10 ರೂಪಾಯಿ ನಾಣ್ಯವನ್ನ ನೀವು ತರಕಾರಿ ಅಂಗಡಿಯವರಿಗೆ ಕೊಡಿ. ಬೇಡ ಅಂತಾರೆ. ಜ್ಯೂಸ್ ಅಥವಾ ಟೀ ಅಂಗಡಿಯವರಿಗೆ ಕೊಡಿ, ಬೇರೆ ನೋಟ್ ಕೊಡಿ ಅಂತಾರೆ. ಹೋಟೆಲ್ಲಿನಲ್ಲಿ ಕಾಯಿನ್ʻನ್ನು ಮುಟ್ಟಿಸಿಕೊಳ್ಳಲ್ಲ. ಮಾಲ್ʻಗಳಲ್ಲಿಯೂ ಅಷ್ಟೆ, ಕಾಯಿನ್ʻಗೆ ಅಸ್ಪಶ್ಯತೆ ಆಗಿಬಿಟ್ಟಿದೆ. 10 ರೂಪಾಯಿ ಕಾಯಿನ್, 5 ರೂ. ಕಾಯಿನ್ ತಗೊಳ್ಬಾರ್ದು ಅಂತಾ ಅದ್ಯಾವ ಪುಣ್ಯಾತ್ಮ ಹಬ್ಬಿಸಿದನೋ ಗೊತ್ತಿಲ್ಲ. ರಿಸರ್ವ್ ಬ್ಯಾಂಕ್ ಅಫ್ ಇಂಡಿಯಾ ಒಂದಲ್ಲ.. ಎರಡಲ್ಲ.. ಹಲವು ಬಾರಿ ಹೇಳಿದ್ದರೂ ವರ್ಕೌಟ್ ಆಗ್ತಿಲ್ಲ. ಆದರೆ.. ಒಂದ್ ವಿಷಯ ಗೊತ್ತಾ.. ಈ ಸಮಸ್ಯೆ ಇರೋದು ಕರ್ನಾಟಕದಲ್ಲಿ ಮಾತ್ರ.
ರಾಜ್ಯದಲ್ಲಿ ಮಾತ್ರವೇ ವ್ಯಾಪಾರಿಗಳು, ಗ್ರಾಹಕರಲ್ಲಿ 10 ರೂ. ನಾಣ್ಯ ಚಲಾವಣೆಯಲ್ಲಿಲ್ಲ ಎಂಬ ತಪ್ಪು ಕಲ್ಪನೆ ವ್ಯಾಪಿಸಿದೆ. ಹೋಟೆಲ್, ಹೂವು-ಹಣ್ಣು-ತರಕಾರಿ, ಎಳನೀರು-ಜ್ಯೂಸ್, ದಿನಸಿ ಅಂಗಡಿಗಳು ಸೇರಿದಂತೆ ಬಹುತೇಕ ಕಡೆಗಳಲ್ಲಿ ʻಇದು ಹೋಗುವುದಿಲ್ಲʼ ಎಂದು ತೆಗೆದುಕೊಳ್ಳುವುದೇ ಇಲ್ಲ. ಜತೆಗೆ ನಾನಾ ಕಡೆಗಳಲ್ಲಿ ಸಾರ್ವಜನಿಕರು 10 ರೂ ನಾಣ್ಯ ಸ್ವೀಕರಿಸುತ್ತಿಲ್ಲ.10 ರೂ.. ನಾಣ್ಯ ಚಲಾವಣೆಯಲ್ಲಿದೆ. ತೆಗೆದುಕೊಳ್ಳಬೇಕು ಎಂದು ವ್ಯಾಪಾರಿಗಳಿಗೆ ತಿಳಿ ಹೇಳಿದರೆ, ‘ಇಲ್ಲ; ನಾವು ನಿಮ್ಮಿಂದ ತೆಗೆದುಕೊಳ್ಳಬಹುದು. ಆದರೆ, ನಮ್ಮಿಂದ ಯಾರೂ. ಕಾಯಿನ್ ತೆಗೆದುಕೊಳ್ಳುವುದಿಲ್ಲ” ಎಂದು ನೋಟು ಅಥವಾ ಯುಪಿಐ ವರ್ಗಾವಣೆ ಮಾಡುವಂತೆ ಹೇಳುತ್ತಾರೆ. ಗ್ರಾಹಕರನ್ನು ಪ್ರಶ್ನಿಸಿದರೆ, ಇಲ್ಲಅದನ್ನು ನಮ್ಮಿಂದ ದಾಟಿಸಲು ಆಗುವುದಿಲ್ಲವೆಂದು ಸ್ವೀಕರಿಸುವುದೇ ಇಲ್ಲ. ಹೀಗೆ ಗ್ರಾಹಕರು-ವ್ಯಾಪಾರಿಗಳು ಪರಸ್ಪರ ಒಬ್ಬರ ವಿರುದ್ಧ, ಇನ್ನೊಬ್ಬರು ಬೊಟ್ಟು ಮಾಡಿ ತೋರಿಸುತ್ತಾ ಚಲಾವಣೆಯಲ್ಲಿರುವ ನಾಣ್ಯದ ಕಡೆಗಣನೆಗೆ ಕಾರಣರಾಗಿದ್ದಾರೆ..
