ಏಪ್ರಿಲ್ 18ಕ್ಕೆ ಒಂದು ಸಿನಿಮಾ. ಏಪ್ರಿಲ್ 24ಕ್ಕೆ ಒಂದು ಸಿನಿಮಾ ರಿಲೀಸ್ ಆಗ್ತಿವೆ. ಎರಡು ಸಿನಿಮಾದಲ್ಲೂ ಶಿವಣ್ಣ ಇದ್ದಾರೆ. ಆದರೆ ಎರಡೂ ಚಿತ್ರಗಳಲ್ಲಿ ಶಿವಣ್ಣ ಹೀರೋ ಅಲ್ಲ. ಆದರೆ, ಶಿವಣ್ಣನದ್ದೇ ಕೇಂದ್ರ ಪಾತ್ರ. ಒಂದು ವೀರಚಂದ್ರಹಾಸ. ಮತ್ತೊಂದು ಫೈರ್ ಫ್ಲೈ.
ವೀರ ಚಂದ್ರಹಾಸ : ಸಂಗೀತ ನಿರ್ದೇಶಕ ರವಿ ಬಸ್ರೂರು ನಿರ್ದೇಶನ ಮಾಡಿರುವ ಯಕ್ಷಗಾನ ಕುರಿತ ‘ವೀರ ಚಂದ್ರಹಾಸ’ ಏಪ್ರಿಲ್ 18ಕ್ಕೆ ರಿಲೀಸ್ ಅಗುತ್ತಿದೆ. ಈ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಶಿವಣ್ಣ ಯಕ್ಷಗಾನದ ವೇಷ ಹಾಕಿದ್ದಾರೆ. ಈ ಚಿತ್ರೀಕರಣ ನಡೆದಿರುವುದು ಶಿವಣ್ಣ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾಗ. ಯಕ್ಷಗಾನ ವೇಷಧಾರಿಯಾಗಿ ಡಾ.ರಾಜ್ ಕುಮಾರ್ ನಟಿಸಿಲ್ಲ ಎನ್ನುವುದೇ ಶಿವಣ್ಣ ಪಾತ್ರದ ತೂಕ ಹೆಚ್ಚಿಸಿದೆ.
ನಾಡಪ್ರಭು ಪುಟ್ಟಸ್ವಾಮಿ ಎಂಬ ಪಾತ್ರದಲ್ಲಿ ಶಿವರಾಜ್‌ಕುಮಾರ್ ನಟಿಸಿದ್ದು, ಹಿಂದೆಂದೂ ಕಂಡಿರದಂತಹ ಶೈಲಿಯಲ್ಲಿ ಅವರು ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ‘ವೀರ ಚಂದ್ರಹಾಸ’ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ವಿತರಣೆ ಮಾಡುತ್ತಿದ್ದು, ಎನ್ ಎಸ್ ರಾಜಕುಮಾರ್ ಈ ಸಿನಿಮಾ ಹಣ ಹಾಕಿದ್ದಾರೆ. ಈಚೆಗೆ ಈ ಚಿತ್ರಕ್ಕೆ ನಟ ಸುದೀಪ್ ಕೂಡ ಶುಭ ಹಾರೈಸಿದ್ದಾರೆ.
ಫೈರ್ ಫ್ಲೈ : ಶಿವಣ್ಣನ ಪುತ್ರಿ ನಿವೇದಿತಾ ಅವರು ಮೊದಲ ಬಾರಿಗೆ ಸಿನಿಮಾ ನಿರ್ಮಾಣ ಮಾಡಿರುವ ಸಿನಿಮಾ ಫೈರ್ ಫ್ಲೈ. ಶ್ರೀ ಮುತ್ತು ಸಿನಿ ಸರ್ವೀಸಸ್ ಬ್ಯಾನರ್ ಮೂಲಕ ಈ ಹಿಂದೆ ಧಾರಾವಾಹಿ, ವೆಬ್ ಸೀರೀಸ್ ನಿರ್ಮಾಣ ಮಾಡಿದ್ದ ನಿವೇದಿತಾ ಶಿವರಾಜ್‌ಕುಮಾರ್ ಈ ಬಾರಿ ‘ಫೈರ್ ಫ್ಲೈ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ವಂಶಿ ಇದರ ನಿರ್ದೇಶಕ ಕಮ್ ಹೀರೋ. ಈ ಚಿತ್ರ ರಿಲೀಸ್ ಆಗುವುದು ಡಾ.ರಾಜ್ ಹುಟ್ಟುಹಬ್ಬದ ದಿನ. ಏಪ್ರಿಲ್ 24ಕ್ಕೆ.
