ಸೆಂಚುರಿ ಸ್ಟಾರ್ ಶಿವಣ್ಣ ಅಭಿನಯದ ಭೈರವ ಹೇಳೋ ಪಾಠ 12ನೇ ಶತಮಾನದ ಕಥೆಯಂತೆ. ಶಿವಣ್ಣ ಅಭಿನಯದ ಹೊಸ ಸಿನಿಮಾ ಭೈರವನ ಕೊನೆಯ ಪಾಠ ಚಿತ್ರದ ಫಸ್ಟ್ ಲುಕ್ ಹೊರಬಂದಿದೆ. ನೋಡಿದವರೆಲ್ಲ ವ್ಹಾರೆವ್ಹಾ.. ಎನ್ನುತ್ತಿದ್ದಾರೆ. ಹೇಮಂತ್ ರಾವ್ ನಿರ್ದೇಶನದ ಸಿನಿಮಾ ಆಗಿರುವ ಕಾರಣ ನಿರೀಕ್ಷೆಯೂ ಹಾಗೆಯೇ ಇದೆ. ಆದರೆ ಇದು ಐತಿಹಾಸಿಕ ಕಥೆ ಅಲ್ಲ. ಕಾಲ್ಪನಿಕ ಕಥೆ. ಆದರೆ ಇಡೀ ಕಥೆ ನಡೆಯೋದು 12ನೇ ಶತಮಾನದಲ್ಲಿ.
ಚಿತ್ರದ ಎರಡು ಪೋಸ್ಟರ್ ಹೊರ ಬಂದಿವೆ. ಹಿಂದೆಂದೂ ಕಾಣದ ಹೊಸ ಅವತಾರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಎರಡು ಪೋಸ್ಟರ್ ಗಳಲ್ಲಿ ಎರಡು ರೀತಿಯ ಲುಕ್ ಮೂಲಕ ಮಾಸ್ ಲೀಡರ್ ಪ್ರತ್ಯಕ್ಷರಾಗಿದ್ದಾರೆ. ಯುದ್ಧಕ್ಕೆ ಸಜ್ಜಾದ ಪೋಷಾಕು, ಬೆನ್ನಿಗೆ ಬಾಣಗಳನ್ನು ಇಟ್ಟುಕೊಂಡಿದ್ದು, ಹಿಂಭಾಗದಲ್ಲಿ ಕುದುರೆ ಇದೆ. ಇಷ್ಟಕ್ಕೂ ಚಿತ್ರದ ಕಥೆ ಏನು ಎಂದರೆ.. ನಿರ್ದೇಶಕ ಹೇಮಂತ್ ರಾವ್ ಹೇಳೋದು ಇದು 12ನೇ ಶತಮಾನದ ಕಥೆ. ಆದರೆ, ಕಾಲ್ಪನಿಕ ಕಥೆ.
12ನೇ ಶತಮಾನದ ಅವಧಿಯಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ. ಇದಕ್ಕಾಗಿ ಹಲವು ಇತಿಹಾಸ ತಜ್ಞರ ಜೊತೆ ಮಾತನಾಡಿದ್ದೇವೆ. ಪ್ರಿಪ್ರೊಡಕ್ಷನ್ ಕೆಲಸ ಹೆಚ್ಚಿದೆ ಎನ್ನುವ ಹೇಮಂತ್ ಅವರಿಗೆ ಶಿವಣ್ಣನ ಡೆಡಿಕೇಷನ್ ಲೆವೆಲ್ʻಗೆ ಶರಣಾಗಿದ್ದಾರೆ.
ನೂರಾರು ಚಿತ್ರಗಳನ್ನು ಮಾಡಿರುವ ಶಿವಣ್ಣ ಅವರಿಗೆ ನಾನೂ ಒಂದು ಸಿನಿಮಾ ಮಾಡಬೇಕು ಎಂದುಕೊಂಡಿದ್ದೆ. ಚಿತ್ರದ ಕಥೆ, ಲುಕ್ ಎಲ್ಲವೂ ಹೊಸದಾಗಿರಬೇಕು ಎಂದುಕೊಂಡು ಸಿದ್ಧ ಮಾಡಿದೆ. ಖಂಡಿತಾ ಈ ಚಿತ್ರದಲ್ಲಿ ಹೊಸ ಶಿವಣ್ಣನನ್ನು ನೋಡುತ್ತೀರಿ ಎಂದು ಕಾನ್ಫಿಡೆನ್ಸ್ ಕೊಡ್ತಾರೆ ಹೇಮಂತ್ ರಾವ್.
