ರಾಜ್ಯದ ಸಿಎಂ ಸಿದ್ಧರಾಮಯ್ಯ ಅವರು ನಿವೃತ್ತಿಯಾಗುವುದು ಎಂದರೆ ಸಂಚಲನ ಸೃಷ್ಟಿಯಾಗುತ್ತದೆ. ರಾಜ್ಯ ರಾಜಕೀಯದಲ್ಲಿ ಎರಡು ಬಾರಿ ಸಿಎಂ ಆಗಿರುವ, ಎರಡು ಬಾರಿ ವಿಪಕ್ಷ ನಾಯಕರಾಗಿರುವ, ಎರಡು ಬಾರಿ ಉಪಮುಖ್ಯಮಂತ್ರಿಯಾಗಿರುವ.. ಏಕೈಕ ಲೀಡರ್ ಸಿದ್ಧರಾಮಯ್ಯ ಅವರು ಮಾತ್ರ. ಹೀಗಿರುವ ಸಿದ್ಧರಾಮಯ್ಯ ಅವರು ʻರಾಜಕೀಯ ಸ್ಪರ್ಧೆ ನಿವೃತ್ತಿʼ ಎಂದರೆ ಸಂಚಲನ ಸೃಷ್ಟಿಯಾಗಬೇಕು ಎನ್ನುವುದು ಸಹಜ. ಆದರೆ.. ಸಂಚಲನ ಆಗುವುದಿಲ್ಲ. ಏಕೆಂದರೆ.. ಈ ರೀತಿ ಹೇಳಿಕೆ ಕೊಡುವುದು ಸಿದ್ಧರಾಮಯ್ಯ ಅವರಿಗೆ ಹೊಸದಲ್ಲ. ಇದೇ ನನ್ನ ಲಾಸ್ಟ್ ಎಲೆಕ್ಷನ್ ಎಂದು ಹೇಳಿ ಮೈಲೇಜ್ ತೆಗೆದುಕೊಳ್ಳೋದೂ ಹೊಸದಲ್ಲ.
2013ರಲ್ಲಿ ಸಿದ್ಧರಾಮಯ್ಯ ಇನ್ನೂ ಸಿಎಂ ಆಗದೇ ಇರುವ ದಿನಗಳಲ್ಲಿ ನಡೆದ ಎಲೆಕ್ಷನ್ನಿನಲ್ಲೂ ಇದೇ ಹೇಳಿಕೆ ನೀಡಿದ್ದರು. ಅದಾದ ಮೇಲೆ 2018ರಲ್ಲಿ ಹೈಕಮಾಂಡ್ ಒತ್ತಾಯದ ಮೇಲೆ ನಿಲ್ಲುತ್ತಿದ್ದೇನೆ, ಅಷ್ಟೇ, ಇದೇ ನನ್ನ ಕೊನೆಯ ಎಲೆಕ್ಷನ್ ಎಂದಿದ್ದರು. ಚಾಮುಂಡೇಶ್ವರಿ ನನ್ನ ಸ್ವಕ್ಷೇತ್ರ. ಇಲ್ಲಿಂದ ಶುರುವಾದ ರಾಜಕೀಯ, ಇಲ್ಲಿಂದಲೇ ಎಂಡ್ ಆಗಲಿ ಎಂಬ ಸೆಂಟಿಮೆಂಟ್ ಕಾರಣವನ್ನೂ ಕೊಟ್ಟಿದ್ದರು. ಆದರೆ, ಆ ವರ್ಷ ಸಿದ್ಧರಾಮಯ್ಯ ಅವರನ್ನು ಶಾಸಕರನ್ನಾಗಿ ಉಳಿಸಿ, ಗೆಲ್ಲಿಸಿದ್ದು ಚಾಮುಂಡೇಶ್ವರಿ ಅಲ್ಲ. ಬಾದಾಮಿ.
ಅದಾದ ನಂತರವೂ ಕೊನೆಯೇನೂ ಆಗಲಲ್ಲ. 2023ಕ್ಕೆ ರಾಜಕೀಯ ಸ್ಪರ್ಧೆ ನಿವೃತ್ತಿ ಎನ್ನುವುದು ಶಿಫ್ಟ್ ಆಯ್ತು. ಈಗ ಮತ್ತೆ 2028ಕ್ಕೆ ಮಂದಕ್ಕೆ ಹೋಗಿದೆ. ನನ್ನ ಬೆಂಬಲಿಗರು, ಹಿಂಬಾಲಕರು 2028ಕ್ಕೂ ನೀವೇ ನೇತೃತ್ವ ವಹಿಸಿ ಎನ್ನುತ್ತಿದ್ದಾರೆ. ನಾನಿನ್ನೂ ಡಿಸೈಡ್ ಮಾಡಿಲ್ಲ ಎಂದು ಹೇಳಿದ್ದಾರೆ. ರಾಜಕೀಯದಲ್ಲಿ ಇಂತಹ ಮಾತುಗಳು ಸುಖಾಸುಮ್ಮನೆ ಬರಲ್ಲ.