ಈ ಸಿನಿಮಾದಲ್ಲೂ ಶಿವಣ್ಣ ಒಂದು ಅತಿಥಿ ಪಾತ್ರ ಮಾಡಿದ್ದಾರೆ. ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿರುವ ಶಿವಣ್ಣ ಕೈಯಲ್ಲಿ ಪಿಜ್ಜಾ ಹಿಡಿದುಕೊಂಡು ಟ್ರೇಲರ್‌ನಲ್ಲಿ ಅಚ್ಚರಿ ನೀಡಿದ್ದಾರೆ. ಈ ಸಿನಿಮಾದಲ್ಲಿ ಸುಧಾರಾಣಿ, ಅಚ್ಯುತ್ ಕುಮಾರ್, ರಚನಾ ಇಂದರ್, ಶೀತಲ್ ಶೆಟ್ಟಿ ಮುಂತಾದವರು ನಟಿಸಿದ್ದು, ಚರಣ್ ರಾಜ್ ಅವರು ಹಾಡುಗಳಿಗೆ ಸಂಗೀತ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯರಿಂದ ಟ್ರೇಲರ್ ರಿಲೀಸ್ :
ಯಕ್ಷಗಾನವನ್ನೇ ಪ್ರಧಾನವಾಗಿಟ್ಟುಕೊಂಡು ಮಾಡಿರುವಂತಹ ಸಿನಿಮಾ ಟ್ರೇಲರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರಿಲೀಸ್ ಮಾಡಿದ್ದಾರೆ. “ಕನ್ನಡದ ಸೃಜನಶೀಲ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ನಿರ್ದೇಶನದ ಯಕ್ಷಗಾನ ಕಲೆ ಆಧಾರಿತ ‘ವೀರ ಚಂದ್ರಹಾಸ’ ಸಿನಿಮಾದ ಟ್ರೇಲರ್ ಅನ್ನು ಬಿಡುಗಡೆಗೊಳಿಸಿ, ಹೊಸ ಪ್ರಯೋಗಕ್ಕೆ ಮುಂದಾಗಿರುವ ಚಿತ್ರತಂಡದ ಪ್ರಯತ್ನ ಯಶಸ್ವಿಯಾಗಲಿ” ಎಂದು ಹಾರೈಸಿದ್ದಾರೆ.
ಪಾರ್ವತಮ್ಮನ ಹಾದಿ ಹಿಡೀತಾರಾ ನಿವೇದಿತಾ..?
ಪಾರ್ವತಮ್ಮನ ಹಾದಿಯಲ್ಲಿ ಹೆಜ್ಜೆ ಇಟ್ಟಿರುವ ನಿವೇದಿತಾ ಅವರ ಎದುರು, ಕುಟುಂಬದಲ್ಲಿ ಗೆದ್ದಿರುವವರ ದೊಡ್ಡ ಪಟ್ಟಿಯೇ ಇದೆ. ತಾಯಿ ಗೀತಾ ಹಾಗೂ ಚಿಕ್ಕಮ್ಮ ಅಶ್ವಿನಿ ಕೂಡಾ ನಿರ್ಮಾಪಕಿಯಾಗಿ ಗೆದ್ದವರು. ಹೀಗಾಗಿ ನಿವೇದಿತಾ ನಿರ್ಮಾಣದ ಸಿನಿಮಾ ಹೇಗಿರುತ್ತದೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.



