ರೌಡಿಸಂ ಕಥೆಗೆ ಶಿವಣ್ಣ ರೆಡಿಯಾಗಿದ್ದಾರೆ ಶಿವಣ್ಣ. 131 ನೇ ಸಿನಿಮಾ ಸೆಟ್ಟೇರಿದೆ. ಶಿವಣ್ಣ ಕೈಗೆ ಮೊದಲು ಮಚ್ಚು ಕೊಟ್ಟ ಖ್ಯಾತಿ ಉಪೇಂದ್ರ ಅವರದ್ದು. ಅದಾದ ಮೇಲೆ ಶಿವಣ್ಣ ಮಚ್ಚು ಹಿಡಿದ ಯಾವ ಚಿತ್ರಗಳೂ ಸೋತಿಲ್ಲ ಅನ್ನೋದನ್ನು ಕ್ರೆಡಿಟ್ ಆಗಿಯಂತೂ ತಗೊಳ್ಳೋದಿಲ್ಲವಾದರೂ.. ಅದು ಸತ್ಯವೂ ಹೌದು.
ಓಂ, ಜೋಗಿ ಚಿತ್ರಗಳಂತೂ ಬ್ಲಾಕ್ ಬಸ್ಟರ್ ಆದವು. ಇನ್ನು ಮಫ್ತಿ, ಕಡ್ಡಿಪುಡಿ, ಡಾನ್, ಸಂತ.. ಹೀಗೆ ರೌಡಿಯ ಕ್ಯಾರೆಕ್ಟರ್ ಮಾಡಿದ್ದ ಚಿತ್ರಗಳು ಹಿಟ್ ಆಗಿವೆ. ಟಗರು ಚಿತ್ರದಲ್ಲಿ ಶಿವಣ್ಣ ಅವರದ್ದು ಪೊಲೀಸ್ ಕ್ಯಾರೆಕ್ಟರ್ ಆದರೂ.. ಇಡೀ ಸಿನಿಮಾದಲ್ಲಿ ಇರೋದು ರೌಡಿಸಂ ಕಥೆ. ವೇದ ಚಿತ್ರದಲ್ಲಿ ರೌಡಿ ಅಲ್ಲದೇ ಇದ್ದರೂ.. ಮಚ್ಚು ಹಿಡಿದಿದ್ದರು. ಸಿನಿಮಾ ಸೂಪರ್ ಹಿಟ್. ಇದೀಗ ಶಿವಣ್ಣ ಮತ್ತೊಂದು ರೌಡಿಸಂ ಕಥೆಗೆ ರೆಡಿಯಾಗಿದ್ದಾರೆ. ಇದು ಅವರ 131 ನೇ ಸಿನಿಮಾ ಅನ್ನೋದು ವಿಶೇಷ.
ತಮಿಳಿನ ನಿರ್ದೇಶಕ ಕಾರ್ತಿಕ್ ಅದ್ವೈತ್ ಆ್ಯಕ್ಷನ್ ಕಟ್ ಹೇಳ್ತಿರೋ ಸಿನಿಮಾ ವರಮಹಾಲಕ್ಷ್ಮಿ ಹಬ್ಬದ ದಿನ ಸೆಟ್ಟೇರಿದೆ. ಕಂಠೀರವ ಸ್ಟುಡಿಯೋನಲ್ಲಿ ಸಿನಿಮಾದ ಮುಹೂರ್ತ ನೆರವೇರುವ ಮುನ್ನ ಶಿವರಾಜ್ ಕುಮಾರ್ ಅವರು ಡಾ ರಾಜ್ಕುಮಾರ್, ಪಾರ್ವತಮ್ಮ ಹಾಗೂ ಸಹೋದರ ಪುನೀತ್ ರಾಜ್ಕುಮಾರ್ ಅವರುಗಳ ಸಮಾಧಿಗೆ ನಮಿಸಿ, ಸಿನಿಮಾ ಶುರು ಮಾಡಿದ್ದಾರೆ ಶಿವಣ್ಣ.
