ಬಿಜೆಪಿ ಸರ್ಕಾರ ಇದ್ದಾಗ ಏನೇನು ಆಡಳಿತಾತ್ಮಕ ಕ್ರಮ ತೆಗೆದುಕೊಂಡಿತ್ತೋ.. ಏನೇನು ಕಾಮಗಾರಿಗಳಿಗೆ ಅನುಮೋದನೆ ಕೊಟ್ಟಿತ್ತೋ.. ಯಾವ್ಯಾವ ಕಾಯಿದೆಗಳನ್ನು ಜಾರಿಗೆ ತಂದಿತ್ತೋ.. ಎಲ್ಲವನ್ನೂ ಕಸದಬುಟ್ಟಿಗೆ ಹಾಕುವ ಕೆಲಸಕ್ಕೆ ಮುಂದಾಗಿದೆ ಕಾಂಗ್ರೆಸ್. ಯಾವುದನ್ನೂ ಬಿಟ್ಟಿಲ್ಲ. ಇದು ಒಂದು ರೀತಿಯಲ್ಲಿ ಸೇಡಿನ ಹೆಜ್ಜೆಯಾ.. ಸರ್ಕಾರದ ಮೊದಲ ವಾರದ ರಿಪೋರ್ಟ್ ಕಾರ್ಡಿನಲ್ಲಿರುವುದು ಎಚ್ಚರಿಕೆಯ ಮಾತುಗಳು ಹಾಗೂ ರಿವರ್ಸ್ ಆದೇಶಗಳು.
ಮೊದಲನೆಯದಾಗಿ ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿದ್ದ ಎಲ್ಲ ಕಾಮಗಾರಿಗಳಿಗೂ ಬ್ರೇಕ್ ಹಾಕಿದೆ ನೂತನ ಸರ್ಕಾರ. ಬೆಂಗಳೂರು ಒಂದರಲ್ಲಿಯೇ ಸುಮಾರು 8 ಸಾವಿರ ಕೋಟಿಯ ಕಾಮಗಾರಿಗಳು ಸ್ಥಗಿತಗೊಂಡಿವೆ. ಹಣ ಬಿಡುಗಡೆಯನ್ನೂ ಸ್ಥಗಿತಗೊಳಿಸೆ. ಅಷ್ಟೇ ಅಲ್ಲ, ನಿಗಮ/ಮಂಡಳಿಗಳಲ್ಲಿ ನಡೆಯುತ್ತಿದ್ದ ಯೋಜನೆಗಳಿಗೂ ಬ್ರೇಕ್ ಹಾಕಿದೆ. ಇದ್ದಕ್ಕಿದ್ದಂತೆ ಎಲ್ಲ ಕೆಲಸಗಳೂ ನಿಂತಿವೆ. ಇದು ಸಿದ್ದರಾಮಯ್ಯನವರ ರೂಲ್ಸ್.
ಅತ್ತ ಪೊಲೀಸ್ ಇಲಾಖೆಗೆ ಓಪನ್ ಆಗಿಯೇ ಎಚ್ಚರಿಕೆ ಕೊಟ್ಟಿದ್ದಾರೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್. ನೀವು ಕೇಸರಿಕರಣಗೊಂಡಿದ್ದೀರಿ. ಹುಷಾರ್, ನಮ್ಮ ಸರ್ಕಾರದಲ್ಲಿ ಹಾಗೆಲ್ಲ ನಡೆಯಲ್ಲ ಎಂದಿದ್ದಾರೆ. ಹಿರಿಯ ಐಪಿಎಸ್/ಐಎಎಸ್ ಅಧಿಕಾರಿಗಳು ನಾವು ಮಾಡಿರೋದು ಕಾನೂನಿನ ಪ್ರಕಾರವೇ ಮಾಡಿದ್ದೇವೆ. ಹಿಂಗಾದ್ರೆ ಹೆಂಗೆ ಎನ್ನುತ್ತಿದ್ದಾರೆ.
ಅಷ್ಟೇ ಅಲ್ಲ, ಬಿಜೆಪಿ ಅಧಿಕಾರದಲ್ಲಿದ್ದಾಗ ಜಾರಿಗೆ ತಂದಿದ್ದ ಗೋಹತ್ಯೆ ನಿಷೇಧ ಕಾಯ್ದೆ, ಹಿಜಾಬ್ ನಿಷೇಧ, ಮತಾಂತರ ನಿಷೇಧ ಕಾಯ್ದೆ ಸೇರಿದಂತೆ ಹಲವು ಕಾಯ್ದೆ ವಾಪಸ್ ಪಡೆಯುವ ಎಚ್ಚರಿಕೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಬಜರಂಗದಳ ನಿಷೇಧ ಕೂಡಾ ಪರಿಶೀಲಿಸುತ್ತೇವೆ ಎಂದಿದ್ದಾರೆ.
ಇನ್ನು ಈಗಾಗಲೇ ಪಠ್ಯ ಪುಸ್ತಕಗಳ ಪುನರ್ ಪರಿಶೀಲನೆಗೆ ಒತ್ತಾಯ ಕೇಳಿ ಬರುತ್ತಿದೆ. ಬಿಜೆಪಿ ಸರ್ಕಾರದಲ್ಲಿ ನಡೆದ ವರ್ಗಾವಣೆಗಳನ್ನೂ ಬಿಡದೆ ಹಿಂಪಡೆಯುವ ಕೆಲಸವೂ ನಡೆಯುತ್ತಿದೆ.
ಇನ್ನು ಈಗಾಗಲೇ ಅಶ್ವತ್ಥ್ ನಾರಾಯಣ್ ಅವರ ವಿರುದ್ಧ ಕೇಸ್ ದಾಖಲಿಸಲು ಸೂಚನೆ ನೀಡಲಾಗಿದೆ. ಚುನಾವಣೆ ವೇಳೆ ಟಿಪ್ಪು ಅವರಿಗೆ ಆದ ಗತಿಯೇ ಸಿದ್ದರಾಮಯ್ಯ ಅವರಿಗೂ ಆಗಬೇಕು ಎಂದು ಮಾಡಿದ್ದ ಭಾಷಣ, ಸಿದ್ದರಾಮಯ್ಯ ಅವರನ್ನು ಕೊಲ್ಲಲು ಕುಮ್ಮಕ್ಕು ನೀಡಿದಂತೆ ಎನ್ನುವುದು ಕಾಂಗ್ರೆಸ್ ಆರೋಪವಾಗಿತ್ತು. ಈಗ ಅದು ಕೇಸ್ ಆಗಿದೆ.
ಅತ್ತ ಪ್ರಿಯಾಂಕ್ ಖರ್ಗೆಯವರೇನೋ ಈಗಾಗಲೇ ಪಿಎಸ್‍ಐ ನೇಮಕಾತಿ ಹಗರಣ, ಬಿಟ್ ಕಾಯಿನ್ ಹಗರಣ ಸೇರಿದಂತೆ ಬಿಜೆಪಿ ಅಧಿಕಾರಾವಧಿಯಲ್ಲಿ ನಡೆದಿದ್ದ ಎಲ್ಲವನ್ನೂ ಮರುತನಿಖೆ ನಡೆಸೋದಾಗಿ ವಾರ್ನಿಂಗ್ ಕೊಟ್ಟಿದ್ದಾರೆ.
ಒಟ್ಟಿನಲ್ಲಿ ನಿಜವಾದ ರಾಜಕೀಯ ಶುರುವಾಗಿದೆ.



