ಮುಡಾ ಹಗರಣ ಕುರಿತಂತೆ ಸಿಎಂ ಸಿದ್ದರಾಮಯ್ಯ ಅರೆಸ್ಟ್ ಆಗ್ತಾರಾ..? ರಾಜೀನಾಮೆ ಕೊಡ್ತಾರಾ..? ಅಥವಾ ಕೇಜ್ರಿವಾಲ್ ಮಾದರಿಯಲ್ಲಿ ಅರೆಸ್ಟ್ ಆಗಿ ಜೈಲಿಗೆ ಹೋದರೂ.. ಜೈಲಿಂದಲೇ ಆಡಳಿತ ಮಾಡ್ತಾರಾ..? ಇವೆಲ್ಲ ಈಗ ರಾಜಕೀಯ ಪಡಸಾಲೆಯಲ್ಲಿ ಉದ್ಭವವಾಗಿರುವ ಪ್ರಶ್ನೆಗಳು. ಕಾರಣ ಸಾಮಾಜಿಕ ಹೋರಾಟಗಾರ ಟಿಜೆ ಅಬ್ರಹಾಂ, ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಕೊಟ್ಟಿರುವ ದೂರು.
ಸಿಎಂ ಸಿದ್ದರಾಮಯ್ಯ ವಿರುದ್ಧದ ಟಿಜೆ ಅಬ್ರಹಾಂರ ದೂರನ್ನು ಮುಂದಿಟ್ಟುಕೊಂಡು ರಾಜ್ಯಪಾಲರು ಸುದೀರ್ಘ ಒಂದೂವರೆ ಗಂಟೆಗಳ ಕಾಲ ಮಾಹಿತಿ ಪಡೆದುಕೊಂಡಿದ್ದಾರೆ. ದೂರಿನಲ್ಲಿ ಪ್ರಸ್ತಾಪವಾದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯುಷನ್ಗೆ ಅನುಮತಿ ನೀಡಬೇಕು ಎಂದಾದರೆ.. ಆಗ ಹೊಸ ಬಿಕ್ಕಟ್ಟು ಅಥವಾ ಇಕ್ಕಟ್ಟು ಸೃಷ್ಟಿಯಾಗಲಿದೆ.
ದೂರಿನ ಮೇಲೆ ಗಂಭೀರವಾಗಿ ಕಣ್ಣಾಡಿಸಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ ವಿರುದ್ಧ ವಿಚಾರಣಾ ಅನುಮತಿ ಬಗ್ಗೆ ಕಾನೂನು ತಜ್ಞರಿಂದ ವರದಿ ಪಡೆದಿದ್ದಾರೆ. ಟಿ.ಜೆ.ಅಬ್ರಾಹಂ ಸಿದ್ದರಾಮಯ್ಯ ವಿರುದ್ಧ ನೀಡಿದ್ದ ಖಾಸಗಿ ದೂರಿಗೆ ಸಂಬಂಧಿಸಿದಂತೆ ವರದಿ ರಾಜ್ಯಪಾಲರ ಕೈ ಸೇರಿದೆ. ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಪ್ರಮುಖ ಪ್ರಕರಣಗಳನ್ನ ಉಲ್ಲೇಖಿಸಿ ಕಾನೂನು ತಜ್ಞರಿಂದ ವರದಿ ಸಲ್ಲಿಕೆಯಾಗಿದ್ದು, ನ್ಯಾಯಮೂರ್ತಿ ಸಂತೋಷ್ ಹೆಗಡೆ ನೀಡಿದ್ದ ತೀರ್ಪುನ್ನೂ ಉಲ್ಲೇಖಿಸಲಾಗಿದೆ. ಈ ಬಗ್ಗೆ ಟಿವಿನೈನ್ಗೆ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದ್ದು ಮಹತ್ವದ ಬೆಳವಣಿಗೆಗಳು ತೀವ್ರಗೊಳ್ಳುವ ಸಾಧ್ಯತೆ ಇದೆ.
ಸದ್ಯ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರಿಗೂ ವಿಷಯವನ್ನು ಮನದಟ್ಟು ಮಾಡಿ ಕೊಟ್ಟಿರುವ ಸಿದ್ದರಾಮಯ್ಯಗೆ ರಾಜಭವನದ ಬೆಳವಣಿಗೆಗಳ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿಯೇ ಮುಂದಿನ ತಮ್ಮ ನಡೆ ಏನಾಗಿರಬೇಕು ಎಂಬ ಬಗ್ಗೆಯೂ ಸಿದ್ದರಾಮಯ್ಯ ಗಂಭೀರವಾಗಿ ಪ್ಲ್ಯಾನ್ ಮಾಡಿದ್ದಾರೆ. ಸಚಿವ ಸಂಪುಟ ಸಭೆಯನ್ನೂ ಕರೆದಿರುವ ಸಿಎಂ ಸಿದ್ದರಾಮಯ್ಯ, ಕ್ಯಾಬಿನೆಟ್ ಮೀಟಿಂಗ್ನಲ್ಲಿ ʻಸಿಎಂ ಸಿದ್ದರಾಮಯ್ಯ ವಿರುದ್ಧ ವಿಚಾರಣಾ ಅನುಮತಿ ನೀಡದಂತೆʼ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಒಂದು ಸಾಲಿನ ನಿರ್ಣಯ ಅಂಗೀಕರಿಸಲಿರುವ ಸಂಪುಟ ರಾಜಭವನದೊಂದಿಗೆ ಸಂಘರ್ಷಕ್ಕೆ ಇಳಿದರೂ ಆಶ್ಚರ್ಯವಿಲ್ಲ. ಈಗಾಗಲೇ ಕಾನೂನು ತಜ್ಞರಿಂದಲೂ ಅಭಿಪ್ರಾಯ ಸಂಗ್ರಹಿಸಿರುವ ಸಿದ್ದರಾಮಯ್ಯ, ಮೊನ್ನೆ ಶನಿವಾರ ಸುಪ್ರಿಂಕೋರ್ಟ್ನ ನ್ಯಾಯವಾದಿಗಳ ಜೊತೆಗೇ ಸುದೀರ್ಘ ಮಾತುಕತೆ ನಡೆಸಿದ್ದಾರೆ.
