ಒಂದು ಫೋನ್ ಕಾಲ್.. ಒಂದು ಮಾತು.. ಅಭಿಮಾನ.. ಪ್ರೀತಿ.. ಗೌರವ.. ಏನು ಬೇಕಾದರೂ ಮಾಡಿಸುತ್ತೆ. ಇಲ್ಲಿ ವರ್ಕ್ ಆಗಿರುವುದು ಅದೇ. ಯುವನ ಸಿನಿಮಾ ಹೊಣೆಗಾರಿಕೆಯನ್ನು ತಾನು ಮಾಡುತ್ತೇನೆ ಎಂದು ಅಪ್ಪು ಒಪ್ಪಿಕೊಂಡಿದ್ದರು. ಆಗಲಿಲ್ಲ. ಆದರೆ.. ಅಪ್ಪು ಹೊತ್ತಿದ್ದ ಹೊಣೆಗಾರಿಕೆಯನ್ನು ಈಡೇರಿಸುವುದಕ್ಕಾಗಿ ಅಶ್ವಿನಿಯವರು ಒಂದು ಫೋನ್ ಮಾಡಿದರು. ಆಗಿ ಹೋಯ್ತು. ಅದೆಲ್ಲವೂ ಆಗಿದ್ದು ಅಪ್ಪು ಮೇಲಿನ ಅಭಿಮಾನದಿಂದ. ಗೌರವದಿಂದ. ಹಾಗೆ ನೋಡಿದರೆ.. ಯುವ ಚಿತ್ರತಂಡದಲ್ಲಿ ಪ್ರತಿಯೊಬ್ಬರ ಹಿಂದೆಯೂ ಅಪ್ಪು ಇದ್ದಾರೆ. ಪ್ರತಿಯೊಬ್ಬರಿಗೂ ಪುನೀತ್ ಅವರ ನೆನಪಿದೆ.
ಯುವ ನನ್ನ ಮಗನಲ್ಲ, ಅಪ್ಪು ಮಗ ಎಂದು ರಾಘವೇಂದ್ರ ರಾಜಕುಮಾರ್ ಹೇಳಿದ್ದರ ಹಿನ್ನೆಲೆಯನ್ನು ಸ್ವತಃ ಯುವ ಬಹಿರಂಗಪಡಿಸಿದ್ದಾರೆ. ಯುವ ರಾಜ್ ಕುಮಾರ್ ಅವರೆಂದರೆ ಪುನೀತ್ ಅವರಿಗೆ ಇಷ್ಟ. ಅಂತಹ ಯುವ ಅವರನ್ನು ಲಾಂಚ್ ಮಾಡುವ ಬಗ್ಗೆ ಪುನೀತ್ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಪುನೀತ್ ಅವರ ಕನಸು ಈಡೇರಲಿಲ್ಲವಾದರೂ.. ಅವರ ಪತ್ನಿ ಅಶ್ವಿನಿ ಅವರು ಇದನ್ನುಈಡೇರಿಸಿದರು. ಅದನ್ನು ಸ್ವತಃ ಯುವ ಕೆಲವು ಕಡೆ ಹೇಳಿಕೊಂಡಿದ್ಧಾರೆ. ಯುವ ಅವರಷ್ಟೇ ಅಲ್ಲ, ನಿರ್ದೇಶಕ ಸಂತೋಷ್ ಆನಂದರಾಮ್ ಕೂಡಾ ಹೇಳಿಕೊಂಡಿದ್ದಾರೆ.
‘ಯುವ’ ಸಿನಿಮಾ ನಿರ್ಮಾಣವಾಗಲು ಮುಖ್ಯ ಕಾರಣ ಅಶ್ವಿನಿ ಪುನೀತ್ ರಾಜ್ಕುಮಾರ್. ಅವರು ವಿಜಯ್ ಕಿರಗಂದೂರು ಅವರಿಗೆ ಕರೆ ಮಾಡಿ, ಯುವ ರಾಜ್ಕುಮಾರ್ಗಾಗಿ ಒಂದು ಸಿನಿಮಾ ಮಾಡಬೇಕು ಎಂದು ಹೇಳಿದರು. ಆಗ ವಿಜಯ್ ಅವರು ನನ್ನನ್ನು ಕರೆದು ಯುವ ಲಾಂಚ್ ಮಾಡಲು ಒಂದು ಸಿನಿಮಾ ಮಾಡಬೇಕು ಅದನ್ನು ನೀನೇ ಮಾಡಬೇಕು ಎಂದರು. ಯುವ ನಮ್ಮ ಜವಾಬ್ದಾರಿ ಎಂದುಕೊಂಡು ನಾವು ಕೆಲಸ ಮಾಡಬೇಕು ಎಂದರು. ಅದನ್ನೇ ನಾನು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಸಂತೋಷ್ ಆನಂದ ರಾಮ್.