ಚಿತ್ರಕ್ಕೆ ಸದ್ಯಕ್ಕಾಗಿರುವುದು ಫೋಟೋಶೂಟ್ ಮಾತ್ರ. ಆ ಫೋಟೋಶೂಟ್ ನಡೆದಿದ್ದು ಗುಡಿಬಂಡೆಯಲ್ಲಿ. ಅಷ್ಟಕ್ಕೆ ಶಿವಣ್ಣ 400 ಮೆಟ್ಟಿಲು ಹತ್ತಿ ಬಂದು ಫೋಟೋ ಶೂಟ್ʻನಲ್ಲಿ ಭಾಗವಹಿಸಿದ್ರು. ಅವರಿಗೆ ವಯಸ್ಸಾಗಿಲ್ಲ ಎನ್ನುವ ಹೇಮಂತ್ ರಾವ್ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದ್ದಾರೆ.
ಹಿಂದೆ ಅಪ್ಪಾಜಿ (ಡಾ ರಾಜ್‌ಕುಮಾರ್) ಇಂತಹ ಪಾತ್ರಗಳನ್ನು ಮಾಡುತ್ತಿದ್ದರು. ಭೈರವನ ಪಾತ್ರ ಮಾಡುತ್ತಿರುವುದಕ್ಕೆ ನನಗೆ ಅತೀವ ಸಂತೋಷವಾಗಿದೆ. ಹೇಮಂತ್ ರಾವ್ ಮತ್ತು ತಂಡದೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ಈ ಚಿತ್ರಕ್ಕೆ ‘ಲೆಸನ್ಸ್ ಫಾರ್ ಆಲ್ ಕಿಂಗ್ಸ್’ ಎಂಬ ಅಡಿಬರಹವಿದ್ದು, ಇದು ಕಥೆಗೆ ತುಂಬಾ ಪೂರಕವಾಗಿದೆ. ವೃತ್ತಿ, ಬದುಕುವ ರೀತಿ ಎಲ್ಲದಕ್ಕೂ ನ್ಯಾಯ, ನೀತಿ ಮತ್ತು ಧರ್ಮ ಇದ್ದೇ ಇರುತ್ತದೆ. ಅದನ್ನು ಮೀರಿದರೆ ಏನಾಗುತ್ತದೆ? ಇವುಗಳನ್ನು ತಿಳಿಸಲು ಫಿಲಾಸಫರ್ ಅಥವಾ ಗುರು ಇರುತ್ತಾರೆ. ಅವರೆಲ್ಲರೂ ಹೇಳುವ ಕೊನೆಯ ಪಾಠ ಏನು ಎನ್ನುವುದೇ ಈ ಸಿನಿಮಾ ಕಥೆ. ಇಂತಹ ಪಾತ್ರ ಮಾಡುವ ಆಸೆ ನನಗೆ ಬಹಳ ವರ್ಷಗಳಿಂದ ಇತ್ತು. ಈಗ ಅದು ನೆರವೇರಿದೆ ಎಂದು ಖುಷಿಯಾಗಿದ್ದಾರೆ ಶಿವರಾಜ್‌ಕುಮಾರ್.
ಡಾ.ರಾಜ್ ಕುಮಾರ್ ಈ ಹಿಂದೆ ಇಂತಹ ಐತಿಹಾಸಿಕ ಅಲ್ಲದ, ಕಾಲ್ಪನಿಕ ಕಥೆಗಳ ಕಥೆ ಸಿನಿಮಾ ಮಾಡಿದ್ದರು. ಡಾ.ರಾಜ್ ಅಭಿನಯದ ಬಹದ್ದೂರ್ ಗಂಡು, ಹುಲಿಯ ಹಾಲಿನ ಮೇವು ಚಿತ್ರಗಳು ಉದಾಹರಣೆ. ಇವು ಐತಿಹಾಸಿಕ ಕಥಾ ಹಂದರದ ಚಿತ್ರಗಳಲ್ಲ. ಆದರೆ ಜಾನಪದ ಕಥೆ ಹೊಂದಿದ್ದ ಸಿನಿಮಾಗಳು. ಇದೇ ರೀತಿ ಭೈರವನ ಕೊನೆಯ ಪಾಠವೂ ಇರಲಿದೆ ಎಂಬ ನಿರೀಕ್ಷೆ ಅಭಿಮಾನಿಗಳದ್ದು.