ಸಿದ್ಧರಾಮಯ್ಯ ಹೀಗೆ ಹೇಳುತ್ತಿದ್ದಂತೆ ಸಂತೋಷ್ ಲಾಡ್, ಮಹದೇವಪ್ಪ, ಯತೀಂದ್ರ, ಜಮೀರ್, ಸತೀಶ್ ಜಾರಕಿಹೊಳಿ, ಭೈರತಿ ಸುರೇಶ್, ಪರಮೇಶ್ವರ್, ಬೋಸರಾಜು.. ಇತ್ಯಾದಿ ಇತ್ಯಾದಿ ನಾಯಕರೆಲ್ಲ ಹೌದು, ಹೌದು.. ಸಿದ್ಧರಾಮಯ್ಯ ನೇತೃತ್ವ ಬೇಕೇ ಬೇಕು ಎಂದು ಎಂದಿದ್ದಾರೆ. ನೋನೋನೋ.. ನಾನೇನೂ ಹೇಳಲ್ಲ ಎಂದಿರೋದು ರಾಮಲಿಂಗಾ ರೆಡ್ಡಿ ಮಾತ್ರ. ಡಿಕೆ ಸುರೇಶ್ ಅವರು ಸಿದ್ಧರಾಮಯ್ಯ ಹೇಳಿಕೆಯಲ್ಲಿ ತಪ್ಪೇನೂ ಇಲ್ಲ ಎಂದಿದ್ದಾರೆ. ಹಾಗೆ ಹೇಳಿ ಆದ ಮೇಲೆ.. ನಾನು ಮೈಗೆ ಎಣ್ಣೆ ಹಚ್ಚಿಕೊಳ್ಳಲ್ಲ ಎಂದು ಮುಸಿಮುಸಿ ನಕ್ಕಿರುವುದು ಇಂಟ್ರೆಸ್ಟಿಂಗ್.
ಸಿದ್ಧರಾಮಯ್ಯ ನಿವೃತ್ತಿ ಆಗಲ್ಲ ಎಂಬುದರ ಸಂದೇಶ ಏನಿರಬಹುದು..?
ಆರೋಗ್ಯವಾಗಿದ್ದೇನೆ. ಅಧಿಕಾರ ಹಸ್ತಾಂತರ ಅಗತ್ಯ ಇಲ್ಲ. ಮುಂದಿನ ಚುನಾವಣೆಗೂ ರೆಡಿ ಇದ್ದೇನೆ. ಬೇರೆ ಲೀಡರ್ ಶಿಪ್ ಬೇಕು ಎಂದರೆ ಈಗಲ್ಲ, 2028ಕ್ಕೆ ನೋಡೋಣ ಎಂಬ ಸಂದೇಶವನ್ನು ಸಿದ್ಧರಾಮಯ್ಯ ತಲುಪಿಸಬೇಕಾದವರಿಗೆ ತಲುಪಿಸಿದ್ದಾರೆ. ಜೊತೆಗೆ ತಮ್ಮ ಹಿಂದೆ ಇರುವ ಸಚಿವರು, ನಾಯಕರ ಮೂಲಕ ʻ2028ಕ್ಕೂ ಸಿದ್ಧರಾಮಯ್ಯ ಹೆಸರು ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಅನಿವಾರ್ಯʼ ಎಂದು ಸಿಗ್ನಲ್ಲು ಕೊಟ್ಟಿದ್ದಾರೆ. ಅದರ ಅರ್ಥ ಇಷ್ಟೇ. ನೀವು ಉಳೀಬೇಕು ಅಂದ್ರೆ.. ನಮ್ಮನ್ನು ಉಳಿಯೋಕೆ ಬಿಡಿ. ನಮ್ಮವರನ್ನು ಮಾತ್ರವೇ ಬೆಳೆಯೋಕೆ ಬಿಡಿ ಎಂದು ಹೇಳುವುದು. ದಟ್ಸ್ ಇಟ್.
ಈ ಕೊನೆಯ ಪುಟಗಳಲ್ಲಿಯೂ ಸಿದ್ಧರಾಮಯ್ಯ ತಂತ್ರಗಾರಿಕೆ ಯಶಸ್ವಿ ಆಗುತ್ತಾ..? ಇಂಟ್ರೆಸ್ಟಿಂಗ್ & ಸಸ್ಪೆನ್ಸ್.