ಇದೊಂದು ಪಕ್ಕಾ ರೌಡಿಸಂ ಕಥೆಯಾಗಿದ್ದು, ಈ ಚಿತ್ರವನ್ನು ಎಸ್ ಎನ್ ರೆಡ್ಡಿ, ಮತ್ತು ಸುಧೀರ್ ಪಿ ಅವರು ನಿರ್ಮಿಸುತ್ತಿದ್ದಾರೆ. ಶಿವಣ್ಣ ಯಾವತ್ತೂ ಬ್ಯುಸಿ. 60+ ಆಗಿದ್ದರೂ.. ವಿಶ್ರಾಂತಿ ಇಲ್ಲದೆ ಸತತವಾಗಿ ಸಿನಿಮಾ ಮಾಡುತ್ತಲೇ ಇರುವ ಶಿವಣ್ಣ ಸದ್ಯಕ್ಕೆ ತಮ್ಮದೇ ನಿರ್ಮಾಣದ ಭೈರತಿ ರಣಗಲ್ ರಿಲೀಸ್ʻಗೆ ರೆಡಿಯಾಗಿದ್ದಾರೆ.
ಉಪೇಂದ್ರ, ರಾಜ್ ಬಿ ಶೆಟ್ಟಿ ಜೊತೆ ನಟಿಸಿರುವ, ಅರ್ಜುನ್ ಜನ್ಯ ನಿರ್ದೇಶನದ ೪೫ ಸಿನಿಮಾ ಅಂತಿಮ ಹಂತದಲ್ಲಿದೆ. ಭೈರವನ ಕೊನೆಯ ಪಾಠ ಇತ್ತೀಚೆಗೆ ತಾನೇ ಸೆಟ್ಟೇರಿದೆ. ಟೋಟಲ್ಲಾಗಿ ಶಿವಣ್ಣ ಬೆನ್ನು ಬೆನ್ನಿಗೆ ಸಿನಿಮಾ ಮಾಡ್ತಾನೇ ಇದ್ದಾರೆ.
ಒಟ್ಟಿನಲ್ಲಿ ಶಿವಣ್ಣ ಸುಮ್ಮನೆ ಕುಳಿತಿಲ್ಲ. ಹೊಸ ಹೊಸ ಹೀರೋಗಳೆಲ್ಲ ಒಂದು ಸಿನಿಮಾ ಮಾಡಿ, ಒಂದೂವರೆ..ಎರಡು ವರ್ಷ ರೆಸ್ಟ್ ತೆಗೆದುಕೊಳ್ಳೋವಾಗ… ಸೂಪರ್ ಸ್ಟಾರ್ ಎನ್ನಿಸಿಕೊಂಡವರೆಲ್ಲ.. ಮೂರ್ನಾಲ್ಕು ವರ್ಷಕ್ಕೊಂದು ಸಿನಿಮಾ ಮಾಡುತ್ತಿರುವಾಗ.. ಶಿವಣ್ಣ ವರ್ಷಕ್ಕೆ ಕನಿಷ್ಠ ಎರಡು ಸಿನಿಮಾಗಳನ್ನಾದರೂ ರಿಲೀಸ್ ಮಾಡುತ್ತಲೇ ಬಂದಿದ್ದಾರೆ. ಈ ವರ್ಷ ಈಗಾಗಲೇ ಕರಟಕ ದಮನಕ ರಿಲೀಸ್ ಆಗಿತ್ತು. ಆವರೇಜ್ ಹಿಟ್ ಎನಿಸಿಕೊಂಡಿತ್ತು. ಈಗ ಸೆಪ್ಟೆಂಬರ್ 26ಕ್ಕೆ ಭೈರತಿ ರಣಗಲ್ ಬರುತ್ತಿದೆ. ಇದು ಮಫ್ತಿ ಚಿತ್ರದ ಪ್ರೀಕ್ವೆಲ್ ಅನ್ನೋ ಕಾರಣಕ್ಕೆ ಸಂಚಲನ ಸೃಷ್ಟಿಸಿದೆ. ಕೆಲವೇ ಕೆಲವು ವರ್ಷಗಳ ಹಿಂದೆ ರಿಲೀಸ್ ಆಗಿದ್ದ ಮಫ್ತಿ ಚಿತ್ರ ಹೊಸ ಟ್ರೆಂಡ್ ಹುಟ್ಟುಹಾಕಿತ್ತು. ಕೆಜಿಎಫ್ ಮಾದರಿಯ ಶೈಲಿಯ ಚಿತ್ರಗಳಿಗೆ ಒಂದು ರೀತಿಯಲ್ಲಿ ಮುನ್ನುಡಿ ಬರೆದ ಉಗ್ರಂ ಮತ್ತು ಮಫ್ತಿ ಪ್ರಮುಖ ಚಿತ್ರಗಳು.



