ಹನಿ ಟ್ರ್ಯಾಪ್ ಕೇಳಿರುತ್ತೀರಿ. ಮನಿ ಟ್ರ್ಯಾಪ್ ಕೇಳಿರುತ್ತೀರಿ. ಏನೇನೋ ಆಸೆ ತೋರಿಸಿ ಮೋಸ ಮಾಡುವವರ ದೊಡ್ಡ ದಂಡೇ ಜಗತ್ತಿನಲ್ಲಿದೆ. ಆದರೆ ಸುಖ ಮತ್ತು ಹಣ ಎರಡೂ ಆಸೆ ತೋರಿಸಿ, ಮಕ್ಮಲ್ ಟೋಪಿ ಹಾಕುವ ಗ್ಯಾಂಗ್ʻವೊಂದು ಇತ್ತೀಚೆಗೆ ಸಿಕ್ಕಿಬಿದ್ದಿದೆ. ಇಷ್ಟಕ್ಕೂ ಇವರು ಮಾಡುತ್ತಿದ್ದ ಮೋಸ, ರೊಮ್ಯಾಂಟಿಕ್ ಚೀಟಿಂಗ್ ಕೇಳಿದರೆ.. ದಿಗಿಲು ಬೀಳುವುದು ಖಚಿತ.
ಆಲ್ ಇಂಡಿಯಾ ಪ್ರೆಗ್ನೆಂಟ್ ಜಾಬ್ ಏಜೆನ್ಸಿ : ಬಿಹಾರದ ನವಾಡ ಜಿಲ್ಲೆಯಲ್ಲಿ ಇಂತಾದ್ದೊಂದು ಏಜೆನ್ಸಿಯನ್ನೇ ಸ್ಥಾಪಿಸಿದ್ದರು ಖದೀಮರು. ಆನ್ʻಲೈನ್ʻನಲ್ಲಿ ಫೇಸ್ಬುಕ್, ಟ್ವಿಟ್ಟರ್, ಇನ್ಸ್‌ಸ್ಟಾದಲ್ಲಿ ತಮ್ಮ ಏಜೆನ್ಸಿಯ ಲಿಂಕ್ ಹಾಕುತ್ತಿದ್ದರು. ಅಹಾ.. ಇಂದೆನ್ನ ಅದೃಷ್ಟದ ಬಾಗಿಲು ತೆರೆಯಿತು ಎಂದುಕೊಂಡು ಲಿಂಕ್ ಓಪನ್ ಮಾಡಿದವರಿಗೆ ನಾವು ತೋರಿಸುವ ಮಹಿಳೆಯನ್ನು ಗರ್ಭವತಿ ಮಾಡಿದರೆ 13 ಲಕ್ಷ ರೂ. ಬಹುಮಾನ ನೀಡುತ್ತೇವೆ. ಒಂದು ವೇಳೆ ಆಕೆ ಗರ್ಭಿಣಿ ಆಗದಿದ್ದರೂ ಕನಿಷ್ಠ 5 ಲಕ್ಷ ರೂ. ಗಳನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತೇವೆ ಎಂದು ಆಫರ್ ಕೊಡ್ತಿತ್ತು ಪ್ರೆಗ್ನೆನ್ಸಿ ಗ್ಯಾಂಗ್. ಜೊತೆಗೆ ನೀವು ಆ ಮಹಿಳೆಯ ಬಳಿ ಹೋಗಿ ಬರುವ ಖರ್ಚುವೆಚ್ಚವನ್ನೂ ಕೊಡಲಾಗುವುದು ಎಂದು ಆಸೆ ತೋರಿಸುತ್ತಿತ್ತು.
ಆದರೆ ಕಂಡಿಷನ್ ಏನೆಂದರೆ ನೋಂದಣಿ ಶುಲ್ಕವಾಗಿ 799 ರೂ.ಗಳನ್ನು ಪಡೆದುಕೊಳ್ಳಲಾಗುತ್ತಿತ್ತು. ಅನಂತರ ಮಹಿಳೆಯರ ಫೋಟೋಗಳನ್ನು ಕಳಿಸಲಾಗುತ್ತಿತ್ತು. ಆಯ್ಕೆ ಹುಡುಗರದ್ದೇ ಸ್ವಾತಂತ್ರ್ಯ. ಹುಡುಗಿ ಆಯ್ಕೆಯಾದ ನಂತರ ಆ ಹುಡುಗರಿಗೆ ಸೆಕ್ಯುರಿಟಿ ಮನಿ ಎಂಬಂತೆ ಒಬ್ಬೊಬ್ಬರಿಂದಲೂ 5ರಿಂದ 20 ಸಾವಿರ ರೂ.ವರೆಗೆ ಫೀಸ್ ಪಡೆಯಲಾಗುತ್ತಿತ್ತು. ಹುಡುಗಿ ಮತ್ತು ದುಡ್ಡು ಎರಡೂ ಲಕ್ಷ ಲಕ್ಷ ಸಿಗುವಾಗ.. ಹೋಗೋದು ಜಸ್ಟ್ 20 ಸಾವ್ರ ತಾನೇ ಅಂದ್ಕೊಂಡು ದುಡ್ಡು ಕಟ್ತಾ ಇದ್ದ ಹುಡುಗರಿಗೆ ಮೋಸ ಹೋಗಿದ್ದೇವೆ ಎಂದು ಗೊತ್ತಾಗುತ್ತಿದ್ದುದೇ ಆಲ್ ಇಂಡಿಯಾ ಪ್ರೆಗ್ನೆಂಟ್ ಜಾಬ್ ಏಜೆನ್ಸಿಯವರು ನಾಪತ್ತೆಯಾದ ನಂತರ.
ಬಿಹಾರದ ಪೊಲೀಸರು ಈ ಪ್ರಕರಣವನ್ನು ಭೇದಿಸಿದ್ದು 8 ಜನರನ್ನು ಅರೆಸ್ಟ್ ಮಾಡಿದ್ಧಾರೆ. ಹಣ ಕಳೆದುಕೊಂಡ ಒಬ್ಬ ವ್ಯಕ್ತಿ ನೀಡಿದ ದೂರಿನ ಮೇರೆಗೆ ವಿಚಾರಣೆ ನಡೆಸಿದ್ದು, ಪೊಲೀಸರಿಗೆ ಈಗಾಗಲೇ ಸುಮಾರು 400+ ಕೇಸುಗಳ ಮಾಹಿತಿ ಸಿಕ್ಕಿದೆ. ಮೋಸ ಹೋದವರ ಸಂಖ್ಯೆ ಸಾವಿರಕ್ಕೂ ಹೆಚ್ಚಿದ್ದು ಸಾವಿರಾರು ಜನ ಹೋದರೆ ಹೋಗಲಿ 20 ಸಾವಿರ.. ಮರ್ಯಾದೆ ದೊಡ್ಡದು ಎಂದು ಪೊಲೀಸರಿಗೆ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರಂತೆ. ಒಟ್ಟಿನಲ್ಲಿ ಕೊಟ್ಟವನು ಕೋಡಂಗಿ.. ಕಿತ್ಕೊಂಡವನು ನವರಂಗಿ.. ಎನ್ನುವಂತಾಗಿದೆ.