ಪುನೀತ್ ನನಗೆ ಅಣ್ಣನಂತೆ ಜೊತೆಗಿದ್ದರು. ಪುನೀತ್ ಅವರನ್ನು ಕಳೆದುಕೊಂಡಾಗ ನನ್ನನ್ನು ಒಬ್ಬಂಟಿಯಾಗಿ ಬಿಡದೆ, ನನ್ನನ್ನು ಮತ್ತೆ ಕೆಲಸ ಮಾಡುವಂತೆ ಪ್ರೇರೇಪಿಸಿದ್ದು ಅಪ್ಪು ಅವರ ಅಭಿಮಾನಿಗಳು. ನೀವುಗಳು ಕೊಟ್ಟ ಸ್ಪೂರ್ತಿಯಿಂದಲೇ ನಾನು ಮತ್ತೆ ಕೆಲಸ ಮಾಡಲು ಸಾಧ್ಯವಾಯಿತು ಎಂದಿದ್ದಾರೆ.
ಇದೇ ಮಾತನ್ನು ಸ್ವತಃ ಯುವ ಕೂಡಾ ಹೇಳಿದ್ಧಾರೆ. ಸುಮಾರು ವರ್ಷ ಏನೇನೋ ಟ್ರೈ ಮಾಡಿದೆ. ಒಂದು ಸಿನಿಮಾ ಆಗ್ಬೇಕಿತ್ತು ಅದು ಆಗಲಿಲ್ಲ. ಯಾರನ್ನೇ ಕೇಳಿದರೂ, ಎಲ್ಲಾ ನಿರ್ದೇಶಕರು ಬ್ಯುಸಿ ಇರ್ತಾ ಇದ್ರು. ಯಾರ ಹತ್ತಿರ ಕೇಳಿದ್ರೂ ಅವಕಾಶ ಇರಲಿಲ್ಲ. ಯಾರ ಬಳಿ ಚಾನ್ಸ್ ಸಿಗಬಹುದು ಅಂತ ಕಾಯ್ತಾ ಇದ್ದೆ ಎಂದಿರುವ ಯುವ ಈ ಮಾತು ನಿಜ. ಆದರೆ ಬಹಳಷ್ಟು ಜನ ನಂಬೋದಿಲ್ಲ ಎಂದಿದ್ದಾರೆ.
ನಮ್ಮ ಚಿಕ್ಕಪ್ಪ ಯಾವಾಗಲೋ ಹೇಳಿದ್ರಂತೆ ವಿಜಯ್ ಕಿರಗಂದೂರು ಸರ್‌ಗೆ ನೀವು ಗುರು ಸಿನಿಮಾ ಮಾಡಬೇಕು ಅಂತ. ಆ ಮೇಲೆ ನಮ್ಮ ಆಂಟಿ ಹೇಳಿದ್ರು. ನೀವೇ ಗುರುನಾ ಲಾಂಚ್ ಮಾಡಬೇಕು ಅಂತ. ಆಮೇಲೆ ಎಷ್ಟೋ ಜನ ಸಂತೋಷ್ ಸರ್‌ಗೆ ನೀವು ಯುವ ಸಿನಿಮಾ ಮಾಡಿ ಅಂತ ಹೇಳಿದ್ರು. ಎಲ್ಲವೂ ಈಡೇರಿದೆ. ಈಗ ಯುವ ನಿಮ್ಮ ಮುಂದೆ ಬರ್ತಾ ಇದೆ ಎಂದು ಹೇಳ್ಕೊಂಡಿದ್ಧಾರೆ.
ಒಟ್ಟಿನಲ್ಲಿ ಯುವ ಸಿನಿಮಾ ಅಪ್ಪು ಸಿನಿಮಾ ಎಂದರೆ ಆಶ್ಚರ್ಯ ಇಲ್ಲ.



