ಡಾ.ಭುಜಂಗ ಶೆಟ್ಟಿ. ಇವರನ್ನು ಕನ್ನಡಿಗರು ಮರೆಯಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ನೇತ್ರದಾನ ಎಂಬುದನ್ನ ಚಳವಳಿಯಂತೆ, ತಪಸ್ಸಿನಂತೆ, ಯಜ್ಞದಂತೆ ನಡೆಸಿದವರು ಡಾ.ಭುಜಂಗ ಶೆಟ್ಟಿ. ವಯಸ್ಸು 69. ಸುಮಾರು 25 ವರ್ಷಗಳಿಂದ ಡಯಾಬಿಟೀಸ್ ಜೊತೆ ಹಠಕ್ಕೆ ಬಿದ್ದು ಹೋರಾಟ ನಡೆಸಿದ್ದ ಭುಜಂಗ ಶೆಟ್ಟರು, ಹಾರ್ಟ್ ಅಟ್ಯಾಕ್`ನಿಂದಾಗಿ ಮೃತಪಟ್ಟಿದ್ದಾರೆ. ಭುಜಂಗ ಶೆಟ್ಟರು ಡಾಕ್ಟರ್. ನಾರಾಯಣ ನೇತ್ರಾಲಯದ ಸ್ಥಾಪಕರು.
ಕರ್ನಾಟಕದಲ್ಲಿ ಕಣ್ಣು ದಾನ ಮಾಡುವುದಕ್ಕೆ ಜನರು ಒಪ್ಪದೇ ಇರುವ, ವೈದ್ಯರನ್ನೇ ನಂಬದಂತಿರುವ ಸಂದರ್ಭದಲ್ಲಿ ಡಾ.ರಾಜ್ ಅವರನ್ನು ನೇತ್ರದಾನ ಮಾಡುವಂತೆ ಪ್ರೇರೇಪಿಸಿದರು. ಡಾ.ರಾಜ್ ನೇತ್ರದಾನದ ನಂತರ ಕರ್ನಾಟಕದಲ್ಲಿ ನೇತ್ರದಾನದ ಬಗ್ಗೆ ಅರಿವು ಮೂಡಲಾರಂಭಿಸಿತು. ಈಗ ಭುಜಂಗ ಶೆಟ್ಟರೂ ಇಲ್ಲ. ಡಾ. ರಾಜ್ ಅವರೂ ಇಲ್ಲ. ಪುನೀತ್ ನಿಧನದ ಸಂದರ್ಭದಲ್ಲಿ ಒಂದು ಘಟನೆ ನೆನಪಿಸಿಕೊಂಡಿದ್ದರು ಡಾ.ಭುಜಂಗ ಶೆಟ್ಟರು.
ನಾವು ಒಂದು ದಿನ ಡಾ.ರಾಜ್ ಮನೆಗೆ ಹೋದೆವು. ಅಣ್ಣಾವ್ರು ನನ್ನಿಷ್ಟದ ಕಲಾವಿದ. ಅವರ ಯಾವ ಚಿತ್ರಗಳನ್ನೂ ನೋಡದೇ ಬಿಟ್ಟವನಲ್ಲ. ಕೆಲವು ಚಿತ್ರಗಳನ್ನು ಹತ್ತಾರು ಬಾರಿ ನೋಡಿದ್ದೇನೆ. ಅಷ್ಟು ಅಭಿಮಾನ. ಅವರ ಮನೆಗೆ ಹೋಗಿ ಪರಿಚಯ ಮಾಡಿಕೊಂಡು ಈ ರೀತಿ ನೇತ್ರದಾನ ಮಾಡುವುದಕ್ಕೆ ಸಹಾಯ ಮಾಡಬೇಕು ಎಂದೆ. ಅವರ ಮುಖಭಾವ ಸ್ವಲ್ಪ ಬದಲಾಯಿತು. ಏನೋ ಯೋಚನೆ.. ಕೆಲವು ನಿಮಿಷಗಳ ನಂತರ ಆಯಿತು, ಆಗಬಹುದು ಎಂದರು. ನಾಳೆ ಬರುತ್ತೇವೆ ಎಂದು ಹೇಳಿ ಬಂದೆ.. ಮಾರನೇ ದಿನ ಅವರ ಮನೆಗೆ ಹೋದಾಗ ಡಾ.