ಆದರೆ ಕರ್ನಾಟಕ ಹೊರತುಪಡಿಸಿದರೆ ಬೇರೆ ಕಡೆ ಹೀಗಿಲ್ಲ. ದೇಶದ ಯಾವ ರಾಜ್ಯದಲ್ಲೂ 10 ರೂ. ನಾಣ್ಯದ ಬಗ್ಗೆ ಈ ತಪ್ಪು ಧೋರಣೆ ಇಲ್ಲ. ವಿಚಿತ್ರವೇನು ಗೊತ್ತೇ.. ಉತ್ತರದ ರಾಜ್ಯಗಳಿಗೆ ಹೋಲಿಸಿದರೆ, ಅತೀ ಹೆಚ್ಚು ಅಕ್ಷರಸ್ಥರ ರಾಜ್ಯ ಕರ್ನಾಟಕ. ಆದರೆ, ಅನಕ್ಷರಸ್ಥರು ಹೆಚ್ಚು ಇರುವ ರಾಜ್ಯಗಳಲ್ಲಿ ಆರ್.ಬಿ.ಐ. ಕೊಟ್ಟ ಮಾಹಿತಿ ಅರ್ಥವಾಗುತ್ತದೆ, ಕರ್ನಾಟಕದಲ್ಲಿ ಮಾತ್ರ ಆಗಲ್ಲ ಎನ್ನುವುದು ವಿಚಿತ್ರವಾದರೂ ಸತ್ಯ.
ಬೇರೆ ಕಡೆ 5 ರೂ. 10 ರೂ. ಅಷ್ಟೇ ಅಲ್ಲ, 20 ರೂ. ನಾಣ್ಯಗಳೂ ಕೂಡಾ ಸಲೀಸಾಗಿ ಚಲಾವಣೆಯಾಗುತ್ತವೆ. ಜೇಬಿನಲ್ಲಿಟ್ಟು ಕೊಂಡು ಹೋಗುವುದು ತುಸು ಕಷ್ಟ ಎನ್ನುವುದನ್ನ ಬಿಟ್ಟರೆ, ನಾಣ್ಯಗಳು ನೋಟಿಗಿಂತ ಅನುಕೂಲಕಾರಿ. ಕಾಗದದ ನೋಟುಗಳು ಎಣ್ಣೆ ಪದಾರ್ಥಗಳು, ತಿಂಡಿ-ತಿನಿಸುಗಳನ್ನು ಮುಟ್ಟಿದ ಕೈಗಳಿಂದ, ಜತೆಗೆ ಒಬ್ಬರಿಂದ ಒಬ್ಬರ ಕೈಗೆ ಹೋಗಿ ಬಂದು ಬೇಗ ಗಲೀಜಾಗುತ್ತದೆ. ಜತೆಗೆ ಬೇಗ ಹರಿದು ಹೋಗುತ್ತದೆ. ಈ ನಿಟ್ಟಿನಲ್ಲಿ ಸಣ್ಣಪುಟ್ಟ ಮೊತ್ತದ ನಾಣ್ಯಗಳು ಉಪಯೋಗಿ. ನೋಟಿಗಿಂತ ನಾಣ್ಯಗಳ ಉಳಿವಿನ ಕಾಲ ಹೆಚ್ಚು.
