ರಾಜ್ಯ ಸರ್ಕಾರಕ್ಕೀಗ 6 ತಿಂಗಳು. ಗ್ಯಾರಂಟಿ ವಿಷಯದಲ್ಲಿ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಬೇರೆಯ ವಿಷಯದಲ್ಲಿ ಟೀಕೆ ಮಾಡಬಹುದಾದರೂ, ಗ್ಯಾರಂಟಿಗಳ ವಿಷಯದಲ್ಲಿ ಸರ್ಕಾರ ದಿಟ್ಟ ಹೆಜ್ಜೆಯನ್ನೇ ಇಟ್ಟಿದೆ. ಸರ್ಕಾರ ಹಂತ ಹಂತವಾಗಿ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಹಾಗೂ ಅನ್ನಭಾಗ್ಯ ಯೋಜನೆಗಳಿಗೆ ಈವರೆಗೂ ಬರೋಬ್ಬರಿ 18 ಸಾವಿರ ಕೋಟಿ ರೂಪಾಯಿ ಅನುದಾನ ಖರ್ಚು ಮಾಡಿದೆ.
ರಾಜ್ಯ ಸರ್ಕಾರ ಜಾರಿ ಮಾಡಿದ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್, ಮನೆ ಒಡತಿಯರಿಗೆ 2000 ರೂ. ಸಹಾಯಧನ ಹಾಗೂ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಎಷ್ಟು? ಯಾಲ್ಲಾ ಯೋಜನೆಗೆ ಎಷ್ಟು ಹಣ ಖರ್ಚಾಗಿದೆ. ಇನ್ನು ಎಷ್ಟು ಹಣ ಬಾಕಿ ಇದೆ ಎಂಬ ಇತ್ಯಾದಿ ಮಾಹಿತಿ ಇಲ್ಲಿದೆ.
ಈ 6 ತಿಂಗಳಲ್ಲಿ ರಾಜ್ಯ ಸರ್ಕಾರ ತನ್ನ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯೊಂದಕ್ಕೇ ಖರ್ಚು ಮಾಡಿರುವ ಹಣ 11, 200 ಕೋಟಿ ರೂ. ಈ ಯೋಜನೆಯ ಲಾಭ ಪಡೆದಿರುವ ಮಹಿಳೆಯರ ಸಂಖ್ಯೆ ಸರಿ ಸುಮಾರು 1 ಕೋಟಿ. ಅಧಿಕೃತವಾಗಿ 99.52 ಲಕ್ಷ ಮಹಿಳೆಯರು. ಈ ಯೋಜನೆಗಾಗಿಯೇ ರಾಜ್ಯ ಸರ್ಕಾರ 17,500 ಕೋಟಿ ರೂ. ಮೀಸಲಿಟ್ಟಿತ್ತು. ಕುಟುಂಬ ನಿರ್ವಹಣೆಯ ಹೊಣೆಹೊತ್ತ ನಾಡಿನ ಮಹಿಳೆಯರಿಗೆ ಬೆಲೆಯೇರಿಕೆಯಿಂದ ತುಸು ನೆಮ್ಮದಿ ನೀಡಿ, ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ನಾವು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದು, ಮಾಸಿಕ ರೂ.2,000 ಸಹಾಯಧನ ನೀಡುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕಳೆದ 6 ತಿಂಗಳ ಅವಧಿಯಲ್ಲಿ ಶಕ್ತಿ ಯೋಜನೆಯಡಿ ನಾಡಿನ ಮಹಿಳೆಯರು ನಿತ್ಯ ಸರಾಸರಿ 60 ಲಕ್ಷದಂತೆ ಒಟ್ಟು 97.2 ಕೋಟಿಗೂ ಅಧಿಕ ಬಾರಿ ಉಚಿತ ಪ್ರಯಾಣ ಮಾಡಿದ್ದಾರೆ. ಈವರೆಗೆ ಒಟ್ಟು 2,303 ಕೋಟಿ ರೂ. ಉಚಿತ ಟಿಕೆಟ್ ವಿತರಿಸಲಾಗಿದೆ.
ಪ್ರತಿ ಕುಟುಂಬಕ್ಕೆ ಮಾಸಿಕ ಗರಿಷ್ಠ 200 ಯುನಿಟ್ ವರೆಗೆ ಉಚಿತ ವಿದ್ಯುತ್ ರಾಜ್ಯ ಸರ್ಕಾರ ಘೋಷಿಸಿತ್ತು. ಒಟ್ಟು 1.56 ಕೋಟಿ ಕುಟುಂಬಗಳು ಈ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಈ ಯೋಜನೆಗೆ ಕಳೆದ 3 ತಿಂಗಳ ಅವಧಿಯಲ್ಲಿ ಈ ಯೋಜನೆಗಾಗಿ ರಾಜ್ಯ ಸರ್ಕಾರವು ರೂ. 2,152 ಕೋಟಿ ಅನುದಾನ ಬಿಡುಗಡೆ ಮಾಡಿದೆ.
ಅನ್ನಭಾಗ್ಯ ಬಡ ಕುಟುಂಬಗಳ ಪ್ರತಿ ಫಲಾನುಭವಿಗೆ ಮಾಸಿಕ ತಲಾ 10 ಕೆ.ಜಿ ಅಕ್ಕಿ ನೀಡಲಾಗುತ್ತಿದೆ. ಅಕ್ಕಿಯ ಅಲಭ್ಯತೆಯ ಕಾರಣಕ್ಕಾಗಿ 5 ಅಕ್ಕಿಯ ಹಣ ತಲಾ ರೂ.170 ಹಣದ ಫಲಾನುಭವಿಗಳ ಖಾತೆಗೆ ಸರ್ಕಾರ ವರ್ಗಾವಣೆ ಮಾಡುತ್ತಿದೆ. ಈವರೆಗೂ 3.92 ಕೋಟಿ ಫಲಾನುಭವಿಗಳ ಖಾತೆಗೆ ರೂ. 2,444 ಕೋಟಿ ಹಣ ಜಮೆ ಮಾಡಿದೆ ಎಂದು ಸರ್ಕಾರ ತಿಳಿಸಿದೆ.