ರಾಜ್ ಸಿದ್ಧರಾಗಿದ್ದರು. ಬನ್ನಿ, ಬನ್ನಿ, ನೋಡಿ.. ಈ ಕಣ್ಣು ಇದೂವರೆಗೆ ಇಡೀ ಜಗತ್ತನ್ನು ನೋಡಿದೆ. ನಾನು ನೋಡಿದ್ದು ಸಾಕು, ಇನ್ನು ಬೇರೆಯವರಿಗೆ ಬೆಳಕಾಗಲಿ ಎಂದರು. ತೆಗೆದುಕೊಂಡು ಹೋಗಿ ಎಂದರು. ನಾನು ಮೊದಲು ಅವರ ಮುಗ್ಧತೆಗೆ ಬೆರಗಾದೆ. ನಂತರ ಅವರ ದೊಡ್ಡತನಕ್ಕೆ ಶರಣಾದೆ. ಏಕೆಂದರೆ ಅಣ್ಣಾವ್ರಿಗೆ ನೇತ್ರದಾನ ಎಂದರೆ ಸತ್ತ ಮೇಲೆ ತೆಗೆದುಕೊಳ್ಳುವುದು ಎಂದು ಗೊತ್ತಿರಲಿಲ್ಲ. ಬದುಕಿದ್ದಾಗಲೇ ಕಣ್ಣು ತೆಗೆದುಕೊಂಡು ಹೋಗುತ್ತಾರೆ ಎಂದುಕೊಂಡಿದ್ದರು. ನಂಬಿಕೆಯೋ..ಮುಗ್ಧತೆಯೋ.. ಆ ಮಾತು ಬೇರೆ. ಆದರೆ ಬದುಕಿರುವಾಗಲೇ ಕಣ್ಣು ತೆಗೆದುಕೊಳ್ಳಿ ಅನ್ನೋದಕ್ಕೆ ಮುಗ್ಧತೆಯಲ್ಲ, ದೊಡ್ಡ ಹೃದಯವೂ ಇರಬೇಕು ಎಂದು ಭಾವುಕರಾಗಿದ್ದರು ಡಾ.ಭುಜಂಗ ಶೆಟ್ಟಿ.
ಅದಾದ ಮೇಲೆ ಅವರಿಗೆ ಎಲ್ಲವನ್ನೂ ವಿವರಿಸಿದ್ದೆ. ಆಗ ಸ್ವಲ್ಪ ಆತಂಕದಿಂದಿದ್ದ ಅವರ ಮುಖದಲ್ಲಿ ಒಂದು ನಿರುಮ್ಮಳ ಭಾವನೆ ಮೂಡಿತು. ನೇತ್ರದಾನ ಮಾಡುವುದು ಪುಣ್ಯದ ಕೆಲಸ ಎಂದು ಜನ ಭಾವಿಸುವುದಕ್ಕೆ ಶುರು ಮಾಡಿದ್ದು, ಡಾ.ರಾಜ್ ನೇತ್ರದಾನದ ನಂತರ. ಅದಾದ ಮೇಲೆ ಪುನೀತ್ ರಾಜ್ ಕುಮಾರ್ ಅವರ ನಿಧನದ ನಂತರವಂತೂ ನೇತ್ರದಾನ ಅನ್ನೋದು ಚಳವಳಿಯೇ ಆಗಿ ಹೋಯ್ತು.
ಇಡೀ ದೇಶದಲ್ಲಿ ಅತೀ ಹೆಚ್ಚು ಜನ ನೇತ್ರದಾನ ಮಾಡಿರುವ ರಾಜ್ಯ ಎಂದರೆ ಅದು ಕರ್ನಾಟಕ. ಅದಕ್ಕೆಲ್ಲ ಸ್ಫೂರ್ತಿಯಾದವರು, ಕಾರಣಕರ್ತರಾದವರು ಡಾ.ಭುಜಂಗ ಶೆಟ್ಟಿ.



