ಜೆಡಿಎಸ್ ಶಾಸಕರನ್ನು ಸೆಳೆಯುವ ಕುರಿತು ಚನ್ನಪಟ್ಟಣ ವಿಜೇತ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಹೇಳಿಕೆ ಖಂಡಿಸಿ ಜೆಡಿಎಸ್ ಒಗ್ಗಟ್ಟು ಪ್ರದರ್ಶನಕ್ಕೆ ಕರೆಯಲಾಗಿದ್ದ ಪತ್ರಿಕಾಗೋಷ್ಠಿಗೆ 12 ಶಾಸಕರು ಬರಲಿಲ್ಲ. ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ನಿರೀಕ್ಷೆಯಂತೆ ಗೈರಾಗಿದ್ದರು. 18 ಶಾಸಕರ ಪೈಕಿ ಎ. ಮಂಜು, ಸುರೇಶ್ ಬಾಬು, ಎಚ್.ಡಿ. ರೇವಣ್ಣ, ಸ್ವರೂಪ್, ಹರೀಶಗೌಡ, ರವಿಕುಮಾರ್ ಸೇರಿ ಒಟ್ಟು 6 ಜನ ಮಾತ್ರ ಪಾಲ್ಗೊಂಡಿದ್ದರು. 3 ಎಂಎಲ್‌ಸಿಗಳಾದ ತಿಪ್ಪೇ ಸ್ವಾಮಿ, ಜವ ರಾಯಿಗೌಡ, ಟಿ.ಎ. ಶರವಣ ಪಾಲ್ಗೊಂಡಿದ್ದರು.
ಜೆಡಿಎಸ್ ಸಭೆಗೆ ಗೈರು ಹಾಜರಾದ ಶಾಸಕರು
ಜಿ.ಟಿದೇವೇಗೌಡ, ಚಾಮುಂಡೇಶ್ವರಿ ಶಾಸಕ
ಶರಣಗೌಡ ಕಂದಕೂರು, ಗುರುಮಿಠಕಲ್ ಶಾಸಕ
ಕರೆಮ್ಮ ನಾಯಕ, ದೇವದುರ್ಗ ಶಾಸಕಿ
ಶಾರದಾ ನಾಯಕ್, ಶಿವಮೊಗ್ಗ ಗ್ರಾಮೀಣ ಶಾಸಕಿ
ಸಮೃದ್ಧಿ ಮಂಜುನಾಥ್, ಮುಳಬಾಗಿಲು ಶಾಸಕ
ಎಂ ಟಿ ಕೃಷ್ಣಪ್ಪ, ತುರುವೇಕೆರೆ ಶಾಸಕ
ಹೆಚ್ ಟಿ ಮಂಜುನಾಥ್, ಕೃಷ್ಣರಾಜಪೇಟೆ ಶಾಸಕ
ಬಾಲಕೃಷ್ಣ ಸಿ ಎನ್, ಶ್ರವಣಬೆಳಗೊಳ ಶಾಸಕ
ಎಂ ಆರ್ ಮಂಜುನಾಥ್, ಹನೂರ ಶಾಸಕ
ಇದೆಲ್ಲವನ್ನೂ ನೋಡುತಿದ್ದರೆ ಸಿ.ಪಿ ಯೋಗೇಶ್ವರ್ ಹೇಳಿಕೆ ನಿಜವಾಗತ್ತಾ ಎಂಬ ಪ್ರಶ್ನೆ ಮೂಡುವುದು ಸುಳ್ಳಲ್ಲ. ಚನ್ನಪಟ್ಟಣ ಗೆಲ್ತಿದ್ದಂತೆ ಆಪರೇಷನ್ ಜೆಡಿಎಸ್ ಬಗ್ಗೆ ಮಾತನಾಡಿದ್ದ ಸಿಪಿವೈ, ಗ್ರೀನ್ ಸಿಗ್ನಲ್ ಕೊಟ್ಟು ಟಾಸ್ಕ್ ಕೊಟ್ಟರೆ ಒಂದು ದಿನದಲ್ಲಿ ಆಪರೇಷನ್ ಮಾಡೋದಾಗಿ ಹೇಳಿದ್ದರು. ಇದಕ್ಕೆ ಉತ್ತರವಾಗಿಯೇ ಜೆಡಿಎಸ್ ಶಾಸಕರು ಮಾರಾಟದ ವಸ್ತುವಲ್ಲ, ನಮ್ಮ ಶಾಸಕರು ಯಾವ ಆಮಿಷಕ್ಕೂ ಮಾರು ಹೋಗುವುದಿಲ್ಲ ಎಂದು ಹೇಳಿ ಶಾಸಕರು ಒಗ್ಗಟ್ಟಿನ ಪ್ರದರ್ಶನಕ್ಕಾಗಿಯೇ ಪ್ರೆಸ್ ಮೀಟ್ ಕರೆದಿದ್ದರು.
