ಜಸ್ಟ್ 10 ವರ್ಷಗಳಲ್ಲಿ ನಾಲ್ಕನೇ ಬಾರಿ ನಿತೀಶ್ ಕುಮಾರ್ ಹಾದಿ ಬದಲಿಸಿದ್ದಾರೆ. ಜೆಡಿಯು ಮತ್ತು ಬಿಜೆಪಿ ಜೊತೆಯಾಗಿ ಇದ್ದದ್ದು 17 ವರ್ಷ. ಆ 17 ವರ್ಷದಲ್ಲಿ ಮೊದಲ ಬಾರಿ ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಆಯ್ಕೆ ಮಾಡಿದಾಗ ನಿತೀಶ್ ಕುಮಾರ್, ಎನ್ʻಡಿಎ ಬಿಟ್ಟು ಹೋಗಿದ್ದರು. ಈಗ ಮತ್ತೆ ಎನ್ʻಡಿಎಗೆ ಬರೋ ಮೂಲಕ ಪಲ್ಟೂರಾಮ್ ಎಂದು ಜನ ಕೊಟ್ಟಿದ್ದ ಬಿರುದನ್ನು ಶಾಶ್ವತವನ್ನಾಗಿಸಿದ್ಧಾರೆ.
ಪಲ್ಟೂ ರಾಮ್ ಫಸ್ಟ್ ಟೈಂ : 17 ವರ್ಷಗಳ ಮೈತ್ರಿಗೆ ಬ್ರೇಕ್ ಹಾಕಿ ಮೋದಿ ವಿರುದ್ಧ ಸಿಡಿದೆದ್ದ ನಿತೀಶ್, ಆರ್ʻಜೆಡಿ ಜೊತೆ ಹೋದರು. ಸರ್ಕಾರವೂ ಆಯಿತು. ಆದರೆ ಜೆಡಿಯ ನೆಲಕಚ್ಚಿತು. ಮೋದಿಯವರ ಬಿಜೆಪಿ ಲೋಕಸಭೆಗಳಲ್ಲಿ ದೊಡ್ಡ ಗೆಲುವು ಸಾಧಿಸಿತು.
2016ರಲ್ಲಿ ಮತ್ತೆ ಬಿಜೆಪಿಗೆ : 2015ರಲ್ಲಿ ಲಾಲೂ ಪ್ರಸಾದ್ ಅವರ ಆರ್ʻಜೆಡಿ ಮೈತ್ರಿಕೂಟ ಗೆದ್ದಿತಾದರೂ ಸರ್ಕಾರ ವರ್ಷವೂ ಉಳಿಯಲಿಲ್ಲ. ಮತ್ತೆ ಬಿಜೆಪಿ ಜೊತೆ ಬಂದು ಸಿಎಂ ಆದರು. ಆಗ ತಾವೇ ಟೀಕಿಸಿದ್ದ ನೋಟ್ ಬ್ಯಾನ್, ಜಿಎಸ್ʻಟಿಗಳನ್ನು ಹೊಗಳಿದ್ದರು.
2022ರಲ್ಲಿ ಮತ್ತೆ.. ಪಲ್ಟೂ.. ರಾಮ್ : 2022ರಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಗೆದ್ದಿದ್ದು ಬಿಜೆಪಿ ಜೊತೆಯಲ್ಲಿ. ಬಿಜೆಪಿಗಿಂತ ಕಡಿಮೆ ಸ್ಥಾನ ಗೆದ್ದರೂ ಸಿಎಂ ಆದರು. ಒನ್ಸ್ ಎಗೇನ್.. ಸಿಎಎ ವಿರೋಧಿಸಿ ಮತ್ತೆ ಲಾಲೂ ಜೊತೆ ಹೋದರು. ಅಲ್ಲಿಯೂ ಮತ್ತೆ ಸಿಎಂ ಆದರು.
2024ರಲ್ಲಿ : ಮತ್ತೆ ಬಿಜೆಪಿಗೆ ಬಂದು ಮತ್ತೆ ಸಿಎಂ ಆಗಿದ್ದಾರೆ.
ಕಳೆದ 19 ವರ್ಷದಿಂದ ಹಲವು ಬಾರಿ ಮೈತ್ರಿ ಬದಲಿಸಿ ಸಿಎಂ ಸ್ಥಾನದಲ್ಲಿ ಗಟ್ಟಿಯಾಗಿ ನೆಲೆ ನಿಂತಿರುವ ನಿತೀಶ್ ಕುಮಾರ್, ಬಿಹಾರದಲ್ಲಿ ‘ಪಲ್ಟೂರಾಮ್’ ಎಂದೇ ಪ್ರಸಿದ್ಧ.