ಯಡಿಯೂರಪ್ಪ ಪ್ರಕರಣದಲ್ಲಿ ಏನಾಗಿತ್ತು..?
ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರ ವಿರುದ್ಧ ಕಾನೂನುಬಾಹಿರ ಡಿನೋಟಿಫಿಕೇಷನ್ಗಳ ಆರೋಪಗಳು ಬಂದಿದ್ದವು. ಈ ಆರೋಪಗಳ ಬಗ್ಗೆ ಕೋರ್ಟ್ಗೆ ಖಾಸಗಿ ದೂರು ಸಲ್ಲಿಸಲು ಮುಂದಾಗಿದ್ದ ವಕೀಲ ಸಿರಾಜಿನ್ ಬಾಷಾ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ 2011 ರಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದ ಅಂದಿನ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದರು. ಇದಾದ ಮೇಲೆ ಇಕ್ಕಟ್ಟಿಗೆ ಸಿಲುಕಿದ ಬಿಎಸ್ವೈ ತಮ್ಮ ಹುದ್ದೆಗೆ ರಾಜಿನಾಮೆ ನೀಡಬೇಕಾಯಿತು. ಯಾಕಂದ್ರೆ ಪ್ರಾಸಿಕ್ಯೂಷನ್ಗೆ ಅನುಮತಿ ಪಡೆದ ನಂತರ ವಕೀಲ ಸಿರಾಜಿನ್ ಬಾಷಾ ಯಡಿಯೂರಪ್ಪ ವಿರುದ್ಧ 5 ಖಾಸಗಿ ದೂರುಗಳನ್ನು ಬೆಂಗಳೂರಿನ ಲೋಕಾಯುಕ್ತ ವಿಶೇಷ ಕೋರ್ಟ್ಗೆ ಸಲ್ಲಿಸಿದ್ದರು. ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಯಡಿಯೂರಪ್ಪಗೆ ಸಮನ್ಸ್ ಜಾರಿಗೊಳಿಸಿತ್ತು. ಕೋರ್ಟ್ಗೆ ಹಾಜರಾಗಿ ಬಿಎಸ್ವೈ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. ಆದ್ರೆ, ಜಾಮಿನು ಅರ್ಜಿ ತಿರಸ್ಕರಿಸಿದ ಲೋಕಾಯುಕ್ತ ವಿಶೇಷ ಕೋರ್ಟ್ ಯಡಿಯೂರಪ್ಪರನ್ನು ನ್ಯಾಯಾಂಗ ಬಂಧನಕ್ಕೆ ನೀಡಿತ್ತು.
ಇದಕ್ಕೂ ಮೊದಲು ಯಡಿಯೂರಪ್ಪ ಸಿಎಂ ಆಗಿದ್ದುಕೊಂಡೇ ತಮ್ಮ ಪರವಾಗಿ ಸಚಿವ ಸಂಪುಟದಲ್ಲಿ ತಮ್ಮ ವಿರುದ್ಧ ಪ್ರಾಸಿಕ್ಯೂಷನ್ ಆಗದಂತೆ ನಿರ್ಧಾರ ತೆಗೆದುಕೊಂಡಿದ್ದರು. ಅಲ್ಲದೇ ಸಂಪುಟ ಸಭೆಯಲ್ಲಿ ಸ್ವತಃ ಯಡಿಯೂರಪ್ಪ ಭಾಗಿಯಾಗಿದ್ದರು. ಬಳಿಕ ಇದನ್ನು ಹೈಕೋರ್ಟ್ ಪ್ರಶ್ನಿಸಿತ್ತು.
ಆಗಿನ ಸಂಪುಟ ಸಭೆ ನಿರ್ಧಾರದಲ್ಲಿ ಖುದ್ದು ಯಡಿಯೂರಪ್ಪ ಭಾಗಿಯಾಗಿದ್ದು ಸಮಸ್ಯೆಯಾಗಿತ್ತು. ಹೀಗಾಗಿ ಈ ಹಿಂದೆ ಡಿಕೆ ಶಿವಕುಮಾರ್ ವಿಷಯದಲ್ಲಿ ಮಾಡಿದಂತೆಯೇ, ಸ್ವತಃ ಸಿದ್ದರಾಮಯ್ಯ ಸಭೆಯಿಂದ ಹೊರಗುಳಿದು ಈ ನಿರ್ಣಯ ತೆಗೆದುಕೊಳ್ಳುತ್ತಾರೆ ಎನ್ನಲಾಗಿದೆ.