ಜೆಡಿಎಸ್ ಕುರಿತು ಚನ್ನಪಟ್ಟಣ ಕ್ಷೇತ್ರದ ವಿಜೇತ ಅಭ್ಯರ್ಥಿ-ಸಿ.ಪಿ.ಯೋಗೇಶ್ವರ್ ಹೇಳಿಕೆ ಹಿನ್ನೆಲೆಯಲ್ಲಿ ಪಕ್ಷದ ಶಾಸಕರೆಲ್ಲಾ ಒಗ್ಗಟ್ಟಿದ್ದೇವೆ ಎಂಬ ಸಂದೇಶ ರವಾನಿಸಲು ಬುಧವಾರ ವಿಧಾನಸೌಧದಲ್ಲಿ ಒಟ್ಟಿಗೆ ಪತ್ರಿಕಾಗೋಷ್ಠಿ ನಡೆಸಿದ ಶಾಸಕರು ಯೋಗೇಶ್ವರ್ ಹೇಳಿಕೆಯನ್ನು ಕಟುವಾಗಿ ಖಂಡಿಸಿದರು. ಡಿಎಸ್ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ. ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಸಿ.ಪಿ.ಯೋಗೇಶ್ವರ್ ಮಾತಿನ ಧಾಟಿ ಯೇ ಬದಲಾಗಿದೆ ಎಂದ ಶಾಸಕರು ಈವರೆಗೆ ನಮ್ಮ ಯಾವುದೇ ಶಾಸಕರನ್ನು ಸಂಪರ್ಕ ಮಾಡಿಲ್ಲ. ಜೆಡಿಎಸ್ ಪಕ್ಷವನ್ನು ರಾಜ್ಯದಿಂದ ತೆಗೆದುಹಾಕುವ ಪ್ರಯತ್ನ ಮಾಡಲಾಗುತ್ತಿದೆ. ಮಾಜಿ ಮುಖ್ಯಮಂತ್ರಿಗಳಾದ ಎಸ್.ಆರ್. ಬೊಮ್ಮಾಯಿ, ಎಚ್.ಡಿ.ದೇವೇಗೌಡ ಅವರು ಉಳಿಸಿಕೊಂಡು ಬಂದ ಪಕ್ಷವಾಗಿದ್ದು, ನಮ್ಮ ಕಾರ್ಯಕರ್ತರ ಪಡೆ ಸದೃಢವಾಗಿದೆ ಎಂದು ಹೇಳಿದ್ದಾರೆ.