ನಿತೀಶ್ ಕುಮಾರ್ ರಾಜಕೀಯ ದಾಳದ ಮೂಲ ನರೇಂದ್ರ ಮೋದಿ ಮತ್ತು ಮಲ್ಲಿಕಾರ್ಜುನ ಖರ್ಗೆ : ನಿತೀಶ್ ಕುಮಾರ್ ಎನ್ʻಡಿಎ ತೊರೆಯಲು ಬಹುಮುಖ್ಯ ಕಾರಣ ನರೇಂದ್ರ ಮೋದಿ. ನರೇಂದ್ರ ಮೋದಿ ಅವರನ್ನ ಪ್ರಧಾನಿ ಅಭ್ಯರ್ಥಿ ಮಾಡ್ತಾರೆ ಅನ್ನೋ ನಿರೀಕ್ಷೆ ನಿತೀಶ್ ಅವರಿಗೆ ಇರಲಿಲ್ಲ. ವಾಜಪೇಯಿ ನಂತರ ಎಲ್ಲರಿಗೂ ಇಷ್ಟವಾಗುವ ನಾಯಕ ತಾವೇ ಎಂದು ನಂಬಿಕೊಂಡಿದ್ದ ನಿತೀಶ್, ಎನ್ʻಡಿಎ ಮೂಲಕ ಪ್ರಧಾನಿ ಅಭ್ಯರ್ಥಿಯಾಗುವ ಕನಸು ಕಟ್ಟಿಕೊಂಡಿದ್ದರು. ಆದರೆ ಆಗಲಿಲ್ಲ. ಈ ಬಾರಿಯೂ ಅಷ್ಟೇ, ಇಂಡಿಯಾ ಒಕ್ಕೂಟ ರಚನೆಯಾಗಿದ್ದೇ ನಿತೀಶ್ ಅವರ ಮುತುವರ್ಜಿಯಿಂದ. ಆದರೆ ಇಂಡಿಯಾ ಒಕ್ಕೂಟದ ಸಂಚಾಲಕರಾಗಿ ಖರ್ಗೆ ಅವರ ಹೆಸರು ಬಂದೂ, ಅಂಗೀಕಾರವೂ ಆದಾಗ ನಿತೀಶ್ ಅವರ ಕನಸು ಮತ್ತೆ ಭಗ್ನವಾಯಿತು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಇಂಡಿಯಾ ಕೂಟದ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲು ನಡೆಸಿದ ಯತ್ನವೇ ನಿತೀಶ್ ಕುಮಾರ್ ಅವರು ಇಂಡಿಯಾ ಕೂಟಕ್ಕೆ ಗುಡ್‌ಬೈ ಹೇಳಲು ನಾಂದಿ ಹಾಡಿತು. ಕಾಂಗ್ರೆಸ್ ಪಕ್ಷವು ಇಂಡಿಯಾ ಮೈತ್ರಿಕೂಟದ ನಾಯಕತ್ವ ಕಸಿದುಕೊಳ್ಳಲು ಬಯಸಿದ್ದೇ ನಿತೀಶ್ ಮೈತ್ರಿಕೂಟದಿಂದ ಹೊರಬರಲು ಕಾರಣ. ಮುಂಬೈನಲ್ಲಿ ನಡೆದ ಮೈತ್ರಿಕೂಟದ ಸಭೆಯಲ್ಲಿ ನಾವು ಯಾರನ್ನೂ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದೇ ಚುನಾವಣೆ ಎದುರಿಸಲು ನಿರ್ಧರಿಸಿದ್ದೆವು. ಆದರೆ ಡಿಸೆಂಬರ್ 19ರಂದು ನಡೆದ ಸಭೆಯಲ್ಲಿ ಸಂಚಿನ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಪ್ರಸ್ತಾಪಿಸಲಾಯಿತು. ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮೂಲಕ ಖರ್ಗೆ ಹೆಸರು ಸೂಚಿಸುವಂತೆ ಮಾಡಲಾಯಿತು ಎನ್ನುತ್ತಾರೆ ಜೆಡಿಯು ಲೀಡರ್ಸ್.



