ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ʻಸಿಎಂ ಪಟ್ಟದ ಫೈಟ್ʼ ಜೋರಾಗಿ ನಡೆಯುತ್ತಿರುವಾಗಲೇ ಬೆಳಗಾವಿಯಲ್ಲಿ ನಡೆದ ಡಿನ್ನರ್ ಸಭೆಯ ಇನ್ನರ್ ಮಾಹಿತಿಗಳು ಕುತೂಹಲ ಹುಟ್ಟಿಸಿವೆ. ಸತೀಶ್ ಜಾರಕಿಹೊಳಿ ಮನೆಯಲ್ಲಿ ನಡೆದ ಆ ಸಭೆಯಲ್ಲಿ ಪ್ರಸ್ತಾಪವಾದ 10 ಅಂಶಗಳು ಡಿಕೆ ಟೀಂನಲ್ಲಿ ಮುಂದೇನು ಎಂಬ ಆತಂಕವನ್ನಂತೂ ಹುಟ್ಟುಹಾಕಿವೆ. ಹಾಗೆಂದು ಸುಮ್ಮನೆ ಇರುವುದಕ್ಕೆ ಆಗುವುದಿಲ್ಲ. ಡಿಕೆ ಶಿವಕುಮಾರ್ ಪ್ರತಿತಂತ್ರವನ್ನು ಹೆಣೆಯುತ್ತಿದ್ದಾರೆ. ಇದೆಲ್ಲದರ ಮಧ್ಯೆ ಸಿದ್ದು ಡಿನ್ನರ್ ಮೀಟಿಂಗ್‌ನಲ್ಲಿ ಕೇಳಿಬಂದ 10 ಅಂಶಗಳು ಅಚ್ಚರಿ ಹುಟ್ಟಿಸುವಂತಿವೆ.
ಯಾವುದೇ ಕಾರಣಕ್ಕೂ ಸಿಎಂ ಸ್ಥಾನ ತೊರೆಯಬೇಡಿ, ಸಿಎಂ ಸ್ಥಾನದಲ್ಲಿ ನಿಮ್ಮ ಜೊತೆಗಿರೋರನ್ನೇ ಕೂರಿಸಿ, ನೀವು ಕೆಳಗಿಳಿದ್ರೆ ಮುಂದೇನಾಗುತ್ತೆ ಹೈಕಮಾಂಡ್ ನಾಯಕರಿಗೆ ಮನವರಿಕೆ ಮಾಡಿ ಅನ್ನೋದನ್ನ ಹೇಳುತ್ತಿರುವ ಸಿದ್ದರಾಮಯ್ಯ ಆಪ್ತ ಶಾಸಕರು, ನಾಯಕರು ಅಗತ್ಯ ಬಿದ್ದರೆ ನಿಮಗಾಗಿ ರಾಹುಲ್ ಗಾಂಧಿಗೆ ಪತ್ರ ಚಳವಳಿ ಮಾಡುತ್ತೇವೆ ಎಂದು ಹೇಳಿದ್ದಾರಂತೆ. ಒಂದು ವೇಳೆ ನಿಮ್ಮನ್ನ ಬಲವಂತವಾಗಿ ಇಳಿಸಿದಲ್ಲಿ ಎಲ್ಲರಿಗೂ ಕಷ್ಟ, ಅದಕ್ಕೂ ಮುನ್ನ ಅಹಿಂದ ಸಮಾವೇಶ ಮಾಡಿ ಶಕ್ತಿ ಪ್ರದರ್ಶಿಸೋಣ, ಇದರ ಜೊತೆಗೆ ಸಿದ್ದರಾಮೋತ್ಸವ ಅಂತಾ ಕಾರ್ಯಕ್ರಮ ಮಾಡೋಣ, ಅಹಿಂದ ಸಮಾವೇಶ, ಸಿದ್ದರಾಮೋತ್ಸವ ಆಗದೇ ಇದ್ದಲ್ಲಿ ಅಹಿಂದ ಒಕ್ಕೂಟದ ಸಮಾವೇಶಕ್ಕೆ ಬೆಂಬಲ ಕೊಡೋಣ ಎಂದೆಲ್ಲ ಸಲಹೆ ಕೊಟ್ಟಿದ್ದಾರಂತೆ.
