ಉಪೇಂದ್ರ ಅಭಿನಯದ ಚಿತ್ರಗಳು ಅಂದ್ರೇನೇ ದಾಖಲೆ. ಆದರೆ ಅವರೇ ನಿರ್ದೇಶಿಸಿದ ಚಿತ್ರಗಳೆಂದರೆ ಅದರ ಖದರೇ ಬೇರೆ. ಈಗ ಯುಐ ಯುಐ ಬಾಕ್ಸಾಫೀಸ್ ರಿಪೋರ್ಟ್ ಬಂದಿದ್ದು, 2 ದಿನದ ಒಟ್ಟಾರೆ ಕಲೆಕ್ಷನ್ 37 ಕೋಟಿಯಂತೆ. ಯುಐ. ಉಪೇಂದ್ರ ತುಂಬಾ ವರ್ಷಗಳ ನಂತರ ನಟಿಸಿ, ನಿರ್ದೇಶಿಸಿದ್ದ ಸಿನಿಮಾ. ಸಿನಿಮಾ ನೋಡಿದವರೆಲ್ಲ ʻನಮ್ ಉಪ್ಪೀ.. ತಲೆಗೆ ಹುಳ ಬಿಟ್ಟಿದ್ದಾನೆ ಗುರೂ.. ʼ ಎಂದು ಪ್ರೀತಿಯಿಂದ ಹೇಳ್ತಾನೇ ನೋಡ್ತಿದ್ದಾರೆ. ಸಿನಿಮಾ ಗೆದ್ದಿದೆ ಎನ್ನುವುದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನ ಮಲ್ಟಿಪ್ಲೆಕ್ಸ್ ಶೋ ಸಂಖ್ಯೆ ಹೆಚ್ಚಳವಾಗಿದೆ. ಬುಕ್ ಮೈ ಶೋನಲ್ಲಿ ಕಾಟೇರದ ಓಪನಿಂಗ್ ಡೇ ಬಾಕ್ಸಾಫೀಸ್ ದಾಖಲೆ ಬ್ರೇಕ್ ಆಗಿದೆ. ಟಿಕೆಟ್ ಬುಕ್ಕಿಂಗ್ ಕೇವಲ ಬುಕ್ ಮೈ ಶೋನಲ್ಲಷ್ಟೇ ಆಗುವುದಿಲ್ಲ, ಪೇಟಿಎಂ, ಥಿಯೇಟರುಗಳ ವೆಬ್ ಸೈಟ್ ಸೇರಿದಂತೆ ಬೇರೆ ಬೇರೆ ಆಪ್ʻಗಳಲ್ಲಿಯೂ ಆಗುತ್ತವೆ. ಬುಕ್ ಮೈ ಶೋ, ನಂ.1 ಸ್ಥಾನದಲ್ಲಿದೆ, ಅಷ್ಟೇ.
ಇನ್ನು ಯುಐ ಓಪನಿಂಗ್, ಕಾಟೇರ ಚಿತ್ರದ ದಾಖಲೆ ಬ್ರೇಕ್ ಮಾಡಿದೆ. ಕಾಟೇರ ಚಿತ್ರವನ್ನು ರಿಲೀಸ್ ಆದ ಮೊದಲ ದಿನ 1 ಲಕ್ಷದ 4 ಸಾವಿರ ಪ್ರೇಕ್ಷಕರು ನೋಡಿದ್ದರು. ಯುಐ ಸಿನಿಮಾ ನೋಡಿದವರ ಸಂಖ್ಯೆ 1 ಲಕ್ಷ, 9 ಸಾವಿರ. ಮೊದಲ ದಿನ 18 ಕೋಟಿ ಕಲೆಕ್ಷನ ಆಗಿದ್ದು, ಎರಡನೇ ದಿನ 19 ಕೋಟಿ ಕಲೆಕ್ಷನ್ ಆಗಿದೆ. ಯುಐ ಸಿನಿಮಾವನ್ನು 2ನೇ ದಿನ ನೋಡಿದವರ ಸಂಖ್ಯೆ 1 ಲಕ್ಷದ 20 ಸಾವಿರ ದಾಟಿದೆ. ಎರಡನೇ ದಿನದಲ್ಲಿ ಥಿಯೇಟರ್ ಸಂಖ್ಯೆ ಹೆಚ್ಚಾಗಿದೆ. ಶೋಗಳ ಸಂಖ್ಯೆ ಹೆಚ್ಚಿಸಲಾಗಿದೆ. ಬಹುತೇಕ ಕಡೆ ಯುಐ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.
ಉಪೇಂದ್ರ ಅಭಿಮಾನಿಗಳು ಖುಷಿ ಪಡುವುದಕ್ಕೆ ಕಾರಣಗಳಿವೆ. ಅದರೆ, ದರ್ಶನ್ ಅಭಿಮಾನಿಗಳೂ ಖುಷಿ ಪಡುವುದಕ್ಕೆ ಕಾರಣ ಇದೇ..ದಾಖಲೆ ಮುರಿದಿರುವುದು ಕೂಡಾ ಕನ್ನಡ ಸಿನಿಮಾ. ಪ್ರೇಕ್ಷಕರು ಥ್ರಿಲ್ ಆಗುವುದಕ್ಕೆ ಕಾರಣಗಳಿವೆ.
ಇನ್ನು ಯುಐ ಕರ್ನಾಟಕದಲ್ಲಿ ಹತ್ತು ಕೋಟಿ, ಆಂಧ್ರ ಮತ್ತು ತೆಲಂಗಾಣದಲ್ಲಿ ನಾಲ್ಕು ಕೋಟಿ ರೂಪಾಯಿ ಹಾಗೂ ಉತ್ತರ ಭಾರತದಿಂದ 1.5 ಕೋಟಿ ರೂಪಾಯಿ ಗಳಿಸಿದೆ. ವಿದೇಶಗಳಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ತಿದೆ. ನಾಳೆ ಭಾನುವಾರ ಯುಐ ಗಳಿಕೆ ಇನ್ನಷ್ಟು ಹೆಚ್ಚಲಿದೆ.
ಉಪೇಂದ್ರ ತ್ರಿಪಾತ್ರದಲ್ಲಿ ನಟಿಸಿರುವ ಚಿತ್ರದ ಬಗ್ಗೆ ಸಖತ್ ಪ್ರತಿಕ್ರಿಯೆಗಳು ಬರುತ್ತಿವೆ. ಸಿನಿಮಾ ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎಂದು ಪ್ರೇಕ್ಷಕರು ಹೇಳುತ್ತಿಲ್ಲ. ಬದಲಿಗೆ ಯುಐ ನೋಡಿದವರು ಇದು ಸಿನಿಮಾ ಅಲ್ಲ ಗುರೂ, ಅರ್ಥ ಆಗ್ತಿಲ್ಲ ಗುರೂ, ಇನ್ನೊಂದ್ಸಲ ಫೋಕಸ್ ಮಾಡಿ ನೋಡ್ತೀನಿ, ಆಗಲಾದರೂ ಅರ್ಥ ಆಗುತ್ತೇನೋ ಎಂಬಂತೆ ಮಾತನಾಡ್ತಿದ್ದಾರೆ. ಪ್ರೇಕ್ಷಕರ ಈ ಸಸ್ಪೆನ್ಸ್ ಡಿಕೋಡ್ ಸೂತ್ರ ಯುಐ ಚಿತ್ರವನ್ನು ಭರ್ಜರಿಯಾಗಿ ಗೆಲ್ಲಿಸ್ತಿದೆ.