10 ರೂ. ನಾಣ್ಯಗಳು ಚಲಾವಣೆಯಾಗುತ್ತಿರುವುದು ಇಲ್ಲಿ ಮಾತ್ರ..!
ರಾಜ್ಯದಲ್ಲಿ ಹೋಟೆಲ್‌ಗಳಲ್ಲಿ ಟಿಪ್ಸ್ ಕೊಡಲು 10 ರೂ. ನಾಣ್ಯ ಬಳಕೆಯಾಗುತ್ತಿದೆ. ಹೋಟೆಲ್‌ನವರು ಬ್ಯಾಂಕ್‌ನಿಂದ ನಾಣ್ಯ ತಂದು ಗ್ರಾಹಕರಿಗೆ ಚಿಲ್ಲರೆ ಕೊಟ್ಟರೆ ಅದನ್ನು ಗ್ರಾಹಕರು ಸಪ್ಪೈಯರ್‌ಗೆ ಟಿಪ್ಸ್ ರೂಪದಲ್ಲಿ ನೀಡುತ್ತಿದ್ದಾರೆ. ಸಪ್ಲೈಯರ್ಸ್ ಆ ಹಣವನ್ನು ಹೋಟೆಲ್ ಕ್ಯಾಶಿಯರ್‌ಗೆ ಕೊಟ್ಟು ನೋಟು ಪಡೆಯುತ್ತಿದ್ದಾರೆ. ಹೀಗೆ ಆಯಾಯ ಹೋಟೆಲ್‌ನೊಳಗೇ 10 ರೂ. ನಾಣ್ಯ ಗಿರಿಕಿ ಹೊಡೆಯುತ್ತಿದೆ.
ಇನ್ನು ದೇವಸ್ಥಾನಗಳ ಹುಂಡಿಗಳಲ್ಲಿ 10 ರೂ. ನಾಣ್ಯಗಳು ಕಳೆದ 3-4 ವರ್ಷದಿಂದ ಹೆಚ್ಚಾಗಿ ಬೀಳುತ್ತಿದೆ. ದೇವರಿಗೆ ಕಾಣಿಕೆ ಹಾಕಿದಂತೆಯೂ ಆಯಿತು, 10 ರೂ. ನಾಣ್ಯವನ್ನು ಖಾಲಿ ಮಾಡಿದಂತಾಯಿತು ಎಂಬುದು ನಾಣ್ಯದ ಬಗ್ಗೆ ತಪ್ಪು ಕಲ್ಪನೆ ಹೊಂದಿರುವ ಜನರ ಲೆಕ್ಕಾಚಾರ.
ಇನ್ನು ಭಿಕ್ಷೆ ಬೇಡುವವರಿಗೂ ಕೂಡಾ 10 ರೂ./5 ರೂ. ನಾಣ್ಯಗಳನ್ನು ಹಾಕುತ್ತಿದ್ದಾರೆ. ಅಲ್ಲಿಯೂ ಮತ್ತದೇ ಕಥೆ. ಭಿಕ್ಷೆ ಹಾಕಿದಂತೆಯೂ ಆಯ್ತು. ನಾಣ್ಯಗಳು ಖಾಲಿ ಆದಂತೆಯೂ ಆಯ್ತು ಅನ್ನೋ ಸಮಾಧಾನ.
ಆದರೆ, ಒಂದಂತೂ ಸತ್ಯ. ದೇಶದಲ್ಲಿ ಯಾವುದೇ ನಾಣ್ಯಗಳನ್ನು ಬ್ಯಾನ್ ಮಾಡಿಲ್ಲ. ಯಾವುದೇ ನಾಣ್ಯಗಳನ್ನು ಚಲಾವಣೆಯಿಂದ ಹಿಂದೆ ಪಡೆದಿಲ್ಲ.



