ಬಂಗಾರದ ಬೆಲೆ ನೋಡ ನೋಡುತ್ತಿದ್ದಂತೆಯೇ ಕೆಜಿಗೆ 60 ಲಕ್ಷ ದಾಟಿದೆ. 1 ಗ್ರಾಂಗೆ 6 ಸಾವಿರವಾದರೆ, 10 ಗ್ರಾಂ ಬಂಗಾರಕ್ಕೆ 60 ಸಾವಿರ. ಇದೇ ಲೆಕ್ಕದಲ್ಲಿ ನೋಡುತ್ತಾ ಹೋದರೆ 1 ಕೆಜಿ ಬಂಗಾರದ ಬೆಲೆ 60 ಲಕ್ಷವಾಗಲಿದೆ.
ಭಾರತದಲ್ಲಿ 10ಗ್ರಾಂ ಚಿನ್ನದ ಬೆಲೆ 60,000ರೂ. ಗಡಿ ದಾಟಿದ್ದು, ಇದು ಸಾರ್ವಕಾಲಿಕ ಏರಿಕೆಯಾಗಿದೆ. ಮಲ್ಟಿ ಕಮೋಡಿಟಿ ಎಕ್ಸ್ ಚೇಂಜ್ ನಲ್ಲಿ (ಎಂಸಿಎಕ್ಸ್ ) ಚಿನ್ನದ ಬೆಲೆ 60,000ರೂ. ಗಡಿ ದಾಟಿದೆ. ಎಂಸಿಎಕ್ಸ್ ಗೋಲ್ಡ್ ಫ್ಯೂಚರ್ ಶೇ.1.5ರಷ್ಟು ಅಧಿಕ ಮಟ್ಟದಲ್ಲಿ ಇಂದು ಟ್ರೇಡಿಂಗ್ ಆಗುತ್ತಿದ್ದು, 10 ಗ್ರಾಂ ಬೆಲೆ 60,274ರೂ.ಗೆ ಹೆಚ್ಚಳವಾಗಿತ್ತು. ಭಾರತೀಯ ಮಾರುಕಟ್ಟೆಯಲ್ಲಿ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೂಡ ಚಿನ್ನದ ಬೆಲೆ ಶೇ.0.57 ರಷ್ಟು ಏರಿಕೆ ಕಂಡಿದ್ದು, 2,000 ಡಾಲರ್ ಮಾರ್ಕ್ ಗಡಿ ದಾಟಿ ಪ್ರತಿ ಔನ್ಸ್ ಗೆ 2,001.6 ಡಾಲರ್ ದರದಲ್ಲಿ ಟ್ರೇಡ್ ಆಗಿದೆ. ಆದರೆ, ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ನ್ಯೂಯಾರ್ಕ್ ಕಮೋಡಿಟಿ ಎಕ್ಸ್ ಚೇಂಜ್ ಕೊಮೆಕ್ಸ್ ನಲ್ಲಿ ಬೆಳ್ಳಿ ದರ ಶೇ.0.73ರಷ್ಟು ಇಳಿಕೆಯಾಗಿ ಪ್ರತಿ ಔನ್ಸ್ ಗೆ 22.54 ಡಾಲರ್ ಇದೆ.
ಅಮೆರಿಕದ ಎರಡು ಬ್ಯಾಂಕ್ ಗಳಾದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಹಾಗೂ ಸಿಗ್ನೇಚರ್ ಬ್ಯಾಂಕ್ ಪತನಗೊಂಡಿವೆ. ಇನ್ನೊಂದೆಡೆ ಸ್ವಿಜರ್ಲೆಂಡ್ ಮೂಲದ ಕ್ರೆಡಿಸ್ ಸೂಸಿ ಬ್ಯಾಂಕ್ ಹಾಗೂ ಅಮೆರಿಕ ಮೂಲದ ಫಸ್ಟ್ ರಿಪಬ್ಲಿಕ್ ಬ್ಯಾಂಕ್ ಕೂಡ ಸಂಕಷ್ಟದಲ್ಲಿದ್ದು, ಉಳಿವಿಗಾಗಿ ಹೆಣಗಾಡುತ್ತಿವೆ. ಇಂಥ ಸನ್ನಿವೇಶದಲ್ಲಿ ಚಿನ್ನ ಹೂಡಿಕೆದಾರರಿಗೆ ಅತ್ಯಂತ ಸುರಕ್ಷಿತ ಆಯ್ಕೆಯಾಗಿದೆ.
10 ಗ್ರಾಂ ಚಿನ್ನ 62 ಸಾವಿರಕ್ಕೆ ಏರಿಕೆ ಸಾಧ್ಯತೆ :
ಕಳೆದ ಅಕ್ಟೋಬರ್ ನಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್ ಗೆ ಅಂದರೆ 28 ಗ್ರಾಂಗೆ 1636 ಡಾಲರ್ ಗೆ ಕುಸಿದಿತ್ತು. ಆದರೆ, ಪ್ರಸ್ತುತ 1880 ಡಾಲರ್ ಗೆ ಜಿಗಿದಿದೆ. ಮುಂದಿನ ದಿನಗಳಲ್ಲಿ ಇದು 2,000 ಡಾಲರ್ ಗೆ ಏರಿಕೆಯಾದ್ರೂ ಅಚ್ಚರಿಯಿಲ್ಲ ಎಂದು ವರದಿಗಳು ಹೇಳಿವೆ. ಇನ್ನು ಕೆಲವು ವರದಿಗಳು ಚಿನ್ನದ ಬೆಲೆ 2,078 ಡಾಲರ್ ಗಳಿಗೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಹೇಳಿವೆ. ಒಂದು ವೇಳೆ ಹೀಗೇನಾದ್ರೂ ಆದರೆ ಭಾರತದ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 62,000ರೂ.ಗೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈಗ ಖರೀದಿ ಎಷ್ಟು ಸೇಫ್?
ಚಿನ್ನ ಯಾವತ್ತಿಗೂ ಗ್ರಾಹಕರನ್ನು ಕೈಬಿಟ್ಟಿಲ್ಲ. ಯಾವತ್ತು ಖರೀದಿಸಿದ್ದರೂ ಬಂಗಾರ ಸೇಫ್ ಹೂಡಿಕೆಯೇ. ಆದರೆ ಈ ಪರಿ ಏರುತ್ತಿರುವಾಗ ಇಳಿಕೆಯೂ ಅಷ್ಟೇ ವೇಗದಲ್ಲಿ ಆಗುವ ಆತಂಕವಿರುತ್ತದೆ. ಡಿಮ್ಯಾಂಡ್ ಹೆಚ್ಚು ಬಂದಾಗ ಚಿನ್ನದ ವ್ಯಾಪಾರಿಗಳು ಕೃತಕ ಅಭಾವವನ್ನೂ ಸೃಷ್ಟಿಸಿ ಲಾಭ ಮಾಡಿಕೊಳ್ಳುತ್ತಾರೆ. ಬಂಗಾರ ಖರೀದಿ ತಪ್ಪೇನಲ್ಲ. ವಿಶ್ವಾಸಾರ್ಹತೆ ಇರುವವರಿಂದ ಮಾತ್ರ ಖರೀದಿಸಿ.