ಜೆಡಿಎಸ್ ಶಾಸಕರನ್ನು ಕರೆತರುತ್ತೇನೆ ಎಂಬ ಯೋಗೇಶ್ವರ್ ಹೇಳಿಕೆ ಕೇವಲ ಮಾತಿಗಷ್ಟೇ ಇರುತ್ತದೆ. ಈ ಹಿಂದೆ ಬಿಜೆಪಿಯಲ್ಲಿದ್ದ ಅವರು ಕಾಂಗ್ರೆಸ್‌ನಿಂದ 30 ಶಾಸಕರನ್ನು ಕರೆದುಕೊಂಡು ಬರುವುದಾಗಿ ತಿಳಿಸಿದ್ದರು. ಯೋಗೇಶ್ವರ್ ಬಗ್ಗೆ ಕಾಂಗ್ರೆಸ್‌ನವರು ಎಚ್ಚರಿಕೆಯಿಂದ ಇರಬೇಕು. ಯೋಗೇಶ್ವರ್ ಯಾವತ್ತಿದ್ದರೂ ಮುಳ್ಳೇ ಆಗಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದನ್ನು ಅರಿತುಕೊಳ್ಳಬೇಕು ಎಂದು ಹೇಳಿದ್ದಾರೆ.
ಮತ್ತೆ ಒಡೆಯುತ್ತಾ ಜೆಡಿಎಸ್..?
ಜೆಡಿಎಸ್ ಒಡೆಯುವುದು, ಶಾಸಕರು ಶಿಫ್ಟ್ ಆಗುವುದು ಹೊಸದೇನಲ್ಲ. ಜೆಡಿಎಸ್ ರಚನೆಯಾಗಿ 25 ವರ್ಷಗಳಾಗಿವೆ. ಈ 25 ವರ್ಷಗಳಲ್ಲಿ ಜೆಡಿಎಸ್ ಛಿದ್ರವಾಗುವುದಕ್ಕೆ ನಾಂದಿ ಹಾಡಿದ್ದವರೇ ಸಿದ್ದರಾಮಯ್ಯ. ಅದಾದ ನಂತರ ಈಗ ಕಾಂಗ್ರೆಸ್ಸಿನಲ್ಲಿರುವ ಸತೀಶ್ ಜಾರಕಿಹೊಳಿ, ಹೆಚ್ ಸಿ ಮಹದೇವಪ್ಪ, ಸಿಎಂ ಇಬ್ರಾಹಿಂ ಅವರ ಒಂದು ಬಣ ಮೊದಲಿಗೆ ಜೆಡಿಎಸ್‌ಗೆ ಹೋಯಿತು. ಅದಾದ ಮೇಲೆ ಜಮೀರ್ ಅಹ್ಮದ್, ಚೆಲುವರಾಯ ಸ್ವಾಮಿ, ಮಾಗಡಿ ಬಾಲಕೃಷ್ಣ, ಇಕ್ಬಾಲ್ ಅನ್ಸಾರಿ ಮೊದಲಾದವರ ಬಣ ಹೋಯಿತು. ಇನ್ನು ಕಳೆದ ಚುನಾವಣೆಯಲ್ಲಿ ಶಿವಲಿಂಗೇಗೌಡ, ಗುಬ್ಬಿ ಶ್ರೀನಿವಾಸ್, ಕೋಲಾರ ಶ್ರೀನಿವಾಸ್ ಸೇರಿದಂತೆ ಮತ್ತೊಂದಿಷ್ಟು ಶಾಸಕರು ಹೋದರು. ಈಗ ಜಿಟಿ ದೇವೇಗೌಡ ಸೇರಿದಂತೆ ಮೊದಲಾದ ಕೆಲವು ನಾಯಕರು ಲಿಸ್ಟಿನಲ್ಲಿದ್ದಾರೆ.
ಇನ್ನು ಬಿಜೆಪಿಯಲ್ಲಿರುವ ಬಸವರಾಜ ಬೊಮ್ಮಾಯಿ, ವಿ ಸೋಮಣ್ಣ, ಗೋಪಾಲಯ್ಯ ಮೊದಲಾದವರೂ ಕೂಡಾ ಜೆಡಿಎಸ್ ಮೂಲದವರೇ. ಹಾಗೆ ನೋಡಿದರೆ ಜೆಡಿಎಸ್ ತೊರೆದ ಶಾಸಕರು, ನಾಯಕರ ಪಟ್ಟಿ 50ರ ಗಡಿಯನ್ನೂ ದಾಟುತ್ತದೆ.