ಈ ಸಭೆಯಲ್ಲಿ ಸಿದ್ದು ಆಪ್ತರು ಆಡಿರುವ ಕೆಲವು ಮಾತುಗಳೂ ಅಷ್ಟೇ ಕುತೂಹಲಕಾರಿ. ಒಂದು ವೇಳೆ ನೀವು ಸಿಎಂ ಸ್ಥಾನದಿಂದ ಕೆಳಗಿಳಿದ್ರೆ ನಮ್ಮನ್ನೇ ಮಾಡಿ, ನಿಮ್ಮ ಆಪ್ತರಲ್ಲೇ ಇರುವ ದಲಿತರಲ್ಲಿ ಒಬ್ಬರನ್ನ ಸಿಎಂ ಸ್ಥಾನಕ್ಕೆ ಕೂರಿಸಿ, ನಮ್ಮಲ್ಲೇ ಇರುವ ಮೂವರಿಗೆ ಉಪಮುಖ್ಯಮಂತ್ರಿ ಸ್ಥಾನಗಳನ್ನ ಕೊಡಿ, ಈ ಮೂವರ ಜೊತೆ ಡಿ.ಕೆ. ಶಿವಕುಮಾರ್ ಕೂಡ ಡಿಸಿಎಂ ಆಗಿರಲಿ, ಇದೆಲ್ಲರ ಜೊತೆಗೆ ಕೆಪಿಸಿಸಿ ಅಧ್ಯಕ್ಷರನ್ನ ಬದಲಾವಣೆ ಮಾಡಬೇಕು ಎಂದು ಪಟ್ಟು ಹಿಡಿಯಬೇಕು ಎನ್ನುವುದು ಸಿದ್ದು ಆಪ್ತರ ಡಿಮ್ಯಾಂಡ್.
ಅಷ್ಟೇ ಅಲ್ಲ, ಸಚಿವ ಸಂಪುಟದಲ್ಲಿ ಪವರ್‌ಫುಲ್ ಪೋಸ್ಟ್‌ಗಳು ಕೊಡಬೇಕು, ನಿಮ್ಮ ವಿರುದ್ಧವಿರುವ ಶಾಸಕರಿಗೆ ಹೆಚ್ಚು ಆದ್ಯತೆ ಕೊಡೋದು ಬೇಡ ಹಾಗೂ ನೀವು ಕೆಳಗಿಳಿದ್ರೂ ನಮ್ಮ ಹಿಂದೆ ನೀವೇ ನಾಯಕತ್ವದ ರೀತಿಯಲ್ಲಿರಬೇಕು ಎಂದಿದ್ದಾರೆ. ಜೊತೆಗೆ ನಿಮ್ಮ ಮಗ ಯತೀಂದ್ರರ ಚಿಂತೆ ಮಾಡಬೇಡಿ.. ನಾವೆಲ್ಲರೂ ಇದ್ದೇವೆ ಎಂದು ಧೈರ್ಯವನ್ನೂ ಹೇಳಿದ್ದಾರೆ.
ಅತ್ತ ಆಪ್ತರ ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ಧೈರ್ಯ ಹೇಳಿರುವ ಸಿದ್ದರಾಮಯ್ಯ ʻಹೈಕಮಾಂಡ್ ಹಂತದಲ್ಲಿ ಆ ಮಾತು ಬಂದಾಗ ಖಂಡಿತಾ ನಿಮ್ಮೆಲ್ಲರ ಅಭಿಪ್ರಾಯವನ್ನೂ ತಿಳಿಸುತ್ತೇನೆ. ಸದ್ಯಕ್ಕೆ ಡೋಂಟ್ ವರಿ. ಅಕಸ್ಮಾತ್, ನಿಮ್ಮ ತೀರ್ಮಾನಕ್ಕೆ ವಿರುದ್ಧವಾದ ನಿರ್ಧಾರ ಬಂದರೂ ಹೈಕಮಾಂಡ್ ಹೇಳಿದಂತೆ ಕೇಳಿʼ ಎಂದಿದ್ದಾರೆ.
ಇಷ್ಟಾಗುತ್ತಿದ್ದಂತೆಯೇ ಇತ್ತ ಡಿಕೆ ಶಿವಕುಮಾರ್, ದೆಹಲಿಯ ಎಲ್ಲ ಫೋನ್‌ಗಳನ್ನೂ ಆನ್ ಮಾಡಿಸಿದ್ದಾರೆ. ಶತಾಯಗತಾಯ ಅಧಿಕಾರ ಹಸ್ತಾಂತರ ಆಗಲೇಬೇಕು ಎಂದು ಹಠಕ್ಕೆ ಬಿದ್ದಿರುವ ಡಿಕೆ, ಸಿದ್ದು ಆಪ್ತರ ಒಕ್ಕೂಟಕ್ಕೇ ಕೈ ಹಾಕಿದ್ದಾರೆ. ಆದರೆ, ಸಿದ್ದು ಆಪ್ತರಾದ ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್, ಮಹದೇವಪ್ಪ, ಕೆಎನ್ ರಾಜಣ್ಣ.. ಮೊದಲಾದವರಿಗೆ ಸಕಾರಾತ್ಮಕ ಫಲಿತಾಂಶವಂತೂ ಡಿಕೆಗೆ ಸಿಕ್ಕಿಲ್ಲ.



